ನಯನತಾರಾ ಜೊತೆ 'ಆ ಸಿನಿಮಾ' ಮಾಡಿದ್ದು ನನ್ನ ಬದುಕಿನ ಬಹುದೊಡ್ಡ ತಪ್ಪು...!
ಬಹುಭಾಷಾ ತಾರೆ- ಲೇಡಿ ಸೂಪರ್ ಸ್ಟಾರ್ ನಯನತಾರಗೆ ಬದುಕಿನಲ್ಲಿ ಒಮ್ಮೆಯಾದರೂ ಆಕ್ಷನ್-ಕಟ್ ಹೇಳಬೇಕೆಂಬ ಆಸೆ ಅನೇಕ ನಿರ್ದೇಶಕರಲ್ಲಿದೆ. ಕೇವಲ ಕಾಲಿವುಡ್‌ನಲ್ಲಿ ಅಷ್ಟೇ ಅಲ್ಲ ಬಾಲಿವುಡ್, ಟಾಲಿವುಡ್, ಮಾಲಿವುಡ್ ಸೇರಿ ಸ್ಯಾಂಡಲ್ವುಡ್‌ನಲ್ಲಿಯೂ ಇಂತಹ ಭಾವನೆ ಹೊಂದಿರುವ ಅನೇಕ ನಿರ್ದೇಶಕರಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ನಯನತಾರಾಗೆ ಚಿತ್ರವೊಂದನ್ನು ನಿರ್ದೇಶಿಸಿ ನಾನು ಬಹುದೊಡ್ಡ ತಪ್ಪು ಮಾಡಿದೆ ಎಂದಿದ್ದಾರೆ ನಿರ್ದೇಶಕ ಶೇಖರ್ ಕಮ್ಮುಲ.
ಹೌದು, 'ಡಾಲರ್ ಡ್ರೀಮ್ಸ್'.. 'ಗೋದಾವರಿ'.. 'ಆನಂದ್'.. 'ಹ್ಯಾಪಿ ಡೇಸ್' ನಂತಹ ಚಿತ್ರಗಳನ್ನು ನೀಡಿದ ಶೇಖರ್ ಕಮ್ಮುಲ, ಸರಿಯಾಗಿ ಒಂದು ದಶಕದ ಹಿಂದೆ 'ಅನಾಮಿಕ' ಚಿತ್ರವನ್ನು ನಿರ್ದೇಶಿಸಿದ್ದರು. ಬಾಲಿವುಡ್‌ನಲ್ಲಿ ಬಂದು ಬ್ಲಾಕ್ ಬಸ್ಟರ್ ಆದ 'ಕಹಾನಿ' ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರದಲ್ಲಿ ವಿದ್ಯಾ ಬಾಲನ್ ನಿರ್ವಹಿಸಿದ್ದ ಪಾತ್ರವನ್ನು ನಯನತಾರಾ ನಿರ್ವಹಿಸಿದ್ದರು.

ಆದರೆ, ಹಿಂದಿಯಲ್ಲಿ ಇಷ್ಟವಾಗಿದ್ದ ಈ ಕಥೆ ಅದ್ಯಾಕೋ ತಮಿಳಿನಲ್ಲಿ ಅನೇಕರಿಗೆ ಇಷ್ಟವಾಗಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಗೆಲ್ಲಲಿಲ್ಲ.ಈ ಸೋಲಿನ ಬಗ್ಗೆಯೇ ಇತ್ತೀಚೆಗೆ ಮಾತನಾಡಿರುವ ಶೇಖರ್ ಕಮ್ಮುಲ, ಆ ಚಿತ್ರಕ್ಕೆ.. ನಯನತಾರ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಬಾರದಿತ್ತು ಎಂಬ ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ.
ಆರಂಭದಲ್ಲಿ ನಯನತಾರಾ ಅವರಿಂದ ಆ ಪಾತ್ರದ ತೂಕ ಇನ್ನೂ ಹೆಚ್ಚಾಗುತ್ತೆ, ಆ ಪಾತ್ರಕ್ಕೊಂದು ನ್ಯಾಯ ಸಿಗುತ್ತೆ ಎಂದು ನಾನು ಭಾವಿಸಿದ್ದೇ, ಆದರೆ ವಾಸ್ತವದಲ್ಲಿ ಈ ತರಹದ ಚಿತ್ರಗಳನ್ನು ದೊಡ್ಡ ನಾಯಕಿಯರ ಜೊತೆ ಮಾಡಬಾರದು. ಈ ಸತ್ಯ ನನಗೆ ಆ ನಂತರ ಗೊತ್ತಾಯಿತು ಎಂದಿದ್ದಾರೆ. ಚಿತ್ರದ ಸೋಲಿಗೆ ನಾನೇ ಪ್ರಮುಖ ಕಾರಣವೆಂದು ಯಾವುದೇ ಅಳುಕಿಲ್ಲದೇ ಒಪ್ಪಿಕೊಂಡಿದ್ದಾರೆ.

ಇನ್ನೂ.. ಅನಾಮಿಕ ಚಿತ್ರಕ್ಕೂ ಮೊದಲು ಶೇಖರ್ ಕಮ್ಮುಲ ಒಂದಕ್ಕಿಂತೊಂದು ಚೆಂದದ ಸಿನಿಮಾಗಳನ್ನು ನೀಡಿದ್ದವರು. ಎಲ್ಲ ಕಥೆಗಳಲ್ಲಿ ಸ್ವಂತಿಕೆ ಇತ್ತು. ಆದರೆ ಅನಾಮಿಕ ಮಾತ್ರ ರಿಮೇಕ್. ಈ ಹೆಜ್ಜೆ ಇಡಲು ಕಾರಣವನ್ನೂ ಹೇಳಿರುವ ಶೇಖರ್ ಕಮ್ಮಲ, ಆ ಕಾಲದಲ್ಲಿ ನಿರ್ಭಯಾ ಪ್ರಕರಣ, ಇಡೀ ದೇಶವ್ಯಾಪಿ ಸದ್ದು ಮಾಡಿತ್ತು. ಈ ಹಿನ್ನೆಲೆ ಮಹಿಳಾ ಪ್ರಧಾನ ಸಿನಿಮಾ ಮಾಡುವ ಆಲೋಚನೆಯನ್ನು ಮಾಡಿದ್ದೆ ಆದರೆ ಕಥೆ ನನ್ನ ಬಳಿ ಇರಲಿಲ್ಲ ಅಂದಿದ್ದಾರೆ. ಈ ಕಾರಣದಿಂದನೇ.. ರಿಮೇಕ್ ಆದರೂ ಸರಿ, ಈ ಕ್ಷಣಕ್ಕೆ ಒಂದು ವಿಮೆನ್ ಓರಿಯೆಂಟೆಡ್ ಸಿನಿಮಾ ಮಾಡಿಯೇ ಬಿಡೋಣ ಎಂದು ನಿರ್ಧರಿಸಿ ಕಹಾನಿ ಚಿತ್ರವನ್ನು ರಿಮೇಕ್ ಮಾಡಿದೆ ಎಂದು ಹೇಳಿದ್ದಾರೆ ಶೇಖರ್ ಕಮ್ಮಲ.
ಇಂಥ ಶೇಖರ್ ಕಮ್ಮಲ ಸದ್ಯಕ್ಕೆ 'ಕುಬೇರ' ಚಿತ್ರವನ್ನು ನಿರ್ದೇಶಿಸುತ್ತಿದ್ಧಾರೆ. ಧನುಷ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಧನುಷ್ ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದು, ಕುಬೇರ ಚಿತ್ರದ ಮೂಲಕ ಕಾಲಿವುಡ್ಡಿಗೆ ಕುಬೇರ ವರ ಸಿಗುವ ಭರವಸೆ ಕೂಡ ತಮಿಳು ಚಿತ್ರರಂಗಕ್ಕಿದೆ. ಈ ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications











