"ಇಲ್ಲೇ ಬದುಕು ಕಟ್ಟಿಕೊಂಡ ರಜನಿ ತಮಿಳುನಾಡಿಗೆ ದ್ರೋಹ ಮಾಡ್ತಿದ್ದಾರೆ.. ಕಾವೇರಿ ವಿಚಾರದಲ್ಲಿ ಕಳ್ಳ ಮೌನ ಯಾಕೆ"?: ವನ್ನಿ ಅರಸು
ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ವಿವಾದ ಭುಗಿಲೆದ್ದಿದೆ. ಈ ವರ್ಷ ಕರ್ನಾಟಕಕ್ಕೆ ನೀರಿನ ಅಭಾವ ಇದ್ದರೂ ತಮಿಳುನಾಡಿಗೆ ನೀರು ಬಿಡುವಂತಾಗಿದೆ. ಇದನ್ನು ಖಂಡಿಸಿ ಸಾಕಷ್ಟು ಪ್ರತಿಭಟನೆ ನಡೀತು. ಆದರೆ ಪ್ರಯೋಜನವಾಗಲಿಲ್ಲ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ನಡೆಸಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿದವು. ಕನ್ನಡ ಚಿತ್ರರಂಗ ಕೂಡ ಇದಕ್ಕೆ ಬೆಂಬಲವಾಗಿ ನಿಂತಿತ್ತು. ಇನ್ನು ಪ್ರತಿ ಬಾರಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಯಾವುದೇ ವಿವಾದ ಶುರುವಾದರೂ ರಜನಿಕಾಂತ್ ಹೆಸರು ಪ್ರಸ್ತಾಪವಾಗುತ್ತದೆ. ಈ ವಿಚಾರದಲ್ಲಿ ಸೂಪರ್ ಸ್ಟಾರ್ ಎತ್ತ ಮಾತನಾಡುತ್ತಾರೆ? ಎನ್ನುವ ಚರ್ಚೆ ನಡೆಯುತ್ತದೆ.

ಇತ್ತೀಚೆಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾವೇರಿ ವಿವಾದದ ಬಗ್ಗೆ ಮಾಧ್ಯಮಗಳಿಂದ ರಜನಿಕಾಂತ್‌ಗೆ ಪ್ರಶ್ನೆ ಎದುರಾಯಿತು. ಆದರೆ ರಜನಿ ಮಾತನಾಡದೇ ಹೊರಟುಬಿಟ್ಟರು. ಇದು ಕಳ್ಳ ಮೌನ ಎಂದು ತಮಿಳುನಾಡು ರಾಜಕೀಯ ಮುಖಂಡ ವನ್ನಿ ಅರಸು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ತಮಿಳುನಾಡಿನ ವಿಸಿಕೆ ಪಕ್ಷದ ಮುಖಂಡ "ಈ ಮಣ್ಣಲ್ಲಿ ಎಲ್ಲವನ್ನು ಪಡೆದುಕೊಂಡು ರಜನಿಕಾಂತ್, ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ ದ್ರೋಹ ಮಾಡುತ್ತಿದ್ದಾರೆ ಯಾಕೆ?" ಎಂದು ಪ್ರಶ್ನಿಸಿದ್ದಾರೆ.
ವಣ್ಣಿ ಅರಸು ಮಾತನಾಡಿ "ಇತ್ತೀಚೆಗೆ ಮಾಧ್ಯಮದವರು ಕಾವೇರಿ ವಿಚಾರದ ಬಗ್ಗೆ ಕೇಳಿದಾಗ ಮಾತನಾಡದೇ ಹೊರಟುಬಿಟ್ಟರು. ಇದನ್ನೇ ಕಳ್ಳ ಮೌನ ಎನ್ನುವುದು. ಯಾಕಂದರೆ ಇಂತಹ ಸಮಯದಲ್ಲಿ ರಜನಿಕಾಂತ್ ಮಾತನಾಡಬೇಕು. ಈ ಹಿಂದೆ ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ತಮಿಳು ಕಲಾವಿದರ ಸಂಘ ಒಂದು ಕಡೆ ಇದ್ದರೆ ರಜನಿಕಾಂತ್ ಮಾತ್ರ ಮತ್ತೊಂದು ಕಡೆ ಇದ್ದರು. ಅದನ್ನೆಲ್ಲಾ ನಾವು ನೋಡಿದ್ದೇವೆ"
"ರಜನಿಕಾಂತ್ ಈ ಹಿಂದೆ ಕಾವೇರಿ ವಿಚಾರದಲ್ಲಿ ಪ್ರಾಮಾಣಿಕವಾಗಿ ತಮಿಳುನಾಡಿನ ಪರ ಇದ್ರಾ? ಎನ್ನುವುದನ್ನು ನೋಡಿದ್ದೇವೆ. ಕಾವೇರಿ ವಿಚಾರವಾಗಿ ಇಲ್ಲಿ ಇರುವ ಕನ್ನಡದವರ ಅಂಗಡಿಗಳು, ಉಡುಪಿ ಹೋಟೆಲ್‌ಗಳ ಮೇಲೆ ದಾಳಿ ನಡೆದಿತ್ತು. ಆಗ ರಜನಿಕಾಂತ್ ಈ ರೀತಿ ಮಾಡಬೇಡಿ. ಕರ್ನಾಟಕದಲ್ಲಿ ತಮಿಳಿನವರು ಇದ್ದಾರೆ. ಸುಮ್ಮನಿರಿ ಎಂದು ಎಚ್ಚರಿಸುವ ರೀತಿ ಮಾತನಾಡಿದರೇ ವಿನಃ ಅಕ್ಕರೆಯಿಂದ ಮಾತನಾಡಿದಂತೆ ಇರಲಿಲ್ಲ. ರಜನಿಕಾಂತ್ ಅಭಿಮಾನಿಗಳು ನನ್ನನ್ನು ಕ್ಷಮೆ ಕೇಳಬೇಕು ಎಂದರು. ಆದರೆ ರಜನಿಕಾಂತ್ ಕ್ಷಮೆ ಕೇಳಬೇಕು"
"ಈ ಮಣ್ಣಲ್ಲಿ 50 ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಮಣ್ಣಿಗೆ ಏನು ಮಾಡಲಿಲ್ಲ, ನೀವು ದ್ರೋಹ ಮಾಡುತ್ತಿದ್ದೀರಾ. ಇಂತಹ ಮಣ್ಣಿಗೆ ಏನು ಮಾಡಲಿಲ್ಲ ಅಂತ ನೀವೇ ಕ್ಷಮೆ ಕೇಳಬೇಕು. ಹೌದು ರಜನಿಕಾಂತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಷ್ಟೆ. ಆದರೆ ಆ ಹಣ ಯಾರದ್ದು? ರಜನಿಕಾಂತ್ ಅವರ ಸಂಪೂರ್ಣ ಜೀವನ ತಮಿಳುನಾಡಿನಲ್ಲೇ ಕಳೆದಿದ್ದಾರೆ. ಮಗಳು, ಪತ್ನಿ ಎಲ್ಲರೂ ಇಲ್ಲೇ ಇದ್ದಾರೆ ಇಲ್ಲೇ ದುಡಿತ್ತಾರೆ. ಆದರೆ ಯಾಕೆ ಮಾತನಾಡಲ್ಲ"
"ತಮಿಳುನಾಡಿನ ಹಕ್ಕಿನ ಪ್ರಕಾರ 13 ಸಾವಿರ ಕ್ಯೂಸೆಕ್ ನೀರು ಬರಬೇಕು ಎಂದು ಪ್ರಾಧಿಕಾರವೇ ಹೇಳಿದೆ. ಆ ಆದೇಶವನ್ನು ಕರ್ನಾಟಕ ಪಾಲಿಸಬೇಕು ಎಂದು ನೀವು ಅಲ್ಲಿನ ಸರ್ಕಾರಕ್ಕೆ ಹೇಳಬೇಕು. ನಿಮ್ಮ ಸಿನಿಮಾಗಳನ್ನು ತಮಿಳು ಜನ ನೋಡುತ್ತಿದ್ದಾರೆ ಅಂದಮೇಲೆ ತಮಿಳುನಾಡಿನ ಜನರನ್ನು ನೀವು ನೋಡಬೇಕು ಅಲ್ಲವೇ? ತಮಿಳುನಾಡಿಗೆ ಬೆಂಬಲವಾಗಿದ್ದೇವೆ ಎಂದು ಹೇಳಬೇಕಲ್ವಾ?" ಎಂದು ವನ್ನಿ ಅರಸು ಪ್ರಶ್ನಿಸಿದ್ದಾರೆ.
"ನಾನು ಬ್ಲಾಕ್‌ಮೇಲ್ ಮಾಡುತ್ತಿಲ್ಲ. ಸಾಮಾಜಿಕ ಬದ್ಧತೆ ರಜನಿಕಾಂತ್‌ಗೆ ಇರಬೇಕು. ನಾನೇನು ಮಾತನಾಡಲೇಬೇಕು ಎಂದು ಆಗ್ರಹಿಸುತ್ತಿಲ್ಲ. ಈ ಮಣ್ಣಿಗೆ ನೀನು ಏನು ಮಾಡದೇ ತೂತುಕುಡಿ ವಿಚಾರದಲ್ಲಿ ಮಾತನಾಡಿದೆ. ಇದು ದ್ರೋಹ ಅಲ್ಲವೇ? ತಮಿಳುನಾಡಿನಲ್ಲಿ ಇರುವುದರಿಂದ ಈ ಜನರಲ್ಲಿ ಒಬ್ಬರಾಗಿ ಇರಬೇಕು ಅಲ್ಲವೇ? ಇಲ್ಲಿನ ಜನರಿಗೆ ಸಮಸ್ಯೆ ಆದಾಗ ಅವರನ್ನು ಬೆಂಬಲಿಸಬೇಕಲ್ಲವೇ? ಎನ್ನುವ ಅಕ್ಕರೆಯಲ್ಲಿ ಹೇಳುತ್ತಿದ್ದೇನೆ"
"ಬರೀ ನಟರಾಗಿದ್ದರೆ ಪರವಾಗಿಲ್ಲ. ಹೋಗಿ ಯೋಗಿ ಆದಿತ್ಯಾನಾಥ್ ಕಾಲಿಗೆ ಬೀಳುತ್ತಾರೆ. ಆ ಮೂಲಕ ಅವರು ಏನು ಹೇಳಲು ಹೊರಟ್ಟಿದ್ದಾರೆ. ಬಿಜೆಪಿ, ಸನಾತನ ಧರ್ಮಕ್ಕೆ ಸೇವೆ ಮಾಡ್ತೀನಿ ಎನ್ನುತ್ತಾರೆ. ಇದು ಸನಾತನ ಧರ್ಮವನ್ನು ಒಪ್ಪದ ಮಣ್ಣು. ರಜನಿಕಾಂತ್ ಅಲ್ಲಿ ಹೋಗಿ ಸನಾತನ ಧರ್ಮದ ಸೇವೆ ಮಾಡುತ್ತಾರೆ. ರಾಜಕೀಯದವರು ನಾವು ಏನೋ ಮಾಡುತ್ತೇವೆ. ಅದನ್ನು ನೀವು ಬದಲಿಸಲು ನೋಡುತ್ತೀರಾ. ಅದನ್ನೆಲ್ಲಾ ಮಾಡುವವರು ಕಾವೇರಿ ವಿಚಾರದಲ್ಲಿ ಮೌನ ಯಾಕೆ?"
"ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರಾಜಕೀಯದ ಬಗ್ಗೆ ಮಾತನಾಡುತ್ತೀರಿ. ಬಾಬರ್ ಮಸೀದಿ ತೀರ್ಪಿನ ಸಮಯದಲ್ಲಿ ಮೋದಿ ಹೇಳಿದ್ದನ್ನೇ ಅಲ್ಲವೇ ನೀವು ಹೇಳಿದ್ದು. ಶಾಂತವಾಗಿರಿ ಬಾಬರ್ ಮಸೀದಿ ತೀರ್ಪು ಬರ್ತಿದೆ ಎಂದು ಮನವಿ ಮಾಡಿದ್ದಿರಿ. ನಿಮಗೊಂದು ಸಂದೇಶ ಬಂದಾಗ ಅದನ್ನು ಹೇಳ್ತೀರಾ? ಅದೇ ಕಾವೇರಿ ವಿಚಾರ ಬಂದಾಗ ಸುಮ್ಮನಿರುತ್ತೀರಾ? ಇದು ತಮಿಳುನಾಡಿಗೆ ರಜನಿಕಾಂತ್ ಮಾಡುತ್ತಿರುವ ಹಸಿ ದ್ರೋಹ. ಈ ರೀತಿ ದ್ರೋಹ ಮಾಡುವ ರಜನಿಕಾಂತ್‌ನ ಬೆಂಬಲಿಸುವ ಅಭಿಮಾನಿಗಳು ತಮಿಳುನಾಡಿಗೆ ದ್ರೋಹ ಮಾಡುತ್ತಿದ್ದಾರೆ" ಎಂದು ವನ್ನಿ ಅರಸು ಹೇಳಿದ್ದಾರೆ.


Click it and Unblock the Notifications











