ದುಡ್ಡು ಕೊಟ್ಟು ನನ್ನ ಬಗ್ಗೆ ಟ್ರೋಲ್ ಮಾಡಿಸಿದ್ರು; ಕನ್ನಡ ನಟಿ ಪ್ರಿಯಾಂಕ ಮೋಹನ್ ಗಂಭೀರ ಆರೋಪ
ಮೂಡಬಿದ್ರೆ ಮೂಲದ ಕನ್ನಡ ನಟಿ ಪ್ರಿಯಾಂಕ ಮೋಹನ್ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಶಿವಣ್ಣ ಹಾಗೂ ಧನಂಜಯ್ ಜೊತೆ ನಟಿಸುತ್ತಿದ್ದಾರೆ. ಆಕೆ ನಟಿಸಿರುವ 'ಮೇಡ್ ಇನ್ ಕೊರಿಯಾ' ಸಿನಿಮಾ ಈ ವಾರ ನೇರವಾಗಿ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ.
ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಪ್ರಚಾರದಲ್ಲಿ ತೊಡಗಿದ್ದಾರೆ. ಸುಧೀರ್ ಶ್ರೀನಿವಾಸನ್ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಆಕೆ ಮಾತನಾಡಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಹೌದು, ನನ್ನನ್ನು ಕೆಲವರು ಟಾರ್ಗೆಟ್ ಮಾಡಿ ಟ್ರೋಲ್ ಮಾಡಿದ್ದರು. ನನ್ನ ಮೇಲೆ ಮಾತ್ರವಲ್ಲ ದೊಡ್ಡ ದೊಡ್ಡ ನಟ, ನಟಿಯರು, ನಿರ್ದೇಶಕರ ಬಗ್ಗೆ ಕೂಡ ಟ್ರೋಲ್ ಮಾಡುತ್ತಾರೆ. ಇಂತಹ ಟ್ರೋಲ್‌ಗಳಿಂದ ನಾನು ಸಾಕಷ್ಟು ಕಲಿತೆ" ಎಂದು ಪ್ರಿಯಾಂಕಾ ಹೇಳಿದ್ದಾರೆ. ಕೆಲವರು ವ್ಯವಸ್ಥಿತವಾಗಿ ನಿಮ್ಮನ್ನು ಟ್ರೋಲ್ ಮಾಡಿದ್ರಲ್ಲ, ಎನ್ನುವ ನಿರೂಪಕನ ಪ್ರಶ್ನೆಗೆ ಹೌದು, ಆ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದಿದ್ದರು.

ನಿಜಕ್ಕೂ ಟ್ರೋಲ್ ನೋವು ಕೊಡುತ್ತದೆ ಎಂದು ಪ್ರಿಯಾಂಕ ತಿಳಿಸಿದ್ದಾರೆ. "ಇದು ಅನಿಶ್ಚಿತತೆ ಕೂಡಿರುವ ಕ್ಷೇತ್ರ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ ಎನ್ನುವುದು ಗೊತ್ತಾಯಿತು. ಎಂತಹವರಿಗೂ ಟ್ರೋಲ್ ನೋವು ಕೊಡುತ್ತೆ. ಅದನ್ನು ಮೀರಿ ಹೊರ ಬಂದರೆ ಮತ್ತಷ್ಟು ಗಟ್ಟಿ ಆಗುತ್ತೇವೆ. ಹೀಗೆ ನನಗೆ ಪಾಠ ಕಲಿಸಿದ್ದಕ್ಕೆ ಧನ್ಯವಾದ ಎಂದು ಹೇಳುತ್ತೇನೆ. ಇದನ್ನು ನನ್ನ ವೈಯಕ್ತಿಕ ಹಾಗೂ ಸಿನಿಮಾ ಜೀವನಕ್ಕೆ ಧನಾತ್ಮಕವಾಗಿ ಬಳಸಿಕೊಳ್ಳುತ್ತೇನೆ" ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಪ್ರಿಯಾಂಕ ಮೋಹನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ತಮಿಳು ನ ದಳಪತಿ ವಿಜಯ್ ಮ್ಯಾನೇಜರ್ ಜಗದೀಶ್ 'ದಿ ರೂಟ್' ಎಂಬ ಪಿಆರ್ ಎಜೆನ್ಸಿ & ಸೆಲೆಬ್ರೆಟಿ ಮ್ಯಾನೇಜ್‌ಮೆಂಟ್ ಕಂಪನಿಯಿದೆ. ಸಾಕಷ್ಟು ನಟ, ನಟಿಯರು ಈ ಕಂಪನಿಗೆ ಕೈಜೋಡಿಸಿದ್ದಾರೆ. ಪ್ರಿಯಾಂಕ ಮೋಹನ್ ಕೂಡ ಈ ಕಂಪನಿ ಜೊತೆ ಟೈಅಪ್ ಆಗಿದ್ದರು. ಆದರೆ ಬಳಿಕ ಕಾರಣಾಂತರಗಳಿಂದ ಹೊರ ಬಂದಿದ್ದರು. ಇದೇ ಕಾರಣಕ್ಕೆ ಆಕೆಯನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡಲಾಗಿತ್ತು ಎನ್ನುವ ಊಹಾಪೋಹ ಕೇಳಿಬಂದಿತ್ತು.
ಇದೇ ವಿಚಾರದ ಬಗ್ಗೆ ಕಳೆದ ವರ್ಷ 'OG' ಸಿನಿಮಾ ಪ್ರಚಾರದ ವೇಳೆ ಕೂಡ ಪ್ರಿಯಾಂಕ ಮಾತನಾಡಿದ್ದರು. "ನನ್ನನ್ನು ಟ್ರೋಲ್ ಮಾಡುವವರು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ನೆಗೆಟಿವ್ ಪ್ರಚಾರ ಮಾಡುವವರು ಹಣ ಪಡೆದು ಮಾಡುತ್ತಾರೆ. ನನ್ನನ್ನು ಇಷ್ಟಪಡದ ಅಥವಾ ನನ್ನನ್ನು ದ್ವೇಷಿಸುವವರು ನನ್ನ ಬಗ್ಗೆ ನೆಗೆಟಿವ್ ಮೀಮ್‌ಗಳನ್ನು ಪೋಸ್ಟ್ ಮಾಡಲು ಅವರಿಗೆ ಹಣ ನೀಡುತ್ತಾರೆ" ಎಂದು ಆರೋಪಿಸಿದ್ದರು.
2019ರಲ್ಲಿ 'ಒಂದು ಕಥೆ ಹೇಳ್ಲಾ' ಕನ್ನಡ ಸಿನಿಮಾ ಮೂಲಕ ಪ್ರಿಯಾಂಕ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ತೆಲುಗಿನ 'ಗ್ಯಾಂಗ್ ಲೀಡರ್' ಚಿತ್ರದಲ್ಲಿ ನಾನಿ ಜೊತೆ ನಟಿಸಿದ್ದರು. ಅಲ್ಲಿಂದ ಮುಂದೆ ತಿರುಗಿ ನೋಡಲೇ ಇಲ್ಲ. ತಮಿಳಿನ 'ಡಾಕ್ಟರ್', 'ಡಾನ್', 'ಟಿಕ್‌ಟಾಕ್', 'ಕ್ಯಾಪ್ಟನ್ ಮಿಲ್ಲರ್' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕಳೆದ ವರ್ಷ ತೆಲುಗಿನ 'OG' ಚಿತ್ರದಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ಮಿಂಚಿದ್ದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕ ಮೋಹನ್ ಭಾಗಿ ಆಗಿದ್ದರು. ಶಿವಣ್ಣನ ಜೊತೆ ನಟಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ನಾನು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ್ದಿದ್ದು ಎನ್ನುವ ಹೆಮ್ಮೆಯಿದೆ ಎಂದಿದ್ದರು.


Click it and Unblock the Notifications











