ಧೂಳೆಬ್ಬಿಸಿದ 'ಪೊನ್ನಿಯಿನ್ ಸೆಲ್ವನ್' ಟೀಸರ್!
ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಮೂಡಿ ಬರಲು ಸಜ್ಜಾಗಿದೆ. ಅದು ಬೇರೆ ಯಾವ ಸಿನಿಮಾ ಅಲ್ಲ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಪೊನ್ನಿಯಿನ್ ಸೆಲ್ವನ್'. ಹೌದು ಈ ಸಿನಿಮಾ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾ ಕಾದಂಬರಿಯನ್ನು ಆಧರಿಸಿದ ಕಥೆಯಾಗಿದೆ. ಹಾಗಾಗಿ ಚಿತ್ರದ ಮೇಲೆ ಮತ್ತು ಮಣಿರತ್ನಂ ಅವರ ನಿರ್ದೇಶನದ ಮೇಲೆ ಭರವಸೆ ಹೆಚ್ಚಾಗಿದೆ.
'ಪೊನ್ನಿಯಿನ್ ಸೆಲ್ವನ್' ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಚಿತ್ರದಲ್ಲಿ ಹಲವು ಖ್ಯಾತ ಕಲಾವಿದರು ಇದ್ದಾರೆ. ಸೌತ್ ಜೊತೆಗೆ ಬಾಲಿವುಡ್ ಕಲಾವಿದರು ಕೂಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ಹಲವು ಪಾತ್ರವರ್ಗದ ಪರಿಚಯವನ್ನು ಚಿತ್ರತಂಡ ಮಾಡಿಕೊಟ್ಟಿದೆ.
ಅಂದಹಾಗೆ ಈ ಸಿನಿಮಾ ಕನ್ನಡದಲ್ಲೂ ಕೂಡ ರಿಲೀಸ್ ಆಗುತ್ತದೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕನ್ನ, ತಮಿಳೂ, ತೆಲುಗು, ಮಲಯಾಳಂ, ಹಿಂದಿಯಲ್ಲಿ ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚೋಳರ ಗತಕಾಲದ ವೈಭವವನ್ನು ಬಿಚ್ಚಿಟ್ಟಿದೆ ಟೀಸರ್.
ಚೋಳರ ಕಥೆ ಸಾರಲಿದೆ ಪೊನ್ನಿಯಿನ್ ಸೆಲ್ವನ್!
ಬಹುನಿರೀಕ್ಷಿತ ಮಣಿರತ್ನಂ ನಿರ್ದೇಶನದ ಸಿನಿಮಾ 'ಪೊನ್ನಿಯಿನ್ ಸೆಲ್ವನ್'. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ನಿರೀಕ್ಷೆ ಮತ್ತು ಕುತೂಹಲಗಳನ್ನು ಮತ್ತಷ್ಟು ಹೆಚ್ಚು ಮಾಡಿದೆ ಸದ್ಯ ರಿಲೀಸ್ ಆಗಿರುವ ಟೀಸರ್. ಚಿತ್ರದ ಟೀಸರ್ ಸಿನಿಮಾದ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಟ್ಟಿದೆ. ಪಾತ್ರ ವರ್ಗದ ಪರಿಚಯ ಈ ಟೀಸರ್‌ನಲ್ಲಿ ಆಗಿದೆ. ಇನ್ನು ಎಆರ್ ರೆಹಮಾನ್ ಸಂಗೀತ ಈ ಟೀಸರ್‌ಗೆ ಮೆರುಗು ತಂದಿದೆ.
ಮಹಾರಾಣಿಯರಾದ ಐಶ್ವರ್ಯಾ, ತ್ರಿಶಾ!
ಟೀಸರ್‌ನಲ್ಲಿ ಪ್ರತಿ ಪಾತ್ರವೂ ಹೆಚ್ಚಾಗಿ ಗಮನ ಸೆಳೆದಿದೆ. ನಟಿ ಐಶ್ವರ್ಯಾ ರೈ ಮತ್ತು ತ್ರಿಶಾ ಮಹಾರಾಣಿಯರಾಗಿ ಕಂಗೊಳಿಸಿದ್ದಾರೆ. ಇಬ್ಬರೂ ತಮ್ಮ ಸಂಗಡಿಗರೊಂದಿಗೆ ಮುಖಾ ಮುಖಿ ಆಗುವ ಒಂದು ದೃಶ್ಯದ ತುಣುಕನ್ನು ತೋರಿಸಲಾಗಿದೆ. ಇನ್ನುಳಿದಂತೆ ನಟ ಜಯಂ ರವಿ, ಕಾರ್ತಿ, ವಿಕ್ರಮ್, ಪ್ರಕಾಶ್ ರೈ ಸೇರಿದಂತೆ ಹಲವು ಪಾತ್ರಗಳನ್ನು ಪರಿಚಯ ಮಾಡಲಾಗಿದೆ.
ಟೀಸರ್‌ನಲ್ಲಿರುವ ಡೈಲಾಗ್!
ಇನ್ನು ಇಡೀ ಟೀಸರನ್‌ನಲ್ಲಿ ಗತಕಾಲದ ವೈಭವವನ್ನು ನೋಡಬಹುದು. ಚೋಳರ ಸಾಮ್ರಾಜ್ಯದ ದರ್ಶನ ಮಾಡಿಸುತ್ತೆ. ಸಾಮ್ರಾಜ್ಯಕ್ಕಾಗಿ ನಡೆಯುವ ಹೋರಾಟ, ಯುದ್ಧ, ತೊಳಲಾಟ ಎಲ್ಲದರ ತುಣುಕುಗಳನ್ನು ತೋರಿಸಲಾಗಿದೆ. ಇನ್ನು ಒಂದು ಡೈಲಾಗ್ ಮಾತ್ರವೇ ಟೀಸರ್‌ನಲ್ಲಿ ಇದೆ. "ಮದ್ಯ, ಹಾಡು, ರಕ್ತ, ಸಮರ, ಎಲ್ಲಾದನ್ನೂ ಮರೆಯಲೆಂದೇ, ಅವಳನ್ನೂ ಮರೆಯಲೆಂದೆ, ನನ್ನನ್ನು ಮರೆಯಲೆಂದೇ." ಎನ್ನುವ ಒಂದೇ ಡೈಲಾಗ್ ಕಿಕ್ ಕೊಡುತ್ತಿದೆ. ಇನ್ನು ಒಂದು ಉಂಗುರ ಹಲವು ಕುತೂಹಲವನ್ನು ಹುಟ್ಟು ಹಾಕಿದೆ.
ಪೊನ್ನಿಯಿನ್ ಸೆಲ್ವನ್ ನಟ ವಿಕ್ರಂ!
ಪೊನ್ನಿಯಿನ್ ಸೆಲ್ವನ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಆದರೆ ನಟ ವಿಕ್ರಂ ಆಸ್ಪತ್ರೆಯಲ್ಲಿ ಇದ್ದಾರೆ. ಹೃದಯಾಘಾತದಿಂದಾಗಿ ನಟ ವಿಕ್ರಂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಕ್ರಂ ದಾಖಲಾಗಿರುವ ಕಾವೇರಿ ಆಸ್ಪತ್ರೆ ವಿಕ್ರಂ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ವೈದ್ಯರ ಪ್ರಕಾರ, ವಿಕ್ರಂಗೆ ಯಾವುದೇ ಗಂಭೀರ ಸಮಸ್ಯೆ ಆಗಿಲ್ಲ. ಸದ್ಯ ನಟ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











