"ನಾವಿಬ್ಬರು ಡಿವೋರ್ಸ್ ಪಡೆದಿದ್ದು ನಿಜ.. ಆದ್ರೆ ಮಕ್ಕಳಿಗಾಗಿ ಈಗ"; ಪ್ರಭುದೇವಾ ಮಾಜಿ ಪತ್ನಿ ಅಚ್ಚರಿಯ ಹೇಳಿಕೆ
ಸಿನಿಮಾ ತಾರೆಯರ ನಡುವೆ ಎಷ್ಟು ಬೇಗ ಲವ್ ಆಗುತ್ತದೋ ಅಷ್ಟೇ ಬೇಗ ಬ್ರೇಕಪ್ ಆಗಿಬಿಡುತ್ತದೆ. ಇನ್ನು ಮದುವೆ, ಡಿವೋರ್ಸ್ ಕೂಡ ಸರ್ವೇ ಸಾಮಾನ್ಯ. ಡಿವೋರ್ಸ್ ಪಡೆದಷ್ಟೇ ಬೇಗ ಮತ್ತೊಂದು ಮದುವೆ ಕೂಡ ಆಗಿಬಿಡುತ್ತಾರೆ. ಅದೇ ರೀತಿ ಕಾನೂನಾತ್ಮಕವಾಗಿ ದೂರಾದರೂ ಬಳಿಕ ಸ್ನೇಹಿತರಂತೆಯೇ ಇರುವವರು ಇದ್ದಾರೆ.
ನಟ, ನಿರ್ದೇಶಕ, ಕೊರಿಯೋಗ್ರಫರ್ ಪ್ರಭುದೇವಾ ಲವ್ ಸ್ಟೋರಿಗಳು, ಮ್ಯಾರೇಜ್ ಸ್ಟೋರಿ ಎಲ್ಲವೂ ಗೊತ್ತೇಯಿದೆ. ನಟಿ ನಯನತಾರ ಜೊತೆ ಮದುವೆ ಆಗಲು ಪ್ರಭುದೇವಾ ಮೊದಲ ಪತ್ನಿ ರಾಮ್‌ಲತಾಗೆ ಡಿವೋರ್ಸ್ ಕೊಟ್ಟಿದ್ದರು. ಆದರೆ ಬಳಿಕ ನಯನತಾರ ಜೊತೆಗೆ ಬ್ರೇಕಪ್ ಆಗಿತ್ತು. ಬಳಿಕ ಹಿಮಾನಿ ಸಿಂಗ್ ಎಂಬುವವರನ್ನು ಪ್ರೀತಿಸಿ ಪ್ರಭುದೇವಾ ಎರಡನೇ ಮದುವೆ ಆಗಿದ್ದರು. ಬಳಿಕ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನಾತಾರ ಹಸೆಮಣೆ ಏರಿದ್ದರು.

ಪ್ರಭುದೇವಾ ಮೊದಲ ಪತ್ನಿ ರಾಮ್‌ಲತಾ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಅಂದಹಾಗೆ ಪ್ರಭು ಹಾಗೂ ರಾಮ್‌ಲತಾ ಕೂಡ ಪ್ರೀತಿಸಿ ಮದುವೆ ಆಗಿದ್ದರು. ಯಾವುದೇ ಕಾರಣಗಳಿಂದ ಇಬ್ಬರೂ ದೂರಾಗಿದ್ದರು. ಆದರೆ ಇವತ್ತಿಗೂ ಇಬ್ಬರ ಸ್ನೇಹ ಮುಂದುವರೆದಿದೆ. ಮಕ್ಕಳಿಗಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಇಬ್ಬರೂ ಸಂಪರ್ಕದಲ್ಲಿದ್ದಾರೆ. ಮಕ್ಕಳ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಸಾಮಾನ್ಯವಾಗಿ ಡಿವೋರ್ಸ್ ಪಡೆದ ಬಳಿಕ ಒಬ್ಬರನ್ನು ಕಂಡರೆ ಒಬ್ಬರಿಗೆ ಮೂಗು ಮುರಿಯುತ್ತಾರೆ. ಆರೋಪಗಳನ್ನು ಮಾಡುತ್ತಾರೆ. ಆದರೆ ತಮ್ಮ ಪತಿ ಬಗ್ಗೆ ಇವತ್ತಿಗೂ ಅದೇ ಪ್ರೀತಿಯನ್ನು ರಾಮ್‌ಲತಾ ವ್ಯಕ್ತಪಡಿಸುತ್ತಾರೆ. ಸರ್(ಪ್ರಭುದೇವಾ) ಬಹಳ ಒಳ್ಳೆಯವರು ಎನ್ನುತ್ತಾರೆ. ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತೀವಿ. ಮಕ್ಕಳು ಅಪ್ಪನನ್ನು ನೋಡಲು ಹೋಗುತ್ತಾರೆ, ಅವರು ಕೂಡ ಮಕ್ಕಳಿಗಾಗಿ ಮನೆಯವರೆಗೂ ಬರ್ತಾರೆ ಎಂದು ತಮಿಳು ಸಂದರ್ಶನದಲ್ಲಿ ರಾಮ್‌ಲತಾ ಹೇಳಿದ್ದಾರೆ.
ಕ್ಯಾಮರಾದಿಂದ ದೂರವೇ ಉಳಿದಿರುವ ಪ್ರಭುದೇವಾ ಮಾಜಿ ಪತ್ನಿ ರಾಮ್‌ಲತಾ ಇದೇ ಮೊದಲ ಬಾರಿಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮಾಜಿ ಪತಿ ಹಾಗೂ ಮಕ್ಕಳ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಮಗನನ್ನು ಕೂಡ ಕೊರಿಯಯೋಗ್ರಫರ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರಭುದೇವಾ ಡ್ಯಾನ್ಸ್ ಶೋವೊಂದರಲ್ಲಿ ಪುತ್ರ ರಿಷಿ ಹೆಜ್ಜೆ ಹಾಕಿದ್ದು ಬಹಳ ವೈರಲ್ ಆಗಿತ್ತು. ಮಗ ಅಪ್ಪನ ಜೊತೆ ಡ್ಯಾನ್ಸ್ ಮಾಡಿದ್ದು ಬಹಳ ಖುಷಿಯಾಗಿತು ಎಂದು ರಾಮ್‌ಲತಾ ಹೇಳಿದ್ದಾರೆ.

ಮಗ ಸಖತ್ತಾಗಿ ಡ್ಯಾನ್ಸ್ ಮಾಡಿದ್ದ. ಚಿಕ್ಕಂದಿನಿಂದ ಡ್ಯಾನ್ಸ್ ಅಂದರೆ ಮಗ ಇಷ್ಟ ಇಲ್ಲ ಎನ್ನುತ್ತಿದ್ದ, ಆದರೆ ಕಳೆದ 2 ವರ್ಷಗಳಿಂದ ಡ್ಯಾನ್ಸ್ ಬಗ್ಗೆ ಆಸಕ್ತಿ ಬಂದು ಕಲಿತಿದ್ದಾನೆ. ಎಷ್ಟೇ ಆದರೂ ಅಪ್ಪನ ರಕ್ತ ಅಲ್ಲವೇ? ಎಂದು ರಾಮ್‌ಲತಾ ಹೇಳಿದ್ದಾರೆ. ದೊಡ್ಡ ಮಗ ಜರ್ನಲಿಸಂ ಪದವಿ ಪಡೆದಿದ್ದಾನೆ. ಡ್ಯಾನ್ಸ್, ನಟನೆ ಬಗ್ಗೆ ಆಸಕ್ತಿ. ಈಗಾಗಲೇ ಕೆಲ ಅವಕಾಶಗಳು ಬರ್ತಿದೆ ಎಂದು ಹೇಳಿದ್ದಾರೆ.
ಸಿಂಗಲ್ ಪೇರೆಂಟಿಂಗ್ ಎನ್ನುವುದು ಗಾಡ್ ಗಿಫ್ಟ್. ದೂರಾದಬೇಕು ಎಂದು ನಿರ್ಧರಿಸಿದ ಬಳಿ ಅದನ್ನು ನಿಭಾಯಿಸಬೇಕು. ಪ್ರಭುದೇವಾ ಒಳ್ಳೆ ತಂದೆ. ಮಕ್ಕಳು ಅಂದರೆ ಅಪಾರ ಪ್ರೀತಿ. ಏನೇ ಇದ್ದರೂ ಮಕ್ಕಳು ಅಪ್ಪನ ಬಗ್ಗೆ ಮಾತನಾಡುತ್ತಾರೆ. ನಾವಿಬ್ಬರೂ ಚರ್ಚೆ ನಡೆಸಿ ಮಕ್ಕಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ನಮಗೆ ಮೂವರು ಗಂಡು ಮಕ್ಕಳು. ಅದರಲ್ಲಿ ದೊಡ್ಡ ಮಗ ಕೊನೆಯುಸಿರೆಳೆದ ಎಂದು ರಾಮ್‌ಲತಾ ಹೇಳಿದ್ದಾರೆ.
ಡಿವೋರ್ಸ್ ಬಳಿಕ ಆ ನೋವಿನಿಂದ ಹೊರಬಂದೆ ಎನ್ನುವುದಕ್ಕಿಂತ ಅದನ್ನು ಅರಗಿಸಿಕೊಂಡು ಒಪ್ಪಿಕೊಳ್ಳಲು ಆರಂಭಿಸಿದೆ. ಇದೇ ನಮ್ಮ ಜೀವನ, ಮುಂದೆ ನಮ್ಮ ಮಕ್ಕಳನ್ನು ನೋಡಿಕೊಳ್ಳಬೇಕು ಎಂದುಕೊಂಡೆ. ಹಾಗೆ ಮುಂದುವರೆಯಿತು. ಸರ್(ಪ್ರಭುದೇವಾ) ನನಗೆ ಬೆಂಬಲವಾಗಿದ್ದಾರೆ. ಡಿವೋರ್ಸ್ ಎನ್ನುವುದು ನಮ್ಮ ನಡುವೆ ಸಮಸ್ಯೆ ಆಗಲಿಲ್ಲ, ಈ ಕ್ಷಣಕ್ಕೂ ನನ್ನೊಟ್ಟಿಗೆ ಬೆಂಬಲವಾಗಿ ನಿಂತಿದ್ದಾರೆ. ಇವತ್ತಿಗೂ ಸ್ನೇಹಿತರ ರೀತಿ ಇದ್ದೀವಿ ಎಂದು ವಿವರಿಸಿದ್ದಾರೆ.
ನಮ್ಮ ಬಗ್ಗೆ ಏನಾದರೂ ತಪ್ಪಾಗಿ ಮಾತನಾಡಿದರೆ ನಮಗೆ ಕೋಪ ಬರುತ್ತದೆ. ಸರ್(ಪ್ರಭುದೇವಾ) ಎಂದಿಗೂ ಆ ರೀತಿ ಮಾತನಾಡಿದವರಲ್ಲ. ಏನೋ ವಿಷ ಗಳಿಗೆ ಆ ರೀತಿ ನಡೆಯಿತು. ಅಷ್ಟು ಬಿಟ್ಟರೆ ಬೇರೇನು ಇಲ್ಲ. ಒಬ್ಬೊರನ್ನೊಬ್ಬರು ಬಿಟ್ಟುಕೊಡಲ್ಲ. 'ಮಿನ್ಸಾರ ಕನಾವು' ಚಿತ್ರದ 'ವೆನ್ನಿಲವೇ ವೆನ್ನಿಲವೇ' ನನಗೆ ಪ್ರಭುದೇವಾ ಅವರ ಹಾಡುಗಳಲ್ಲಿ ಬಹಳ ಇಷ್ಟವಾದ ಹಾಡು ಎಂದು ರಾಮ್‌ಲತಾ ಹೇಳಿದ್ದಾರೆ.
ಪ್ರಭುದೇವಾ ಹೀರೊ ಆಗಿ ಮೊದಲು 'ಇಂದೂ' ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದ ಗೀತೆಗಳು ಬಹಳ ಇಷ್ಟ, ಅದೇ ಸಮಯದಲ್ಲಿ ನಮ್ಮಿಬ್ಬರ ಲವ್ ಶುರುವಾಗಿದ್ದು ಎಂದು ರಾಮ್‌ಲತಾ ನೆನಪಿಸಿಕೊಂಡಿದ್ದಾರೆ.


Click it and Unblock the Notifications