ರಶ್ಮಿಕಾ ಮಂದಣ್ಣ ಮುಂದೆ ನಾವೆಲ್ಲ ಬಚ್ಚಾಗಳು- ನಾಗಾರ್ಜುನ..!
09 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಆ ನಂತರ ಹೇಗೆಲ್ಲ ಬೆಳೆದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಇವತ್ತು ರಶ್ಮಿಕಾ ಮಂದಣ್ಣ ಕೇವಲ..
ಕನ್ನಡದ ನಾಯಕಿ ಅಲ್ಲ. ತೆಲುಗು ಚೆಲುವೆ ಅಲ್ಲ. ಬದಲಿಗೆ ರಶ್ಮಿಕಾ ಮಂದಣ್ಣ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡದಿಂದ ತೆಲುಗುಗೆ ವಲಸೆ ಹೋಗಿ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಹೋದ ರಶ್ಮಿಕಾ ಈಗ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಅನಿಮಲ್, ಛಾವಾ, ಸಿಕಂದರ್, ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಬ್ಲಾಕ್ ಬಸ್ಟರ್ ಮಹಾರಾಣಿ ಎಂದು ಕರೆಯಲ್ಪಡುತ್ತಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ತಮಿಳು ಪ್ರೇಕ್ಷಕರಿಗೆ ಹೊಸಬರನೇಲ್ಲ. ಸುಲ್ತಾನ್, ವಾರಿಸು ಚಿತ್ರಗಳ ಮೂಲಕ ಅಲ್ಲಿಯ ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದವರು ರಶ್ಮಿಕಾ ಮಂದಣ್ಣ.
ಇಂಥಾ ರಶ್ಮಿಕಾ ಸದ್ಯ ಧನುಷ್ ಅಭಿನಯದ ಕುಬೇರ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನೇನು ಈ ಜೂನ್ 20ರಂದು ಈ ಚಿತ್ರ ತೆರೆಗೆ ಬರಲಿದೆ. ಇನ್ನು ಈ ಚಿತ್ರದಲ್ಲಿ ಕೇವಲ ಧನುಷ್ ಮತ್ತು ರಶ್ಮಿಕಾ ಮಾತ್ರವಲ್ಲ ಟಾಲಿವುಡ್‌ನ ಕಿಂಗ್ ನಾಗಾರ್ಜುನ ಕೂಡ ಇದ್ದಾರೆ.
ಇನ್ನು ಕುಬೇರ ಕೇವಲ ತಮಿಳು ಚಿತ್ರವಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಚಿತ್ರದ ಪ್ರಚಾರವನ್ನು ಚಿತ್ರತಂಡ ಅದ್ದೂರಿಯಾಗಿ ಮಾಡುತ್ತಿದೆ. ದೇಶದ ನಾನಾ ಭಾಗಕ್ಕೆ ತೆರಳಿ ತಮ್ಮ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ನಾಗಾರ್ಜುನ ತುಂಬಾ ಹೆಮ್ಮೆಯಿಂದ ಮಾತನಾಡಿದ್ದಾರೆ.
ಮುಂಬೈನಲ್ಲಿ ರಶ್ಮಿಕಾ ಕುರಿತು ಮಾತನಾಡಿರುವ ನಾಗಾರ್ಜುನ ಈ ಹುಡುಗಿ ತುಂಬಾನೇ ಪ್ರತಿಭಾವಂತೆ. ಕಳೆದ ಮೂರು ವರ್ಷಗಳಿಂದ ಈಕೆ ಅಭಿನಯಿಸಿರುವ ಚಿತ್ರಗಳನ್ನು ಒಮ್ಮೆ ನೋಡಿ. ವ್ಹಾ, ಅದ್ಭುತ. ನಾವು ಯಾರೂ ಕೂಡ ಈಕೆಯಂತೆ ಎರಡು ಸಾವಿರ ಮೂರು ಸಾವಿರ ಕೋಟಿಯ ಕಲಾವಿದರಲ್ಲ ಆದರೆ ಈಕೆ ಮಾತ್ರ ನಮ್ಮೆಲ್ಲರನ್ನು ಮೀರಿಸಿದ್ದಾಳೆ ಎಂದು ಹೇಳಿದ್ದಾರೆ. ನಾವು ಯಾರು ಮಾಡಿರದ ಸಾಧನೆಯನ್ನು ರಶ್ಮಿಕಾ ಮಾಡಿದ್ದಾರೆ ಎಂದು ರಶ್ಮಿಕಾ ಅವರನ್ನು ವೇದಿಕೆಯ ಮೇಲೆ ಬಾಯ್ತುಂಬ ಹೊಗಳಿದ್ದಾರೆ.
ನಾಗಾರ್ಜುನ ಅವರ ಈ ಹೊಗಳಿಕೆಯಿಂದ ನಾಚಿ ನೀರಾದ ರಶ್ಮಿಕಾ ತಮ್ಮ ಮುಖವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮುಂದುವರೆದು ಮಾತನಾಡಿರುವ ನಾಗಾರ್ಜುನ ನಾನು ಇದಕ್ಕೂ ಮೊದಲು ರಶ್ಮಿಕಾ ಜೊತೆ ಕೆಲಸ ಮಾಡಿದ್ದೆ, ಆದರೆ ಈ ಬಾರಿ ಡಬ್ಬಿಂಗ್ ಮಾಡುವಾಗ, ನಾನು ಡಬ್ಬಿಂಗ್ ಥಿಯೇಟರ್‌ನಿಂದ ನೇರವಾಗಿ ರಶ್ಮಿಕಾಗೆ ಕರೆ ಮಾಡಿದೆ. ಅವರು ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ, ಇಷ್ಟೇ ಅಲ್ಲ
ನಿಮ್ಮೆಲ್ಲರನ್ನೂ ತುಂಬಾ ನಗಿಸುತ್ತಾರೆ ಎಂದು ಕೂಡ ನಾಗಾರ್ಜುನ ಹೇಳಿದ್ದಾರೆ.
ಸದ್ಯ ನಾಗಾರ್ಜುನ ಅವರ ಈ ಹೇಳಿಕೆಯಿಂದ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಸಹಜವಾಗಿ ಖುಷಿಯಾಗಿದ್ದಾರೆ. ಚಿತ್ರ ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ. ಈ ಚಿತ್ರ ಹೊರತು ಪಡಿಸಿದರೆ ರಶ್ಮಿಕಾ ಕೈಯಲ್ಲಿ ಇನ್ನು ಹಲವು ಸಿನಿಮಾಗಳಿವೆ. ಆ ಪೈಕಿ ಬಹುತೇಕ ಹಿಂದಿ ಸಿನಿಮಾಗಳೇ ಇರುವುದು ವಿಶೇಷ.
ಅಂದ್ಹಾಗೇ ಕುಬೇರ ಚಿತ್ರಕ್ಕೆ ಶೇಖರ್ ಕಮ್ಮುಲಾ ನಿರ್ದೇಶನ ಇದೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು ಮುಂಬೈನಲ್ಲಿ ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸುನಿಲ್ ನಾರಂಗ್, ಪುಷ್ಕರ್ ರಾಮ್ ಮೋಹನ್ ರಾವ್ ಜೊತೆ ಸೇರಿ ಖುದ್ದು ನಿರ್ದೇಶಕ ಶೇಖರ್ ಕಮ್ಮುಲಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











