ನೀವು ಮಾಡಿದ್ದು ಸರಿಯಲ್ಲ ; ವಿಜಯ್ -ತ್ರಿಶಾ ವಿಡಿಯೋ ವೈರಲ್ - ದಳಪತಿ ವಿರುದ್ದ ತಿರುಗಿ ಬಿದ್ದ ನಟಿ
ತಮಿಳುನಾಡಿನ ದಳಪತಿ ವಿಜಯ್ ಈಗ ಚಿತ್ರರಂಗದ ನಾಯಕ ಅಲ್ಲ. ಬದಲಿಗೆ ಪೂರ್ಣ ಪ್ರಮಾಣದ ರಾಜಕೀಯ ನಾಯಕ. ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ ಎಂದು ಹೇಳುತ್ತಲೇ ಜನ ಸೇವೆ ಮಾಡಲು ವಿಜಯ್ ಮುಂದಾಗಿದ್ದಾರೆ. ಆದರೆ, ದುರಾದೃಷ್ಟ ಇದೇ ಸಮಯದಲ್ಲಿ ವಿಜಯ್ ಅವರ ವೈಯಕ್ತಿಕ ಬದುಕು ಹಳ್ಳ ಹಿಡಿದಿದೆ. ಫ್ಯಾಮಿಲಿ ಇಮೇಜ್ ಡ್ಯಾಮೇಜ್ ಆಗಿದೆ.
ಈ ಹಿನ್ನೆಲೆ ಚುನಾವಣೆಯಲ್ಲಿ ವಿಜಯ್ ಗೆದ್ದು ಬೀಗುವುದು ಸುಲಭ ಅಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.ಇನ್ನೂ ತಮಿಳುನಾಡಿನ ರಾಜಕಾರಣವೂ ನಾವು-ನೀವು ಅಂದುಕೊಂಡತೆ ಅಲ್ಲ. ಅದಕ್ಕೆ ಅದ್ರದ್ದೇ ಆದ ಇತಿಹಾಸ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸದ್ಯ ವಿಜಯ್ ಸುತ್ತ ವಿಚ್ಚೇದನದ ವಿವಾದದ ಹುತ್ತ ಬೆಳೆದಿದೆ. ಸಂಗೀತಾ ಉದುರಿಸಿದ ಈ ಡಿವೋರ್ಸ್ ದಾಳದಿಂದ ವಿರೋಧ ಪಕ್ಷದವರ ಕೈಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ.

ಆದರೂ ಕೂಡ ವಿಜಯ್‌ಗೆ ಇನ್ನೂ ಅದ್ಯಾಕೋ ಜ್ಞಾನೋದಯವಾದಂತೆ ಆಗಿಲ್ಲ. ಬದಲಿಗೆ ತಮ್ಮ 'ಕಾಲ' ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ವಿಚ್ಛೇದನದ ವಿವಾದ ಬಗೆಹರಿಸಿಕೊಳ್ಳುವ ಬದಲು ತ್ರಿಶಾ ಜೊತೆ ಈಗ ಖುಲ್ಲಂ ಖುಲ್ಲಾ ಓಡಾಡಲು ಶುರು ಮಾಡಿದ್ದಾರೆ. ಮೊನ್ನೆ ಮೊನ್ನೆ ಮ್ಯಾಚಿಂಗ್ ಡ್ರೇಸ್ ಹಾಕಿಕೊಂಡು ಇಬ್ಬರು ಮದುವೆ ಸಮಾರಂಭದಲ್ಲಿ ಭಾಗಿಯೂ ಆಗಿದ್ದಾರೆ.
ವಿಜಯ್ ಅವರ ಈ ನಡೆಯಿಂದ ಅವರ ಅಭಿಮಾನಿ ಬಳಗವೇ ಕೆರಳಿದೆ. ಹಲವರು ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗದಲ್ಲಿಯೂ ಕೂಡ ವಿಜಯ್ ಅವರ ಈ ನಡೆಯಿಂದ ಹಲವರು ಅಸಮಾಧಾನಗೊಂಡಿದ್ದಾರೆ. ಆ ಪೈಕಿ ಸನಮ್ ಶೆಟ್ಟಿ ಕೂಡ ಒಬ್ಬರು.
ಹೌದು, ಸನಮ್ ಶೆಟ್ಟಿ.. ಬೆಸಿಕಲಿ ಬೆಂಗಳೂರಿನ ಚೆಲುವೆ. ಚಿತ್ರರಂಗಕ್ಕೆ ಬರುವ ಮುನ್ನ ಯುಕೆ ಮೂಲದ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸನಮ್, ಮಾಡೆಲಿಂಗ್ ಮೇಲಿನ ಆಸಕ್ತಿಯಿಂದಾಗಿ ಕೆಲಸಕ್ಕೆ ಗುಡ್ ಬೈ ಹೇಳಿದರು.
2012ರಲ್ಲಿ ''ಅಂಬುಲಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸನಮ್, ಆ ನಂತರ ''ಕಥಮ್ ಕಥಮ್''. ''ಪ್ರೇಮಿಕುಡು''.. ''ಸಿಂಗಂ 123''.. ''ವೆಲ್ಲೈಯಿರುಕ್ಕು ಪೊಯಿ ಸೊಲ್ಲಾದು''.. ''ವಾಲ್ಟರ್'' ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದರು. 2016ರಲ್ಲಿ ಮಿಸ್ ಸೌತ್ ಇಂಡಿಯಾ ಸ್ಫರ್ಧೆಯಲ್ಲಿ ವಿಜೇತರಾಗಿ ಹೊರ ಹೊಮ್ಮಿದರು.

ಇನ್ನು, 2020ರಲ್ಲಿ ತಮಿಳಿನಲ್ಲಿ ಪ್ರಸಾರವಾದ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಕೂಡ ಸನಮ್ ಭಾಗಿಯಾಗಿದ್ದರು. ಮಹೇಶ್ ಬಾಬು ಅಭಿನಯದ ''ಶ್ರೀಮಂತುಡು'' ಚಿತ್ರದಲ್ಲಿ ಕೂಡ ಚಿಕ್ಕ ಪಾತ್ರವನ್ನು ನಿರ್ವಹಿಸಿದ್ದರು.
ಇಂಥಾ ಸನಮ್ ಶೆಟ್ಟಿ ಸದ್ಯ ವಿಜಯ್ ಅವರ ನಡೆಯನ್ನು ಖಂಡಿಸಿದ್ದಾರೆ. ಅಭಿಮಾನಿಯಾಗಿ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ''ಎಕ್ಸ್'' (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಸನಮ್ ಶೆಟ್ಟಿ "ಇದು ಸರಿಯಲ್ಲ. ಪತ್ನಿಯ ದುಃಖವನ್ನು ಹೀಗೆ ಕಡೆಗಣಿಸಲು ಸಾಧ್ಯವಿಲ್ಲ! ದೀರ್ಘಕಾಲದ ಅಭಿಮಾನಿಯಾಗಿ, ಈ ಸಮಯದಲ್ಲಿ ಇದನ್ನು ನೋಡುವುದು ಅತೀವ ನಿರಾಶೆ ಮೂಡಿಸಿದೆ! ಕೆಲವು ಸನ್ನಿವೇಶಗಳು ಸೂಕ್ಷ್ಮತೆ ಬಯಸುತ್ತವೆ ಮತ್ತು ಭಾವನಾತ್ಮಕ ನೋವನ್ನು ನಿರ್ಲಕ್ಷಿಸುವುದು ಸರಿಯಲ್ಲ'' ಎಂದು ಹೇಳಿದ್ದಾರೆ. ವಿಜಯ್ ಅವರ ದೀರ್ಘಕಾಲದ ಅಭಿಮಾನಿಯಾಗಿ, ವೈಯಕ್ತಿಕ ನಿರಾಶೆಯಿಂದ ಈ ಹೇಳಿಕೆ ನೀಡಿದ್ದೇನೆ ಹೊರತು, ಇದರ ಹಿಂದೆ ಬೇರೆ ಯಾವ ಉದ್ದೇಶ ಇಲ್ಲ ಎಂದು ಕೂಡ ಸನಮ್ ಸ್ಪಷ್ಟ ಪಡಿಸಿದ್ದಾರೆ.
ಸದ್ಯ ಸನಮ್ ಶೆಟ್ಟಿ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕೆಲವರು ಸನಮ್ ಅವರ ಮಾತನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಕಿಡಿ ಕಾರುತ್ತಿದ್ದಾರೆ. ವೈರಲ್ ವಿಡಿಯೋ ಆಧಾರದ ಮೇಲೆ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂಬ ವಾದವನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಈ ಹಿಂದೆ ವಿಜಯ್ ವಿರುದ್ಧ ಆನ್‌ಲೈನ್‌ನಲ್ಲಿ ಟೀಕೆಗಳು ಕೇಳಿ ಬಂದಾಗ ವಿಜಯ್ ಪರ ಇದೇ ಸನಮ್ ಶೆಟ್ಟಿ ಬೆಂಬಲದ ಧ್ವಜ ಹಾರಿಸುತ್ತಿದ್ದರು. ಆದರೆ ಈಗ ಸನಮ್ ಶೆಟ್ಟಿ ಅವರೇ ವಿಜಯ್ ನಡೆಯನ್ನು ವಿರೋಧಿಸಿದ್ದಾರೆ. ಇದರಿಂದ ಹಲವರು ಅಚ್ಚರಿಗೊಂಡಿದ್ದಾರೆ.


Click it and Unblock the Notifications











