"ಆ ಚಿತ್ರದಲ್ಲಿ ನಟಿಸಿ ತಪ್ಪು ಮಾಡಿದ್ದೆ, ಬಹಳ ಕೆಟ್ಟದಾಗಿ ತೋರಿಸಿದ್ದರು"- ನಯನತಾರ
ಸಿನಿಮಾ ಸಕ್ಸಸ್ ಸೀಕ್ರೆಟ್ ಯಾರಿಗೂ ಗೊತ್ತಿಲ್ಲ. ನಿರ್ಮಾಣವಾಗುವ ಎಲ್ಲಾ ಸಿನಿಮಾಗಳು ಗೆಲ್ಲುವುದಿಲ್ಲ. ಆದರೂ ಪ್ರಯತ್ನ ನಿಲ್ಲುವುದಿಲ್ಲ. ಕೆಲವೊಮ್ಮೆ ನಿರ್ದೇಶಕರು ಮೊದಲು ಮಾಡುವ ಕಥೆ ಬೇರೆ, ಕೊನೆಗೆ ಅದು ತೆರೆಮೇಲೆ ರೂಪ ಪಡೆಯುವುದೇ ಬೇರೆ ಆಗಿಬಿಡುತ್ತದೆ. ಕೆಲವೊಮ್ಮೆ ನಟ, ನಟಿಯರ ಪಾತ್ರದ ವಿಚಾರದಲ್ಲಿ ಕೂಡ ಹೀಗೆ ಆಗಿಬಿಡುತ್ತದೆ.
ನಿರ್ದೇಶಕರು ಕಥೆ ಹೇಳುವಾಗ ನಿಮ್ಮ ಪಾತ್ರ ಅದ್ಭುತ, ನೀವೇ ಚಿತ್ರದ ಹೈಲೆಟ್ ಅಂತೆಲ್ಲಾ ಹೇಳಿ ಒಪ್ಪಿಸುತ್ತಾರೆ. ಸಿನಿಮಾ ಗೆದ್ದಾಗ ಅದನ್ನೆಲ್ಲಾ ಕಲಾವಿದರು ಮರೆತುಬಿಡುತ್ತಾರೆ. ಕೆಲವರು ಮಾತ್ರ ಆ ಪಾತ್ರ ಮಾಡಬಾರದಿತ್ತು, ನನ್ನ ಪಾತ್ರಕ್ಕೆ ಮಹತ್ವ ಇರಲಿಲ್ಲ. ನನಗೆ ಹೇಳಿದ್ದು ಒಂದು ಬಳಿಕ ಚಿತ್ರೀಕರಿಸಿದ್ದು ಮತ್ತೊಂದು ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನಟಿ ನಯನತಾರಾ ಕೂಡ ಚಿತ್ರರಂಗಕ್ಕೆ ಬಂದಿದ್ದ ಆರಂಭದಲ್ಲಿ ಒಂದು ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ನಟಿಸಿದ್ದ ಬಗ್ಗೆಗ ಬಳಿಕ ಬೇಸರ ವ್ಯಕ್ತಪಡಿಸಿರುವುದು ಇದೆ.

ತಮಿಳು ಮಾತ್ರವಲ್ಲೇ ನಯನತಾರ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ಕನ್ನಡದ 'ಟಾಕ್ಸಿಕ್' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಮದುವೆ ಬಳಿಕ ಕೂಡ ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳು ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದು ಕೊಟ್ಟಿದ್ದಾರೆ. ಅದನ್ನು ನಯನ್ ತಿರಸ್ಕರಿಸಿದ್ದಾರೆ.
ನಯನತಾರ ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಈಗ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ. ಚಿತ್ರರಂಗಕ್ಕೆ ಬಂದಿದ್ದ ಹೊಸತರಲ್ಲಿ 'ಗಜಿನಿ' ಎಂಬ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು. ಎ. ಆರ್ ಮುರುಗದಾಸ್ ನಿರ್ದೇಶನದ ಚಿತ್ರದಲ್ಲಿ ಸೂರ್ಯ ಹಾಗೂ ಆಶಿನ್ ನಾಯಕ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಬಳಿಕ ಹಿಂದಿಗೂ ರೀಮೆಕ್ ಆಗಿ ಸಂಚಲನ ಸೃಷ್ಟಿಸಿತ್ತು.
20 ವರ್ಷಗಳ ಹಿಂದೆ 'ಗಜಿನಿ' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ಮೆಡಿಕಲ್ ಸ್ಟೂಡೆಂಟ್ ಪಾತ್ರದಲ್ಲಿ ನಯನ್ ಮಿಂಚಿದ್ದರು. ಒಂದು ಸ್ಪೆಷಲ್ ಸಾಂಗ್‌ನಲ್ಲಿ ಕೂಡ ಹೆಜ್ಜೆ ಹಾಕಿದ್ದರು. ಆದರೆ ಆ ಚಿತ್ರದಲ್ಲಿ ಆಕೆಯ ಲುಕ್ಸ್ ಬಗ್ಗೆ ಟ್ರೋಲ್ ಆಗಿತ್ತು. ಆಗ ಬಹಳ ಕುಗ್ಗಿ ಹೋಗಿದ್ದೆ ಎಂದು ನಯನತಾರ ತಮ್ಮ ಡಾಕ್ಯುಮೆಂಟರಿಯಲ್ಲಿ ಕೂಡ ಹೇಳಿಕೊಂಡಿದ್ದರು. ಆ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
"ಗಜಿನಿ ಸಿನಿಮಾದಲ್ಲಿ ನಟಿಸಿದಾಗ ಸಾಕಷ್ಟು ಟ್ರೋಲ್ ಎದುರಿಸಿದ್ದೆ. ಜನ ನೋಡಿ ಯಾಕೆ ಈಕೆ ನಟಿಸುತ್ತಿದ್ದಾಳೆ, ಯಾಕೆ ಸಿನಿಮಾದಲ್ಲಿ ಇದ್ದಾಳೆ, ಆಕೆ ದಪ್ಪ ಇದ್ದಾಳೆ. ನೀವು ಅದನ್ನೆಲ್ಲಾ ಹೇಳಬಾರದು. ಅಭಿನಯದ ಬಗ್ಗೆ ಮಾತನಾಡಬೇಕು. ನಾನು ಚೆನ್ನಾಗಿ ಅಭಿನಯಿಸದೇ ಇರಬಹುದು. ಆದರೆ ನಿರ್ದೇಶಕರು ಹೇಳಿದ್ದನ್ನು ಮಾಡಿದ್ದೆ. ನಾನು ಆಗ ಚಿತ್ರರಂಗಕ್ಕೆ ಹೊಸಬಳು. ಹೇಳಿದಂತೆ ನಟಿಸಿದ್ದೆ, ಅವ್ರು ಹೇಳಿದ್ದ ಕಾಸ್ಟ್ಯೂಮ್ ಧರಿಸಿದ್ದೆ" ಎಂದು ನಯನತಾರ ಹೇಳಿದ್ದರು.
ಅದೇ ಡಾಕ್ಯುಮೆಂಟರಿಯಲ್ಲಿ 'ಬಿಲ್ಲಾ' ಚಿತ್ರದಲ್ಲಿ ಬಿಕಿನಿ ಧರಿಸಿ ನಟಿಸಿದ್ದ ಬಗ್ಗೆಯೂ ನಯನ್ ಮಾತನಾಡಿದ್ದರು. "ಸಾಕಷ್ಟು ಜನ ನಾನು ಬಿಕಿನಿ ಧರಿಸಿದ್ದನ್ನು ಇಶ್ಯೂ ಮಾಡಿದ್ದರು. ಅದರಿಂದಲೇ ಎಲ್ಲವೂ ಬದಲಾಯಿತು. ನಾನು ಏನನ್ನೋ ಸಾಬೀತು ಮಾಡಬೇಕು ಎಂದು ತುಂಡು ಬಟ್ಟೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ನಿರ್ದೇಶಕರು ಅದು ಒಂದು ಸನ್ನಿವೇಶ ಹೇಳಿದ್ದರು. ಅದಕ್ಕೆ ಮಾಡಿದ್ದೆ ಅಷ್ಟೇ" ಎಂದು ನಯನ್ ವಿವರಿಸಿದ್ದರು. ಸದ್ಯ ಕಾಲಿವುಡ್ ಚೆಲುವೆ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ಆದರೆ ಈ ವರ್ಷ ಯಾವುದೇ ಸಿನಿಮಾ ತೆರೆಗೆ ಬರುತ್ತಿಲ್ಲ. ಮುಂದಿನ ವರ್ಷ ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











