Viral Video ; ಸರತಿ ಸಾಲಿನಲ್ಲಿ ಅರ್ಧ ಗಂಟೆ ನಿಂತ 'ನಯನತಾರ' ಕ್ಯಾರೇ ಎನ್ನದ ಜನ..!
ಸೆಲೆಬ್ರಿಟಿಗಳು ಏನೇ ಮಾಡಲಿ, ಅದು ಬಹುತೇಕರಿಗೆ ತುಂಬಾನೇ ಸ್ಪೆಷಲ್ ಅನಸುತ್ತೆ. ಹೀಗಾಗಿಯೇ ವಿಡಿಯೋ.. ಫೋಟೋ.. ಕಣ್ ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ವೈರಲ್ ಆಗ್ತಾವೆ. ಚರ್ಚೆಗೀಡಾಗುತ್ತಾವೆ. ಇದಕ್ಕೆ ನಯನತಾರಾ ಅವರ ಹೊಚ್ಚ ಹೊಸ ವಿಡಿಯೋ ಸಾಕ್ಷಿ.
ಹೌದು, ಅಸಲಿಗೆ ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು.. ಸೆಲ್ಪಿ ಕೇಳೋದು.. ಮಾತನಾಡಲು ಹವಣಿಸೋದು ಕಾಮನ್ನು. ಯಾಕೆಂದರೆ ಅವರೆಲ್ಲ ಈ ಪ್ರಪಂಚದವರಲ್ಲ ಬದಲಿಗೆ ದೇವ ಮಾನವರೆನ್ನುವುದು ಅನೇಕರಲ್ಲಿರುವ ಕಲ್ಪನೆ.ಆದರೆ.. ಇದಕ್ಕೆ ಸಂಪೂರ್ಣ ತದ್ವಿರುದ್ಧ ಎಂಬಂತೆ ತಮ್ಮ ಕಣ್ಣೆದುರಲ್ಲೇ ನಯನತಾರಾ ಇದ್ದರೂ ಕೂಡ ದೆಹಲಿಯ ಜನ ಕಣ್ಣೆತ್ತಿ ನೋಡಿಲ್ಲ.

ಹೌದು, ಕಾಪಿ ರೈಟ್ ವಿಚಾರಕ್ಕೆ ಧನುಷ್ ಜೊತೆ ಆದ ವಿವಾದದಿಂದ ಸದ್ಯಕ್ಕೆ ದೇಶವ್ಯಾಪಿ ಚರ್ಚೆಯಲ್ಲಿರುವ ನಯನತಾರಾ, ತಮ್ಮ ಪತಿ ವಿಘ್ನೇಶ್ ಶಿವನ್ ಜೊತೆ ದೆಹಲಿಯ ಪ್ರಸಿದ್ಧ ಹೋಟೆಲ್‌ಗೆ ತೆರಳಿದ್ದಾರೆ. ವಿಶೇಷ ಅಂದರೆ ಇಲ್ಲಿ ತಮ್ಮ ಪ್ರಭಾವಳಿಯನ್ನು ಬಳಸದ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ. ಊಟಕ್ಕೆ ಟೇಬಲ್ ಪಡೆಯಲು ಅರ್ಧ ಘಂಟೆ ಕಾದಿದ್ದಾರೆ. ಆ ನಂತರ ಉತ್ತರ ಭಾರತದ ತಂದೂರಿ ಭೋಜನವನ್ನು ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾರೆ.
ವಿಶೇಷ ಅಂದರೆ ನಯನತಾರಾ ಈ ಹೋಟೆಲ್‌ನಲ್ಲಿ ಹೆಚ್ಚು ಕಡಿಮೆ ಒಂದೂವರೆ ಎರಡು ಘಂಟೆಗಳ ಕಾಲ ಇದ್ದರೂ ಕೂಡ ಯಾರೆಂದರೆ ಯಾರು ನಯನತಾರಾ ಅವರನ್ನು ಗುರುತಿಸಿಲ್ಲ. ಸೆಲ್ಫೀಗೆ ಪೀಡಿಸಿಲ್ಲ. ಹೀಗಾಗಿಯೇ ನಿರಾತಂಕವಾಗಿ, ನೆಮ್ಮದಿಯಾಗಿ ನಯನತಾರಾ ಊಟವನ್ನು ಮಾಡಿದ್ದಾರೆ. ತಮ್ಮ ಪತಿ ವಿಘ್ನೇಶ್ ಶಿವನ್ ಜೊತೆ ಲೇಡಿ ಸೂಪರ್ ಸ್ಟಾರ್ ಖುಷಿ ಖುಷಿಯಾಗಿ ಕಾಲವನ್ನು ಕಳೆದಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿಘ್ನೇಶ್ ಶಿವನ್ ನವೆಂಬರ್ 17ರಂದು ನಯನತಾರ ಹುಟ್ಟುಹಬ್ಬದ ಹಿಂದಿನ ದಿನ ಬರ್ತ್‌ಡೇ ಆಚರಿಸಲು ಈ ಹೋಟೆಲ್‌ಗೆ ಹೋಗಿದ್ದೆವು. ಅರ್ಧ ಗಂಟೆ ಸಾಲಿನಲ್ಲಿ ಕೂಡ ನಿಂತುಕೊಂಡಿದ್ದೇವು ಎಂದಿದ್ದಾರೆ. ಭೋಜನ ತುಂಬಾ ರುಚಿಕರವಾಗಿತ್ತು ಎಂದಿರುವ ವಿಘ್ನೇಶ್ ಈ ವಿಡಿಯೋವನ್ನು ಸೆರೆಹಿಡಿದ ಅಪರಿಚಿತ ವ್ಯಕ್ತಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಇನ್ನೂ ಈ ವಿಡಿಯೋಗೆ ನಯನತಾರಾ ಕೂಡ ಪ್ರತಿಕ್ರಿಯಿಸಿದ್ದು ನನ್ನ ಪಾಲಿನ ಅತ್ಯುತ್ತಮ ಹುಟ್ಟುಹಬ್ಬ ಇದಾಗಿತ್ತು ಎಂದು ಹೇಳಿದ್ದಾರೆ. ಅನುಭವ ತುಂಬಾನೇ ನೈಜ ಮತ್ತು ಸಾಮಾನ್ಯವಾಗಿತ್ತು ಎಂದು ಬರೆದಿದ್ದಾರೆ. ಇನ್ನೂ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಕೆಲವರು ದೆಹಲಿಯ ಜನ ನಿಮ್ಮ ಖಾಸಗಿತನವನ್ನು ಗೌರವಿಸಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ಸೆಲೆಬ್ರಿಟಿಗಳಿಗೆ ಈ ತರ ನೆಮ್ಮದಿಯಿಂದ ಸಾರ್ವಜನಿಕ ಪ್ರದೇಶದಲ್ಲಿ ಕಾಲ ಕಳೆಯುವ ಯೋಗ ಇರಲ್ಲ ನೀವು ನಿಜಕ್ಕೂ ಅದೃಷ್ಟವಂತರು ಎಂದಿದ್ದಾರೆ. ಹೇಗೂ ಯಾರ ಕಿರಿಕಿರಿ ಇರದೇ ನೆಮ್ಮದಿಯಿಂದ ಊಟ ಮಾಡಿದಿರಲ್ಲ ಅಷ್ಟೇ ಸಾಕು ಬಿಡಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ದೆಹಲಿಯ ಜನ ಬಹುಶಃ 'ಜವಾನ್' ಚಿತ್ರವನ್ನು ನೋಡಿಲ್ಲ ಅನ್ಸುತ್ತೆ ಎಂದು ನಯನತಾರ ಅವರ ಕಾಲೆಳೆದಿದ್ದಾರೆ.
ಇನ್ನುಳಿದಂತೆ ನಯನತಾರಾ ಬದುಕಿನ ಕಥೆ 'Nayanthara: Beyond the Fairy Tale' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಹಲವರ ಗಮನವನ್ನು ಸೆಳೆಯುತ್ತಿದೆ. ತಮ್ಮ ಜೀವನದ ಸಾಕಷ್ಟು ಸಂಗತಿಗಳನ್ನು ಮನ ಬಿಚ್ಚಿ ಈ ಡಾಕ್ಯುಮೆಂಟರಿಯಲ್ಲಿ ನಯನತಾರಾ ಹೇಳಿದ್ದಾರೆ. ಲೇಡಿ ಸೂಪರ್ ಸ್ಟಾರ್‌ಗೆ ಆಪ್ತರಾಗಿರುವ ಹಲವರು ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











