ಮದುವೆ ಬೇಡ, ಲಿವ್-ಇನ್ ಸಂಬಂಧ ಸಾಕು : 34 ವರ್ಷದ ನಟಿಯ ಹೇಳಿಕೆಗೆ ಎಲ್ಲ ತಬ್ಬಿಬ್ಬು
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ.
ಬದಲಾದ ಈ ಕಾಲದಲ್ಲಿ ಹಲವರು ಸ್ವಾವಲಂಬಿಯಾಗುತ್ತಿದ್ದಾರೆ. ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ.

ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ. ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಕೆಲ ವರ್ಷಗಳಲ್ಲಿ ಹಲವಾರು ಜನ ವಿಚ್ಛೇದನ ಪಡೆದಿದ್ದಾರೆ.
ಈ ಹಿನ್ನೆಲೆ ಹಲವರಲ್ಲಿ ಈಗ ಮದುವೆ ಮೇಲೀನ ನಂಬಿಕೆ ಕಡಿಮೆಯಾಗುತ್ತಿದೆ. ಮದುವೆಯಾಗಿ ಡಿವೋರ್ಸ್ ನೀಡುವುದಕ್ಕಿಂತ ಏಕಾಂಗಿಯಾಗಿರುವುದೇ ಉತ್ತಮ ಎನ್ನುವರ ಸಂಖ್ಯೆ ಹೆಚ್ಚಾಗುತ್ತಿದೆ. ಮದುವೆ ಬೇಡ ಲಿವ್ ಇನ್ ಸಂಬಂಧ ಸಾಕು ಎನ್ನುವವರ ವರ್ಗ ಕೂಡ ಹೆಚ್ಚಾಗುತ್ತಿದೆ. ಉದಾಹರಣೆಗೆ ಐಶ್ವರ್ಯಾ ಲಕ್ಷ್ಮೀ.
ಹೌದು, ಐಶ್ವರ್ಯ ಲಕ್ಷ್ಮೀ..ಕಾಲಿವುಡ್ ನ ಕಿನ್ನರಿ. ವಿಶಾಲ್ ಅಭಿನಯದ "ಆಕ್ಷನ್" ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಐಶ್ವರ್ಯ ಲಕ್ಷ್ಮಿ "ಜಗಮೇ ತಂದಿರಂ".. "ಕಟ್ಟಾ ಕುಸ್ತಿ".." ಮಾರನ್" ಚಿತ್ರಗಳಲ್ಲಿ ಅಭಿನಯಿಸಿದರು. ಮಣಿರತ್ನಂ ಅವರ "ಪೊನ್ನಿಯನ್ ಸೆಲ್ವನ್" ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ತಮ್ಮ ಅಭಿನಯದಿಂದ ಜನ ಮನ ಗೆದ್ದಿದ್ದರು.
ಕೇವಲ ತಮಿಳು ಮಾತ್ರವಲ್ಲ ತೆಲುಗು ಮತ್ತು ಮಲಯಾಳಂನಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಐಶ್ವರ್ಯ ಲಕ್ಷ್ಮಿ ಮಾಡಿಕೊಂಡಿದ್ದಾರೆ. ಸದ್ಯ ಇವರ ಮಲಯಾಳಂ ಚಿತ್ರ "ಆಶಾ" ಬಿಡುಗಡೆಗೆ ಸಿದ್ದವಾಗಿದೆ. ಹೀಗಿರುವಾಗ ಐಶ್ವರ್ಯ ಅವರ ಮದುವೆಗೆ ಸಂಬಂಧಿಸಿದ ಹೇಳಿಕೆಯೊಂದು ವೈರಲ್ ಆಗಿದೆ.

ಮದುವೆಯ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯ ಲಕ್ಷ್ಮಿ ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ. ಲಿವ್ ಇನ್ ಸಂಬಂಧ ಸಾಕು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಐಶ್ವರ್ಯ ಲಕ್ಷ್ಮಿ ನನ್ನ ಬದುಕಿನ ಈ 34 ವರ್ಷಗಳಲ್ಲಿ ನಾನು ಹಲವಾರು ಮದುವೆ ನೋಡಿದ್ದೇನೆ ಆದರೆ ಹೀಗೆ ಮದುವೆಯಾದವರಲ್ಲಿ ಖುಷಿ ಖುಷಿಯಾಗಿರುವವರು ಕೇವಲ ಬೆರಳಣಿಕೆ ಜನ ಮಾತ್ರ ಎಂದು ಹೇಳಿದ್ದಾರೆ.
ಮದುವೆಯಾದ ನಂತರ ಹಲವರ ವೈಯಕ್ತಿಕ ಬೆಳವಣಿಗೆಗೆ ಬ್ರೇಕ್ ಬಿದ್ದಿದೆ ಎನ್ನುವುದು ನನ್ನ ಭಾವನೆ ಎಂದು ಹೇಳಿರುವ ಐಶ್ವರ್ಯ ಇದೇ ವೇಳೆ ಬದುಕಿಗೆ ಒಬ್ಬ ಸಂಗಾತಿ ಬೇಕೆಂಬ ಸತ್ಯವನ್ನು ಕೂಡ ಒಪ್ಪಿಕೊಂಡಿದ್ದಾರೆ. ಜೀವನ ಸಂಗಾತಿ ಇರಬೇಕು ಎನ್ನುವುದು ನಿಜಾ, ನಾನು ಒಪ್ಪುತ್ತೇನೆ ಎಂದು ಹೇಳಿರುವ ಐಶ್ವರ್ಯ ವೈವಾಹಿಕ ಜೀವನದಲ್ಲಿ ಇಬ್ಬರಿಗೂ ನಂಬಿಕೆ ಇರದಂತಾಗಬಾರದು, ಹೀಗಾಗಿ ಮದುವೆಗಿಂತ ಲಿವ್ ಇನ್ ಸಂಬಂಧ ಉತ್ತಮ ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ಈ ಮಾತು ಪ್ರೀತಿಗೆ ವಿರುದ್ದವಾದದ್ದು ಅಲ್ಲ, ನಾನು ಮದುವೆ ಸಂಪ್ರದಾಯ ಒಪ್ಪುವುದಿಲ್ಲ ಅಂತ ಕೂಡ ಅಲ್ಲ ಎಂದು ಹೇಳಿರುವ ಐಶ್ವರ್ಯ ಲಕ್ಷ್ಮಿ, ಎಲ್ಲರಂತೆ ನಾನು ಮದುವೆ ಕನಸು ಕಂಡಿದ್ದೆ, ಗುರುವಾಯೂರು ದೇವಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕು ಅಂದುಕೊಂಡಿದ್ದೇ ಎಂದು ಹೇಳಿದ್ದಾರೆ. 30ರ ಗಡಿ ದಾಟುತ್ತಿದ್ದಂತೆಯೇ ನನ್ನ ಆಲೋಚನಾ ಲಹರಿ ಬದಲಾಯ್ತು ಎಂದು ಹೇಳಿರುವ ಐಶ್ವರ್ಯ ಈಗೀಗ ಮದುವೆಯಲ್ಲಿ ಸಂತೋಷದ ಕೊರತೆ ಕಂಡು ಬರುತ್ತಿದೆ, ಅಡಸ್ಟ್ ಮೆಂಟ್ ಸಂಸಾರ ನಡೆಯುತ್ತಿದೆ ಎಂದು ಕೂಡ ಹೇಳಿದ್ದಾರೆ. ಈ ಎಲ್ಲ ಕಾರಣಗಳಿಂದ ಲಿವ್ ಇನ್ ಸಂಬಂಧ ಸಾಕು ಎನ್ನುವ ತೀರ್ಮಾನಕ್ಕೆ ನಾನು ಬಂದಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಐಶ್ವರ್ಯ ಲಕ್ಷ್ಮಿ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications











