"ವಿಜಯ್ ಜೊತೆ 'GOAT' ಚಿತ್ರದಲ್ಲಿ ನಟಿಸಿ ಡಿಪ್ರೆಷನ್‌ಗೆ ಹೋಗುವಂತಾಗಿತ್ತು"; ಮೀನಾಕ್ಷಿ ಚೌಧರಿ
ಸೌತ್ ಸಿನಿದುನಿಯಾದ ಲೇಟೆಸ್ಟ್ ಸೆನ್ಸೇಷನ್ ನಟಿ ಮೀನಾಕ್ಷಿ ಚೌಧರಿ. ತೆಲುಗಿನ 'ಲಕ್ಕಿ ಭಾಸ್ಕರ್' ಚಿತ್ರದಲ್ಲಿ ನಟಿಸಿ ಆಕೆ ಮೋಡಿ ಮಾಡಿದ್ದರು. ಚಿತ್ರದಲ್ಲಿ ಸುಮತಿ ಪಾತ್ರದಲ್ಲಿ ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದಕ್ಕೂ ಮುನ್ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ ಈ ಪಾತ್ರ ಹೆಚ್ಚು ಹೆಸರು ತಂದುಕೊಟ್ಟಿತ್ತು.
ದುಲ್ಕರ್ ಸಲ್ಮಾನ್ ಜೊತೆ 'ಲಕ್ಕಿ ಭಾಸ್ಕರ್' ಚಿತ್ರದಲ್ಲಿ ನಟಿಸುವ ಮುನ್ನ ಮೀನಾಕ್ಷಿ ತಮಿಳಿನ 'GOAT' ಚಿತ್ರದಲ್ಲಿ ಮಿಂಚಿದ್ದರು. ಚಿತ್ರದಲ್ಲಿ ದಳಪತಿ ವಿಜಯ್ ತಂದೆ ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದರು. ಮಗ ಜೀವನ್ ಪ್ರೇಯಸಿ ಶ್ರೀನಿಧಿಯಾಗಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಚಿತ್ರದಲ್ಲಿ ನಟಿಸಿದ್ದಕ್ಕೆ ಮಾನಸಿಕವಾಗಿ ಬಹಳ ನೋವು ಅನುಭವಿಸುವಂತಾಯಿತು ಎಂದು ಮೀನಾಕ್ಷಿ ಹೇಳಿರುವುದಾಗಿ 123 telugu ವೆಬ್‌ಸೈಟ್ ವರದಿ ಮಾಡಿದೆ.

ಸದ್ಯ ಮೀನಾಕ್ಷಿ ನಟನೆಯ ತೆಲುಗಿನ 'ಸಂಕ್ರಾಂತಿಕಿ ವಸ್ತುನಾಮ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸುಗ್ಗಿ ಸಂಭ್ರಮದಲ್ಲಿ ಮುಂದಿನ ವಾರ ಸಿನಿಮಾ ತೆರೆಗೆ ಬರ್ತಿದೆ. ವಿಕ್ಟರಿ ವೆಂಕಟೇಶ್ ಜೊತೆ ಮೀನಾಕ್ಷಿ ನಟಿಸಿದ್ದಾರೆ. ಸದ್ಯ ಚಿತ್ರದ ಪ್ರಚಾರದಲ್ಲಿ ಆಕೆ ಬ್ಯುಸಿಯಾಗಿದ್ದಾರೆ. 'GOAT' ಸಿನಿಮಾ ಬಗ್ಗೆ ಮೀನಾಕ್ಷಿ ಹೇಳಿಕೆ ವೈರಲ್ ಆಗುತ್ತಿದೆ.
ವೆಂಕಟ್ ಪ್ರಭು ನಿರ್ದೇಶನದ 'GOAT' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಬಹುಕೋಟಿ ವೆಚ್ಚದ ಚಿತ್ರ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಇಡೀ ಸಿನಿಮಾ ವಿಜಯ್ ಆವರಿಸಿಕೊಂಡಿದ್ದರು. ತಂದೆ ಮಗನಾಗಿ ಎರಡೆರಡು ಪಾತ್ರಗಳಲ್ಲಿ ಮಿಂಚಿದ್ದರು. ಹಾಗಾಗಿ ಬೇರೆ ಕಲಾವಿದರಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ನಾಯಕಿ ಮೀನಾಕ್ಷಿಗೆ ಹೆಚ್ಚು ಕೆಲಸ ಇರಲಿಲ್ಲ.
ಒಂದು ಹಾಡು ಹಾಗೂ ಒಂದೆರಡು ಸನ್ನಿವೇಶಗಳಲ್ಲಿ ಮಾತ್ರ ಮೀನಾಕ್ಷಿ ನಟಿಸಿದ್ದರು. ಇದೇ ಕಾರಣಕ್ಕೆ ಆಕೆಗೆ ಸಾಕಷ್ಟು ಟ್ರೋಲ್ ಎದುರಿಸಬೇಕಾಯಿತು. ಇಷ್ಟು ಚಿಕ್ಕ ಪಾತ್ರ ಮಾಡೋಕೆ ನಟಿಸಬೇಕಿತ್ತಾ? ನಟಿಸದೇ ಇದ್ದಿದ್ದರೂ ಏನು ಸಮಸ್ಯೆ ಇರಲಿಲ್ಲ. ವಿಜಯ್ ರೀತಿಯ ದೊಡ್ಡ ನಟನ ಸಿನಿಮಾ ಎನ್ನುವ ಕಾರಣಕ್ಕೆ ಒಪ್ಪಿಕೊಂಡರೆ ಹೀಗೆ ಆಗುವುದು ಅಂತೆಲ್ಲಾ ಟ್ರೋಲ್ ಮಾಡಿದ್ದರು.
"ವಿಜಯ್ ಜೊತೆ 'GOAT' ಚಿತ್ರದಲ್ಲಿ ನಟಿಸಿದ ಬಳಿಕ ನಾನು ಸಾಕಷ್ಟು ಟ್ರೋಲ್ ಎದುರಿಸಿದೆ. ಒಂದರ್ಥದಲ್ಲಿ ನಾನು ಡಿಪ್ರೆಷನ್‌ಗೆ ಹೋಗಿಬಿಟ್ಟಿದ್ದೆ. ಆದರೆ 'ಲಕ್ಕಿ ಭಾಸ್ಕರ್' ಸಿನಿಮಾ ಬಂದು ಒಳ್ಳೆ ಹೆಸರು ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ ನಾನು ಒಳ್ಳೆ ಸಿನಿಮಾಗಳನ್ನು ಮಾಡುವತ್ತ ಫೋಕಸ್ ಮಾಡಬೇಕು" ಎಂದುಕೊಂಡಿದ್ದಾಗಿ ಮೀನಾಕ್ಷಿ ತಿಳಿಸಿದ್ದಾರೆ.
ಹರಿಯಾಣದಲ್ಲಿ ಮೀನಾಕ್ಷಿ ಹುಟ್ಟಿ ಬೆಳೆದವರು. ಈಜುಪಟು, ಬ್ಯಾಡ್ಮಿಟನ್ ಪ್ಲೇಯರ್ ಸಹ ಆಗಿದ್ದರು. ಆದರೆ ಮಾಡೆಲಿಂಗ್‌ನಲ್ಲಿ ಗುರ್ತಿಸಿಕೊಂಡು ಬಳಿಕ ಚಿತ್ರರಂಗದತ್ತ ಬಂದರು. 'ಔಟ್ ಆಫ್ ಲವ್' ಎಂಬ ವೆಬ್ ಸೀರಿಸ್‌ನಲ್ಲಿ ಮೊದಲಿಗೆ ಆಕೆ ನಟಿಸಿದ್ದರು. ಬಳಿಕ ತೆಲುಗಿನ 'ಹಿಟ್', 'ಕಿಲಾಡಿ', 'ಗುಂಟೂರು ಖಾರಂ' ಸೇರಿ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ಮಿಂಚಿದರು.
'ಸಂಕ್ರಾಂತಿಕಿ ವಸ್ತುನಾಮ್' ಬಳಿಕ 'ಅನಗನಗ ಒಕರಾಜು' ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ಸಾಕಷ್ಟು ಕತೆಗಳನ್ನು ಕೇಳುತ್ತಿದ್ದಾರೆ. 'ಸಂಕ್ರಾಂತಿಕಿ ವಸ್ತುನಾಮ್' ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಮಾಜಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಆತನ ಮಾಜಿ ಪ್ರೇಯಸಿ ಪಾತ್ರದಲ್ಲಿ ಮೀನಾಕ್ಷಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











