ರಾಘವ ಲಾರೆನ್ಸ್ ಜೊತೆ ಸೇರಿ ಬೆಚ್ಚಿ ಬೀಳಿಸುತ್ತಾರಂತೆ ರಶ್ಮಿಕಾ ಮಂದಣ್ಣ..!
09 ವರ್ಷದ ಹಿಂದೆ ರಶ್ಮಿಕಾ ಮಂದಣ್ಣ ಅಂದರೆ ಯಾರದು ? ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೆ.. ಆ ನಂತರ ಬಂದ ''ಕಿರಿಕ್ ಪಾರ್ಟಿ'' ಇವರ ಬದುಕನ್ನೇ ಬದಲಿಸಿತು. ''ಕಿರಿಕ್ ಪಾರ್ಟಿ'' ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಇವತ್ತು ರಶ್ಮಿಕಾ ಮಂದಣ್ಣ ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ.
ಕನ್ನಡ ಒಂದು ಹೊರತು ಪಡಿಸಿದರೆ ಬೇರೆ ಎಲ್ಲಾ ಭಾಷೆಯಲ್ಲಿ ರಶ್ಮಿಕಾಗೆ ಚಿನ್ನದಂತಹ ಬೇಡಿಕೆ ಇದೆ. ಅದರಲ್ಲಿಯೂ ಹಿಂದಿಯಲ್ಲಿಯಂತೂ ರಶ್ಮಿಕಾ ಮಂದಣ್ಣ ಕಾಲ್‌ಶೀಟ್‌ಗೆ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಇನ್ನೂ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಬಿಡಾರ ಹೂಡಿದ ನಂತರ ಅನೇಕರು ರಶ್ಮಿಕಾ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಮರೆತರು ಎಂದೇ ಅಂದುಕೊಂಡಿದ್ದರು. ಆದರೆ.. ಕನ್ನಡವನ್ನು ಸುಲಭವಾಗಿ ಮರೆತ ರಶ್ಮಿಕಾ ಪಾಲಿಗೆ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಮರೆಯುವುದು ಸುಲಭ ಅಲ್ಲ.
ಯಾಕೆಂದರೆ ಇವರಿಗೆ ಅಲ್ಲಿಯೂ ಅಪಾರವಾದ ಅಭಿಮಾನಿಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್‌ಗೆ ಸರಿ ಸಮಾನವಾಗಿ ರಶ್ಮಿಕಾ ಕೇಳಿದಷ್ಟು ಸಂಭಾವನೆ ಕೊಡುವ ನಿರ್ಮಾಪಕರು ಇದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ರಶ್ಮಿಕಾ ಆಗಾಗ ಹಿಂದಿ ಚಿತ್ರರಂಗದಿಂದ ಬಿಡುವು ಮಾಡಿಕೊಂಡು ಒಂದು ಸುತ್ತು ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಸುತ್ತಿಕೊಂಡು ಬರುತ್ತಾರೆ.
ಹೀಗಿರುವಾಗ ಇದೀಗ ರಾಘವ ಲಾರೆನ್ಸ್ ಅವರ ಬ್ಲಾಕ್‌ಬಸ್ಟರ್ ಫ್ರಾಂಚೈಸಿ ''ಕಾಂಚನಾ''ದ ನಾಲ್ಕನೇ ಭಾಗದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಸದ್ಯ ಗುಲ್ಲಾಗಿದೆ. ಈಗಾಗಲೇ ಈ ಕುರಿತು ರಶ್ಮಿಕಾ ಮಂದಣ್ಣ ಅವರ ಜೊತೆ ರಾಘವ ಲಾರೆನ್ಸ್ ಚರ್ಚೆಯನ್ನು ಕೂಡ ಮಾಡಿದ್ದು ರಶ್ಮಿಕಾ ಮಂದಣ್ಣ ಅಭಿನಯಿಸುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ರಶ್ಮಿಕಾ ಈ ಚಿತ್ರದಲ್ಲಿ ದೆವ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ''ಎಬಿಪಿ ತಮಿಳು''.. ''ಟಿವಿ9 ತೆಲುಗು''.. ಸೇರಿ ಹಲವು ಮಾಧ್ಯಮಗಳು ವರದಿಯನ್ನು ಮಾಡಿವೆ.
ಅಂದ್ಹಾಗೇ ರಾಘವ ಲಾರೆನ್ಸ್ ನಿರ್ದೇಶಿಸಿ ಅಭಿನಯಿಸಲಿರುವ ಈ ಚಿತ್ರಕ್ಕೆ ಈಗಾಗಲೇ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದು ಪ್ರಮುಖವಾದ ಪಾತ್ರದಲ್ಲಿ ಬಾಲಿವುಡ್‌ನ ಬೆಡಗಿ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ಈಗ ರಶ್ಮಿಕಾ ಹೆಸರು ಚಾಲ್ತಿಯಲ್ಲಿದೆ. ಈ ಹಿನ್ನೆಲೆ ಈ ಚಿತ್ರದ ಮೇಲಿನ ನಿರೀಕ್ಷೆಗಳು ದಿನಗಳು ಉರುಳಿದಂತೆ ಹೆಚ್ಚಾಗುತ್ತಿವೆ.

''ಕಾಂಚನ''ಜೊತೆ ರಶ್ಮಿಕಾ ಹೆಸರು ಥಳುಕು ಹಾಕಿಕೊಂಡ ಬೆನ್ನಲ್ಲೇ ಉತ್ತರ ಭಾರತದಲ್ಲಿ ಈ ಚಿತ್ರದ ಕುರಿತು ಚರ್ಚೆ ಶುರುವಾಗಿದೆ. ''ಕಾಂಚನ-4''ರ ಸುತ್ತ ಮುತ್ತ ಕೂತುಹಲ ಗರಿಗೇದರಿದೆ. ರಶ್ಮಿಕಾ ಚಿತ್ರದಲ್ಲಿದ್ದರೆ ಡಬ್ಬಿಂಗ್ ಹಕ್ಕುಗಳನ್ನು ಸುಲಭವಾಗಿ ಮಾರಬಹುದು ಎನ್ನುವ ಲೆಕ್ಕಾಚಾರದಲ್ಲಿಯೇ ರಾಘವ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ಧಾರೆ ಎಂಬ ಮಾತು ಕೂಡ ಹೇಳಿ ಬರುತ್ತಿದೆ.
ಇನ್ನುಳಿದಂತೆ ಸದ್ಯ ರಶ್ಮಿಕಾ ಮಂದಣ್ಣ ಅಭಿನಯದ ''ಥಾಮಾ'' ಬಿಡುಗಡೆಯಾಗಬೇಕಿದೆ. ಈ ದೀಪಾವಳಿ ಹಬ್ಬದ ಪ್ರಯುಕ್ತ ಈ ಚಿತ್ರ ಬಿಡುಗಡೆಯಾಗಲಿದ್ದು ಈಗಾಗಲೇ ಈ ಚಿತ್ರದ ಟೀಸರ್ ಕುತೂಹಲ ಕೆರಳಿಸಿದೆ. ಈ ಚಿತ್ರ ಹೊರತು ಪಡಿಸಿದರೆ ''ದಿ ಗರ್ಲ್‌ಫ್ರೆಂಡ್'' ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆ ''ರೇನ್‌ಬೋ''.. ''ಮೈಸಾ'' ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ''ಕಾಕ್‌ಟೈಲ್ 2''ದಲ್ಲಿ ಕೂಡ ಅಭಿನಯಿಸುತ್ತಿದ್ಧಾರೆ. ಇದರ ನಡುವೆ ಇದೀಗ ''ಕಾಂಚನಾ 4'' ಚಿತ್ರದಲ್ಲಿ ರಶ್ಮಿಕಾ ಇದ್ಧಾರೆ ಎನ್ನುವ ಸುದ್ದಿ ಪಸರ್ ಆಗಿದೆ. ನಿಜಕ್ಕೂ ರಶ್ಮಿಕಾ ಮಂದಣ್ಣ ''ಕಾಂಚನಾ''ದಲ್ಲಿ ರಾಘವ ಲಾರೆನ್ಸ್ ಜೊತೆ ಸೇರಿ ಬೆಚ್ಚಿ ಬೀಳಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











