'800' Trailer: ಅವಮಾನಗಳಿಂದ ಸನ್ಮಾನದವರೆಗೆ: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಟ್ರೈಲರ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 800 ವಿಕೆಟ್ ಕಬಳಿಸಿದ ಏಕೈಕ ಬೌಲರ್ ಮುತ್ತಯ್ಯ ಮುರಳೀಧರನ್ ಜೀವನವನ್ನಾಧರಿಸಿ ಸಿನಿಮಾ ನಿರ್ಮಾಣವಾಗಿದೆ. ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗನ ಬಯೋಪಿಕ್ ಚಿತ್ರಕ್ಕೆ '800' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಸದ್ಯ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಚಿನ್ ತೆಂಡೂಲ್ಕರ್ ಟ್ರೈಲರ್ ರಿಲೀಸ್ ಮಾಡಿದ್ದು ವಿಶೇಷ.
ಟ್ರೈನ್ ಮೋಷನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ '800' ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಮುತ್ತಯ್ಯ ಮುರಳಿಧರನ್ ಪಾತ್ರದಲ್ಲಿ 'ಸ್ಲಮ್‌ಡಾಗ್ ಮಿಲೇನಿಯರ್' ಫೇಮ್ ನಟ ಮಧುರ್ ಮಿಟ್ಟಲ್ ನಟಿಸಿದ್ದಾರೆ. ಮೊದಲ ನೋಟದಲ್ಲೇ ಇಷ್ಟವಾಗುವ ಟ್ರೈಲರ್ ಸಿನಿಮಾ ನೋಡಲೇಬೇಕು ಎನ್ನುವ ಕಾತುರತೆ ಹುಟ್ಟುಹಾಕಿದೆ. ಮುತ್ತಯ್ಯ ಕ್ರಿಕೆಟ್ ಮೈದಾನದಲ್ಲಿ ಉರುಳಿಸಿದ ವಿಕೆಟ್‌ಗಳು, ಬರೆದ ದಾಖಲೆಗಳು ಗೊತ್ತೇಯಿದೆ. ಅದರ ಜೊತೆಗೆ ಅವರ ಬಾಲ್ಯ, ಹೋರಾಟ, ಸಂಘರ್ಷದ ಬದುಕಿನ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ.

ಎಂ. ಎಸ್ ಶ್ರೀಪತಿ '800' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕಾಗಿ ಬುಕರ್ ಪ್ರೈಜ್ ವಿಜೇತ ಶೆಹಾನ್ ಕರುಣತಿಲಕ ಜೊತೆ ಸೇರಿ ನಿರ್ದೇಶಕರು ಸ್ಟ್ರಿಪ್ಟ್ ಸಿದ್ಧಪಡಿಸಿದ್ದಾರೆ. ನಾಜರ್ ನಿರೂಪಣೆಯೊಂದಿಗೆ '800' ಸಿನಿಮಾ ಟ್ರೈಲರ್ ಆರಂಭವಾಗುತ್ತದೆ. ಕೆಲವು ಭಾಗಗಳಲ್ಲಿ ಮುತ್ತಯ್ಯ ಮುರಳೀಧರನ್ ಆಗಿ ಮಧುರ್ ಮಿಟ್ಟಲ್ ಅಷ್ಟಾಗಿ ಸೂಟ್ ಆಗಲಿಲ್ಲ ಎನಿಸುತ್ತದೆ. ಆದರೂ ಕೂಡ ಭಾವನಾತ್ಮಕವಾಗಿ ಸಾಗುವ ಟ್ರೈಲರ್ ನೋಡುಗರನ್ನು ಕಟ್ಟಿಹಾಕಿಬಿಡುತ್ತದೆ.
ಟ್ರೈಲರ್ ಗಮನಿಸಿದರೆ ಮುಖ್ಯವಾಗಿ ತಮಿಳುನಾಡು ಮೂಲದ ಮುತ್ತಯ್ಯ, ಶ್ರೀಲಂಕಾ ಕ್ರಿಕೆಟ್ ತಂಡ ಸೇರಿದ್ದೇಗೆ? ಅದಕ್ಕಾಗಿ ನಡೆಸಿದ ಹೋರಾಟ ಎಂಥದ್ದು? ಎನ್ನುವ ವಿಷಯಗಳು ಕುತೂಹಲ ಕೆರಳಿಸುತ್ತದೆ. 3 ನಿಮಿಷಗಳ ಟ್ರೈಲರ್ ನೋಡುಗರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದೆ. ಖ್ಯಾತ ನಿರ್ಮಾಪಕ, ಶ್ರೀದೇವಿ ಮೂವೀಸ್ ಮುಖ್ಯಸ್ಥ ಶಿವಲೆಂಕ ಕೃಷ್ಣಪ್ರಸಾದ್ '800' ಚಿತ್ರದ ವಿತರಣೆ ಹಕ್ಕುಗಳನ್ನು ಕೊಂಡುಕೊಂಡಿದ್ದಾರೆ. ತಮಿಳಿನಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ.

ಅಕ್ಟೋಬರ್‌ನಲ್ಲಿ '800' ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಮುತ್ತಯ್ಯ ಮುರಳೀಧರನ್ ಪತ್ನಿ ಮಧಿ ಮಲರ್ ಪಾತ್ರದಲ್ಲಿ ಮಹಿಮಾ ನಂಬಿಯಾರ್ ನಟಿಸಿದ್ದಾರೆ. ಇನ್ನುಳಿದಂತೆ ನಾಜರ್, ನರೇನ್, ವೇಲ್ ರಾಮಮೂರ್ತಿ, ರಿತ್ವಿಕ, ಅರುಲ್ ದಾಸ್, ಶರತ್ ಲೋಹಿತಾಶ್ವ ಚಿತ್ರದ ತಾರಾಗಣದಲ್ಲಿದ್ದಾರೆ. ಜಿಬ್ರಾನ್ ಸಂಗೀತ, ಆರ್. ಡಿ ರಾಜಶೇಖರ್ ಛಾಯಾಗ್ರಹಣ ಈ ಬಯೋಪಿಕ್ ಚಿತ್ರಕ್ಕಿದೆ. ಅಂದಹಾಗೆ ಈ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸ್ತಾರೆ ಎನ್ನಲಾಗಿತ್ತು. ಆದರೆ ಕೊನೆಗೆ ಮಧುರ್ ಮಿಟ್ಟಲ್ ನಟಿಸುವಂತಾಯಿತು.
ಟ್ರೈಲರ್‌ನಲ್ಲಿ ಮುತ್ತಯ್ಯ ಮುರಳೀಧರನ್ ಬಾಲ್ಯ, ಕ್ರಿಕೆಟ್ ಜೀವನದ ಏಳುಬೀಳು, ಅವಮಾನ, ರಾಜಕೀಯ, ನಿವೃತ್ತಿ ಹೀಗೆ ಸಾಕಷ್ಟು ವಿಷಯಗಳನ್ನು ಕಟ್ಟಿಕೊಡಲಾಗಿದೆ. ತಮಿಳುನಾಡಿನಿಂದ ಮುತ್ತಯ್ಯ ಶ್ರೀಲಂಕಾಗೆ ಹೋಗಿದ್ದು ಅಲ್ಲಿನ ಪೌರತ್ವ ಪಡೆಯಲು ಎದುರಿಸಿದ ಸಮಸ್ಯೆಗಳು, ಅದನ್ನೆಲ್ಲಾ ಮೀರಿ ಕ್ರಿಕೆಟರ್ ಆಗಿದ್ದು ಅಲ್ಲೂ ಅವಮಾನ ಎಲ್ಲವನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುತ್ತಯ್ಯ ಅನುಮಾನಾಸ್ಪದ ಬೌಲಿಂಗ್ ವಿಚಾರ, ಅದಕ್ಕಾಗಿ ನಡೆದ ಪರೀಕ್ಷೆಯಲ್ಲಿ ಪಾಸಾಗಿದ್ದು ಹೀಗೆ ಹಲವು ವಿಚಾರಗಳನ್ನು ತೆರೆದಿಡಲಾಗುತ್ತಿದೆ.
ಮುಂಬೈನಲ್ಲಿ '800' ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೀತು. ಕಾರ್ಯಕ್ರಮದಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಸಚಿನ್ ತೆಂಡೂಲ್ಕರ್ ಭಾಗಿ ಆಗಿದ್ದರು. ವೇದಿಕೆಯಲ್ಲಿ ಮಾತನಾಡಿದ ಮುತ್ತಯ್ಯ, "ನಾನು ಕೂಡ ಸಚಿನ್ ತೆಂಡೂಲ್ಕರ್ ಆಟ ಹಾಗೂ ವ್ಯಕ್ತಿತ್ವಕ್ಕೆ ದೊಡ್ಡ ಅಭಿಮಾನಿ. ಇನ್ನು 100 ವರ್ಷ ಕಳೆದರೂ ಸಚಿನ್ ಸಾಧನೆ ಯಾರು ಮಾಡಲು ಸಾಧ್ಯವಿಲ್ಲ. ಅಂತಹ ವ್ಯಕ್ತಿ ಮತ್ತೆ ಹುಟ್ಟಲ್ಲ" ಎಂದಿದ್ದಾರೆ.
ಸಚಿನ್ ಮಾತನಾಡಿ "ಮುತ್ತಯ್ಯ ಮುರಳೀಧರನ್ ನನಗೆ ಒಳ್ಳೆಯ ಸ್ನೇಹಿತ. 1993 ರಲ್ಲಿ ಅನಿಸುತ್ತದೆ, ಮೊದಲ ಬಾರಿಗೆ ಆತನನ್ನು ಭೇಟಿ ಮಾಡಿದ್ದು. ಆಗ ಶುರುವಾದ ಸ್ನೇಹ ಈಗಲೂ ಹಾಗೆಯೇ ಇದೆ. ನಾನು ಆಗಸ್ಟ್‌ನಲ್ಲಿ ಶ್ರೀಲಂಕಾಗೆ ಹೋಗಿದ್ದೆ. 'ನಿಮ್ಮ ಊರಿನಲ್ಲಿ ಇದ್ದೀನಿ' ಎಂದು ಮೆಸೇಜ್ ಮಾಡಿದ್ದೆ. ಆಗ 'ನಾನು ನಿಮ್ಮ ದೇಶದಲ್ಲಿ ಇದ್ದೇನೆ' ಎಂದು ಮುರಳೀಧರನ್ ರಿಪ್ಲೈ ಮಾಡಿದ್ದರು. ಆಗ ನನಗೆ '800' ಚಿತ್ರದ ಬಗ್ಗೆ ಹೇಳಿದರು. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವೇ ಎಂದು ಕೇಳಿದರು. ಮುರಳೀಧರನ್ ಕೇಳಿದರೆ ನಾನು 'ನೋ' ಎನ್ನಲಾರೆ. ಆತನಿಗಾಗಿ ಇಲ್ಲಿಗೆ ಬಂದೆ" ಎಂದಿದ್ದಾರೆ.


Click it and Unblock the Notifications











