ನನಗೆ ತಮಿಳುನಾಡಿನ ದೇವಸ್ಥಾನ ಪ್ರವೇಶಕ್ಕೆ ಅನುಮತಿ ಕೊಡಲಿಲ್ಲ; ನಟಿ ನಮಿತಾ ಆವೇದನೆ
ತಮಿಳು ನಟ ನಮಿತಾ ಕನ್ನಡ ಸಿನಿರಸಿಕರಿಗೂ ಪರಿಚಿತ ಹೆಸರು. ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಕೃಷ್ಣ ಜನ್ಮಾಷ್ಠಮಿ ಸಂಭ್ರಮದಲ್ಲಿ ಆಕೆ ಮಧುರೆ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ನನಗೆ ಆಲಯ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮಗೆ ದೇವಸ್ಥಾನ ಪ್ರವೇಶಿಸಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದರು. ಸಾಕಷ್ಟು ದಾಖಲೆಗಳನ್ನು ಕೇಳಿದರು. ನನ್ನೊಟ್ಟಿಗೆ ಕೆಟ್ಟದಾಗಿ ವರ್ತಿಸಿದರು. ಈ ಹಿಂದೆ ಕೂಡ ನಾನು ಸಾಕಷ್ಟು ದೇವಸ್ಥಾನಗಳಿಗೆ ಹೋಗಿದ್ದೇನೆ. ಆದರೆ ಎಂದೂ ಈ ರೀತಿ ಆಗಲಿಲ್ಲ. ಇವತ್ತು ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ ಪತಿ ಸಮೇತ ದೇವಸ್ಥಾನಕ್ಕೆ ಹೋಗಿದ್ದೆ. ಆಗ ಈ ಘಟನೆ ನಡೆಯಿತು ಎಂದು ನಮಿತಾ ವಿವರಿಸಿದ್ದಾರೆ.

"ಮೊದಲ ಬಾರಿಗೆ, ನಾನು ನನ್ನ ಸ್ವಂತ ದೇಶದಲ್ಲಿ ಹಾಗೂ ನನ್ನ ಸ್ವಂತ ಸ್ಥಳದಲ್ಲಿ ನಾನು ಹಿಂದೂ ಎಂದು ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಯಿತು. ನಾನು ಇಲ್ಲೇ ಪರಕೀಯಳಾಗುವಂತಾಯಿತು. ಅವರು ನನ್ನನ್ನು ಏನು ಕೇಳಿದರೂ ಎನ್ನುವುದಕ್ಕಿಂತ ಹೇಗೆ ಕೇಳಿದರು ಎನ್ನುವುದು ಬೇಸರ ತರಿಸಿತು. ಅದರಲ್ಲಿ ಒಬ್ಬರು ಅಸಭ್ಯ ಮತ್ತು ಸೊಕ್ಕಿನ ಅಧಿಕಾರಿ ಹಾಗೂ ಅವರ ಒಬ್ಬ ಸಹಾಯಕ ಕೂಡ ನನ್ನೊಟ್ಟಿಗೆ ಕೆಟ್ಟದಾಗಿ ವರ್ತಿಸಿದರು" ಎಂದು ನಮಿತಾ ಬರೆದುಕೊಂಡಿದ್ದಾರೆ.
"ಈ ಅಧಿಕಾರಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ನಾನು ಪಿ.ಕೆ.ಶೇಖರ್ ಬಾಬು ಜಿ ಅವರನ್ನು ವಿನಂತಿಸುತ್ತೇನೆ. ಇನ್ನು ನನಗೆ ದೇವರ ದರ್ಶನ ಮಾಡಲು ಬಳಿಕ ಸುರಕ್ಷಿತವಾಗಿ ಮರಳಲು ನಮಗೆ ಸಹಾಯ ಮಾಡಿದ ಪೊಲೀಸ್ ತಂಡಕ್ಕೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
ಇದೇ ವಿಚಾರದ ಬಗ್ಗೆ ನಮಿತಾ ವೀಡಿಯೋ ಮಾಡಿ ಮಾತನಾಡಿದ್ದಾರೆ. ನನಗೆ ಅಲ್ಲಿನ ಅಧಿಕಾರಿ ನಿಮ್ಮ ಹಿಂದೂ ಸರ್ಟಿಫಿಕೇಟ್ ತೋರಿಸಿ, ಜಾತಿ ಪ್ರಮಾಣ ಪತ್ರ ತೋರಿಸಿ ಎಂದರು. ಹಣೆಗೆ ಕುಂಕುಮ ಇಡಲು ಹೇಳಿದರು. ಈವರೆಗೆ ನನಗೆ ಯಾರೂ ಈ ರೀತಿ ಕೇಳಿರಲಿಲ್ಲ. ಯಾಕಂದರೆ ಭಾರತದಲ್ಲಿರುವ ಎಲ್ಲರಿಗೂ ಗೊತ್ತು ನಮಿತಾ ಹಿಂದೂ ಅಂತ. ನಾನು ತಿರುಪತಿಯಲ್ಲಿ ಮದುವೆ ಆಗಿದ್ದು. ನನ್ನ ಮಗನ ಹೆಸರು ಕೃಷ್ಣ ಆದಿತ್ಯ.
ನಾನು ಮನವಿ ಮಾಡುವುದು ಏನು ಅಂದ್ರೆ ಒಬ್ಬ ಜನಪ್ರಿಯ ವ್ಯಕ್ತಿ, ಸೆಲೆಬ್ರೆಟಿ ಜೊತೆ ಅವರಿಗೆ ಹೇಗೆ ಮಾತನಾಡಬೇಕು ಅಂತ ಗೊತ್ತಿಲ್ವಾ? ಅದು ನನಗೆ ಸರಿ ಎನಿಸಲಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಿ.ಕೆ ಶೇಖರ್ ಬಾಬು ಅವರಲ್ಲಿ ನಟಿ ನಮಿತಾ ಮನವಿ ಮಾಡಿದ್ದಾರೆ.
ದೇವಸ್ಥಾನದ ಸಿಬ್ಬಂದಿ ಮಾತನಾಡಿ "ನಮಿತಾರನ್ನು ಯಾರೂ ಅಸಭ್ಯವಾಗಿ ನಡೆಸಿಕೊಂಡಿಲ್ಲ. ದೇವಸ್ಥಾನದ ನಿಯಮಗಳ ಪ್ರಕಾರ ನಾವು ಅವರೊಂದಿಗೆ ಮಾತನಾಡಿದೆವು. ಮೇಲಿನ ಅಧಿಕಾರಿಗಳು ಹೇಳಿದಂತೆ ಸ್ವಲ್ಪ ಸಮಯ ಕಾಯಲು ತಿಳಿಸಿದ್ದೇವೆ. ಬಳಿಕ ಆಕೆಗೆ ಆಲಯ ಪ್ರವೇಶಿಸಲು ಅವಕಾಶ ಮಾಡಿಕೊಟ್ಟೆವು" ಎಂದು ತಿಳಿಸಿದ್ದಾರೆ.
ಮದುವೆ ಬಳಿಕ ನಮಿತಾ ಚಿತ್ರರಂಗದಿಂದ ದೂರಾಗಿದ್ದಾರೆ. ಉದ್ಯಮಿ ವೀರೇಂದ್ರ ಚೌಧರಿ ಎಂಬುವವರ ಜೊತೆ 2017ರಲ್ಲಿ ನಮಿತಾ ಮದುವೆ ನಡೆದಿತ್ತು. ತಮಿಳಿನ 'ಮಿಯಾ' ಆಕೆ ನಟಿಸಿದ ಕೊನೆಯ ಸಿನಿಮಾ. ಇನ್ನು ಬಿಜೆಫಿ ಪಕ್ಷದಲ್ಲಿ ಕೂಡ ನಮಿತಾ ಗುರ್ತಿಸಿಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿ 'ನೀಲಕಂಠ' ಚಿತ್ರದ ಮೂಲಕ ಆಕೆ ಸ್ಯಾಂಡಲ್‌ವುಡ್‌ಗೆ ಬಂದಿದ್ದರು.
'ನೀಲಕಂಠ' ಬಳಿಕ 'ಇಂದ್ರ' ಹಾಗೂ 'ಹೂ' ಸಿನಿಮಾಗಳಲ್ಲಿ ನಮಿತಾ ನಟಿಸಿದ್ದರು. ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ಕೂಡ ಆಕೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications











