ಸಂಗೀತ ನಿರ್ದೇಶಕ ಇಳಯರಾಜಾಗೆ ದೇವಸ್ಥಾನದಲ್ಲಿ ಅವಮಾನ? ವೀಡಿಯೋ ವೈರಲ್
ಸಂಗೀತಾ ಮಾಂತ್ರಿಕ ಇಳಯರಾಜಾಗೆ ತಮಿಳುನಾಡಿನ ದೇವಸ್ಥಾನದಲ್ಲಿ ಕಹಿ ಅನುಭವ ಎದುರಾಗಿದೆ. ಮಾರ್ಗಶಿರ ಮಾಸ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಇಳಯರಾಜಾ ಭೇಟಿ ನೀಡಿದ್ದರು. ಆದರೆ ಅವರಿಗೆ ದೇವಸ್ಥಾನದ ಗರ್ಭಗುಡಿ ಮುಂಭಾಗದ ಮಂಟಪ ಪ್ರವೇಶಿಸಲು ಅವಕಾಶ ಸಿಗಲಿಲ್ಲ ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ.
ನೂರಾರು ಸಿನಿಮಾಗಳಿಗೆ ಅದ್ಭುತ ಸಂಗೀತ ನೀಡಿ ಮೋಡಿ ಮಾಡಿದವರು ಇಳಯರಾಜ. ಬರೀ ಸಿನಿಮಾ ಮಾತ್ರವಲ್ಲದೇ ಸಾಕಷ್ಟು ಭಕ್ತಿ ಪ್ರಧಾನ ಗೀತೆಗಳಿಗೆ ಸಾಹಿತ್ಯ, ಸಂಗೀತ ಒದಗಿಸಿದ್ದಾರೆ. ಬೆಳ್ಳಂ ಬೆಳಗ್ಗೆ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನದಲ್ಲಿ ಆಂಡಾಳ್, ರಂಗಮನ್ನಾರ್ ದರ್ಶನಕ್ಕೆ ಇಳಯರಾಜಾ ತೆರಳಿದ್ದರು. ಆದರೆ ಅವರನ್ನು ಗರ್ಭಗುಡಿ ಮುಂಭಾಗ ಅರ್ಧ ಮಂಟಪಕ್ಕೆ ಹೋಗದಂತೆ ಅರ್ಚಕರು ಹೊರಗೆ ಕಳುಹಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇಳಯರಾಜಾ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಜೊತೆಗೆ ಚಿನ್ನಜಿಯರ್ ಕೂಡ ಇದ್ದರು. ಇಳಯರಾಜಾ ಒಳಗೆ ಹೋಗಲು ಮುಂದಾಗುತ್ತಿದ್ದಂತೆ ಅಲ್ಲಿದ್ದ ಅರ್ಚಕರ ಜೊತೆಗೆ ಚಿನ್ನಜಿಯರ್ ಕೂಡ ಅವರನ್ನು ಹೊರಗೆ ನಿಲ್ಲುವಂತೆ ಹೇಳಿದ್ದಾಗಿ ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಅರ್ಧ ಮಂಟಪಕ್ಕೆ ಹೋಗಲು ಅವಕಾಶ ಸಿಗದೇ ಇದ್ದಾಗ ಅಲ್ಲಿದ್ದ ಮೆಟ್ಟಿಲ ಬಳಿ ನಿಂತ ದೇವಸ್ಥಾನದ ಗೌರವ ಸ್ವೀಕರಿಸಿದ್ದಾರೆ. ತಲೆಗೆ ಪೇಟ ಸುತ್ತಿ, ಹೂವಿನ ಹಾರ ಹಾಕಿ ಅವರನ್ನು ಗೌರವಿಸಲಾಗಿದೆ.
ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನದ ಗರ್ಭಗುಡಿವರೆಗೆ ಇಳಯರಾಜಾ ಹೋಗಲು ಅವಕಾಶ ನೀಡದೇ ಇರುವುದರ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೆಂತಹ ಅವಮಾನ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ದೇವರ ಕುರಿತು ಸಾಕಷ್ಟು ಹಾಡುಗಳನ್ನು ಕಟ್ಟಿಕೊಟ್ಟ ಸಂಗೀತ ಮಾಂತ್ರಿಕನಿಗೆ ಸಿಗುವ ಗೌರವ ಇದೇನಾ? ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಇಳಯರಾಜಾ ಸಂಗೀತ ಸಂಯೋಜನೆ ಮಾಡಿದ್ದಾರೆ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಸೇರಿ 7 ಸಾವಿರಕ್ಕೂ ಅಧಿಕ ಗೀತೆಗಳಿಗೆ ಇಸೈಜ್ಞಾನಿ ಸಂಗೀತ ನೀಡಿದ್ದಾರೆ. ಸಿನಿಮಾಗಳ ಲೆಕ್ಕವೇ ಒಂದು ಸಾವಿರ ದಾಟಿದೆ. 70ರ ದಶಕದಲ್ಲೇ ಕನ್ನಡ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ್ದರು.
ಶಂಕರ್‌ನಾಗ್ ಹಾಗೂ ಇಳಯರಾಜಾ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. 'ಜನ್ಮಜನ್ಮದ ಅನುಬಂಧ', 'ಗೀತಾ', 'ನ್ಯಾಯ ಗೆದ್ದಿತು' ಹೀಗೆ ಕೆಲ ಚಿತ್ರಗಳಲ್ಲಿ ಸಾಂಗ್ಸ್ ಸೂಪರ್ ಹಿಟ್ ಆಗಿತ್ತು. ಇನ್ನುಳಿದಂತೆ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಚಿತ್ರಗಳಿಗೂ ಇಳಯರಾಜಾ ಸಂಗೀತ ನೀಡಿದ್ದಾರೆ.


Click it and Unblock the Notifications











