ನಟ ವಿಜಯ್ ಸಂಭಾವನೆ ಘೋಷಿಸಿದ ನಿರ್ಮಾಪಕಿ; ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ
ಸ್ಟಾರ್ ನಟ-ನಟಿಯರು ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಕೆಲ ನಟರವನೆ 100 ಕೋಟಿ ರೂ. ದಾಟಿದೆ. ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್, ಶಾರುಖ್ ಖಾನ್, ದಳಪತಿ ವಿಜಯ್, ಯಶ್ ರೀತಿಯ ಸೂಪರ್ ಸ್ಟಾರ್‌ಗಳ ನಡೆಯುತ್ತಿರುತ್ತದೆ.
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಸಹಜವಾಗಿಯೇ ಸ್ಟಾರ್ಸ್ ಹೆಚ್ಚು ಹೆಚ್ಚು ಹಣ ಡಿಮ್ಯಾಂಡ್ ಮಾಡುತ್ತಿದ್ದಾರೆ. ಆದರೆ ನಟ-ನಟಿಯರ ಸಂಭಾವನೆ ವಿಚಾರ ಬರೀ ಅಂತೆ ಕಂತೆ ಗಾಳಿಸುದ್ದಿ ಆಗಿಯೇ ಇರುತ್ತದೆ. ಯಾರೂ ಕೂಡ ಅಧಿಕೃತವಾಗಿ ಈ ಬಗ್ಗೆ ಮಾತನಾಡಲ್ಲ. ಅದಕ್ಕೆ ಐಟಿ ಸಮಸ್ಯೆ ಕೂಡ ಕಾರಣ ಎನ್ನಬಹುದು. ಆಗೊಮ್ಮೆ ಈಗೊಮ್ಮೆ ಈ ಕುರಿತು ಖಚಿತ ಮಾಹಿತಿ ಸಿಗುತ್ತದೆ.

ತಮಿಳು ನಟ ದಳಪತಿ ವಿಜಯ್ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ರಜನಿಕಾಂತ್ ಬಿಟ್ಟರೆ ತಮಿಳುನಾಡಿನಲ್ಲಿ ಭಾರೀ ಕ್ರೇಜ್ ಇರುವ ನಟ. ಇತ್ತೀಚಿನ ವರ್ಷಗಳಲ್ಲಿ ದಳಪತಿ ನಟನೆಯ ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿದೆ. ಕೆಲವೊಮ್ಮೆ ಸಿನಿಮಾ ಸೋತರೂ ಭಾರೀ ನಷ್ಟ ಏನು ಆಗುತ್ತಿಲ್ಲ. ಹಾಗಾಗಿ ವಿಜಯ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎನ್ನುವ ಚರ್ಚೆ ನಡೆಯುತ್ತಿರುತ್ತದೆ.
ಸದ್ಯ ವಿಜಯ್ ನಟನೆಯ 'ಗೋಟ್'(GOAT) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರವೇ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ತಂದೆ ಮಗನಾಗಿ ಜಬರ್ದಸ್ತ್ ಮನರಂಜನೆ ಕೊಡಲಿದ್ದಾರೆ. ವಿಜಯ್ ಈಗಾಗಲೇ ಹೊಸ ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಧುಮುಕಲು ಸಿದ್ಧತೆ ನಡೆಸಿದ್ದಾರೆ. ಹಾಗಾಗಿ 'ಗೋಟ್' ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸೋ ಬಗ್ಗೆ ಅನುಮಾನವಿದೆ.

ಸಾಮಾನ್ಯವಾಗಿ ಸ್ಟಾರ್ ನಟರ ಕೊನೆಯ ಸಿನಿಮಾಗಳು ಅಂದ್ರೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿರುತ್ತದೆ. ತಮಿಳುನಾಡು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ವಿಜಯ್ ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎನ್ನುವ ಗುಸುಗುಸು ಶುರುವಾಗಿದೆ. ಹಾಗಾಗಿ ವಿಜಯ್‌ಗೆ ಭಾರೀ ಡಿಮ್ಯಾಂಡ್ ಇದೆ. 'ವಾರಿಸು' ಹಾಗೂ 'ಲಿಯೋ' ಸಿನಿಮಾಗಳು ಅಷ್ಟಾಗಿ ಸದ್ದು ಮಾಡದಿದ್ದರೂ 'ಗೋಟ್' ಚಿತ್ರದಲ್ಲಿ ವಿಜಯ್ ಭರ್ಜರಿ ಸಂಭಾವನೆ ಪಡೆದಿದ್ದಾರೆ.
ವಿಜಯ್ 'ಗೋಟ್' ಚಿತ್ರಕ್ಕೆ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿತ್ತು. 150 ಕೋಟಿ ರೂ. ಅಲ್ಲ 200 ಕೋಟಿ ರೂ. ಎನ್ನುವ ಮಾತುಗಳು ಕೇಳಿಬಂದಿತ್ತು. ಇದೀಗ ಈ ವಿಚಾರವನ್ನು ಚಿತ್ರದ ನಿರ್ಮಾಪಕಿ ಅರ್ಚನಾ ಕಲಪತಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿರುವ ಆಕೆ ಅಷ್ಟು ಸಂಭಾವನೆ ಯಾಕೆ ಕೊಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಿಂದೆ ವಿಜಯ್ ನಟಿಸಿದ 'ಬಿಗಿಲ್' ಚಿತ್ರವನ್ನು ನಿರ್ಮಿಸಿದ ಸಂಸ್ಥೆಯೇ 'ಗೋಟ್' ಚಿತ್ರಕ್ಕ ಹಣ ಹೂಡಿದೆ. 'ಬಿಗಿಲ್' ಚಿತ್ರದ ಬಜೆಟ್‌ಗಿಂತ ಹೆಚ್ಚು ಹಣವನ್ನು ಇದೀಗ ವಿಜಯ್‌ಗೆ ಕೊಟ್ಟಿದ್ದೀರಾ? 200 ಕೋಟಿ ರೂ. ಸಂಭಾವನೆ ಅಂತೆ ನಿಜವೇ ಎನ್ನುವ ಪ್ರಶ್ನೆಗೆ ಅರ್ಚನಾ ಉತ್ತರಿಸಿದ್ದಾರೆ. ಈಗ ಮಾರ್ಕೆಟ್ ದೊಡ್ಡದಾಗಿದೆ. 'ಬಿಗಿಲ್' ಸಮಯದಲ್ಲಿ ವಿಜಯ್ ಮಾರ್ಕೆಟ್‌ಗೂ ಈಗಿನ ಮಾರ್ಕೆಟ್‌ಗೂ ಭಾರೀ ಬೆಳವಣಿಗೆ ಆಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕ, ಕೇರಳ, ಉತ್ತರ ಭಾರತ, ಓವರ್‌ಸೀಸ್ ಹಾಗೂ ತಮಿಳುನಾಡಿನಲ್ಲಿ ವಿಜಯ್ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ಅದಕ್ಕೆ ಅವರೊಟ್ಟಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೀವಿ.
ಮಾರ್ಕೆಟ್ ಬೆಳೆದ ಕಾರಣ ವಿಜಯ್ ಸಂಭಾವನೆಯಾಗಿ 200 ಕೋಟಿ ಬಿಟ್ಟು ಇನ್ನು 200 ಕೋಟಿ ರೂ. ಹಣ ಹಾಕಿ ಸಿನಿಮಾ ಮಾಡಲಾಗ್ತಿದೆ. ಅಷ್ಟು ಹಣ ಹಾಕಿದರೂ ನಾನು ಲಾಭದಲ್ಲಿ ಇದ್ದೀವಿ. ನಿರೀಕ್ಷೆಗೆ ತಕ್ಕಂತೆ ಎಲ್ಲರೂ ಕೆಲಸ ಮಾಡಿದ್ದಾರೆ. ಹಾಗಾಗಿ ಒಳ್ಳೆ ಔಟ್‌ಫುಟ್ ಬರುತ್ತದೆ. ವಿಜಯ್ ರೀತಿಯ ಪರಿಶ್ರಮ ಪಡುವವರು ಇದ್ದರೆ ಧೈರ್ಯವಾಗಿ ಸಿನಿಮಾ ಮಾಡಬಹುದು ಎಂದು ಅರ್ಚನಾ ಹೇಳಿದ್ದಾರೆ.
ಇಲ್ಲಿಯವರೆಗೆ ಪ್ರಭಾಸ್ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಎನ್ನಲಾಗಿತ್ತು. ವಿಜಯ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಾವುದೇ ಹಿಟ್ ಸಿನಿಮಾ ಕೊಟ್ಟಿಲ್ಲ. ಅವರ ಸಿನಿಮಾಗಳು ಬರೀ ತಮಿಳು ಭಾಷೆಯಲ್ಲೇ ಹೆಚ್ಚು ಸದ್ದು ಮಾಡ್ತಿವೆ. ಹಾಗಿರುವಾಗ 200 ಕೋಟಿ ರೂ. ಸಂಭಾವನೆ ಕೊಟ್ಟಿದ್ದಾರಾ? ಎಂದು ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.


Click it and Unblock the Notifications











