ಮುಗಿಯದ ಮನ್ಸೂರ್ ಅಲಿಖಾನ್- ತ್ರಿಶಾ ವಿವಾದ: ನಟಿ ಬಳಿ ವಿವರ ಕೇಳಿ ಪತ್ರ ಬರೆದ ಪೊಲೀಸರು!
ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾ ಸದ್ದು ಮಾಡಿತ್ತೋ ಇಲ್ಲವೋ ಜನರಿಗೆ ಗೊತ್ತಿಲ್ಲ. ಆದರೆ, ಅದರಲ್ಲಿ ನಟಿಸಿದ್ದ ಇಬ್ಬರು ಕಲಾವಿದರು ಮಾತ್ರ ಜನರಿಗೆ ಸಕತ್ ಮನರಂಜನೆ ನೀಡುತ್ತಿದ್ದಾರೆ. ಲಿಯೋ ಸಿನಿಮಾದಲ್ಲಿ ನಟಿಸಿದ್ದ ನಟ ಮನ್ಸೂರ್ ಅಲಿ ಖಾನ್, ನಟಿ ತ್ರಿಶಾ ವಿರುದ್ಧ ಅಸಭ್ಯ ಕಾಮೆಂಟ್ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೂ ಬುದ್ದಿ ಕಲಿತಿಲ್ಲ.
ನಟಿ ತ್ರಿಶಾ ಮತ್ತು ಇತರ ನಟಿಯರ ವಿರುದ್ಧ ಅಸಭ್ಯ ಹೇಳಿಕೆ ನೀಡಿ ಮೈ ಮೇಲೆ ಪ್ರಕರಣ ಎಳೆದುಕೊಂಡಿರುವ ಮನ್ಸೂರ್ ಅಲಿ ಖಾನ್, ಕ್ಷಮೆ ಕೇಳಿದ್ದರು. ಆದರೆ, ಅದು ಕ್ಷಮೆಯಲ್ಲ ಎಂದು ಹೇಳುವ ಮೂಲಕ ಮತ್ತೆ ವಿವಾದಕ್ಕೆ ಉಪ್ಪು ಖಾರ ಹಚ್ಚಿದ್ದರು. ಈಗ ಮತ್ತೆ ನಟಿ ತ್ರಿಶಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲ್ಲೆ ಚೆನ್ನೈ ಮಹಿಳಾ ಪೊಲೀಸರು ತ್ರಿಶಾಗೆ ಪತ್ರ ಬರೆದಿದ್ದಾರೆ.

ನಟಿ ತ್ರಿಶಾಗೆ ಪೊಲೀಸರ ಪತ್ರ
ನಟ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನಟಿ ತ್ರಿಶಾ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಅವರ ಮಾತನ್ನು ಖಂಡಿಸಿ ನಟಿ ತ್ರಿಶಾ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ತ್ರಿಷಾ ನಂತರ ಖುಷ್ಬೂ ಸೇರಿದಂತೆ ಅನೇಕರು ಮನ್ಸೂರ್ ಅಲಿ ಖಾನ್ ವಿರುದ್ಧ ಮಾತನಾಡಿದ್ದರು. ನಟಿಗೆ ಬೆಂಬಲ ನೀಡಿದ್ದರು.
ಈ ಸಂಬಂಧ ಪೊಲೀಸರು ಮನ್ಸೂರ್ ಅಲಿಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇದಾದ ಬಳಿಕ ಈ ಬಗ್ಗೆ ಚೆನ್ನೈ ಆಲ್ ವುಮೆನ್ ಪೊಲೀಸ್ ಸ್ಟೇಷನ್ ಸಿಬ್ಬಂದಿ ನಟಿ ತ್ರಿಶಾಗೆ ಪತ್ರ ಬರೆದಿದ್ದಾರೆ. ಪ್ರಕರಣದ ಸಂಬಂಧ ಮಾಹಿತಿ ನೀಡುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದು ವರದಿಯಾಗಿದೆ.
ಲಿಯೋ ಚಿತ್ರದಲ್ಲಿ ಒಂದಾಗಿದ್ದ ತ್ರಿಶಾ, ಮನ್ಸೂರ್ ಅಲಿ ಖಾನ್
ನಟ ವಿಜಯ್ ಅಭಿನಯದ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರ ಲಿಯೋ. ಈ ಚಿತ್ರದಲ್ಲಿ ತ್ರಿಷಾ, ಮನ್ಸೂರ್ ಅಲಿಖಾನ್ ಹಾಗೂ ಇತರೆ ನಟರು ಅಭಿನಯಿಸಿದ್ದಾರೆ. ಸಿನಿಮಾ ಅವಕಾಶವಿಲ್ಲದೇ ಇದ್ದ ಮನ್ಸೂರ್ ಅಲಿಖಾನ್ ಗೆ ಲೋಕೇಶ್ ಕನಕರಾಜ್ ಅವಕಾಶ ಕೊಟ್ಟಿದ್ದರು. ಆದರೆ, ತಮ್ಮ ಸಹ ಕಲಾವಿದೆಯ ಬಗ್ಗೆ ಮನ್ಸೂರ್ ಅಲಿ ಖಾನ್ ಸಂದರ್ಶನದಲ್ಲಿ ವಿವಾದಾತ್ಮಕವಾಗಿ ಮಾತನಾಡಿದ್ದರು.
"ಲಿಯೋದಲ್ಲಿ ಬೆಡ್ ರೂಮ್ ಸೀನ್ ಮಿಸ್ ಆಯ್ತು. ಖುಷ್ಬು ಮತ್ತು ರೋಜಾರನ್ನು ಎತ್ತಿಕೊಂಡು ಹೋಗಿ ಹಾಸಿಗೆಯಲ್ಲಿ ಎಸೆದ ಹಾಗೆ ತ್ರಿಶಾರನ್ನು ಹಾಕಲಾಗಲಿಲ್ಲ" ಎಂದಿದ್ದರು. ಅವರ ಜೊತೆಗೆ ಬೆಡ್ ರೂಮ್ ಸೀನ್ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ನಟಿ ತ್ರಿಶಾ ತೀವ್ರವಾಗಿ ಖಂಡಿಸಿ, ಇನ್ನು ಮುಂದೆ ಮನ್ಸೂರ್ ಅಲಿ ಖಾನ್ ಜೊತೆ ನಟಿಸುವುದಿಲ್ಲ ಎಂದು ಘೋಷಿಸಿದರು.
ನಂತರ, ಚೆನ್ನೈ ಮಹಿಳಾ ಪೊಲೀಸ್ ಠಾಣೆಯಲ್ಲಿ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಎ ಮತ್ತು 509 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮನ್ಸೂರ್ ಅಲಿಖಾನ್ ಅವರನ್ನು ಕರೆಸಿ ಘಟನೆಯ ಬಗ್ಗೆ ತನಿಖೆ ನಡೆಸಿದ್ದರು. ಈ ನಡುವೆ ಚೆನ್ನೈ ಮಹಿಳಾ ಪೊಲೀಸರ ಪರವಾಗಿ ನಟಿ ತ್ರಿಷಾಗೆ ಪತ್ರ ಬರೆಯಲಾಗಿದೆ. ಅಂದರೆ ಮನ್ಸೂರ್ ಅಲಿಖಾನ್ ವಿರುದ್ಧ ಲಿಖಿತ ವಿವರಣೆ ನೀಡಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ. ನಟಿ ತ್ರಿಷಾ ನೀಡುವ ವಿವರಣೆಯ ನಂತರ ನಟ ಮನ್ಸೂರ್ ಅಲಿಖಾನ್ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.


Click it and Unblock the Notifications










