ಕುಡ್ಲದ ಕಿನ್ನರಿ ಪೂಜಾ ಹೆಗ್ಡೆಗೆ ಕಾಲಿವುಡ್‌ನಲ್ಲಿ ಒಲಿದ ಬಂಪರ್ ಲಾಟರಿ...!
ಲಕ್ ಅನ್ನೋದೆ ಹಂಗೇ. ಯಾವ ಟೈಮಲ್ಲಿ ಎಂಥವರಿಗೆ ಕಿಕ್ ಕೊಡುತ್ತೆ ಅನ್ನೋದೆ ಗೊತ್ತಾಗಲ್ಲ. ಸೋತವರಿಗೆ ಇಲ್ಲಿ ಸುಣ್ಣ ಸಿಕ್ಕರೆ, ಗೆದ್ದವರು ಬಣ್ಣದ ರಂಗಲ್ಲಿ ತೇಲುವ ಪ್ರಯತ್ನ ಮಾಡ್ತಾರೆ. ಸಿನಿಮಾ ಎಂಬ ಈ ಕಣ್ಣಾಮುಚ್ಚಾಲೆ ಆಟದಲ್ಲಿ ಇಲ್ಲೊಬ್ರು ಮೆತ್ತಗೆ ಮೈಕೊಡವಿ ಎದ್ದು ನಿಲ್ಲುವ ಪ್ರಯತ್ನ ಮಾಡ್ತಿದ್ದಾರೆ. ಅವರು ಬೇರೆ ಯಾರು ಅಲ್ಲ, ಬದಲಿಗೆ ಪೂಜಾ ಹೆಗ್ಡೆ.
ಹೌದು, ಪೂಜಾ ಹೆಗ್ಡೆ.. ಹೆಚ್ಚೇನ್ ಇಲ್ಲ ಹನ್ನೆರಡು ವರ್ಷದ ಹಿಂದೆ ಚಿನ್ನದಂತಹ ಬೇಡಿಕೆಯನ್ನ ಹೊಂದಿದ್ದ ನಟಿ. ಒಂದಾದ ಮೇಲೊಂದು ಗೆಲುವನ್ನ ಕಂಡಿದ್ದ ಪೂಜಾ ಬಾಲಿವುಡ್ ಸಹವಾಸ ಮಾಡಿ ಬಡವರಾದರು. ನಿಜಾ.. ಪೂಜಾ ಅಭಿನಯದ ಹೌಸ್ ಫುಲ್ 4, ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಸಿನಿಮಾನೇ. ಆದರೆ.. ಗೆಲುವಲ್ಲಿ ಪೂಜಾಗೆ ಕ್ರೆಡಿಟ್ ಸಿಗಲಿಲ್ಲ. ಉತ್ತರದ ಸಿನಿರಸಿಕರು ಇವರನ್ನ ಹೃದಯದಲ್ಲಿಟ್ಟು ಪೂಜೆ ಮಾಡಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಆ ನಂತರ ಪೂಜಾ ಅಭಿನಯದ ಸರ್ಕಸ್ ಮತ್ತು ಕಿಸಿ ಕಾ ಭಾಯಿ ಕಿಸಿ ಕಾ ಜಾನ್ ಸಿನಿಮಾ ಮಕಾಡೆ ಮಲಗಿಕೊಂಡವು.

ಇನ್ನೂ.. ರಾಧೆ ಶ್ಯಾಮ್.. ಬೀಸ್ಟ್ ಮತ್ತು ಆಚಾರ್ಯ.. ಪೂಜಾ ಅವರ ಖಾತೆಗೆ ಮತ್ತು ಖ್ಯಾತಿಗೆ ಎರಡಕ್ಕೂ ಕತ್ತರಿಯನ್ನ ಹಾಕಿದವು. ಇದಕ್ಕೆ ಸಾಕ್ಷಿ ಅನ್ನುವಂತೆ.. ಒಂದ್ಕಾಲದಲ್ಲಿ ಇವರದ್ದು ಗೋಲ್ಡನ್ ಲೆಗ್ ಅನ್ನುತ್ತಿದ್ದ ಜನ ಐರನ್ ಲೆಗ್ ಅನ್ನಲು ಶುರು ಮಾಡಿದರು. ನಾಲ್ಕು ಕೋಟಿಯನ್ನ ಕೊಟ್ಟು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದ ನಿರ್ಮಾಪಕರು, ಒಂದು ಕೋಟಿ ಕೊಡಲು ಕೂಡ ಯೋಚನೆ ಮಾಡಲು ಆರಂಭ ಮಾಡಿದರು. ಇದರ ನಡುವೆ ಪೂಜಾ ಹೆಗ್ಡೆ ಸ್ಥಾನವನ್ನ ಬೇರೆ ನಾಯಕಿಯರು ಆಕ್ರಮಿಸಿಕೊಂಡರು.
ಈ ಎಲ್ಲ ಕಾರಣದಿಂದ ಪೂಜಾ ಹೆಗ್ಡೆ ಕೆರಿಯರ್ ಖತಂ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಈಗ ಪೂಜಾ ಹೆಗ್ಡೆ ಮತ್ತೆ ಮರಳಿ ಬರುವ ಪ್ರಯತ್ನ ಮಾಡ್ತಿದ್ದಾರೆ. ಈ ದಾರಿಯಲ್ಲಿ ಸೌತ್ ಇಂಡಸ್ಟ್ರೀಯಲ್ಲಿ ಪೂಜಾಗೆ ಬಂಪರ್ ಲಾಟರಿ ಒಲಿದಿದೆ. ಸೂರ್ಯಗೆ ನಾಯಕಿಯಾಗುವ ಸುವರ್ಣ ಅವಕಾಶ ಸಿಕ್ಕಿದೆ.

ಹೌದು, ತಮ್ಮ ಬಹುನಿರೀಕ್ಷಿತ ಕಂಗುವ ಚಿತ್ರದ ಚಿತ್ರೀಕರಣ ಮುಗಿಸಿರುವ ಸೂರ್ಯ, ಈಗ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ. 'ಜಿಗರ್ಥಂಡಾ'.. 'ಪೆಟ್ಟಾ'.. 'ಜಿಗರ್ ಥಂಡಾ ಡಬಲ್ ಎಕ್ಸ್'.. 'ಮಹಾನ್'.. ಹೀಗೆ ಭಿನ್ನ-ವಿಭಿನ್ನ ಸಿನಿಮಾಗಳನ್ನ ನೀಡಿರುವ ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ಬರಲಿರುವ ಸೂರ್ಯ ಅಭಿನಯದ ಈ 44ನೇ ಚಿತ್ರಕ್ಕೆ ಈಗ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಹೊಸ ಅಧ್ಯಾಯವನ್ನ ಆರಂಭ ಮಾಡಲು ಸರ್ವ ಸನ್ನದ್ಧರಾಗಿದ್ದಾರೆ ಪೂಜಾ ಹೆಗ್ಡೆ.
ಇನ್ನೂ ಸೂರ್ಯ ಜೊತೆ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಈ ಕಾರಣಕ್ಕೆ ಸೂರ್ಯ ಮತ್ತು ಪೂಜಾ ಹೆಗ್ಡೆ ಅಭಿಮಾನಿಗಳು ಈ ಸುದ್ದಿಯನ್ನ ಕೇಳಿ ಸದ್ಯಕ್ಕೆ ಖುಷಿಯಾಗಿದ್ದಾರೆ. ಈ ಜೋಡಿ ಮೋಡಿ ಮಾಡುವುದು ಖಚಿತ ಎನ್ನುವ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ
ಉಳಿಂದತೆ ಕಾಲಿವುಡ್‌ನಲ್ಲಿ ಸದ್ಯಕ್ಕೆ ಸೂರ್ಯ ಜೊತೆ ಸಿನಿಮಾ ಮಾಡ್ತಿರುವ ಪೂಜಾ ಹೆಗ್ಡೆ, ಟಾಲಿವುಡ್‌ನಲ್ಲಿ ಸಮಂತಾ ಮಾಜಿ ಗಂಡ ನಾಗಚೈತನ್ಯ ಜೊತೆ ತೆರೆ ಹಂಚಿಕೊಳ್ಳುವುದು ಬಹುತೇಕ ಖಾತ್ರಿಯಾಗಿದೆ. ಎಲ್ಲವೂ ಅಂದುಕೊಂಡತೆ ಆದರೆ ನಾಗಚೈತನ್ಯ ಜೊತೆಗಿನ ಸಿನಿಮಾದ ಚಿತ್ರೀಕರಣ ಇದೇ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ .ಇನ್ನೂ ಪೂಜಾ ಹೆಗ್ಡೆ ಸದ್ಯಕ್ಕೆ ಹಿಂದಿಯಲ್ಲಿ ಕೂಡ ಒಂದು ಸಿನಿಮಾ ಮಾಡಿದ್ದಾರೆ. ಶಾಹಿದ್ ಕಪೂರ್ ನಾಯಕನಾಗಿರುವ ಈ ಚಿತ್ರಕ್ಕೆ ದೇವಾ ಎಂದು ಹೆಸರಿಡಲಾಗಿದೆ.
ಒಟ್ನಲ್ಲಿ ನಿರಂತರ ಸೋಲು ಮತ್ತು ಅವಮಾನಗಳಿಂದ ಕಂಗೆಟ್ಟಿರುವ ಪೂಜಾ ಹೆಗ್ಡೆ ಈ ವರ್ಷದ ಕೊನೆ..ಕೊನೆಗೆ.. ತಮ್ಮ ಬದುಕಿನ ಮತ್ತೊಂದು ಅಧ್ಯಾಯ ತೆರೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕಳೆದುಕೊಂಡಲ್ಲಿಯೇ ಮತ್ತೆ ಹೆಸರನ್ನ ಸಂಪಾದಿಸಲು ಮುಂದಾಗಿದ್ದಾರೆ. ಐರೆನ್ ಲೆಗ್ ಎಂದು ಕೆಣಕಿ ಮಾತನಾಡುತ್ತಿದ್ದವರಿಗೆ ಕೆಲಸದ ಮೂಲಕ ಉತ್ತರ ಕೊಡಲು ಸಿದ್ಧರಾಗಿದ್ದಾರೆ. ಪೂಜಾಗೆ ಈ ಬಾರಿ ಅಂದುಕೊಂಡ ಫಲಿತಾಂಶ ಸಿಗುತ್ತಾ ಅನ್ನುವುದನ್ನ ಕಾದು ನೋಡಬೇಕಿದೆ


Click it and Unblock the Notifications











