'ಕಾಂತಾರ'-1 ರೀತಿಯ ಸಿನ್ಮಾ ನೋಡಿ ನಮ್ಮ ಮೂವರನ್ನು ಯಾಕೆ ಬೈತೀರಾ? 'ಕಬಾಲಿ' ನಿರ್ದೇಶಕ ಆಕ್ರೋಶ
ಕನ್ನಡದ 'ಕಾಂತಾರ- 1' ಚಿತ್ರಕ್ಕೆ ಹೊರ ರಾಜ್ಯಗಳಲ್ಲಿ ಕೂಡ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಪರಭಾಷಿಕರು ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಇದೀಗ ನಿರ್ದೇಶಕ ಪಾ. ರಂಜಿತ್ ಈ ಬಗ್ಗೆ ಮಾತನಾಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ನೋಡುಗರಿಗೆ ಮೋಡಿ ಮಾಡಿದೆ. ಅಬ್ಬಬ್ಬಾ ನಿಜಕ್ಕೂ ಅದ್ಭುತ ಸಿನಿಮಾ ಎಂದು ಕೆಲವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ಎರಡು ವಾರ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಬೇಡಿಕೆ ನೋಡಿ ಕೆಲವೆಡೆ ಬೆಳಗಿನ ಜಾವ 3 ಗಂಟೆಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈವರೆಗೆ ತಮಿಳಿನ ಯಾವುದೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿಲ್ಲ. 'ಕಾಂತಾರ- 1' ರೀತಿಯ ಸಿನಿಮಾಗಳನ್ನು ನೋಡಿ ನಮ್ಮ ಫಿಲ್ಮ್ ಮೇಕರ್ಸ್ ಕೂಡ ಇಂತಹ ಸಿನಿಮಾ ಮಾಡುವುದನ್ನು ಕಲಿಯಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

'ಕಬಾಲಿ', 'ಕಾಲಾ', 'ತಂಗಲಾನ್' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟವರು ಪಾ. ರಂಜಿತ್. ಇತ್ತೀಚೆಗೆ ಮಾರಿ ಸೆಲ್ವರಾಜ್ ನಿರ್ದೇಶನದ 'ಬಿಸಾನ್' ಚಿತ್ರದ ಸಕ್ಸಸ್‌ಮೀಟ್‌ನಲ್ಲಿ ಅವರು ಭಾಗವಹಿಸಿ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾಗಳ ಬಗೆಗಿನ ವಿಮರ್ಶೆ, ಫಿಲ್ಮ್ ಮೇಕರ್ಸ್ ಬಗ್ಗೆ ಪ್ರೇಕ್ಷಕರ ಅಸಮಾಧಾನದ ಬಗ್ಗೆ ರಂಜಿತ್ ಬೇಸರ ವ್ಯಕ್ತಪಡಿಸಿದ್ದಾರೆ.
'ಕಾಂತಾರ' ರೀತಿ ಯಾವುದಾದರೂ ದೊಡ್ಡ ಸಿನಿಮಾ ಗೆದ್ದುಬಿಟ್ಟರೆ ತಮಿಳು ಪ್ರೇಕ್ಷಕರು ನಮ್ಮ ಬಗ್ಗೆ ವಿಮರ್ಶೆ ಮಾಡಲು ಆರಂಭಿಸುತ್ತಾರೆ. ನಾನು, ಮಾರಿ ಸೆಲ್ವರಾಜ್ ಹಾಗೂ ವೆಟ್ರಿಮಾರನ್ ಫೋಟೊಗಳನ್ನು ಹಾಕಿ ಬೈತಾರೆ. ಅಯ್ಯೋ ವರ್ಷಕ್ಕೆ ತಮಿಳಿನಲ್ಲಿ 300 ಸಿನಿಮಾ ನಿರ್ಮಾಣ ಆಗುತ್ತದೆ. ಅಷ್ಟು ಜನ ನಿರ್ದೇಶಕರು ಇದ್ದಾರೆ. ನಾವು 2 ವರ್ಷಕ್ಕೆ ಒಂದು ಸಿನಿಮಾ ಮಾಡ್ತೀವಿ. ಆದರೆ ಈ 2 ವರ್ಷದಲ್ಲಿ 600 ಸಿನಿಮಾ ಬಂದಿರುತ್ತೆ. ಅವರನ್ನೆಲ್ಲಾ ಬಿಟ್ಟು ನಮ್ಮ ಮೂವರ ಮೇಲೆ ಯಾಕೆ ಆಕ್ರೋಶ ಎಂದು ರಂಜಿತ್ ಪ್ರಶ್ನಿಸಿದ್ದಾರೆ.
ಹೋಗಿ ಬಂದು ಹೋಗಿ ಬಂದು ನಮ್ಮನ್ನು ಯಾಕೆ ಬೈತಾರೆ. ಬೇರೆ ಯಾವುದೋ ಒಂದು ಸಿನಿಮಾ ಗೆದ್ದ ತಕ್ಷಣ, ನಾವೇ ತಮಿಳು ಸಿನಿಮಾಗಳ ಹಿನ್ನಡೆಗೆ ಕಾರಣ ಎನ್ನುವಂತೆ ನೋಡ್ತೀರಾ ಎಂದು ಪಾ. ರಂಜಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಸಿನಿಮಾ ಬಿಡುಗಡೆ ಆದರೂ ಅದರ ಬಗ್ಗೆ ಬೇರೆ ಬೇರೆ ರೀತಿಯ ಆಯಾಮಗಳನ್ನು ಹರಡುತ್ತೀರಾ. ಅದು ಜಾತಿ ವ್ಯವಸ್ಥೆಗೆ ಸಂಬಂಧಿಸಿದ ಸಿನಿಮಾ ಎಂದು ಹೇಳಿಬಿಡ್ತೀರಾ. ಸಿನಿಮಾ ಕಥೆ ಬೇರೆ ಏನೇ ಇದ್ದರೂ ನೀವು ಅದಕ್ಕೆ ಕಟ್ಟುವ ಬಣ್ಣವೇ ಬೇರೆ. 'ಬಿಸಾನ್' ಬೇಡ 'ಡ್ಯೂಡ್' ಸಿನಿಮಾ ನೋಡಿ ಎಂದು ಸಲಹೆ ನೀಡುತ್ತೀರಾ. ಜನ ಅವರು ಇಷ್ಟಪಟ್ಟ ಸಿನಿಮಾ ನೋಡುತ್ತಾರೆ. ನೀವು ಯಾಕೆ ಬೇರೆ ಬೇರೆ ಕೋನಗಳಲ್ಲಿ ಸಿನಿಮಾಗಳನ್ನು ತುಳಿಯುತ್ತೀರಾ ಎಂದಿದ್ದಾರೆ.
ನಾನು, ಮಾರಿ, ವೆಟ್ರಿಮಾರನ್ ಏಳೆಂಟು ಸಿನಿಮಾ ಮಾಡಿದ್ದೀವಿ ಅಷ್ಟೆ, ಇನ್ನುಳಿದಂತೆ ಸಾಕಷ್ಟು ನಿರ್ದೇಶಕರು ವರ್ಷಕ್ಕೆ 200 ಸಿನಿಮಾ ಮಾಡ್ತಾರೆ. ಅವರೆಲ್ಲಾ ಯಾಕೆ ಅದ್ಭುತ ಸಿನಿಮಾಗಳನ್ನು ಮಾಡಬಾರದು ಎಂದು ಪಾ. ರಂಜಿತ್ ಹೇಳಿದ್ದಾರೆ. ರಂಜಿತ್ ನಿರ್ದೇಶನದ 'ತಂಗಲಾನ್' ಸಿನಿಮಾ ನಿರಾಸೆ ಮೂಡಿಸಿತ್ತು. ಮುಂದಿನ ವರ್ಷ 'ವೆಟ್ಟುವಮ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.


Click it and Unblock the Notifications











