ನಿಕ್ಕಿ ಗಲ್ರಾನಿ ಮನೆ ಕೆಲಸದವನ ಖತರ್‌ನಾಕ್ ಕೆಲಸ: ದೂರು ನೀಡಿದ ನಟಿ
ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಸಹ ಸಿನಿಮಾ ನಟಿಯಾಗಿದ್ದು ಚೆನ್ನೈನಲ್ಲಿ ವಾಸವಿದ್ದಾರೆ. ಇದೀಗ ತಮ್ಮ ಮನೆಗೆಲಸದ ವ್ಯಕ್ತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ನಟಿ.
Recommended Video
ನಿಕ್ಕಿ ಗಲ್ರಾನಿ ನಿವಾಸಕ್ಕೆ ಕೆಲವು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಯುವಕನೊಬ್ಬ ಮನೆಯ ವಸ್ತುಗಳನ್ನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.
ನಿಕ್ಕಿ ಗಲ್ರಾನಿಯ ಚೆನ್ನೈ ಅಪಾರ್ಟ್‌ಮೆಂಟ್‌ಗೆ ಧನುಶ್ ಎಂಬ 19-20 ವರ್ಷದ ಯುವಕ ಮನೆಗೆಲಸಕ್ಕೆ ಸೇರಿದ್ದ. ಮನೆಯಲ್ಲಿ ನಿಕ್ಕಿ ಇಲ್ಲದ ಹೊತ್ತು ನೋಡಿಕೊಂಡು ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳು, ನಿಕ್ಕಿಯ ಬೆಲೆ ಬಾಳುವ ಉಡುಪುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.

ಘಟನೆ ಕುರಿತಂತೆ ನಿಕ್ಕಿ ಗಲ್ರಾನಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಧನುಶ್‌ನನ್ನು ತಿರುಪತಿಯಲ್ಲಿ ಬಂಧಿಸಿದ್ದಾರೆ. ತಿರುಪತಿಯಲ್ಲಿ ತನ್ನ ಗೆಳೆಯನ ಮನೆಗೆ ಹೋಗಿ ಅಲ್ಲಿ ಆಸರೆ ಪಡೆದಿದ್ದ ಧನುಶ್, ಕಳ್ಳತನ ಮಾಡಿದ ವಸ್ತುಗಳನ್ನು ಮಾರಲು ಯೋಜನೆ ಹಾಕಿದ್ದ ಎನ್ನಲಾಗಿದೆ.
ಜನವರಿ 11 ರಂದು ಚೆನ್ನೈನ ಅನ್ನಾಸಲೈ ಪೊಲೀಸರಿಗೆ ದೂರು ನೀಡಿದ್ದ ನಿಕ್ಕಿ ಗಲ್ರಾನಿ, ನನ್ನ ದುಬಾರಿ ಕ್ಯಾಮೆರಾ ಮತ್ತು ಉಡುಪುಗಳು ಕಾಣೆಯಾಗಿವೆ. ಅವನ್ನು ಕೆಲಸದವನು ಕದ್ದಿರುವ ಶಂಕೆಯಿದೆ. ಕ್ಯಾಮೆರಾ ಕಾಣೆಯಾದ ದಿನದಿಂದ ಆತ ಕೆಲಸಕ್ಕೆ ಬಂದಿಲ್ಲ ಎಂದು ದೂರು ನೀಡಿದ್ದರು. ದೂರಿಗೆ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದರು.
ನಿಕ್ಕಿ ಗಲ್ರಾನಿ, ನಟಿ ಸಂಜನಾ ಗಲ್ರಾನಿಯ ಸಹೋದರಿಯಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ಅಜಿತ್', 'ಜಂಬೂ ಸವಾರಿ', 'ಸಿದ್ಧಾರ್ಥ', 'ಓ ಪ್ರೇಮವೇ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮಲಯಾಳಂನ 'ವಿರುನ್ನು' ಹಾಗೂ ತಮಿಳಿನ 'ಇಡಿಯಟ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











