'ತಲೈವಿ' ಸಿನಿಮಾದಿಂದ ಪ್ರಿಯಾಮಣಿ ಔಟ್: ಶಶಿಕಲಾ ಪಾತ್ರಕ್ಕೆ ಬಂದ್ರು 'ಜೋಶ್' ನಟಿ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ತಲೈವಿ ಸಿನಿಮಾದ ಹೊಸ ಲುಕ್ ಇಂದು ರಿಲೀಸ್ ಆಗಿದೆ. ಇಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜನ್ಮವಾರ್ಷಿಕೋತ್ಸವ. ಹುಟ್ಟುಹಬ್ಬದ ವಿಶೇಷವಾಗಿ ಇಂದು ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾದ ಹೊಸ ಲುಕ್ ರಿಲೀಸ್ ಆಗಿದೆ.
ಹೊಸ ಲುಕ್ ರಿವೀಲ್ ಆದ ಬೆನ್ನಲ್ಲೆ ಚಿತ್ರದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಜಯಲಿತಾ ಆಪ್ತೆ ಶಶಿಕಲಾ ಪಾತ್ರದಲ್ಲಿ ಕನ್ನಡತಿ ಪ್ರಿಯಾಮಣಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಚಿತ್ರದಿಂದ ಪ್ರಿಯಾಮಣಿ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಪ್ರಿಯಾಮಣಿ ಜಾಗಕ್ಕೆ ಮತ್ತೋರ್ವ ನಟಿ ಎಂಟ್ರಿ ಕೊಟ್ಟಿದ್ದಾರೆ. ಹೌದು, ಕನ್ನಡದ ಜೋಶ್ ಚಿತ್ರದ ನಾಯಕಿ ಪೂರ್ಣಾ ತಲೈವಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂರ್ಣಾ ಶಶಿಕಲಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಪ್ರಿಯಾಮಣಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಡೇಟ್ ಹೊಂದಾಣಿಕೆಯಾಗದೆ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಚಿತ್ರತಂಡ ಯಾವುದೆ ಸ್ಪಷ್ಟನೆ ನೀಡಿಲ್ಲ. ಆದರೆ ಶಶಿಕಲಾ ಆಗಿ ನಟಿ ಪೂರ್ಣಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ನಟಿ ಪೂರ್ಣಾ ಕನ್ನಡ '100' ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಅಂದ್ಹಾಗೆ ತಲೈವಿ ನಿರ್ದೇಶಕ ಕೆ.ಎಲ್ ವಿಜಯ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ.
ಈಗಾಗಲೆ ಚಿತ್ರದ ಟೀಸರ್ ರಿಲೀಸ್ ಆಗಿ ತಿಂಗಳುಗಳಾಗಿದೆ. ಟೀಸರ್ ನೋಡಿದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಕಂಗನಾ ಲುಕ್ ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಆದರಿವತ್ತು ರಿಲೀಸ್ ಆಗಿರುವ ಹೊಸ ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸಿನಿಮಾ ಇದೆ ವರ್ಷ ಜೂನ್ ನಲ್ಲಿ ತೆರೆಗೆ ಬರಲಿದೆ.


Click it and Unblock the Notifications











