ಸುಮ್ನೆ ಅಂದುಕೊಂಡಿದ್ದೇ ನಿಜವಾಯ್ತು; ಶಿವಣ್ಣ-ಬಾಲಯ್ಯ ಡಬಲ್ ಧಮಾಕ
ಶಿವರಾಜ್‌ಕುಮಾರ್ ಹಾಗೂ ತೆಲುಗು ನಟ ಬಾಲಕೃಷ್ಣ ಒಂದೇ ಫ್ರೇಮ್‌ನಲ್ಲಿ ಕಂಡರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಬಾಲಯ್ಯ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರದಲ್ಲಿ ಶಿವಣ್ಣ ಒಂದು ಹಾಡಿಗೆ ಹೆಜ್ಜೆ ಹಾಕಿದ್ದರು. ಇಬ್ಬರೂ ಸೇರಿ ಒಟ್ಟಿಗೆ ನಟಿಸೋ ಬಗ್ಗೆ ಪದೇ ಪದೆ ಮಾತನಾಡುತ್ತಿರುತ್ತಾರೆ. ಇದೀಗ ಅಂತಾದೊಂದು ಸುದ್ದಿ ಬಂದಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್-2' ಸಿನಿಮಾ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸುತ್ತಿದೆ. ನೆಲ್ಸನ್ ನಿರ್ದೇಶನದ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಜನಿಕಾಂತ್, ರಮ್ಯಾಕೃಷ್ಣ ಸೇರಿದಂತೆ ಕೆಲವರು ಈಗಾಗಲೇ ಬಣ್ಣ ಹಚ್ಚಿ ನಟಿಸುತ್ತಿದ್ದಾರೆ. 2 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.

ಆಕ್ಷನ್ ಥ್ರಿಲ್ಲರ್ 'ಜೈಲರ್' ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇವರಿಬ್ಬರ ಪ್ರಸೆನ್ಸ್ ಚಿತ್ರಕ್ಕೆ ಪ್ಲಸ್ ಆಗಿತ್ತು. ನರಸಿಂಹನಾಗಿ ಶಿವಣ್ಣನ ಅಬ್ಬರಕ್ಕೆ ಕಾಲಿವುಡ್, ಟಾಲಿವುಡ್ ಮಾಲಿವುಡ್ ಮಂದಿ ಕೂಡ ಫಿದಾ ಆಗಿದ್ದರು. ಸೀಕ್ವೆಲ್‌ನಲ್ಲಿ ಕೂಡ ಇವರಿಬ್ಬರು ನಟಿಸುತ್ತಿದ್ದಾರೆ. ಈಗಾಗಲೇ ಶಿವಣ್ಣ ಈ ವಿಚಾರ ಸ್ಪಷ್ಟಪಡಿಸಿದ್ದಾರೆ.
ಕನ್ನಡದಿಂದ ಶಿವಣ್ಣ, ಮಲಯಾಳಂನಿಂದ ಮೋಹನ್ ಲಾಲ್ ಹಾಗೂ ಬಾಲಿವುಡ್‌ನಿಂದ ಜಾಕಿಶ್ರಾಫ್ ಅವರನ್ನು ನೆಲ್ಸನ್ ಕಾಸ್ಟ್ ಮಾಡಿದ್ದರು. ಆದರೆ ತೆಲುಗು ಸ್ಟಾರ್ ನಟರು ಯಾರು ಚಿತ್ರದಲ್ಲಿ ಇರಲಿಲ್ಲ. 'ಜೈಲರ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ತೆಲುಗಿನ ಬಾಲಕೃಷ್ಣ ಚಿತ್ರದಲ್ಲಿ ಕೆಮಿಯೋ ಮಾಡಿದರೆ ಚೆನ್ನಾಗಿರ್ತಿತ್ತು. ಸೀಕ್ವೆಲ್‌ನಲ್ಲಿ ಅಂತಹ ಅವಕಾಶ ಇದ್ಯಾ? ಎಂದು ನಿರ್ದೇಶಕರಿಗೆ ಪ್ರಶ್ನೆ ಎದುರಾಗಿತ್ತು. ನೋಡೋಣ ಎಂದು ನೆಲ್ಸನ್ ಹೇಳಿದ್ದರು. ಆಗ ಇನ್ನು ಸೀಕ್ವೆಲ್ ಮಾಡುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

'ಜೈಲರ್- 2' ಚಿತ್ರದಲ್ಲಿ ಬಾಲಯ್ಯ ಗೆಸ್ಟ್ ಅಪಿಯರೆನ್ಸ್ ಮಾಡೋದು ಖಚಿತ ಎನ್ನಲಾಗ್ತಿದೆ. ಈ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಈಗ ಬಿಸಿಬಿಸಿ ಚರ್ಚೆ ನಡೀತಿದೆ. ಅಧಿಕೃತವಾಗಿ ಈ ಕುರಿತು ಚಿತ್ರತಂಡ ಮಾಹಿತಿ ನೀಡಬೇಕಿದೆ. ಪವರ್‌ಫುಲ್ ಪಾತ್ರಗಳನ್ನು ಮಾಡುವುದರಿಂದ ಬಾಲಕೃಷ್ಣ ನಿಸ್ಸೀಮರು. ನರಸಿಂಹ(ಶಿವಣ್ಣ), ಮ್ಯಾಥ್ಯೂ(ಮೋಹನ್ ಲಾಲ್) ರೀತಿಯಲ್ಲೇ ಬಾಲಯ್ಯನಿಗೆ ಒಂದು ಪವರ್‌ಫುಲ್ ಪಾತ್ರವನ್ನು ನೆಲ್ಸನ್ ಡಿಸೈನ್ ಮಾಡುತ್ತಿದ್ದಾರೆ. ಹಾಗಾಗಿ ರಜನಿಕಾಂತ್ ಜೊತೆಗೆ ಶಿವಣ್ಣ, ಬಾಲಯ್ಯ, ಮೋಹನ್ ಲಾಲ್ ಒಟ್ಟಿಗೆ ಬಂದ್ರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರೆಂಟಿ.
ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲೈನಿಧಿ ಮಾರನ್ 'ಜೈಲರ್'-2 ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಿತ್ತು. ಮೊದಲ ಭಾಗಕ್ಕೆ ಕೆಲಸ ಮಾಡಿದ್ದ ಬಹುತೇಕ ತಂಡ ಸೀಕ್ವೆಲ್ ಕಟ್ಟಿಕೊಡುತ್ತಿದೆ. ಮತ್ತೊಮ್ಮೆ ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ಸೂಪರ್ ಸ್ಟಾರ್ ಅಬ್ಬರಿಸೋಕೆ ಬರ್ತಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
'ಕೂಲಿ' ಸಿನಿಮಾ ಚಿತ್ರೀಕರಣ ಮುಗಿಸಿ ರಜನಿಕಾಂತ್ ಕೊಂಚ ವಿಶ್ರಾಂತಿ ಪಡೆದಿದ್ದರು. ಬಳಿಕ ಕೇರಳದಲ್ಲಿ ಆರಂಭವಾಗಿರುವ 'ಜೈಲರ್'-2 ಚಿತ್ರೀಕರಣಕ್ಕೆ ಹಾಜರಾಗಿದ್ದರು. ಇತ್ತೀಚೆಗೆ ಶೂಟಿಂಗ್ ಮುಗಿಸಿ ತಲೈವಾ ಎಕಾನಾಮಿಕ್ ಕ್ಲಾಸ್ ಫ್ಲೈಟ್ ಏರಿ ಚೆನ್ನೈಗೆ ವಾಪಸ್ ಆಗಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಆಗಸ್ಟ್ 15ಕ್ಕೆ 'ಕೂಲಿ' ಸಿನಿಮಾ ತೆರೆಗೆ ಬರಲಿದೆ. ಉಪೇಂದ್ರ, ಆಮೀರ್ ಖಾನ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮುಂದಿನ ವರ್ಷ ಸಂಕ್ರಾಂತಿಗೆ ಅಥವಾ ಏಪ್ರಿಲ್ 14ರ ತಮಿಳು ಪುತ್ತಾಂಡು ಸಂಭ್ರಮದಲ್ಲಿ 'ಜೈಲರ್-2' ಬಿಡುಗಡೆ ಆಗುವ ನಿರೀಕ್ಷೆಯಿದೆ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಬಾಲಯ್ಯ ಎಂಟ್ರಿಯಿಂದ ಟಾಲಿವುಡ್‌ನಲ್ಲಿ ಕೂಡ 'ಜೈಲರ್-2' ಕ್ರೇಜ್ ಹೆಚ್ಚಾಗಲಿದೆ.


Click it and Unblock the Notifications











