ಕ್ಯಾಪ್ಟನ್ ಮಿಲ್ಲರ್‌ನಲ್ಲಿ ಶಿವಣ್ಣನ ಪಾತ್ರ, ಕಥೆ ರಿವೀಲ್; ಧನುಷ್ ಹಾಗೂ ಶಿವಣ್ಣ ಸಂಬಂಧವೇನು?
ಚಂದನವನದ ಸೆಂಚುರಿ ಸ್ಟಾರ್, ಕಿಂಗ್ ಶಿವ ರಾಜ್ ಕುಮಾರ್ ಈಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಾಲಿವುಡ್ ಚಿತ್ರರಂಗದ ಪ್ರತಿಭಾವಂತ ನಟ ಧನುಷ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವ ರಾಜ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಹಾಗೂ ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲಿಯೂ ಸಹ ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಶಿವ ರಾಜ್‌ಕುಮಾರ್ ತಮ್ಮ ನಿರ್ಮಾಣದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಸಂತಸದಿಂದ ಹಂಚಿಕೊಂಡಿದ್ದ ಸತ್ಯ ಜ್ಯೋತಿ ಫಿಲ್ಮ್ಸ್ ಶಿವ ರಾಜ್‌ಕುಮಾರ್ ಅವರನ್ನು ಬರಮಾಡಿಕೊಂಡಿತ್ತು. ಅತ್ತ ಚಿತ್ರದ ನಾಯಕ ಧನುಷ್ ಸಹ ಶಿವ ರಾಜ್‌ಕುಮಾರ್ ಅವರಿಗೆ ಸ್ವಾಗತವನ್ನು ಕೋರಿ ಬರಮಾಡಿಕೊಂಡಿದ್ದರು.

ಹೀಗೆ ಜೈಲರ್ ಹಾಗೂ ಕ್ಯಾಪ್ಟನ್ ಮಿಲ್ಲರ್ ರೀತಿಯ ಎರಡು ದೊಡ್ಡ ಚಿತ್ರಗಳಲ್ಲಿ ನಟಿಸುತ್ತಿರುವ ಶಿವ ರಾಜ್‌ಕುಮಾರ್ ಈ ಚಿತ್ರಗಳಲ್ಲಿ ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಮಾತ್ರ ಹೊರಬಿದ್ದಿರಲಿಲ್ಲ. ಈ ಎರಡೂ ಚಿತ್ರಗಳಲ್ಲಿಯೂ ಶಿವ ರಾಜ್‌ಕುಮಾರ್ ಪಾತ್ರ ಎಂಬುದನ್ನು ಗೌಪ್ಯವಾಗಿಯೇ ಇಡಲಾಗಿದೆ.
ಆದರೆ ಶಿವ ರಾಜ್‌ಕುಮಾರ್ ಅವರಿಗೆ ಹದಿನೈದು ವರ್ಷಗಳಿಂದ ಕೇಶ ವಿನ್ಯಾಸ ಮಾಡುತ್ತಿರುವ ಮೇಕಪ್ ಮ್ಯಾನ್ ರಾಜು ಎಂಬುವವರು ಮಾಧ್ಯಮದವರ ಜತೆ ಮಾತನಾಡಿದ್ದು, ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಶಿವ ರಾಜ್‌ಕುಮಾರ್ ಹಾಗೂ ಧನುಷ್ ನಡುವಿನ ಸಂಬಂಧವೇನು ಮತ್ತು ಚಿತ್ರದ ಕಥೆ ಏನು ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಹೌದು, ಕ್ಯಾಮೆರಾ ಮುಂದೆ ಬಂದು ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ತಾವೇ ಶಿವ ರಾಜ್‌ಕುಮಾರ್ ಅವರಿಗೆ ಕೇಶ ವಿನ್ಯಾಸ ಮಾಡುತ್ತಿರುವ ವಿಷಯ ಹಂಚಿಕೊಂಡ ಮೇಕಪ್ ರಾಜು ಕ್ಯಾಪ್ಟನ್ ಮಿಲ್ಲರ್ ಸ್ವತಂತ್ರಕ್ಕೂ ಮುನ್ನ ನಡೆಯುವ ಕಥೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೇ ಚಿತ್ರದಲ್ಲಿ ಕಾಡುವಾಸಿಗಳ ಗುಂಪೊಂದು ಬ್ರಿಟಿಷರ ವಿರುದ್ಧ ಹೋರಾಡಲಿದೆ, ಈ ಗುಂಪಿನಲ್ಲಿ ಧನುಷ್ ಇರಲಿದ್ದಾರೆ ಎಂಬ ಮಾಹಿತಿಯನ್ನು ಮೇಕಪ್ ರಾಜು ಹಂಚಿಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲದೇ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಈ ಕಾಡು ಜನರ ಗುಂಪಿನಲ್ಲಿ ಓರ್ವರಲ್ಲಿ ಕಾಣಿಸಿಕೊಂಡಿದ್ದು, ಬ್ರಿಟಿಷರ ವಿರುದ್ಧ ಹೋರಾಡಲಿದ್ದಾರೆ ಎಂದಿದ್ದಾರೆ ಮತ್ತು ಶಿವ ರಾಜ್‌ಕುಮಾರ್ ಧನುಷ್ ಅಣ್ಣನ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬ ಮಾಹಿತಿಯನ್ನೂ ಸಹ ಇವರು ಹಂಚಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಕುದುರೆ ಸವಾರಿಯನ್ನೂ ಸಹ ಮಾಡಿದ್ದಾರೆ ಎಂದು ಮೇಕಪ್ ರಾಜು ತಿಳಿಸಿದ್ದಾರೆ. ಈ ಮೂಲಕ ಅನೇಕ ವರ್ಷಗಳ ಬಳಿಕ ಶಿವ ರಾಜ್‌ಕುಮಾರ್ ಕುದುರಯೇರಿ ಸವಾರಿ ಮಾಡುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದ್ದು ಸದ್ಯ ಈ ಮಾಹಿತಿಗಳು ಶಿವಣ್ಣ ಫ್ಯಾನ್ಸ್ ಅನ್ನು ಕೆರಳಿಸಿದೆ.
ಇನ್ನು ಮೇಕಪ್ ರಾಜು ಅವರ ಈ ಹೇಳಿಕೆಗಳನ್ನು ಕಂಡು ಕೆಲವರು ಖುಷಿಯಾಗಿದ್ದರೆ, ಇನ್ನೂ ಕೆಲವರು ಈತ ಚಿತ್ರದ ಕಥೆಯನ್ನೇ ಹೇಳಿಬಿಟ್ಟಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಹೀಗೆ ಈ ಹೇಳಿಕೆ ಸದ್ಯ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಅರುಣ್ ಮಾದೇಶ್ವರನ್ ಆಕ್ಷನ್ ಕಟ್ ಹೇಳಿದ್ದು, ಧನುಷ್, ಶಿವ ರಾಜ್‌ಕುಮಾರ್, ಸಂದೀಪ್ ಕಿಶನ್, ಪ್ರಿಯಾಂಕಾ ಅರುಳ್ ಮೋಹನ್, ನಿವೇದಿತಾ ಸತೀಶ್ ಹಾಗೂ ಜಾನ್ ಕೊಕ್ಕೆನ್ ನಟಿಸಿದ್ದಾರೆ.


Click it and Unblock the Notifications











