Jailer: ಕನ್ನಡ ಸೇರಿ 4 ಭಾಷೆಯ ನಾಯಕರನ್ನು ಒಂದೇ ಚಿತ್ರದಲ್ಲಿ ಬೆಸೆದ ನಿರ್ದೇಶಕ.. ವ್ಯಾಪಕ ಪ್ರಶಂಸೆ!
ತಮಿಳು ಚಿತ್ರ ರಸಿಕರಲ್ಲಿ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ರಜನಿಕಾಂತ್ 'ಜೈಲರ್' ಸಿನಿಮಾ ಬಿಡುಗಡೆಯಾಗಿ, ಒಂದೇ ದಿನದಲ್ಲಿ ಬಾಕ್ಸಾಫೀಸ್ ಗೆದ್ದಿದ್ದಾಗಿದೆ. ಬೆಂಗಳೂರು ಮತ್ತು ರಜನಿಕಾಂತ್ ನಡುವೆ ವಿಶೇಷ ನಂಟು ಇರುವುದರಿಂದ, ತಮಿಳುನಾಡು ನಂತರ ಕರ್ನಾಟಕದಲ್ಲಿ ದಾಖಲೆ ಪ್ರದರ್ಶನ ಕಂಡಿದೆ. ಜೊತೆಗೆ, ನಿರ್ಮಾಪಕರು/ವಿತರಕರಿಗೆ ಭರ್ಜರಿ ಇಳುವರಿಯನ್ನು ಮೊದಲ ದಿನದಲ್ಲಿ ಚಿತ್ರ ನೀಡಿದೆ.
ಬಹುಶ: ರಜನಿಕಾಂತ್ ಅವರ ಕಬಾಲಿ ಚಿತ್ರ ಬಿಡುಗಡೆಯ ಸಮಯ ಇರಬಹುದು. ಒಂದು ಕಡೆ ಡಬ್ಬಿಂಗ್ ಪರ, ಇನ್ನೊಂದು ಕಡೆ ಡಬ್ಬಿಂಗ್ ವಿರೋಧಿ ಚರ್ಚೆಗಳು ಜೋರಾಗಿ ನಡೆಯುತ್ತಿದ್ದ ಸಮಯವದು. ಕನ್ನಡ ಹೊರತಾಗಿ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ ಚಿತ್ರ ಬಿಡುಗಡೆ ಕಂಡಿತ್ತು. ಕನ್ನಡದಲ್ಲೂ ಸಿನಿಮಾದ ಡಬ್ಬಿಂಗ್ ವರ್ಷನ್ ಬಿಡುಗಡೆಯಾಗಬೇಕು ಎನ್ನುವ ಕನ್ನಡ ಚಿತ್ರಪ್ರೇಮಿಗಳಿಗೆ ನಿರಾಸೆ ಎದುರಾಗಿತ್ತು.

ಕನ್ನಡ ಚಿತ್ರೋದ್ಯಮ ಒಪ್ಪಿದರೆ ಕನ್ನಡ ಡಬ್ಬಿಂಗ್ ವರ್ಷನ್ ಬಿಡುಗಡೆ ಮಾಡಲು ನಮ್ಮದೇನೂ ತಕರಾರು ಇಲ್ಲ ಎಂದು ರಜನಿಕಾಂತ್, ಬಾಲ್ ಅನ್ನು ಸ್ಯಾಂಡಲ್‌ವುಡ್ ಕಡೆಗೆ ಎಸೆದಿದ್ದರು. ಕನ್ನಡ ಚಿತ್ರೋದ್ಯಮದ ಬಹುತೇಕರು ಮತ್ತು ಕೆಲವು ಕನ್ನಡಪರ ಸಂಘಟನೆಗಳೂ ಡಬ್ಬಿಂಗಿಗೆ ವಿರುದ್ದವಾಗಿದ್ದರೆ, ಇನ್ನು ಕೆಲವು ಕೆಲವು ಸಂಘಟನೆಗಳು ಮತ್ತು ಚಿತ್ರರಸಿಕರು ಡಬ್ಬಿಂಗ್ ಪರವಾಗಿದ್ದರು. ಆ ವೇಳೆ ಡಬ್ಬಿಂಗ್ ವಿರೋಧಿ ಕೂಗೇ ಒಂದು ಹಂತಕ್ಕೆ ಮೇಲುಗೈ ಸಾಧಿಸಿತ್ತು.
ಕಾಲಚಕ್ರ ಉರುಳುತ್ತಾ ಹಲವು ದೊಡ್ಡ ಬಜೆಟಿನ ಚಿತ್ರಗಳು ಕನ್ನಡದಲ್ಲೂ ಏಕಕಾಲದಲ್ಲಿ ಬಿಡುಗಡೆಯಾದವು. ಆದರೆ ಅಷ್ಟೊತ್ತಿಗಾಗಲೇ ಕನ್ನಡ ಪ್ರೇಕ್ಷಕರು ಬೇರೆ ಭಾಷೆಯ ಚಿತ್ರವನ್ನು ಒರಿಜಿನಲ್ ಲಾಂಗ್ವೇಜ್‌ನಲ್ಲೇ ನೋಡುವುದನ್ನು ರೂಢಿಸಿಕೊಂಡಾಗಿತ್ತು. ಅದಕ್ಕೆ ತಾಜಾ ಉದಾಹರಣೆ 'ಜೈಲರ್'. ಕನ್ನಡ ವರ್ಷನ್‌ಗೆ ಬೆರಳೆಣಿಕೆಯ ಚಿತ್ರಮಂದಿರ ಬೆಂಗಳೂರಿನಲ್ಲಿ ಸಿಕ್ಕಿದರೆ, ತಮಿಳು ವರ್ಷನ್ ಬೆಂಗಳೂರಿನ ಹೆಚ್ಚಿನ ಚಿತ್ರಮಂದಿರವನ್ನು ಆಪೋಸನೆಗೆ ತೆಗೆದುಕೊಂಡಿದೆ. ಸಿನಿಮಾ ನೋಡಿ ಹೊರಬರುವ ಎಲ್ಲರ ಬಾಯಲ್ಲೂ ಶಿವರಾಜ್ ಕುಮಾರ್ ಅವರ ನಟನೆಯದ್ದೇ ಮಾತು..

ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದ ಶಿವರಾಜ್ ಕುಮಾರ್ ಅವರ 'ಜೈಲರ್' ಚಿತ್ರದಲ್ಲಿ ಬರುವ ಅತಿಥಿ ಪಾತ್ರ ವ್ಯಾಪಕ ಪ್ರಶಂಸೆಗೆ ಒಳಗಾಗುತ್ತಿದ್ದಂತೆಯೇ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೂ ಶಹಬ್ಬಾಸ್ ಗಿರಿ ಬರುತ್ತಿದೆ. ತಮಿಳು - ಕನ್ನಡ - ಮಲಯಾಳಂ - ಹಿಂದಿ ಭಾಷೆಯ ನಾಲ್ಕು ಹೀರೋಗಳನ್ನು ಒಂದೇ ಚಿತ್ರದಲ್ಲಿ ಬೆಸೆದಿದ್ದಾರೆ ಎಂದು ಅವರನ್ನು ಕೊಂಡಾಡಲಾಗುತ್ತಿದೆ. ಚಿತ್ರದಲ್ಲಿ ರಜನಿ ಜೊತೆಗೆ ಅತಿಥಿ ಪಾತ್ರದಲ್ಲಿ ಶಿವಣ್ಣ, ಮೋಹನಲಾಲ್, ಜಾಕಿ ಶ್ರಾಫ್ ಕೂಡಾ ನಟಿಸಿದ್ದಾರೆ.
ಶಿವಣ್ಣ ಮತ್ತು ಮೋಹನಲಾಲ್ ಪಾತ್ರವನ್ನು ತೆರೆಗೆ ತಂದ ರೀತಿ, ಚಿಕ್ಕ ಪಾತ್ರವಾದರೂ ಕ್ಯಾರೆಕ್ಟರಿಗೆ ಕೊಟ್ಟ ಮಹತ್ವ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಒಳಗಾಗಿದೆ. ನಮ್ಮ ಶಿವಣ್ಣನನ್ನು ತಮಿಳುನಾಡಿಗೆ ಪರಿಚಯಿಸಿದ ನೆಲ್ಸನ್‌ಗೆ ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ನಡೆದುಕೊಂಡು ಬರುವ ರೀತಿ, ಸಿಗಾರ್ ಸೇದುವ ಭಂಗಿ, ಕಣ್ಣಿನಲ್ಲೇ ಎದುರಾಳಿಗಳನ್ನು ನಡುಗಿಸುವ ನೋಟಕ್ಕೆ ತಮಿಳಿಗರೂ ಫಿದಾ ಆಗಿದ್ದಾರೆ.
ಒಟ್ಟಿನಲ್ಲಿ, 'ಜೈಲರ್' ಸಿನಿಮಾದ ಮೂಲಕ ನಾಲ್ಕು ಭಾಷೆಯ ಪ್ರಮುಖ ಕಲಾವಿದರನ್ನು ಒಂದೇ ಚಿತ್ರದಲ್ಲಿ ಬೆಸೆದಿದ್ದಕ್ಕಾಗಿ ನಿರ್ಮಾಪಕ ಕಲಾನಿಧಿ ಮಾರನ್, ನಿರ್ದೇಶಕ ನೆಲ್ಸನ್ ಮತ್ತು ಹೀರೋ ರಜನಿಕಾಂತ್ ಬಗ್ಗೆ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತಿದೆ. ಕೊನೆಯದಾಗಿ, 'ಜೈಲರ್' ಚಿತ್ರದ ಕನ್ನಡ ಡಬ್ಬಿಂಗ್ ವರ್ಷನ್‌ನಲ್ಲಿ ತಮ್ಮ ಪಾತ್ರದ ವಾಯ್ಸ್ ಡಬ್ ಅನ್ನು ಖುದ್ದು ಶಿವಣ್ಣನೇ ಮಾಡಿದ್ದಾರೆ. ಹಲವು ವರ್ಷಗಳ ಹಿಂದಿನ ಚಳುವಳಿಯಲ್ಲಿ ಇವರು ಡಬ್ಬಿಂಗ್ ವಿರೋಧಿಯಾಗಿದ್ದರು ಎನ್ನುವುದು ಗಮನಿಸಬೇಕಾದ ವಿಚಾರ.


Click it and Unblock the Notifications











