ಪ್ರಭಾಸ್, ರಜನಿಕಾಂತ್, ಸಲ್ಮಾನ್, ಶಾರುಖ್ ಅಲ್ಲ, ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಇವರು !
ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ. ಆದರೆ ಕೆಲವರು ತಮ್ಮ ಸಂಭಾವನೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಅಷ್ಟೆಲ್ಲ ಇಲ್ಲ ಸಿಗಬೇಕಾದ ಸಂಭಾವನೆ ಸಿಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ.
ಹೀಗಾಗಿಯೇ ಸಂಭಾವನೆ ವಿಚಾರದಲ್ಲಿ ಕೆಲ ನಟ ಮತ್ತು ನಟಿಯರ ಸುತ್ತ ಕುತೂಹಲ ಇರುತ್ತೆ. ಸಂಭಾವನೆ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಜಿಜ್ಞಾಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾನೇ ಹೋಗುತ್ತೆ. ಉದಾಹರಣೆಗೆ ವಿಜಯ್. ಹೌದು, ಇಳಯ ದಳಪತಿ ಎಂದೇ ಪ್ರೀತಿಯಿಂದ ಕರೆಯಲ್ಪಡುವ ವಿಜಯ್ ಸದ್ಯಕ್ಕೆ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಆಲೋಚನೆಯಲ್ಲಿದ್ದಾರೆ. ಅದಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಇಂಥಾ ವಿಜಯ್ ಒಂದು ಚಿತ್ರಕ್ಕೆ ಕಡಿಮೆ ಅಂದರೂ 200 ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನುವ ಮಾತು ತುಂಬಾ ಹಿಂದೆಯಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಜನಪ್ರಿಯತೆಯಲ್ಲಿ ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್, ಶಾರುಖ್ ಖಾನ್, ಎಲ್ಲರನ್ನೂ ಹಿಂದಿಕ್ಕಿರುವ ವಿಜಯ್ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ತಮ್ಮ GOAT ಚಿತ್ರಕ್ಕೆ 200 ಕೋಟಿಯನ್ನೂ ಪಡೆದಿದ್ದಾರೆ ಎಂದು ಖುದ್ದು ಆ ಚಿತ್ರದ ನಿರ್ಮಾಪಕಿಯೇ ಬಹಿರಂಗವಾಗಿಯೇ ಈ ಹಿಂದೆ ಹೇಳಿದ್ದು ಇದೆ. ಅವರಿಗೆ ಇನ್ನೂರು ಕೋಟಿ ಸಂಭಾವನೆಯನ್ನೂ ನೀಡಿ, ಆ ನಂತರ ಚಿತ್ರಕ್ಕೆ ಇನ್ನೂರು ಕೋಟಿ ಹಾಕಿದ್ದೇವೆ, ಆದರೆ ನಾನು ಬಿಡುಗಡೆಗೆ ಮುನ್ನವೇ ಲಾಭದಲ್ಲಿ ಇದ್ದೀವಿ. ನಿರೀಕ್ಷೆಗೆ ತಕ್ಕಂತೆ ಎಲ್ಲರೂ ಕೆಲಸ ಮಾಡಿದ್ದಾರೆ. ಹಾಗಾಗಿ ಒಳ್ಳೆ ಔಟ್‌ಫುಟ್ ಬರುತ್ತದೆ. ವಿಜಯ್ ರೀತಿಯ ಪರಿಶ್ರಮ ಪಡುವವರು ಇದ್ದರೆ ಧೈರ್ಯವಾಗಿ ಸಿನಿಮಾ ಮಾಡಬಹುದು ಎಂದು ಅರ್ಚನಾ ಈ ಹಿಂದೆ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದು ಇದೆ.
ಹೀಗೆ ಚಿತ್ರವೊಂದಕ್ಕೆ 200 ಕೋಟಿ ಪಡೆಯುವ ವಿಜಯ್ ಈಗ ತಮ್ಮ ಕೊನೆಯ ಚಿತ್ರವನ್ನು ಶುರು ಮಾಡಿದ್ದಾರೆ. ವಿಶೇಷ ಅಂದರೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಂಸ್ಥೆ ಈ ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ. 500 ಕೋಟಿಗೂ ಅಧಿಕ ಹಣವನ್ನು ವಿಜಯ್ ಮೇಲೆ ಸುರಿಯಲು ಮುಂದಾಗಿದೆ. ಹೀಗಾಗಿ ಚಿತ್ರವೊಂದಕ್ಕೆ 200 ಕೋಟಿ ಪಡೆಯುವ ವಿಜಯ್ ಈ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ.
ಇದಕ್ಕೆ ಉತ್ತರವೆಂಬಂತೆ ವಿಜಯ್ ಈ ಚಿತ್ರಕ್ಕೆ 250 ಕೋಟಿಯಿಂದ 275 ಕೋಟಿಯನ್ನು ಸಂಭಾವನೆಯನ್ನಾಗಿ ಪಡೆದಿದ್ದಾರೆ ಅನ್ನುವ ಮಾತು ಚೆನೈನಿಂದ ಬೆಂಗಳೂರಿನವರೆಗೆ ಸದ್ಯಕ್ಕೆ ಕೇಳಿ ಬರುತ್ತಿದೆ. ನಿಜಾ, ಖುದ್ದು ವಿಜಯ್ ಮತ್ತು ಕೆವಿಎನ್ ಸಂಸ್ಥೆಗೆ ಗೊತ್ತಾದರೂ ಈ ಸುದ್ದಿ ಕೇಳಿ ಸದ್ಯಕ್ಕೆ ವಿಜಯ್ ಅವರ ಸಮಸ್ತ ಅಭಿಮಾನಿ ಬಳಗ ಹುಚ್ಚೆದ್ದು ಕುಣಿಯುತ್ತಿದೆ. ಯಾಕೆಂದರೆ ಹಿಂದೆ ಪ್ರಭಾಸ್, ಶಾರುಖ್ ಖಾನ್, ಸಲ್ಮಾನ್ ಖಾನ್, ಇಷ್ಟೇ ಯಾಕೆ ರಜಿನಿಕಾಂತ್ ಕೂಡ ಇಷ್ಟೊಂದು ದುಬಾರಿ ಸಂಭಾವನೆ ಪಡೆದಿದ್ದು ಇಲ್ಲ. ಹೀಗಾಗಿಯೇ ಚಿತ್ರರಂಗದಲ್ಲಿಯೂ ನಮ್ಮ ಹೀರೋ ನಂಬರ್ 1, ಸಂಭಾವನೆ ವಿಚಾರದಲ್ಲಿ ಕೂಡ ನಂಬರ್ 1 ಎಂದು ತಮ್ಮ ಖುಷಿಯನ್ನೂ ವ್ಯಕ್ತಪಡಿಸುತ್ತಿದೆ ವಿಜಯ್ ಅಭಿಮಾನಿ ಬಳಗ.
ಉಳಿದಂತೆ ಇನ್ನೂ ಹೆಸರಿಡದ ವಿಜಯ್ ಅಭಿನಯದ ಈ 69ನೇ ಚಿತ್ರದಲ್ಲಿ ಬಾಬಿ ಡಿಯೋಲ್ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಪೂಜಾ ಹೆಗ್ಡೆ ಈ ಚಿತ್ರದ ನಾಯಕಿ ಎಂದು ಗುಲ್ಲಾಗಿದೆ. ಅನುಪಮ್ ಖೇರ್ ಹೆಸರು ಕೂಡ ಅಂತೆ ಕಂತೆಯ ಸಂತೆಯಲ್ಲಿ ಓಡಾಡುತ್ತಿದೆ.


Click it and Unblock the Notifications











