ಹೊಡೆದರು, ಬಡಿದರು ; ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕನ ಮೇಲೆ ಆರೋಪ ಮಾಡಿ, ಚಿತ್ರದಿಂದ ಹೊರ ನಡೆದ ನಟಿ..!
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನ ಹೊರತು ಪಡಿಸಿದರೆ, ಚಿತ್ರವೊಂದಕ್ಕೆ ಕಲಾವಿದರಕ್ಕಿಂತ ನಿರ್ದೇಶಕನೇ ಮುಖ್ಯವೆಂಬುದನ್ನು ಮನಗಂಡಿರುವ ನಿರ್ದೇಶಕರಲ್ಲಿ ಬಾಲಾ ಪ್ರಮುಖರು. ತಾವು ಅಂದುಕೊಂಡತೆ ಆ ದೃಶ್ಯ ಬರದೇ ಇದ್ದರೆ, ನಿರೀಕ್ಷಿಸಿದಂತೆ ಕಲಾವಿದರು ಅಭಿನಯಿಸದಿದ್ದರೆ, ಸೆಟ್ ನಲ್ಲಿಯೇ ಕಪಾಳಕ್ಕೆ ಬಿಗಿದು ಬಿಡುವ (ದುರ್) ಅಭ್ಯಾಸ ಪುಟ್ಟಣ್ಣ ಅವರಿಗೆ ಇದ್ದಂತೆ ಬಾಲಾಗೂ ಇದೆ. ಇದಕ್ಕಾಗಿ ಅನೇಕ ಬಾರಿ ಬಾಲಾ ಟೀಕೆಗೆ ಒಳಗಾಗಿದ್ದರೆ ಕೂಡ. ಇದೀಗ ಮತ್ತೊಮ್ಮೆ ಅಂತಹದ್ದೇ ಟೀಕೆಗೆ ಬಾಲಾ ಒಳಗಾಗಿದ್ದಾರೆ. ನಾಯಕಿ ಮೇಲೆ ಕೈ ಮಾಡಿದ ಆರೋಪ ಹೊತ್ತಿದ್ದಾರೆ.
ಹೌದು, ನಿಮಗೆ ಗೊತ್ತಿರಲಿ .. ಸೇದು, ನಂದಾ, ಪಿತಾಮಗನ್, ಮಾಯಾವಿ, ನಾನ್ ಕಡವುಳ್, ಅವನ್ ಇವನ್, ಪರ್ದೇಸಿ, ತಾರೈ ತಪ್ಪಟ್ಟೈ ನಾಚಿಯಾ ಹೀಗೆ ತಮ್ಮ ಚಿತ್ರಗಳ ಮೂಲಕ ಸಿನಿಪ್ರಿಯರನ್ನ ಬೆಕ್ಕಸ ಬೆರಗಾಗಿಸಿದ ಬಾಲಾ, ಸದ್ಯಕ್ಕೆ 'ವನಂಗಾನ' ಚಿತ್ರವನ್ನ ಡೈರೆಕ್ಟ್ ಮಾಡ್ತಿದ್ದಾರೆ.

ಚಿತ್ರದ ಚಿತ್ರೀಕರಣವನ್ನೂ ಮಾಡ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಚಿತ್ರದ ಕಥಾನಾಯಕಿ ಮಮಿತಾ ಮೇಲೆ ಬಾಲಾ ಕೈಯನ್ನ ಮಾಡಿದ್ದಾರೆ. ಹೀಗೊಂದು ಆರೋಪವನ್ನ ಬಾಲಾ ವಿರುದ್ಧ ಮಾಡಿರುವ ಮಮಿತಾ, ಚಿತ್ರದಿಂದ ಹೊರ ಬಂದಿದ್ದಾರೆ
ಸಿನಿಮಾದ ಸೀನ್ ವೊಂದಕ್ಕೆ ನಾನು ಜಾನಪದ ಡ್ರಮ್‌ಗಳನ್ನು ಬಳಸಬೇಕಿತ್ತು. ಅದನ್ನು ಹೇಗೆ ಬಳಸುತ್ತಾರೆ ಎನ್ನುವುದು ನನಗೆ ಮೊದಲು ತಿಳಿದಿರಲಿಲ್ಲ. ಈ ಕಾರಣದಿಂದ ನಾನು ನಿರ್ದೇಶಕರ ಬಳಿ ಅದರ ಅಭ್ಯಾಸ ಮಾಡಬೇಕೆಂದು ಹೇಳಿದೆ. ಆದರೆ ಅವರು ಬೇರೆ ಅವರು ಹೇಗೆ ಮಾಡುತ್ತಾರೆ ಹಾಗೆ ನೋಡಿ ಮಾಡು ಎಂದರು.
ಇದಾದ ಕೆಲ ಸಮಯದಲ್ಲೇ ಚಿತ್ರೀಕರಣಕ್ಕೆ ಕರೆದರು ಎಂದಿರುವ ಮಮಿತಾ, ತಯಾರಿ ಇಲ್ಲದೇ ಚಿತ್ರೀಕರಣಕ್ಕೆ ಕರೆದ ಹಿನ್ನೆಲೆ ನಾನು ಭಯಭೀತಗೊಂಡೆ ಎಂದಿದ್ದಾರೆ. ಆದರೂ ಧೈರ್ಯ ಮಾಡಿ ಆ ಸನ್ನಿವೇಶಕ್ಕೆ ನ್ಯಾಯ ಸಲ್ಲಿಸಲು ಕೇವಲ ಮೂರು ಟೀಕ್ ನಲ್ಲಿ ನಾನು ಅದನ್ನು ಕಲಿತೆ. ಆದರೆ ಈ ಪ್ರಕ್ರಿಯೆಯಲ್ಲಿ ನನಗೆ ಅವರು ಬೈಯ್ದಿದ್ದಾರೆ ಹಾಗೂ ಭುಜದ ಮೇಲೆ ಹೊಡೆದಿದ್ದಾರೆ ಎಂದು ಆರೋಪವನ್ನ ಮಾಡಿದ್ದಾರೆ.
ಅಸಲಿಗೆ ಕೆಲಸದ ವಿಚಾರದಲ್ಲಿ ಬಾಲಾ, ರಾಕ್ಷಸ ಎಂಬ ವಿಚಾರ ತಮಿಳುನಾಡಿನಲ್ಲಿ ಜಗಜ್ಜಾಹೀರಾದ ವಿಚಾರ. ಖುದ್ದು ಬಾಲಾ ತಮ್ಮ ಕಾರ್ಯವೈಖರಿಯ ಬಗ್ಗೆ ಚಿತ್ರದ ಆರಂಭಕ್ಕೂ ಮುನ್ನವೇ ಮಮಿತಾ ಅವರಿಗೆ ಹೇಳಿದ್ದರು ಕೂಡ. ಮಮಿತಾ ಈ ವಿಚಾರವನ್ನ ಒಪ್ಪಿಕೊಂಡಿದ್ದಾರೆ.

ಶೂಟಿಂಗ್ ಸೆಟ್ ನಲ್ಲಿ ಹೇಳಿದ್ದನ್ನೆಲ್ಲ ಮನಸ್ಸಿಗೆ ತೆಗೆದುಕೊಳ್ಳಬೇಡಿ ಎಂದು ಬಾಲಾ ಅವರು ನನಗೆ ಹೇಳಿದ್ದರು ಅಂದಿದ್ದಾರೆ. ಆದರೆ ಈಗ ನಡೆದ ಘಟನೆಯಿಂದ ಘಾಸಿಗೊಳಗಾಗಿರುವ ಮಮಿತಾ, ಚಿತ್ರದಿಂದ ಹೊರ ನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮಗೆ ಆದ ಈ ಅನುಭವವನ್ನೂ ಮಮಿತಾ ಹಂಚಿಕೊಂಡಿದ್ದಾರೆ.
ವನಂಗಾನ ಚಿತ್ರದಿಂದ ಹೊರ ನಡೆದಿದ್ದ ಸೂರ್ಯ
ಹಾಗೇ ನೋಡಿದರೆ ಬಾಲ ನಿರ್ದೇಶನದ ವನಂಗಾನ ಚಿತ್ರದಲ್ಲಿ ಸೂರ್ಯ ನಾಯಕನ ಪಾತ್ರ ನಿರ್ವಹಿಸಬೇಕಿತ್ತು. ಈ ಹಿಂದೆ ಬಾಲಾ ನಿರ್ದೇಶನದಲ್ಲಿ 'ನಂದಾ' ಹಾಗೂ 'ಪಿತಾಮಗನ್' ಸಿನಿಮಾಗಳಲ್ಲಿ ಸೂರ್ಯ ಮಿಂಚಿದ್ದ ಕಾರಣ, ಸೂರ್ಯ ಅಭಿಮಾನಿಗಳು ವನಂಗಾನ ಸಿನಿಮಾ ಕೂಡ ಮತ್ತೊಂದು ಮಾಸ್ಟರ್ ಪೀಸ್ ಸಿನಿಮಾ ಆಗುತ್ತೆ ಎಂದು ಮಾತನಾಡಿಕೊಂಡಿದ್ದರು. ಆದರೆ ಆ ನಂತರ ಏಕಾಏಕಿ ಸೂರ್ಯ ಈ ಚಿತ್ರದಿಂದ ಹೊರ ಬಂದರು. ಹೊರ ಬಂದರು ಅನ್ನುವುದಕ್ಕಿಂತ ಖುದ್ದು ಬಾಲಾ ತಮ್ಮ ನೆಚ್ಚಿನ ನಾಯಕ ಸೂರ್ಯ ಅವರನ್ನ ಚಿತ್ರದಿಂದ ಆಚೆ ಕಳಿಸಿದರು.
ಸೂರ್ಯರಂತಹ ನಟನಿಗೆ ಈ ಕಥೆ ಒಪ್ಪುವುದಿಲ್ಲ. ಹಾಗಾಗಿ ಅವರನ್ನು ಈ ಚಿತ್ರದಿಂದ ಕೈ ಬಿಟ್ಟಿದ್ದೇನೆ ಎಂದು ಅಂದು ಪತ್ರದ ಮೂಲಕ ತಿಳಿಸಿದ್ದ ಬಾಲಾ, ಭವಿಷ್ಯದಲ್ಲಿ ಮತ್ತೆ ಸೂರ್ಯ ಜೊತೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದ್ದರು. ನಾನು ನನ್ನ ತಮ್ಮ ಸೂರ್ಯನೊಂದಿಗೆ 'ವನಂಗಾನ್' ಸಿನಿಮಾ ಮಾಡಲು ಬಯಸಿದ್ದೆ.
ಆದರೆ ಕಥೆಯಲ್ಲಿ ಕೆಲವು ಬದಲಾವಣೆಗಳಾದ ಮೇಲೆ ಈ ಕಥೆ ಸೂರ್ಯನಂತಹ ನಟನಿಗೆ ಸರಿಹೊಂದುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲಎಂದು ಮನದ ಮಾತನ್ನ ಅಕ್ಷರದ ಮೂಲಕ ಹಂಚಿಕೊಂಡಿದ್ದರು. ಇಷ್ಟೇ ಅಲ್ಲ ಸೂರ್ಯ ನನ್ನ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದರು, ಆದರೆ ಅಣ್ಣನಾಗಿ ಅವರನ್ನು ಅಂತಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ.

ಹಾಗಾಗಿ, ಸೂರ್ಯ ಮತ್ತು ನಾನು ಇಬ್ಬರೂ ಈ ಸಿನಿಮಾದಿಂದ ಹೊರಗುಳಿಯುವುದೇ ಪ್ರತಿಯೊಬ್ಬರ ಹಿತದೃಷ್ಟಿಯಿಂದ ಉತ್ತಮ ಎಂದು ನಿರ್ಧರಿಸಿದ್ದೇವೆ. ಸೂರ್ಯ ಈ ನಿರ್ಧಾರದಿಂದ ಬೇಸರಗೊಂಡಿದ್ದಾರೆ. ಆದರೆ ಇದು ನನ್ನ ಸಹೋದರನ ಹೆಚ್ಚಿನ ಒಳಿತಿಗಾಗಿ ಮಾಡಲಾಗಿದೆ ಎಂದು ಹೇಳಿದ್ದರು ಬಾಲಾ.
ಸೂರ್ಯ ನಿರ್ಗಮನದ ನಂತರ ಆ ಜಾಗಕ್ಕೆ ಅರುಣ್ ವಿಜಯ್ ಬಂದಿದ್ದರು. ಇತ್ತೀಚಿಗಷ್ಟೇ ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿತ್ತು. ಎಲ್ಲರನ್ನ ಅವಕ್ಕಾಗಿಸಿತ್ತು. ಆದರೆ ಈಗ ಮಲಯಾಳಂನ ಪ್ರೇಮಲು ಚಿತ್ರದಿಂದ ಜನಮನ್ನಣೆ ಗಳಿಸಿರುವ ಮಮಿತಾ ಬೈಜು ಕೂಡ ಚಿತ್ರದಿಂದ ಹೊರ ಬಂದಿದ್ದಾರೆ.
ಬಾಲಾ ಮೇಲೆ ಆರೋಪ ಮಾಡಿದ್ದಾರೆ. ಇದರ ನಡುವೆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಮಾರ್ಚ್ ಅಂತ್ಯಕ್ಕೆ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಕೇಳಿ ಬರುತ್ತಿರುವ ಮಾತುಗಳಿಗೆ, ಮಮಿತಾ ಆರೋಪಕ್ಕೆ ಬಾಲಾ ಉತ್ತರವನ್ನ ಕೊಟ್ಟಿಲ್ಲ.


Click it and Unblock the Notifications











