4 ದಿನಕ್ಕೆ 200 ಕೋಟಿ ಬಾಚಿದ 'ಪೊನ್ನಿಯಿನ್ ಸೆಲ್ವನ್- 2': ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ? ಇಲ್ಲಿದೆ ಪಿನ್ ಟು ಪಿನ್ ಡಿಟೈಲ್ಸ್
ಬಾಕ್ಸಾಫೀಸ್‌ನಲ್ಲಿ 'ಪೊನ್ನಿಯಿನ್ ಸೆಲ್ವನ್' ಆರ್ಭಟ ಮುಂದುವರೆದಿದೆ. ಶುಕ್ರವಾರ ರಿಲೀಸ್ ಆಗಿದ್ದ ಸಿನಿಮಾ ಮೊದಲ 4 ದಿನಕ್ಕೆ ವರ್ಲ್ಡ್‌ವೈಡ್ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ದೇಶ ವಿದೇಶಗಳಲ್ಲೂ ಸಿನಿಮಾ ಗಳಿಕೆ ಜೋರಾಗಿದೆ. ತಮಿಳು ಪ್ರೇಕ್ಷಕರಂತೂ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. 'ವಾರಿಸು', 'ಥುನಿವು' ದಾಖಲೆ ಮುರಿದು 'ಪೊನ್ನಿಯಿನ್ ಸೆಲ್ವನ್'- 2 ಸದ್ದು ಮಾಡ್ತಿದೆ.
ಮಣಿರತ್ನಂ ದೃಶ್ಯಕಾವ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎರಡು ಭಾಗಗಳಾಗಿ 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ತೆರೆಗೆ ತರಲಾಗಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. 4 ದಿನಗಳ ಸುದೀರ್ಘ ವೀಕೆಂಡ್ ಸಿನಿಮಾ ಕಲೆಕ್ಷನ್‌ಗೆ ಪ್ಲಸ್ ಆಗಿದೆ. ಬರೀ ತಮಿಳುನಾಡಿನಲ್ಲೇ ಸಿನಿಮಾ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್ ರಾಜ್, ನಾಸರ್, ಕಿಶೋರ್‌ರಂತಹ ಘಟಾನುಘಟಿ ಕಲಾವಿದರ ಅಭಿನಯ, ಮಣಿರತ್ನಂ ನಿರ್ದೇಶನ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಲೈಕಾ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ ಗೆದ್ದಿದೆ.

ಐತಿಹಾಸಿಕ ಕಥಾಹಂದರದ ಕಾಸ್ಟ್ಯೂಮ್ ಡ್ರಾಮಾ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಚೋಳರು, ಪಾಂಡ್ಯ ನಡುವಿನ ಸಂಘರ್ಷದ ಕಥೆಯನ್ನು ಹೇಳಲಾಗಿದೆ. ಎರಡು ರಾಜ್ಯಗಳ ಆಂತರಿಕ ರಾಜಕೀಯ, ಸಂಘರ್ಷ, ಸೇಡಿನ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ವಾರ್ ಸೀಕ್ವೆನ್ಸ್, ಎಲಿವೇಷನ್ ಸೀನ್ಸ್‌ಗಿಂತ ಡ್ರಾಮಾಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಕಲಾವಿದರಂತೂ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ರವಿವರ್ಮನ್ ಛಾಯಾಗ್ರಹಣ, ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ.
ಸಾಮಾನ್ಯವಾಗಿ ಸೀಕ್ವೆಲ್ ಸಿನಿಮಾಗಳ ಬಗ್ಗೆ ಭಾರೀ ನಿರೀಕ್ಷೆ ಇರುತ್ತದೆ. ಅದರಲ್ಲೂ 2ನೇ ಭಾಗ ರಿಲೀಸ್ ಹತ್ತಿರವಾದಂತೆ ಬಝ್ ಕ್ರಿಯೇಟ್ ಆಗುತ್ತದೆ. 'ಪೊನ್ನಿಯಿನ್ ಸೆಲ್ವನ್' ಮೊದಲ ಭಾಗಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ಭಾಗದ ಬಗ್ಗೆ ಅಷ್ಟೇನು ನಿರೀಕ್ಷೆ ಇರಲಿಲ್ಲ. ಆದರೆ ಸಿನಿಮಾ ರಿಲೀಸ್ ನಂತರ ಸದ್ದು ಮಾಡಲು ಆರಂಭಿಸಿದೆ. ಫ್ಯಾಮಿಲಿ ಸಮೇತ ತಮಿಳು ಪ್ರೇಕ್ಷಕರು ಸಿನಿಮಾ ನೋಡಲು ಹೋಗುತ್ತಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಓದಿಕೊಂಡವರಿಗೆ, ಮೊದಲ ಭಾಗ ನೋಡಿದವರಿಗೆ ಸಿನಿಮಾ ಮತ್ತಷ್ಟು ಇಷ್ಟವಾಗುತ್ತಿದೆ.

ಇತಿಹಾಸವನ್ನು ತಿರುಚದೇ ಕಾದಂಬರಿಯಲ್ಲಿ ಇರುವುದನ್ನು ಅಷ್ಟೇ ಸೊಗಸಾಗಿ ನಿರ್ದೇಶಕ ಮಣಿರತ್ನಂ ತೆರೆಗೆ ತಂದಿದ್ದಾರೆ. 4 ದಿನಗಳ ವೀಕೆಂಡ್ ನೋಡಿ ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿತ್ತು ಚಿತ್ರತಂಡ. ಆ ಪ್ರಯತ್ನ ಫಲಿಸಿದೆ. 4 ದಿನಕ್ಕೆ ಸಿನಿಮಾ 200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದನ್ನು ಲೈಕಾ ಸಂಸ್ಥೆಗೆ ಅಧಿಕೃತವಾಗಿ ಘೋಷಿಸಿದೆ. ತಮಿಳುನಾಡಿನಲ್ಲಂತೂ 5ನೇ ದಿನವೂ ಬುಕ್ಕಿಂಗ್ ಜೋರಾಗಿದೆ. ಒಟ್ಟಾರೆ ದಶಕಗಳಿಂದ ಹಲವರು 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯನ್ನು ತೆರೆಗೆ ತರುವ ಕನಸು ಕಂಡಿದ್ದರು. ಇದೀಗ ಮಣಿರತ್ನಂ ಮತ್ತವರ ತಂಡ ಅದನ್ನು ಸಾಧಿಸಿ ತೋರಿಸಿದೆ.
ತಮಿಳುನಾಡಿನಲ್ಲಿ 70 ಕೋಟಿ ರೂ. ಓವರ್‌ಸೀಸ್ 90 ಕೋಟಿ ರೂ. ಕರ್ನಾಟಕ 15 ಕೋಟಿ ರೂ. ಕೇರಳ 10 ಕೋಟಿ ರೂ. ತೆಲುಗು ರಾಜ್ಯಗಳಲ್ಲಿ 10 ಕೋಟಿ ರೂ. ಸೇರಿದಂತೆ ಮೊದಲ 4 ದಿನಕ್ಕೆ ಸಿನಿಮಾ ಕಲೆಕ್ಷನ್ 200 ಕೋಟಿ ರೂ. ಗಡಿ ದಾಟಿದೆ ಎನ್ನುವ ಅಂದಾಜಿದೆ. ಪ್ರೀಕ್ವೆಲ್ 500 ಕೋಟಿ ರೂ. ಗಳಿಸಿ ಸದ್ದು ಮಾಡಿತ್ತು. ಆದರೂ ಚಿತ್ರದ ಬಹುತೇಕ ಕಲೆಕ್ಷನ್ ತಮಿಳುನಾಡಿನಿಂದಲೇ ಬಂದಿತ್ತು. 'ಕಾಂತಾರ' ಆರ್ಭಟದ ನಡುವೆ ಹೊರರಾಜ್ಯಗಳಲ್ಲಿ ಸಿನಿಮಾ ಸದ್ದು ಮಾಡಿರಲಿಲ್ಲ. ಆದರೆ ಸೀಕ್ವೆಲ್ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ತಿದೆ. ಸಿನಿಮಾ 1000 ಕೋಟಿ ರೂ. ಗಡಿ ದಾಟುತ್ತದೆ ಎನ್ನಲಾಗ್ತಿದೆ.


Click it and Unblock the Notifications











