ಹೊಸ ಬ್ಯುಸಿನೆಸ್‌ಗೆ ಕೈ ಹಾಕಿದ ನಟಿ ನಯನತಾರಾ
ನಟ-ನಟಿಯರು ಸಿನಿಮಾ ಮೂಲಕ ಸಂಪಾದನೆ ಮಾಡಿದ ಹಣವನ್ನು ಬೇರೆಡೆ ತೊಡಗಿಸಿ ದೊಡ್ಡ ಮಟ್ಟದ ಲಾಭ ಪಡೆಯುವುದು ಸಾಮಾನ್ಯ. ಒಳ್ಳೆಯ ನಟರಾಗುವ ಜೊತೆಗೆ ಒಳ್ಳೆಯ ಉದ್ಯಮಿಪತಿಗಳೂ ಆಗಿರುವ ಹಲವರ ಉದಾಹರಣೆ ಬಹುತೇಕ ಎಲ್ಲ ಚಿತ್ರರಂಗದಲ್ಲಿಯೂ ಇದೆ.
ನಟರು, ಹೋಟೆಲ್ ಬ್ಯುಸಿನೆಸ್, ಚಿತ್ರಮಂದಿರ, ರಿಯಲ್ ಎಸ್ಟೇಟ್ ಎಂದು ಹಣ ತೊಡಗಿಸಿದರೆ ನಟಿಯರು ನವೋದ್ಯಮಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹಲವು ನಟಿಯರು ಹೊಸ ರೀತಿಯ ಉದ್ಯಮದ ಮೇಲೆ ಬಂಡವಾಳ ಹೂಡಿದ್ದಾರೆ. ಅದರಲ್ಲಿಯೂ ಮಹಿಳೆಯರು ಬಳಸಬಹುದಾದ ಉತ್ಪನ್ನಗಳ ಮೇಲೆಯೇ ನಟಿಯರಿಗೆ ಆಸಕ್ತಿ ಹೆಚ್ಚು.
ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ನಯನತಾರಾ ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ನಿರ್ಮಾಪಕಿಯಾಗಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ, ನೀಡುತ್ತಿರುವ ನಯನತಾರಾ ಈಗ ಬ್ಯುಸಿನೆಸ್‌ಗೆ ಇಳಿದಿದ್ದಾರೆ. ಹೊಸ ಉತ್ಪನ್ನವೊಂದನ್ನು ಅವರು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಬ್ಯುಸಿನೆಸ್‌ಗೆ ಕಾಲಿಟ್ಟ ನಯನತಾರಾ
ನಯನತಾರಾ ಹೊಸ ಸೌಂದರ್ಯವರ್ಧಕ ಬ್ರ್ಯಾಂಡ್ ಅನ್ನು ಸ್ಥಾಪಿಸಿದ್ದು, ಹಲವು ಬಗೆಯ ಸೌಂದರ್ಯವರ್ಧಕಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ತಮ್ಮ ಸೌಂದರ್ಯವರ್ಧಕ ಸಂಸ್ಥೆಗೆ 'ದಿ ಲಿಪ್ ಬಾಮ್ ಕಂಪೆನಿ' ಎಂದೇ ಹೆಸರಿಟ್ಟಿದ್ದಾರೆ. ಖ್ಯಾತ ಸೌಂದರ್ಯ ತಜ್ಞೆ ರೆನಿತಾ ರಾಜನ್ ಅವರೊಟ್ಟಿಗೆ ಸೇರಿ ಈ ಸಂಸ್ಥೆ ಪ್ರಾರಂಭಿಸಿದ್ದಾರೆ ನಯನತಾರಾ.

ಎಲ್ಲ ವರ್ಗದವರಿಗೆ ಹೊಂದಿಕೆಯಾಗುವ ಲಿಪ್ ಬಾಮ್
'ದಿ ಲಿಪ್ ಬಾಮ್ ಕಂಪೆನಿ'ಯು ಎಲ್ಲ ವರ್ಗದವರಿಗೆ, ಲಿಂಗದವರಿಗೆ ಹೊಂದುವಂತ ಲಿಪ್ ಬಾಮ್ ಅನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತನಾಡಿರುವ ನಯನತಾರಾ, ''ಚರ್ಮದ ಸುರಕ್ಷತೆ ವಿಷಯ ಬಂದಾಗ ಕಾಂಪ್ರಮೈಸ್ ಮಾಡಿಕೊಳ್ಳಲಾಗದು. ಹಾಗಾಗಿ ಹೆಚ್ಚು ಪರಿಣಾಮಕಾರಿಯಾದ ಹಾಗೂ ಹಾನಿಕಾರಕವಲ್ಲದ ಉತ್ಪನ್ನಗಳನ್ನು ನೀಡುವುದೇ ನಮ್ಮ ಮೊದಲ ಧ್ಯೇಯ. ನಾನು ವೈಯಕ್ತಿಕವಾಗಿ ಯಾವ ಸೌಂದರ್ಯವರ್ಧಕಗಳನ್ನು ಬಳಸುತ್ತೇನೆಯೋ ಅದರಲ್ಲಿ ನನಗೆ ಯಾವ ಗುಣಗಳು ಇಷ್ಟವೋ ಅದೇ ಅಂಶಗಳನ್ನು ಗ್ರಾಹಕರಿಗೂ ನೀಡಲು ನಾವು ಬಯಸುತ್ತೇವೆ'' ಎಂದಿದ್ದಾರೆ ನಯನತಾರಾ.

ರೆನಿತಾ ಜೊತೆ ಕೈಜೋಡಿಸಿರುವುದು ಹೆಮ್ಮೆ: ನಯನತಾರಾ
''ವೈದ್ಯೆ ರೆನಿತಾ ರಾಜನ್ ಅವರೊಟ್ಟಿಗೆ ಕೈಜೋಡಿಸಿರುವುದು ಬಹಳ ಹೆಮ್ಮೆಯ ವಿಷಯ. 'ದಿ ಲಿಪ್ ಬಾಮ್ ಕಂಪೆನಿ'ಯ ಮೊದಲ ಲಿಪ್ ಬಾಮ್ ಅನ್ನು ಕೈಗೆತ್ತಿಕೊಂಡಾಗಲೇ ನನಗೆ ಗೊತ್ತಾಯಿತು ಈ ಸಂಸ್ಥೆಯ ಪಾಲುದಾರಳಾಗಲೇಬೇಕೆಂದು. ಪ್ರೀಮಿಐಂ ಆಗಿರುವ ಪ್ರಾಡೆಕ್ಟ್ ಅನ್ನು ನಾವು ನೀಡುತ್ತಿದ್ದೇವೆ'' ಎಂದಿದ್ದಾರೆ ನಯನತಾರಾ.

ಹಲವು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿ
ನಟಿ ಕತ್ರಿನಾ ಕೈಫ್ ಸಹ ತಮ್ಮದೇ ಆದ ಸೌಂದರ್ಯವರ್ಧಕ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿದ್ದಾರೆ. ರಿತೇಶ್ ಹಾಗೂ ಜೆನಿಲಿಯಾ ಸಸ್ಯಜನ್ಯ ಮಾಂಸ ಖಾದ್ಯಗಳನ್ನು ಹೊರತಂದಿದ್ದಾರೆ. ಅನುಷ್ಕಾ ಶೆಟ್ಟಿ ವಿರಾಟ್ ಕೊಹ್ಲಿ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಹಾಗೂ ಎಲೆಕ್ಟ್ರಾನಿಕ್ ಗೆಜೆಟ್ ಸಂಸ್ಥೆ ಹೊಂದಿದ್ದಾರೆ. ನಟಿ ನಯನತಾರಾ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. ಅದರ ಜೊತೆಗೆ ಈಗ ಈ ಬ್ಯುಸಿನೆಸ್‌ಗೂ ಕೈ ಹಾಕಿದ್ದಾರೆ. ಇನ್ನು ನಯನತಾರಾ ನಟನೆಯ 'ಅಣ್ಣಾತೆ' ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಆಗಿದೆ. ಇದರ ಜೊತೆಗೆ ಶಾರುಖ್ ಖಾನ್ ಜೊತೆಗೆ 'ಲಯನ್', ಪೃಥ್ವಿರಾಜ್ ಸುಕುಮಾರನ್ ಜೊತೆಗೆ 'ಗೋಲ್ಡ್', ತಮಿಳು ಸಿನಿಮಾ 'ಕೂಳಂಗಳ್', ತೆಲುಗಿನಲ್ಲಿ ಚಿರಂಜೀವಿ ಜೊತೆಗೆ 'ಗಾಡ್ ಫಾದರ್', 'ಒರು ಕುರಿವಿ', 'ಕಾತ್ತು ವಾಕುಲ ರೆಂಡು ಕಾದಲ್', ಮಲಯಾಳಂ ಸಿನಿಮಾ 'ಕನೆಕ್ಟ್', ತಮಿಳಿನ 'ತ್ರಿಷಾ', ಮಲಯಾಳಂನ 'ಪಾಟು' ಸಿನಿಮಾಗಳಲ್ಲಿ ನಟಿಸಲಿದ್ದಾರೆ.


Click it and Unblock the Notifications











