ಹೊಂದಾಣಿಕೆ ಇಲ್ಲದೇ ಇಷ್ಟವಿಲ್ಲದ ಜೀವನ ಬದುಕುವುದಕ್ಕಿಂತ, ದೂರಾಗಿ ಖುಷಿಯಾಗಿರುವುದು ಉತ್ತಮ- ಪಾರ್ತಿಬನ್
ತಮಿಳು ನಟ, ನಿರ್ದೇಶಕ ಪಾರ್ತಿಬನ್ ಹಾಗೂ ನಟಿ ಸೀತಾ 90ರ ದಶಕದಲ್ಲಿ ಮದುವೆ ಆಗಿದ್ದರು. ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದರು. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಸೀತಾ ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.
1990ರಲ್ಲಿ ಬಂದಿದ್ದ ಕನ್ನಡದ 'ಅಭಿಮನ್ಯು' ಚಿತ್ರದಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದರು. 16 ವರ್ಷಗಳ ಬಳಿಕ 'ಸುಂಟರಗಾಳಿ' ಚಿತ್ರದಲ್ಲಿ ದರ್ಶನ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ 'ನೀಲಕಂಠ', 'ಸಾರಥಿ', 'ಸೂಪರ್ ರಂಗ' ಹೀಗೆ ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. 'ದಾದಾ ಈಸ್ ಬ್ಯಾಕ್' ಎಂಬ ಕನ್ನಡ ಚಿತ್ರದಲ್ಲಿ ಪಾರ್ತಿಬನ್ ನಟಿಸಿದ್ದರು.

ಮದುವೆ ಜೀವನವನ್ನು ನೆನೆಪಿಸಿಕೊಂಡು ಈಗ ಪಶ್ಚಾತಾಪ ಪಡ್ತೀರಾ ಎನ್ನುವ ಪ್ರಶ್ನೆಗೆ ಪಾರ್ತಿಬನ್ ಇಲ್ಲ, ಬಹಳ ಸಂತೋಷವಾಗಿದ್ದೀನಿ ಎನ್ನುತ್ತಾರೆ. Wow Tamizhaa ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. "ನನ್ನ 12 ವರ್ಷಗಳ ಮದುವೆ ಜೀವನ ಬಹಳ ಚೆನ್ನಾಗಿತ್ತು. 3 ಮಕ್ಕಳು ಹುಟ್ಟಿದ್ರು. ಏನು ನಡೆಯಿತೋ ಎಲ್ಲವೂ ಚೆನ್ನಾಗಿಯೇ ಇತ್ತು. ಆ ಪ್ರೀತಿ, ಅನುಬಂಧ ಎಲ್ಲವೂ ನಿಜ. ಆದರೆ ಈಗ ಬಹಳ ಆರಾಮಾಗಿ ಇದ್ದೀನಿ. ಸಂತೋಷದಿಂದ ಇದ್ದೀನಿ. ಮದುವೆಗಿಂತ ಸ್ವತಂತ್ರ ಬೇಕು ಎಂದು ಬಯಸುವ ಹುಡುಗ, ಹುಡುಗಿ ಇರುವ ಜನರೇಷನ್‌ನಲ್ಲಿ ನಾವಿದ್ದೀನಿ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮದುವೆ ಎನ್ನುವ ವ್ಯವಸ್ಥೆ ಹಾಳಾಗುತ್ತಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ "ಈಗ ನಡೆಯುತ್ತಿರುವುದು, ಜನ ಬಯಸುತ್ತಿರುವುದು ಅದೇ ಅಲ್ಲವೇ, ಇದೆಲ್ಲಾ ಬದಲಾಗಬಾರದು ಎಂದು ನಾವು ಹಿಡಿದಿಟ್ಟುಕೊಂಡು ಅಳುವುದಕ್ಕೆ ಸಾಧ್ಯವಿಲ್ಲ" ಎಂದಿದ್ದಾರೆ. ಇತ್ತೀಚೆಗೆ ಯಾವುದೋ ಕಾಲೇಜು ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದಾಗಿ ಚಪ್ಪಾಳೆ ಸುರಿಮಳೆ ಆಯಿತು. ಮದುವೆ ಹೆಸರಿನಲ್ಲಿ ಕಟ್ಟುಪಾಡು ಯಾರಿಗೂ ಇಷ್ಟವಿಲ್ಲ. ನನಗೂ ನಮ್ಮ ಪತ್ನಿಗೂ ಭಿನ್ನಾಭಿಪ್ರಾಯ ಇದ್ದಿದ್ದರೆ 12 ವರ್ಷ ಮುಚ್ಚಿಡುವ ಅಗತ್ಯ ಇರಲಿಲ್ಲ. ಇನ್ನು ಬೇಗ ಹೊರ ಬರಬಹುದಿತ್ತು. ನಮ್ಮಿಬ್ಬರ ನಡುವೆ ಪ್ರೀತಿ ಇರಲಿಲ್ಲ ಅಂತ ಅಲ್ಲ, ಅಷ್ಟೆಲ್ಲಾ ಹೋರಾಡಿ ಕೊನೆಗೂ ಬೇರಾಗುವುದಕ್ಕಿಂತ ಬೇಗ ದೂರಾಗಬಹುದಿತ್ತು ಅನಿಸುತ್ತದೆ. ಅದರ ಬೇಸರವಿಲ್ಲ" ಎಂದು ಪಾರ್ತಿಬನ್ ಹೇಳಿದ್ದಾರೆ.

ಮಕ್ಕಳಿಗೆ ಇದರಿಂದ ಸಮಸ್ಯೆ ಆಗಲಿಲ್ಲವೇ ಎನ್ನುವ ಪ್ರಶ್ನೆಗೆ ಪಾರ್ತಿವನ್ ಪ್ರತಿಕ್ರಿಯಿಸಿದ್ದಾರೆ. ನಾವಿಬ್ಬರು ದೂರಾಗುವ ವೇಳೆಗೆ ಮಕ್ಕಳು 6ನೇ ತರಗತಿ, 7ನೇ ತರಗತಿ ಓದುತ್ತಿದ್ದರು. ಇನ್ನು ಬೇಗ ಆಗಿದ್ರೆ, ಸಮಸ್ಯೆ ಆಗುತ್ತಿತ್ತೋ ಏನೋ, ನನ್ನ ಪ್ರಕಾರ ಈಗ ಮಾತನಾಡಿ ಪ್ರಯೋಜನವಿಲ್ಲ. ಇಬ್ಬರೂ ದೂರಾಗಿ ಅವ್ರು ಚೆನ್ನಾಗಿದ್ದಾರೆ, ನಾನು ಚೆನ್ನಾಗಿದ್ದೀನಿ, ಮಕ್ಕಳು ಚೆನ್ನಾಗಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಎಲ್ಲರೂ ಭೇಟಿ ಆಗುತ್ತಿದ್ವಿ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಆಯಿತು. ಮಗ ಬೇರೆ ಮನೆಯಲ್ಲಿದ್ದಾನೆ" ಎಂದಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಆಯ್ತು. ಇನ್ನು ನಾನು, ನನ್ನ ಮಗ ಮಾತ್ರ ಬಾಕಿ ಎಂದು ಹೇಳಿದ್ದೆ. ಅದು ವೈರಲ್ ಆಗಿ ನನಗೆ ಮದುವೆ ಸಂಬಂಧಗಳು ಬಂದವು. ನಮ್ಮ ತಾಯಿ ಮೊದಲೇ ಹೇಳೋಕೆ ಆಗಲಿಲ್ಲವೇ, ಇಷ್ಟು ದಿನ ಒಬ್ಬನೇ ಇದ್ದೆ ಎಂದು ಕೇಳಿದ್ರು. ನಾನು ಹೇಳ್ದೆ, ಇಲ್ಲಮ್ಮ ನನ್ನ ಜೀವನದಲ್ಲಿ ಮದುವೆ ಒಂದು ಬಾರಿ, ಅದು ಆಕೆ ಜೊತೆ ಮಾತ್ರ, ಇನ್ನುಳಿದ ಜೀವನ ಸಿನಿಮಾ ಜೊತೆ ಅಷ್ಟೆ. ಈ ಸಂದರ್ಶನದ ಮೂಲಕ ಅದನ್ನು ಸ್ಪಷ್ಟಪಡಿತ್ತಿದ್ದೇನೆ ಎಂದು ಪಾರ್ತಿಬನ್ ವಿವರಿಸಿದ್ದಾರೆ.
ಚಿತ್ರರಂಗ ಮಾತ್ರವಲ್ಲ. ಎಲ್ಲಾ ಕಡೆ ಡಿವೋರ್ಸ್ ಎನ್ನುವುದು ಸರ್ವೇ ಸಾಧಾರಣವಾಗಿಬಿಟ್ಟಿದೆ. ಮದುವೆಯಾದ 6 ತಿಂಗಳಿಗೆ ಅಷ್ಟೇ ಯಾಕೆ ಒಂದೇ ತಿಂಗಳಿಗೆ ದೂರಾಗುವವರು ಇದ್ದಾರೆ. ಹೊಂದಾಣಿಕೆ ಆಗದೇ ಇದ್ದಾಗ ಸುಖಾಸುಮ್ಮನೆ ಎಳೆದಾಡುವುದಕ್ಕಿಂತ ಬ್ರೇಕಪ್ ಉತ್ತಮ ಎಂದು ನಿರ್ಧರಿಸುತ್ತಿದ್ದಾರೆ. ಮೊದಲು ಸಮಾಜದ ಬಗ್ಗೆ ಭಯ ಇತ್ತು. ಈಗ ಆ ಭಯ ಕಮ್ಮಿ ಆಗಿದೆ. ಹಾಗಾಗಿ ಧೈರ್ಯವಾಗಿ ಬೇಡ ಎಂದು ಇಷ್ಟವಿಲ್ಲದ ಮದುವೆ ಜೀವನದಿಂದ ಹೊರ ಬರಲು ಮುಂದಾಗುತ್ತಿದ್ದಾರೆ ಎಂದು ಪಾರ್ತಿಬನ್ ಹೇಳಿದ್ದಾರೆ.


Click it and Unblock the Notifications











