ರಜನಿಕಾಂತ್ ಪುತ್ರಿ ಮನೆ ಲಾಕರ್‌ನಲ್ಲಿದ್ದ ಚಿನ್ನಾಭರಣ ಕಳವು ಪ್ರಕರಣ: ಚಾಲಾಕಿ ಕಳ್ಳರು ಸಿಕ್ಕಿಬಿದ್ರು
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳುವಾಗಿದೆ ಎಂದು ಇತ್ತೀಚಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಕಳ್ಳರನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಮನೆಯ ಲಾಕರ್‌ನಲ್ಲಿ ಭದ್ರವಾಗಿ ಇಟ್ಟಿದ್ದ 4 ಲಕ್ಷ ರೂ. ಮೌಲ್ಯದ 60 ಸವರನ್ ಚಿನ್ನಾಭರಣ ಕಳ್ಳತನವಾಗಿರುವುದಾಗಿ ಐಶ್ವರ್ಯ ತೇನಂಪೇಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಐಶ್ವರ್ಯ ದೂರು ನೀಡುವುದರ ಜೊತೆಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ನಂತರ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಹಾಗಾಗಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಐಶ್ವರ್ಯ ಮನೆಯಲ್ಲಿ ಚಿನ್ನ, ವಜ್ರಾಭರಣ ಕಳ್ಳತನ ಮಾಡಿದ್ದಕ್ಕೆ ಮನೆ ಕೆಲಸದಾಕೆ ಹಾಗೂ ಕಾರು ಚಾಲಕನನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕಾರು ಚಾಲಕ ವೆಂಕಟೇಶಂ ಸಹಕಾರದಿಂದ ಮನೆಕೆಲಸದಾಕೆ ಈಶ್ವರಿ 100 ಸವರನ್ ಚಿನ್ನಭರಣ, 30 ಗ್ರಾಂ ವಜ್ರಾಭರಣ, 4 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಲಾಗಿದೆ.

18 ವರ್ಷಗಳಿಂದ ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಈಶ್ವರಿ ಕೆಲಸ ಮಾಡುತ್ತಿದ್ದಳು. ಹಾಗಾಗಿ ಮನೆಯ ಬಗ್ಗೆ ಎಲ್ಲಾ ಗೊತ್ತಿದ್ದ ಆಕೆ ಹಲವು ಬಾರಿ ಲಾಕರ್ ತೆಗೆದು ಕಳ್ಳತನ ಮಾಡಿದ್ದಾಳೆ. ಐಶ್ವರ್ಯ ಲಾಕರ್ ಕೀ ಎಲ್ಲಿ ಇಡುತ್ತಿದ್ದರು ಅನ್ನೋದು ಆಕೆಗೆ ಚೆನ್ನಾಗಿ ಗೊತ್ತಿತ್ತು. ಲಾಕರ್ ತೆಗೆಯಲು ಅದೇ ಕೀ ಬಳಸಿದ್ದಾಳೆ. ಕೆಲ ದಿನಗಳಿಂದ ಆಕೆ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕದ್ದ ಚಿನ್ನಾಭರಣವನ್ನು ಆಕೆ ಮನೆ ಖರೀದಿಸಲು ಬಳಸಿಕೊಂಡಿರುವುದಾಗಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಆರೋಪಿ ಈಶ್ವರಿ ಮನೆ ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮನೆಯಲ್ಲಿ ಚಿನ್ನಭರಣ ಕಳ್ಳತನ ಆಗಿರುವ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಐಶ್ವರ್ಯ ಪೊಲೀಸರಿಗೆ ದೂರು ನೀಡಿದ್ದರು. 2019ರಲ್ಲಿ ಸಹೋದರಿ ಸೌಂದರ್ಯ ಮದುವೆ ಸಮಾರಂಭದಲ್ಲಿ ಕೊನೆಯದಾಗಿ ಚಿನ್ನಾಭರಣ ಧರಿಸಿದ್ದಾಗಿ ಐಶ್ವರ್ಯ ತಿಳಿಸಿದ್ದರು. ಡೈಮಂಡ್ ಸೆಟ್, ಆಲಯ ಡಿಸೈನ್ ಆಭರಣ, ಅನ್‌ಕಟ್ ಡೈಮಂಡ್ಸ್, ಪುರಾತನ ಚಿನ್ನದ ತುಂಡುಗಳು, ನವರತ್ನಂ ಸೆಟ್ಟು, ವಜ್ರಖಚಿತ 2 ನೆಕ್‌ಪೀಸ್ ಕಿವಿ ಓಲೆ, ಆರಮ್ ನೆಕ್ಲೆಸ್, ಚಿನ್ನದ ಬಳೆಗಳು ಸೇರಿ 60 ಸವರನ್ ಚಿನ್ನಭರಣ ಕಳ್ಳತನ ಆಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ಚಿನ್ನಾಭರಣವನ್ನು ಲಾಕರ್‌ನಲ್ಲಿ ಭದ್ರವಾಗಿ ಇಟ್ಟಿದ್ದೆ. ಆದರೆ ಅದನ್ನು ಮೂರು ಕಡೆಗೆ ಬದಲಾಯಿಸಲಾಗಿತ್ತು. 2021ರವರೆಗೂ ಅದು ತಾವು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಇತ್ತು. ನಂತರ ಸಿಐಟಿ ಕಾಲೋನಿಯಲ್ಲಿರುವ ಧನುಷ್ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ನಂತರ ಮತ್ತೆ ತಮ್ಮ ಅಪಾರ್ಟ್‌ಮೆಂಟ್‌ಗೆ ವಾಪಸ್ ತರಲಾಗಿತ್ತು, ಆದರೆ ಯಾವಾಗ ಕಳ್ಳತನ ಆಯಿತು ಎನ್ನುವುದು ಗೊತ್ತಿಲ್ಲ ಎಂದು ಎಫ್‌ಐಆರ್‌ನಲ್ಲಿ ಐಶ್ವರ್ಯ ತಿಳಿಸಿದ್ದರು.
ಐಶ್ವರ್ಯ ದೂರು ನೀಡುವುದರ ಜೊತೆಗೆ ಕಳ್ಳತನ ಯಾರು ಮಾಡಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದರು. ಇದು ಪೊಲೀಸರ ತನಿಖೆಗೆ ಸಹಕಾರಿ ಆಗಿತ್ತು. ಮೂವರು ಮನೆ ಕೆಲಸದವರ ಮೇಲೆ ಸಂಶಯ ಇದೆ ಎಂದು ದೂರಿನಲ್ಲಿ ವಿವರಿಸಿದ್ದರು. ಪೊಲೀಸರು ತನಿಖೆಯಿಂದ ಈಗ ಕಳ್ಳರು ಯಾರು ಎನ್ನುವುದು ಬಹಿರಂಗವಾಗಿದೆ. ಸೌಂದರ್ಯ ನಟ ಧನುಷ್ ಜೊತೆ 18 ವರ್ಷಗಳ ಹಿಂದೆ ಮದುವೆ ಆಗಿದ್ದರು. ಕಳೆದ ವರ್ಷ ಕೆಲ ಭಿನ್ನಾಭಿಪ್ರಾಯಗಳಿಂದ ದಂಪತಿ ದೂರಾಗಲು ನಿರ್ಧರಿಸಿರುವುದಾಗಿ ಹೇಳಿದ್ದರು. ಸದ್ಯ 'ಲಾಲ್ ಸಲಾಂ' ಚಿತ್ರಕ್ಕೆ ಐಶ್ವರ್ಯ ಆಕ್ಷನ್ ಕಟ್ ಹೇಳುತ್ತಿದ್ದು ರಜನಿಕಾಂತ್ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.


Click it and Unblock the Notifications











