ದಳಪತಿ ವಿಜಯ್ ಚಿತ್ರದಲ್ಲಿ ಧೋನಿ ಮತ್ತು ರುತುರಾಜ್ ಗಾಯಕ್ವಾಡ್..?
ತಮಿಳುನಾಡಿನಲ್ಲಿ ಸಿನಿಮಾಮಂದಿ ರಾಜಕೀಯಕ್ಕೆ ಬರೋದು ಹೊಸದೇನಲ್ಲ. ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾರಿಂದ ಆರಂಭಗೊಂಡು, ವಿಜಯಕಾಂತ್, ಶರತ್ ಕುಮಾರ್ ತನಕ ಸಾಕಷ್ಟು ಜನ ರಾಜಕಾರಣಕ್ಕಿಳಿದವರೇ.
ಇದೇ ಸಾಲಿನಲ್ಲಿ ಸೇರಲು ತುದಿಗಾಲಿನಲ್ಲಿ ನಿಂತಿರುವ ಇಳಯ ದಳಪತಿ ಬಿರುದಾಂಕಿದ ವಿಜಯ್ ಯಾವ ಕ್ಷಣದಲ್ಲಾದರೂ ಕಲರ್ ಬಟ್ಟೆ ಕಳಚಿ ಇಡಬಹುದು. ಖಾದಿ ಹಾಕಿಕೊಳ್ಳಬಹುದು. ಖುದ್ದು ವಿಜಯ್ ಈ ಮಾತನ್ನ ಹೇಳಿದ್ದಾರೆ. ತಯಾರಿಯನ್ನೂಕೂಡ ನಡೆಸಿದ್ದಾರೆ

ಇದರ ನಡುವೆ ವಿಜಯ್ ಅಭಿನಯದ 68ನೇ ಚಿತ್ರ GOAT { ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' } ಕುರಿತು ಇಂಟ್ರೆಸ್ಟಿಂಗ್ ಸುದ್ದಿಯೊಂದು, ಪಕ್ಕದ ತಮಿಳುನಾಡಿನಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ವಿಜಯ್ ಅವರ ಅಸಂಖ್ಯಾತ ಹಾಗೂ ಅಗಣಿತ ಅಭಿಮಾನಿಗಳ ಸಂಭ್ರಮವನ್ನೂ ಹೆಚ್ಚಿಸಿದೆ.
ಹೌದು, ವಿಜಯ್ ಅಭಿನಯದ GOAT ಚಿತ್ರದಲ್ಲಿ, ಭಾರತೀಯ ತಂಡದ ಮಾಜಿ ಕ್ಯಾಪ್ಟನ್ ಮತ್ತು ಚೆನೈ ಸೂಪರ್ ಕಿಂಗ್ಸ್‌ನ ಸ್ಟಾರ್ ಅಟ್ರ್ಯಾಕ್ಟನ್ ಎಂ.ಎಸ್.ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಕಳೆದ 48ಘಂಟೆಗಳಿಂದ ಕೇಳಿ ಬರುತ್ತಿರುವ ಈ ಸುದ್ದಿಯನ್ನ ಕೇಳಿ ತಮಿಳುನಾಡು ಅಕ್ಷರಶ ಹುಚ್ಚೆದ್ದು ಕುಣಿಯುತ್ತಿದೆ.

ಇನ್ನೂ ಕೇವಲ ಎಂ.ಎಸ್.ಧೋನಿ ಮಾತ್ರ ಅಲ್ಲ ಸಿಎಸ್‌ಕೆಯ ಸದ್ಯದ ನಾಯಕ ರುತುರಾಜ್ ಗಾಯಕ್ವಾಡ್ ಕೂಡ, ವೆಂಕಟ್ ಪ್ರಭು ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ವಿಜಯ್ ಅವರ ಈ 68ನೇ ಚಿತ್ರದಲ್ಲಿ ಧೋನಿ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಹರಿದಾಡುತ್ತಿರುವ ಈ ಮಾತು ವಾಸ್ತವಕ್ಕೆ ಎಷ್ಟು ಹತ್ತಿರ ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ, ಈ ಸಾಧ್ಯಾಸಾಧ್ಯತೆಯ ಬಗ್ಗೆ ಚರ್ಚೆ ಗಂಭೀರವಾಗಿ ಆರಂಭವಾಗಿರುವುದು ಸುಳ್ಳಲ್ಲ. ಯಾಕೆಂದರೆ, ಧೋನಿ ತಮಿಳುನಾಡಿನ ದತ್ತು ಪುತ್ರ. ಅಲ್ಲಿನ ಜನ ಇವರನ್ನ ತಲಾ ಎಂದೇ ಕರೆಯುತ್ತಾರೆ. ಈ ಅಭಿಮಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ ಹಾಕಿ, ಧೋನಿ ತಮಿಳು ಚಿತ್ರರಂಗದಿಂದನೇ ನಿರ್ಮಾಣಕ್ಕೆ ಧುಮಿಕಿದ್ದು ನಿಮಗೆ ಗೊತ್ತೇ ಇರಬೇಕು. ಇನ್ನೂ ಮಾಹಿ ಮೊದಲಿಂದ ವಿಜಯ್ ಅವರ ಜೊತೆ ಆತ್ಮೀಯ ಸಂಬಂಧವನ್ನ ಹೊಂದಿರುವವರು. ಇದಕ್ಕೆ ಪುರಾವೆ ಎನ್ನುವಂತೆ ಕ್ಯಾಪ್ಟನ್ ಕೂಲ್ ಧೋನಿ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಬಂದು ತಮ್ಮ ಮೊದಲ ಚಿತ್ರವನ್ನ ತಮಿಳಿನಲ್ಲಿ ಆರಂಭ ಮಾಡಿದಾಗ, ವಿಜಯ್ ಆ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನುವ ಸುದ್ದಿ ಈಗ ಹರಡಿರುವಂತೆಯೇ ಆಗ ಕೂಡ ಹರಡಿತ್ತು. ವಿಜಯ್ ಅಭಿನಯದ ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಧೋನಿ ಭೇಟಿ ಕೊಟ್ಟ ಫೋಟೋ ವೈರಲ್ ಕೂಡ ಆಗಿತ್ತು.

ಈ ಎಲ್ಲ ಕಾರಣಗಳಿಂದ ವಿಜಯ್ ಅಭಿನಯದ GOAT ಚಿತ್ರದಲ್ಲಿ ಧೋನಿ ಆಕ್ಟ್ ಮಾಡುವುದು ಬಹುತೇಕ ಕನ್ಫರ್ಮ್ ಅನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಈ ಮಾತುಗಳಿಗೆ ಇಂಬು ನೀಡುವಂತೆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಅಜ್ಮಲ್ ನಿರ್ಮಾಣ ಸಂಸ್ಥೆಯೇ ಎಲ್ಲ ವಿಚಾರವನ್ನ ಸವಿಸ್ತಾರವಾಗಿ ಹೇಳಲಿದೆ ಎಂಬ ಮಾತುಗಳನ್ನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹೀಗಾಗಿಯೇ ವಿಜಯ್ ಅವರ GOAT ಚಿತ್ರದಲ್ಲಿ ಧೋನಿ ಇರಲಿದ್ದಾರೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಸದ್ಯಕ್ಕೆ ಕುಣಿದು ಕುಪ್ಪಳಿಸುತ್ತಿದ್ದಾರೆ ವಿಜಯ್ ಅವರ ಅಭಿಮಾನಿಗಳು. ನಿಜಕ್ಕೂ ಧೋನಿ ಮತ್ತು ರುತುರಾಜ್ ಗಾಯಕ್ವಾಡ್ ಚಿತ್ರದಲ್ಲಿ ಇರಲಿದ್ದಾರಾ ಉತ್ತರ ಸದ್ಯದಲ್ಲಿಯೇ ಸಿಗಲಿದೆ.


Click it and Unblock the Notifications











