ಗಂಡನಿಂದ ನಟಿ ನಯನತಾರಾಗೆ ಸಿಕ್ತು ಐಷಾರಾಮಿ ಕಾರು: ಬೆಲೆ ಕೇಳಿದರೇ ಶಾಕ್ ಆಗೋದು ಗ್ಯಾರಂಟಿ!
ಜವಾನ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ನಟಿ ನಯನತಾರಾ ಕಾಲಿಟ್ಟಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಹಿರೋಯಿನ್ ಆಗಿ ಮೆರೆಯುತ್ತಿರುವ ಲೇಡಿ ಸೂಪರ್ ಸ್ಟಾರ್ ಇತ್ತೀಚೆಗೆ ಅಂದರೆ ನವೆಂಬರ್ 18 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ತನ್ನ ಮುದ್ದಿನ ಮಡದಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದ ನಿರ್ದೇಶಕ ವಿಘ್ನೇಶ್ ಶಿವನ್ ಏನು ಉಡುಗೊರೆ ನೀಡಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದಕ್ಕೆ ನಟಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ. ಜೊತೆಗೆ ಐಷಾರಾಮಿ ವಸ್ತುವನ್ನು ತೋರಿಸುವ ಮೂಲಕ ಶಾಕ್ ಕೂಡ ನೀಡಿದ್ದಾರೆ.

ನಟಿ ನಯನತಾರಾಗೆ ಸಿಕ್ತು ಭರ್ಜರಿ ಉಡುಗೊರೆ
ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ 2022 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿರ್ದೇಶಕ ವಿಘ್ನೇಶ್ ಶಿವನ್ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಫೋಟೋ, ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿರುತ್ತಾರೆ. ನಟಿ ನಯನತಾರಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ.
ನಟಿ ಇತ್ತೀಚೆಗೆ ತನ್ನ 39 ನೇ ಹುಟ್ಟುಹಬ್ಬವನ್ನು ನವೆಂಬರ್ 18 ರಂದು ಆಚರಿಸಿಕೊಂಡಿದ್ದು, ಪತಿ ವಿಘ್ನೇಶ್ ಶಿವನ್ ಮತ್ತು ಅವರ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರೊಂದಿಗೆ ಸಂತೋಷದಿಂದ ದಿನ ಕಳೆದಿದ್ದಾರೆ. ನವೆಂಬರ್ 29 ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಯನತಾರಾ ತನ್ನ ಗಂಡನಿಂದ ಹುಟ್ಟುಹಬ್ಬಕ್ಕೆ ಪಡೆದ ಉಡುಗೊರೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮೂರು ಕೋಟಿ ರೂಪಾಯಿಯ ಕಾರು ಉಡುಗೊರೆ
ವಿಘ್ನೇಶ್ ಶಿವನ್ ತನ್ನ ಮಡದಿಗೆ ಮರ್ಸಿಡಿಸ್ ಮೇಬ್ಯಾಕ್ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಕತ್ ಆಗಿರುವ ಈ ಲಗ್ಸರಿ ಕಾರಿನ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಈ ಮರ್ಸಿಡಿಸ್ ಮೇಬ್ಯಾಕ್ ಕಾರಿನ ಬೆಲೆ ಸುಮಾರು 2.69 ಕೋಟಿಗಳಿಂದ 3.40 ಕೋಟಿಗಳ ನಡುವೆ ಇರುತ್ತದೆ.

ಫೋಟೋಗಳ ಜೊತೆಗೆ "ಮನೆಗೆ ಸುಸ್ವಾಗತ ಸುಂದರಿ. ನನ್ನ ಪ್ರೀತಿಯ ಪತಿ ವಿಘ್ನೇಶ್ ಶಿವನ್ , ಅತ್ಯಂತ ಸಿಹಿಯಾದ ಜನ್ಮದಿನದ ಉಡುಗೊರೆಗಾಗಿ ಧನ್ಯವಾದಗಳು. ಲವ್ ಯು" ಎಂದು ಹಾರ್ಟ್ ಎಮೊಜಿಗಳ ಜೊತೆಗೆ ಬರೆದುಕೊಂಡಿದ್ದಾರೆ. ಜೊತೆಗೆ ಕಾರಿನ ಲೋಗೊ ಜೊತೆಗೆ ಹಾರ್ಟ್ ಸಿಂಬಲ್‌ನಲ್ಲಿ ಸನ್ನೆ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್
ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು 2015 ರಲ್ಲಿ 'ನಾನು ರೌಡಿ ಧಾನ್' ಚಿತ್ರದಲ್ಲಿ ಕೆಲಸ ಮಾಡುವಾಗ ಪರಸ್ಪರ ಹತ್ತಿರವಾದರು. ಇಬ್ಬರೂ ಅಂದಿನಿಂದ ಡೇಟಿಂಗ್ ನಡೆಸುತ್ತಿದ್ದರು ಬಳಿಕ ಜೂನ್ 9, 2022 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್‌ಗೆ ಪೋಷಕರಾಗಿದ್ದಾರೆ.
ಸದ್ಯ ಜವಾನ್ ಸಕ್ಸಸ್ ಖುಷಿಯಲ್ಲಿರುವ ನಟಿ ನಯನತಾರಾ ಮುಂದಿನ ಸಿನಿಮಾ 'ಅನ್ನಪೂರ್ಣಿ - ದಿ ಗಾಡೆಸ್ ಆಫ್ ಫುಡ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನಿಲೇಶ್ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. 2013 ರ ಚಿತ್ರ ರಾಜಾ ರಾಣಿ ಸಿನಿಮಾದಲ್ಲಿ ನಯನತಾರಾಗೆ ಜೋಡಿಯಾಗಿದ್ದ 'ಜೈ' ಮತ್ತೆ ಇದರಲ್ಲಿ ಒಂದಾಗಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಕುಮಾರ್, ಸತ್ಯರಾಜ್, ಕೆಎಸ್ ರವಿಕುಮಾರ್ ಮತ್ತು ಅನೇಕರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು ಈ ವರ್ಷ ಡಿಸೆಂಬರ್ 1 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.


Click it and Unblock the Notifications











