ವಿಜಯ್ ಹೋಗೊ ಕಡೆ ತ್ರಿಷಾ ಹೋಗ್ತಾರೆ, ನೀವು ಹೋಗ್ತಿರಾ; ಪತ್ರಕರ್ತನ ಅನಿರೀಕ್ಷಿತ ಪ್ರಶ್ನೆಗೆ ನಟಿ ಗರಂ
ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ವಿಜಯ್ ಅಧಿಕಾರಕ್ಕೇರಿದ್ದಾರೆ. ಅಭಿಮಾನಿಗಳು, ಆಪ್ತರು, ಸಿನಿರಂಗದ ತಾರೆಯರು ಇದಕ್ಕೆ ಅಭಿನಂದನೆ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಹೊಸ ಪರ್ವ ಶುರುವಾಗಿದೆ ಎಂದು ಸಂತಸಗೊಂಡಿದ್ದಾರೆ. ಇನ್ನು ವಿಜಯ್ ಹಾಗೂ ತ್ರಿಷಾ ನಡೆ ಬಗ್ಗೆ ಕೂಡ ಭಾರೀ ಚರ್ಚೆ ನಡೀತಿದೆ.
ವಿಜಯ್ ಹಾಗೂ ತ್ರಿಷಾ ಆತ್ಮೀಯ ಒಡನಾಟ ಗುಟ್ಟಾಗಿ ಉಳಿದಿಲ್ಲ. ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಲು ತ್ರಿಷಾ ಕಾರಣ ಎನ್ನಲಾಗ್ತಿದೆ. ಒಟ್ನಲ್ಲಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಟಿವಿಕೆ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಸಿಗುತ್ತಿದ್ದಂತೆ ತ್ರಿಷಾ ತಿರುಪತಿಯಿಂದ ನೇರವಾಗಿ ಅವರ ನಿವಾಸಕ್ಕೆ ತೆರಳಿ ಅಭಿನಂದನೆ ತಿಳಿಸಿದ್ದರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಕೂಡ ಮಿರಿ ಮಿರಿ ಮಿಂಚಿದ್ದರು.

ಸದ್ಯ ವಿಜಯ್ ಹಾಗೂ ತ್ರಿಷಾ ಬಗ್ಗೆ ನಟಿ ಮಾಳವಿಕಾ ಮೋಹನನ್ ಅವರಿಗೆ ವಿಚಿತ್ರ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. 'ಮಾಸ್ಟರ್' ಚಿತ್ರದಲ್ಲಿ ವಿಜಯ್ ಜೋಡಿಯಾಗಿ ಮಾಳವಿಕಾ ನಟಿಸಿದ್ದರು. ಕೇರಳ ಮೂಲಕ ಚೆಲುವೆ ಕನ್ನಡ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಚೆನ್ನೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಳವಿಕಾ ಭಾಗಿ ಆಗಿದ್ದರು. ಈ ವೇಳೆ ನೂತನ ಮುಖ್ಯಮಂತ್ರಿ ವಿಜಯ್ ಬಗ್ಗೆ ನಟಿಗೆ ಮಾಧ್ಯಮದವರು ಪ್ರಶ್ನಿಸಿದ್ದಾರೆ.
ವಿಜಯ್ ಅವರ ಹೊಸ ಸರ್ಕಾರ ಹೇಗಿದೆ ಮೇಡಂ ಎಂದು ಮೊದಲಿಗೆ ಪ್ರಶ್ನೆ ಎದುರಾಗಿದೆ. ಈಗ ತಾನೇ ಸರ್ಕಾರ ಶುರುವಾಗಿದೆ, ಮುಂದೆ ನೋಡೋಣ ಎಂದಿದ್ದಾರೆ. ಬಳಿಕ ಪತ್ರಕರ್ತರೊಬ್ಬರು "ಮೇಡಂ, ವಿಜಯ್ ಅವರು ಹೋಗುವ ಕಡೆಯೆಲ್ಲಾ ತ್ರಿಷಾ ಹೋಗ್ತಿದ್ದಾರೆ, ನೀವು ಅದೇ ರೀತಿ ಹೋಗುವ ಐಡಿಯಾ ಇದ್ಯಾ?" ಎಂದು ಕೇಳಿದ್ದಾರೆ. ಎಂತಹ ಪ್ರಶ್ನೆ ಕೇಳ್ತೀರಾ? ಇದಕ್ಕೆಲ್ಲಾ ಉತ್ತರಿಸೋಕೆ ಆಗುತ್ತಾ ಅಂತ ಬೇಸರಗೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಬಳಿಕ ಟ್ವೀಟ್ ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ನಾನು ನಿನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ, ಎಲ್ಲಾ ಮಾಧ್ಯಮ ಸದಸ್ಯರ ಬಗ್ಗೆ ನನಗೆ ಅಪಾರ ಗೌರವವಿದ್ದರೂ, ಅವರಲ್ಲಿ ಕೆಲವರು ಅನಗತ್ಯ ಹಾಗೂ ಸಂಚಲನಾತ್ಮಕ ಕೆಲ ಅಸಹ್ಯಕರ ಪ್ರಶ್ನೆಗಳನ್ನು ನಿರಂತರವಾಗಿ ಕೇಳಿದರು. ದಳಪತಿ ವಿಜಯ್ ಅವರು ಕಳೆದ 7 ವರ್ಷಗಳಿಂದ ನನಗೆ ಪರಿಚಿತರು, ನನಗೆ ತುಂಬಾ ಗೌರವವಿದೆ. ನನ್ನ ಸ್ನೇಹಿತ ಎಂದು ಕರೆಯಲು ಕೃತಜ್ಞಳಾಗಿದ್ದೇನೆ. ಅವರ ಜರ್ನಿ ನೋಡುವುದು ಅದ್ಭುತವಾಗಿದೆ" ಎಂದಿದ್ದಾರೆ.
ಎಲ್ಲರ ಹಿತದೃಷ್ಟಿಯಿಂದ ಮುಂದಿನ ಬಾರಿ ಮಾಧ್ಯಮದವರ ಜೊತೆಗಿನ ಸಂಭಾಷಣೆ ಗೌರವಯುತ ಮತ್ತು ಸೂಕ್ಷ್ಮವಾಗಿದ್ದರೆ ಚೆನ್ನಾಗಿರುತ್ತದೆ ಎಂದು ನಟಿ ಮಾಳವಿಕಾ ಮೋಹನನ್ ಬರೆದುಕೊಂಡಿದ್ದಾರೆ. ಸೂರ್ಯ ಹಾಗೂ ತ್ರಿಷಾ ನಟನೆಯ 'ಕರುಪ್ಪು' ಸಿನಿಮಾ ಬಿಡುಗಡೆಯಾಗಿದೆ. ಪ್ರೇಕ್ಷಕರ ಜೊತೆ ಫಸ್ಟ್ ಡೇ ಫಸ್ಟ್ ಶೋ ನೋಡಲು ತ್ರಿಷಾ ಚಿತ್ರಮಂದಿರಕ್ಕೆ ಹೋಗಿದ್ದರು. ಈ ವೇಳೆ ಒಂದಷ್ಟು ಅಭಿಮಾನಿಗಳನ್ನು ಆಕೆಯ ಕಾರಿಗೆ ಮುತ್ತಿಕೊಂಡಿದ್ದರು. ಅಭಿಮಾನಿಯೊಬ್ಬ "ಮೇಡಂ ದಳಪತಿ ಅವರನ್ನು ಕೇಳ್ದೆ ಅಂತ ಹೇಳಿ" ಎಂದು ಕೂಗಿದ್ದರು. ನಾಚಿ ನೀರಾದ ತ್ರಿಷಾ 'ಕಂಡಿತ' ಎಂದು ನಕ್ಕಿದ್ದರು.
ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಚಿತ್ರದಲ್ಲಿ ಕೊನೆಯದಾಗಿ ಮಾಳವಿಕಾ ನಟಿಸಿದ್ದರು. ಸದ್ಯ ತಮಿಳಿನ 'ಸರ್ದಾರ್- 2' ಹಾಗೂ 'ಪಾಕೆಟ್ ನಾವೆಲ್' ಎಂಬ ಎರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 2016ರಲ್ಲಿ 'ನಾನು ಮತ್ತು ವರಲಕ್ಷ್ಮಿ' ಎಂಬ ಕನ್ನಡ ಚಿತ್ರದಲ್ಲಿ ಮಾಳವಿಕಾ ಮೋಹನನ್ ನಟಿಸಿದ್ದರು.


Click it and Unblock the Notifications