ಸ್ಟಾರ್ ನಿರ್ದೇಶಕರು ಎಡವುತ್ತಿರುವುದು ಎಲ್ಲಿ? ಸಿನಿಮಾ ಮಾಡದೇ ಇರೋದೆ ಒಳ್ಳೆದಾ?

ಒಂದು ಚಿತ್ರದ ನಿಜವಾದ ಹೀರೊ, ಮೊದಲ ಪ್ರೇಕ್ಷಕ ಅಂದ್ರೆ ಅದು ನಿರ್ದೇಶಕ. ಸ್ಟಾರ್ ನಟರು ತೆರೆಮೇಲೆ ಅಬ್ಬರಿಸಿಬಹುದು. ಅವರೇ ಸಿನಿಮಾ ಫೇಸ್ ಆಗಿರಬಹುದು. ಆದರೆ ನಿರ್ದೇಶಕನಿಲ್ಲದೇ ಯಾವುದೇ ಕಥೆ ದೃಶ್ಯರೂಪ ಪಡೆಯುವುದಿಲ್ಲ.

'45' ಸಿನಿಮಾ ಟೀಸರ್ ಲಾಂಚ್ ವೇಳೆ ಸಿನಿಮಾ ನಿರ್ದೇಶಕರ ಬಗ್ಗೆ ನಟ ಶಿವರಾಜ್‌ಕುಮಾರ್ ಒಂದೊಳ್ಳೆ ಮಾತು ಹೇಳಿದ್ದರು. "ನಿರ್ದೇಶಕರು ಹೇಳಿದಂತೆ ನಾವು ನಟಿಸುತ್ತೇವೆ. ಅವರು ಕ್ರಿಯೇಟ್ ಮಾಡುವವರು. ಅವರು ಇಲ್ಲದೇ ನಮ್ಮಷ್ಟಕ್ಕೆ ನಾವು ಏನು ಮಾಡೋಕೆ ಸಾಧ್ಯವಿಲ್ಲ. ಅವರು ಸೃಷ್ಟಿಸಿದೇ ನಾನು ಒಂದು ಪಾತ್ರವಾಗಲು ಆಗಲ್ಲ, ನಾನು ಶಿವಣ್ಣ ಆಗಿ ಮಾತ್ರ ಇರ್ತೀನಿ. ನನ್ನನ್ನು ಒಂದು ಪಾತ್ರವಾಗಿ ಮಾಡೋದು ನಿರ್ದೇಶಕ. ಅದಕ್ಕೆ ಒಂದು ರೂಪ, ಲುಕ್, ಮೇಕಪ್ ಎಲ್ಲಾ ಕೊಡಿವುದು" ನಿರ್ದೇಶಕ ಎಂದಿದ್ದರು.

Once Star Directors Now Struggling The Decline of South Indian Filmmakers

ಸಿನಿಮಾ ಅಂದ್ರೆ ತೆರೆಮೇಲೆ ಕಾಣುವ ಹೀರೊ ಎಲ್ಲರಿಗೂ ಗೊತ್ತು. ಆದರೆ ತೆರೆಹಿಂದೆ ಸಾಕಷ್ಟು ಜನ ಅದಕ್ಕಾಗಿ ಕೆಲಸ ಮಾಡಿರುತ್ತಾರೆ. ಬಹುತೇಕ ಸಮಯದಲ್ಲಿ ಒಂದು ಸಿನಿಮಾ ಸೋಲು ಗೆಲುವು ನಿರ್ದೇಶಕನಿಂದಲೇ ನಿರ್ಧಾರವಾಗುತ್ತದೆ. ಒಂದೊಳ್ಳೆ ಕಥೆ ಮಾಡಿ, ನಿರ್ಮಾಪಕರನ್ನು ಹುಡಕಿ, ಕಥೆಗೆ ತಕ್ಕ ಕಲಾವಿದರು ಆಯ್ಕೆ ಮಾಡಿ, ತಂತ್ರಜ್ಞರನ್ನು ಒಟ್ಟುಗೂಡಿಸಿ, ತನ್ನ ಕಲ್ಪನೆಯನ್ನು ನಿರ್ದೇಶಕ ತೆರೆಮೇಲೆ ತರುತ್ತಾನೆ. ಅದೇ ಕಾರಣಕ್ಕೆ ಸಾಕಷ್ಟು ಜನ ಸಿನಿಮಾ ನಿರ್ದೇಶಕರಾಗುವ ಕನಸು ಕಾಣುತ್ತಾರೆ.

ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟ ದಕ್ಷಿಣದ ನಿರ್ದೇಶಕರು ಈಗ ಡಲ್ಲಾಗಿ ಬಿಟ್ಟಿದ್ದಾರೆ. ಹಿಟ್ ಕೊಡುವುದು ಇರಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವಂತಾಗಿದೆ. ಅವರ ಇತ್ತೀಚಿನ ಸಿನಿಮಾಗಳನ್ನು ನೋಡಿದರೆ ಒಂದ್ಕಾಲದಲ್ಲಿ ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ಕೊಟ್ಟವರು ಇವರೇನಾ? ಎನ್ನುವ ಅನುಮಾನ ಕಾಡುತ್ತದೆ. ಅಪ್‌ಡೇಟ್ ಆಗುತ್ತಿಲ್ಲವೋ ತಲೆ ಖಾಲಿ ಆಗಿದೆಯೋ ಗೊತ್ತಿಲ್ಲ. ತೆರೆಮೇಲೆ ಅವರ ಮ್ಯಾಜಿಕ್ ಕ್ರಿಯೇಟ್ ಆಗ್ತಿಲ್ಲ.

Once Star Directors Now Struggling The Decline of South Indian Filmmakers

ತಮಿಳು ನಿರ್ದೇಶಕರಾದ ಶಂಕರ್, ಎ. ಆರ್‌ ಮುರುಗದಾಸ್, ತೆಲುಗಿನ ಪೂರಿ ಜಗನ್ನಾಥ್ ಸದ್ಯ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ಹೊಸ ಸಿನಿಮಾಗಳು ಮೊದಲಿನ ರೀತಿ ನಿರೀಕ್ಷೆ ಹುಟ್ಟುಹಾಕುತ್ತಿಲ್ಲ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. ವಿತರಕರು, ಓಟಿಟಿ ಸಂಸ್ಥೆಗಳು ಸಿನಿಮಾ ರೈಟ್ಸ್ ಕೊಂಡುಕೊಳ್ಳಲು ಮುಂದೆ ಬರ್ತಿಲ್ಲ. ತಮಾಷೆ ಅಂದರೆ ಅವರ ಗರಡಿಯಲ್ಲಿ ಬೆಳೆದ ನಿರ್ದೇಶಕರು ಈಗ ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದಾರೆ.

ಶಂಕರ್ ಷಣ್ಮುಗಂ

ತಮಿಳು ನಿರ್ದೇಶಕ ಶಂಕರ್ ಷಣ್ಮುಗಂ ಪ್ರತಿಭೆ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. 90ರ ದಶಕದಲ್ಲೇ 'ಜಂಟಲ್‌ಮನ್', 'ಇಂಡಿಯನ್', 'ಮುದಲ್ವನ್' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟವರು. ಶಂಕರ್ ನಿರ್ದೇಶನ ನೋಡಿ ಬಾಲಿವುಡ್ ಮಂದಿ ಕೂಡ ಶಾಕ್ ಆಗಿದ್ದರು. 'ಮುದಲ್ವನ್' ಚಿತ್ರವನ್ನು ಹಿಂದಿಯಲ್ಲಿ ರೀಮೆಕ್ ಮಾಡುವಂತೆ ಬುಲಾವ್ ಬಂದಿತ್ತು.

'ಬಾಯ್ಸ್', 'ಅನ್ನಿಯನ್', 'ಶಿವಾಜಿ', 'ಎಂದಿರನ್' ರೀತಿಯ ಸೂಪರ್ ಹಿಟ್ ಸಿನಿಮಾಗಳು ಶಂಕರ್ ಲಿಸ್ಟ್‌ನಲ್ಲಿದೆ. ಹೊಸ ಹೊಸ ವಿಚಾರಗಳನ್ನು ತೆರೆಗೆ ತಂದವರು ಶಂಕರ್. ಸಿನಿಮಾ ಅಂದರೆ ಬರೀ ಮನರಂಜನೆ ಮಾತ್ರವಲ್ಲ, ಆ ಮೂಲಕ ಸಮಾಜಕ್ಕೆ ಗಟ್ಟಿ ಸಂದೇಶ ಕೊಡಬೇಕು ಎಂದು ಬಯಸಿದವರು. ಅದ್ಯಾಕೋ 'ಎಂದಿರನ್' ಬಳಿಕ ನಿಧಾನವಾಗಿ ಶಂಕರ್ ಸೋಲು ಆರಂಭವಾಯಿತು. ನಿರ್ದೇಶನದ ಸಿನಿಮಾಗಳು ಕೈ ಹಿಡಿಯಲಿಲ್ಲ.

ಕಳೆದ ವರ್ಷ ಬಂದಿದ್ದ 'ಇಂಡಿಯನ್'-2 ಹಾಗೂ ಇತ್ತೀಚೆಗೆ ಬಂದ 'ಗೇಮ್ ಚೇಂಜರ್' ಸಿನಿಮಾಗಳಿಂದ ಶಂಕರ್ ಬಹಳ ಟೀಕೆಗೆ ಗುರಿಯಾದರು. ಎರಡೂ ಸಿನಿಮಾಗಳು ಭಾರೀ ನಷ್ಟ ತಂದೊಡ್ಡಿದ್ದವು. ಶಂಕರ್ ನಿರ್ದೇಶನದ 'ಇಂಡಿಯನ್- 3' ಚಿತ್ರವನ್ನು ಕೊಂಡುಕೊಳ್ಳಲು ವಿತರಕರು ಮುಂದೆ ಬರ್ತಿಲ್ಲ. ಅಷ್ಟರಮಟ್ಟಿಗೆ ಅವರ ಸಿನಿಮಾಗಳು ನಂಬಿಕೆ ಕಳೆದುಕೊಂಡಿವೆ. ಗೆದ್ದು ಬರಬೇಕು ಎಂದು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ.

ತಮಿಳಿನ ಖ್ಯಾತ ಬರಹಗಾರ ಸುಜಾತ ಎಂಬುವವರು ಶಂಕರ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಕಥೆ, ಚಿತ್ರಕಥೆ ಸಂಭಾಷಣೆಗೆ ಜೊತೆಯಾಗಿ ನಿಲ್ಲುತ್ತಿದ್ದರು. ಆದರೆ 'ಎಂದಿರನ್' ಬಳಿಕ ಅವರು ಶಂಕರ್ ತಂಡದಲ್ಲಿ ಗುರ್ತಿಸಿಕೊಳ್ಳಲಿಲ್ಲ. 2008ರಲ್ಲಿ ಅವರು ನಿಧನರಾಗಿದ್ದರು. ಸುಜಾತ ದೂರಾದ ಬಳಿಕ ಶಂಕರ್ ಸಿನಿಮಾಗಳು ಸೋಲಲು ಆಂಭವಾಯಿತು ಎನ್ನುವ ವಾದವೂ ಇದೆ. ಆದರೆ ಶಂಕರ್ ಅಪ್‌ಡೇಟ್ ಆಗುತ್ತಿಲ್ಲ, ಇನ್ನು ಹಳೇ ಕಮರ್ಷಿಯಲ್ ಅಂಶಗಳ ಸುತ್ತಾ ಸುತ್ತುತ್ತಿದ್ದಾರೆ ಎನ್ನುವ ಆರೋಪವೂ ಇದೆ.

ಎ. ಆರ್ ಮುರುಗದಾಸ್

ತಮಿಳು ಚಿತ್ರರಂಗದ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಎ. ಆರ್ ಮುರುಗದಾಸ್. ದಶಕಗಳ ಹಿಂದೆ 'ರಮಣ'(ಕನ್ನಡದಲ್ಲಿ ವಿಷ್ಣುಸೇನಾ), 'ಗಜಿನಿ', '7th ಸೆನ್ಸ್', 'ತುಫಾಕಿ', 'ಕತ್ತಿ', 'ಸರ್ಕಾರ್' ಹೀಗೆ ಸೆನ್ಸೇಷನಲ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು. 'ಗಜಿನಿ' ಹಾಗೂ 'ತುಫಾಕಿ' ಚಿತ್ರಗಳನ್ನು ಬಾಲಿವುಡ್‌ನಲ್ಲಿ ಕಟ್ಟಿಕೊಟ್ಟ ಗೆದ್ದಿದ್ದರು.

ಶಂಕರ್ ರೀತಿಯಲ್ಲೇ ಮುರುಗದಾಸ್ ತಮ್ಮ ಸಿನಿಮಾಗಳ ಮೂಲಕ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುತ್ತಾ ಬಂದಿದ್ದಾರೆ. ಆದರೆ 'ಸ್ಪೈಡರ್', 'ದರ್ಬಾರ್' ರೀತಿಯ ಸಿನಿಮಾಗಳು ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದ್ದವು. ಸದ್ಯ ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಚಿತ್ರ ತೆರೆಗೆ ಬಂದಿದೆ. ಈ ಚಿತ್ರಕ್ಕೂ ಮುರುಗದಾಸ್ ಆಕ್ಷನ್ ಕಟ್ ಹೇಳಿದ್ದಾರೆ.

'ಸಿಕಂದರ್' ಸಿನಿಮಾ ನಿರಾಸೆ ಮೂಡಿಸಿದೆ. ಬಾಕ್ಸಾಫೀಸ್‌ನಲ್ಲಿ ಕುಂಟುತ್ತಿದೆ. ಅರೇ ಒಂದ್ಕಾಲದಲ್ಲಿ ಅದ್ಭುತ ಸಿನಿಮಾಗಳನ್ನು ಕೊಟ್ಟ ನಿರ್ದೇಶಕರು ಈಗ ಯಾಕೆ ಹೀಗಾಗಿಬಿಟ್ಟರು. ಯಾವ ರೀತಿಯಲ್ಲಿ ಕೂಡ 'ಸಿಕಂದರ್' ಮುರುಗದಾಸ್ ಸಿನಿಮಾ ಎನಿಸುತ್ತಿಲ್ಲ. ಅವರ ಸಿನಿಮಾಗಳ ಖದರ್ ಕಮ್ಮಿ ಆಯ್ತಾ? ಸಲ್ಮಾನ್ ಖಾನ್ ರೀತಿಯ ನಟ ಇದ್ದು ಭಾರೀ ಬಂಡವಾಳ ಇದ್ದು ಒಂದೊಳ್ಳೆ ಸಿನಿಮಾ ಕಟ್ಟಿಕೊಡುವಲ್ಲಿ ಎಡವಿದ್ರಾ? ಎಂದು ಚರ್ಚೆ ಶುರುವಾಗಿದೆ.

ಕೆ. ಎಸ್ ರವಿಕುಮಾರ್

'ನಾಟ್ಟಾಮೈ'(ಕನ್ನಡದಲ್ಲಿ ಸಿಂಹಾದ್ರಿಯ ಸಿಂಹ) 'ಮುತ್ತು'(ಸಾಹುಕಾರ), 'ಪಡೆಯಪ್ಪ', 'ನಟ್ಪುಕ್ಕಾಗ'(ದಿಗ್ಗಜರು) ರೀತಿಯ ಹಿಟ್ ಸಿನಿಮಾಗಳನ್ನು ಕೆ. ಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ ಸುದೀಪ್ ನಟನೆಯ 'ಕೋಟಿಗೊಬ್ಬ-2' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿ ಗೆದ್ದಿದ್ದರು. ಆದರೆ ಇತ್ತೀಚೆಗೆ ರವಿಕುಮಾರ್ ಮ್ಯಾಜಿಕ್ ನಡೀತಿಲ್ಲ. ಸಿನಿಮಾಗಳು ಗೆಲ್ಲುತ್ತಿಲ್ಲ.

ಪೂರಿ ಜಗನ್ನಾಥ್

ಕನ್ನಡದಲ್ಲಿ 'ಯುವರಾಜ' ಹಾಗೂ 'ಅಪ್ಪು' ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದವರು ಪೂರಿ ಜಗನ್ನಾಥ್. ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಆಗಿ ಹೆಸರು ಮಾಡಿದವರು. 'ಪೋಕಿರಿ', 'ಬ್ಯುಸಿನೆಸ್‌ಮನ್' ರೀತಿ ಟಾಲಿವುಡ್ ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ತೆರೆಗೆ ತಂದಿದ್ದರು. ಆದರೆ ಇತ್ತೀಚೆಗೆ ಪೂರಿ ಆರ್ಭಟ ನಡೀತಿಲ್ಲ. 'ಲೈಗರ್' ಸಿನಿಮಾ ಸೋಲು ಈ ತೆಲುಗು ನಿರ್ದೇಶಕನಿಗೆ ಭಾರೀ ಪೆಟ್ಟು ಕೊಟ್ಟು ಬಿಡ್ತು.

ನಿರ್ದೇಶಕನಾಗಿ ಇರದೇ ನಿರ್ಮಾಪಕನು ಆಗಿ ಪೂರಿ ಜಗನ್ನಾಥ್ ಹಣ ಕಳೆದುಕೊಂಡರು. ಹೊಸ ಪ್ರತಿಭೆಗಳನ್ನು ಅದ್ಧೂರಿಯಾಗಿ ಚಿತ್ರರಂಗಕ್ಕೆ ಪರಿಚಯಿಸಿ, ಸ್ಟಾರ್ ನಟರಿಗೆ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಪೂರಿ ಈಗ ಒಂದೇ ಒಂದು ಹಿಟ್‌ ಕೊಡಲು ಪರದಾಡುತ್ತಿದ್ದಾರೆ. ಇತ್ತೀಚೆಗೆ ತಮಿಳು ನಟ ವಿಜಯ್ ಸೇತುಪತಿ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಸದ್ಯ ತಮಿಳಿನಲ್ಲಿ ಅಟ್ಲಿ, ಲೋಕೇಶ್ ಕನಕರಾಜ್, ನೆಲ್ಸನ್, ವಿನೋದ್ ರೀತಿಯ ಹೊಸ ನಿರ್ದೇಶಕರ ಕಾರುಬಾರು ಜೋರಾಗಿದೆ. ಅತ್ತ ತೆಲುಗಿನಲ್ಲಿ ರಾಜಮೌಳಿ ಹವಾ ಕಮ್ಮಿ ಆಗಿಲ್ಲ. ಪ್ರಶಾಂತ್ ನೀಲ್, ಸುಕುಮಾರ್, ಅನಿಲ್ ರಾವಿಪುಡಿ ರೀತಿಯ ನಿರ್ದೇಶಕರು ಮೆರೆಯುತ್ತಿದ್ದಾರೆ. ಹಾಗಾಗಿ ಸ್ಟಾರ್ ನಿರ್ದೇಶಕರೇ ಇಂದು ಒಂದೊಳ್ಳೆ ಸಿನಿಮಾ ಕೊಡಲು ಹೆಣಗಾಡುವಂತಾಗಿದೆ. ಒಂದ್ಕಾಲದಲ್ಲಿ ಬಾಲಿವುಡ್ ಮಂದಿ ಕೂಡ ದಕ್ಷಿಣದತ್ತ ತಿರುಗಿ ನೋಡುವಂತಹ ಸಿನಿಮಾಗಳನ್ನು ಮಾಡಿದವರು ಈಗ ಸೋಲುತ್ತಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಇನ್ನಾದರೂ ಸೋಲಿನಿಂದ ಪಾಠ ಕಲಿತು ಗೆದ್ದು ಬರ್ತಾರಾ? ಕೈಯಲ್ಲಿರುವ ಸಿನಿಮಾಗಳ ಮೂಲಕ ಗೆದ್ದು ತೋರಿಸ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Directors like Shankar, A. R. Murugadoss, Puri Jagannath are struggling to recreate their past magic. What went wrong?
Read more about: shankar puri jagannath
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X