'ಕಂಗುವ' ಸೋಲಿಗೆ ಆ ನಟರ ಫ್ಯಾನ್ಸ್, ರಾಜಕೀಯ ಪಕ್ಷಗಳು ಕಾರಣ; ನಿರ್ಮಾಪಕ ಬೇಸರ
ತಮಿಳಿನಲ್ಲಿ ಸೂರ್ಯ ನಟಿಸಿದ 'ಕಂಗುವ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಆದರೆ ಚಿತ್ರಕ್ಕೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಶುರುವಾಗಿ ಸಿನಿಮಾ ಮೇಲೇಳಲೇ ಇಲ್ಲ. ಇದೀದ ಚಿತ್ರದ ನಿರ್ಮಾಪಕರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಾಲಿವುಡ್ 'ಬಾಹುಬಲಿ' ಎಂದೇ 'ಕಂಗುವ' ಚಿತ್ರವನ್ನು ಬಿಂಬಿಸಲಾಗಿತ್ತು. ಭಾರೀ ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿತ್ತು. ಪ್ರಸ್ತುತ ಕಥೆಯ ಜೊತೆಗೆ 1000 ವರ್ಷಗಳ ಹಿಂದಿನ ಒಂದು ಕಾಲ್ಪನಿಕ ಪ್ರಪಂಚವನ್ನು ತೆರೆಮೇಲೆ ತರಲಾಗಿತ್ತು. ಎರಡೂ ಲಿಂಕ್ ಮಾಡಿ ಪುನರ್ನನ್ಮದ ಕಥೆ ರೀತಿಯ ಒಂದು ವಿಭಿನ್ನ ಸಿನಿಮಾ ಕಟ್ಟಿಕೊಡಲಾಗಿತ್ತು.

ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ 'ಕಂಗುವ' ಸಿನಿಮಾ ಮೂಡಿ ಬಂದಿತ್ತು. ಶಿವ ನಿರ್ದೇಶನದ ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಸೂರ್ಯ ಅಬ್ಬರಿಸಿದ್ದರು. ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದರೆ ಬಾಬಿ ಡಿಯೋಲ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಹೀನಾಯವಾಗಿ ಸೋತಿದ್ದು ಭಾರೀ ನಷ್ಟ ತಂದೊಡ್ಡಿದೆ. ಸದ್ಯ ಈ ಬಗ್ಗೆ ನಿರ್ಮಾಪಕರಲ್ಲಿ ಒಬ್ಬರಾದ ಧನಂಜಯನ್ ಮಾತನಾಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ವಿಶ್ಲೇಷಿಸಿದ್ದಾರೆ.
'ಕಂಗುವ' ಎಲ್ಲರೂ ಬಿಂಬಿಸಿದಷ್ಟು ಕೆಟ್ಟ ಸಿನಿಮಾ ಏನಲ್ಲ, ಸಾಕಷ್ಟು ಜನ ಚಿತ್ರವನ್ನು ಇಷ್ಟಪಟ್ಟರು. ಕೆಲವರು ತಂಡದ ಶ್ರಮದ ಬಗ್ಗೆ ಇವತ್ತಿಗೂ ಮಾತನಾಡುತ್ತಾರೆ. ಚಿತ್ರದ ಸೌಂಡ್ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಇಂತಾದೊಂದು ಕಥೆಗೆ ನಿಜಕ್ಕೂ ಅಷ್ಟು ಲೌಡ್ ಸೌಂಡ್ ಬೇಕಿತ್ತು. ಬೇರೆ ಸಿನಿಮಾಗಳಲ್ಲಿ ಕೂಡ ಇದ್ದನ್ನೆಲ್ಲಾ ನೋಡಿದ್ದೇವೆ. ಆದರೆ ಯಾಕೆ ಕಂಗುವ ವಿಚಾರದಲ್ಲಿ ಈ ರೀತಿ ಹೇಳ್ತಿದ್ದಾರೆ ಅರ್ಥವಾಗ್ತಿಲ್ಲ ಎಂದಿದ್ದಾರೆ.

ನಮ್ಮ 'ಕಂಗುವ' ಚಿತ್ರವನ್ನು ತಮಿಳಿನ ಇಬ್ಬರೂ ಸ್ಟಾರ್ ನಟರ ಅಭಿಮಾನಿಗಳು ಟಾರ್ಗೆಟ್ ಮಾಡಿದ್ದರು. ಅವರು ಬೇಕಂತಲೇ ಚಿತ್ರವನ್ನು ತುಳಿದರು. ತಮ್ಮ ನೆಚ್ಚಿನ ನಟರನ್ನು ಮೀರಿಸಿ ಸೂರ್ಯ ಮೇಲೇರಿಬಿಡುತ್ತಾರೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದರು. ಈಗ ಆ ಇಬ್ಬರು ನಟರ ಅಭಿಮಾನಿಗಳಿಗೆ ಎರಡು ಪಕ್ಷಗಳ ಬೆಂಬಲವಿದೆ. ಆ ನಟರು ಬೇರೆ ಬೇರೆ ಪಕ್ಷಗಳಲ್ಲಿ ಗುರ್ತಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಆ ಪೊಲಿಟಿಕಲ್ ಪಾರ್ಟಿಗಳು ಸೇರಿದ್ದರಿಂದ ನಮ್ಮ ಚಿತ್ರಕ್ಕೆ ನೆಗೆಟಿವ್ ಟಾಕ್ ಬರುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಿವ್ಯೂ ಮಾಡಿ. ಯಾರು ಬೇಕಾದರೂ ಸಿನಿಮಾ ಬಗ್ಗೆ ಮಾತನಾಡಿ ಬೇಸರವಿಲ್ಲ, ಒಂದು ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಎನ್ನಲು ಎಲ್ಲರೂ ಅವಕಾಶ ಇದೆ. ಆದರೆ ಸಿನಿಮಾ ನೋಡಿ ಹೊರಬಂದು ನಿರ್ದೇಶಕ ಹೊಡಿತ್ತೀನಿ, ಬಡಿತೀನಿ ಎನ್ನುವುದು ಸರಿಯಲ್ಲ. ಇದು ಯಾವ ರೀತಿಯ ರಿವ್ಯೂ? ಎಂದು ಪ್ರಶ್ನಿಸಿದ್ದಾರೆ. ಯಾರು ನಿಮ್ಮನ್ನು ಸಿನಿಮಾ ನೋಡುವಂತೆ ಬಲವಂತ ಮಾಡಲಿಲ್ಲ. ಸಿನಿಮಾ ನೋಡಿ ಅದರ ಬಗ್ಗೆ ಮಾತನಾಡಿ. ವೈಯಕ್ತಿಕ ದ್ವೇಷ ಯಾಕೆ? ಎಂದು ಧನಂಜಯನ್ ಪ್ರಶ್ನಿಸಿದ್ದಾರೆ.
ಇವತ್ತಿನ ಸಮುದಾಯ ಬಹಳ ನೆಗೆಟಿವ್ ಆಗುತ್ತಿದೆ. ನೆಗೆಟಿವ್ ಹರಡುವುದರಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಡಿವೋರ್ಸ್ ಘೋಷಿಸಿದರೆ ಆ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಾಕುತ್ತಾರೆ. ಕೆಲ ಯೂಟ್ಯೂಬ್ ಚಾನಲ್‌ಗಳು ಪದೇ ಪದೇ ದೂಷಿಸಿ, ಕೆಣಕಿ ಮಾತನಾಡಿದರು. ಕೆಲ ಯೂಟ್ಯೂಬ್ ಚಾನಲ್‌ಗಳು ಲೈಕ್ಸ್, ಕಾಮೆಂಟ್ಸ್, ವೀವ್ಸ್‌ಗಾಗಿ ನೆಗೆಟಿವ್ ಹರಡುತ್ತಿದ್ದಾರೆ. ವೈಯಕ್ತಿಕ ದ್ವೇಷ ಬೇಡ ಎಂದು ಅವರು ಆಗ್ರಹಿಸಿದ್ದಾರೆ.
ನೆಗೆಟಿವ್ ಆಗಿ ಮಾತನಾಡಿದರೆ ಯೂಟ್ಯೂಬ್ ವೀವ್ಸ್, ಸಬ್‌ಸ್ಕ್ರೈಬರ್ ಜಾಸ್ತಿ ಆಗುತ್ತಾರೆ ಎನ್ನುವ ಲೆಕ್ಕಾಚಾರ ಇದೆ. 'ಇಂಡಿಯನ್-2' ಚಿತ್ರದ ವಿಚಾರದಲ್ಲಿ ಇದನ್ನು ದೊಡ್ಡಮಟ್ಟಕ್ಕೆ ನೋಡಿದ್ದೆವು. 'ವೆಟ್ಟೆಯಾನ್' ಚಿತ್ರಕ್ಕೂ ಹೀಗೆ ಆಯಿತು. ಆದರೆ ಅಷ್ಟಾಗಿ ತೊಂದರೆ ಆಗಲಿಲ್ಲ. ಆದರೆ 'ಕಂಗುವ' ಚಿತ್ರದ ವಿಚಾರದಲ್ಲಿ ಅದೇ ನಡೆಯಿತು. ಚಿತ್ರಕ್ಕೆ ಹಿನ್ನಡೆಯಾಯಿತು. ಸಿನಿಮಾ ಸೋಲಿನಿಂದ ಸೂರ್ಯ ಸೇರಿದಂತೆ ಎಲ್ಲರೂ ನೊಂದಿದ್ದಾರೆ ಎಂದು ಧನಂಜಯನ್ ವಿವರಿಸಿದ್ದಾರೆ.
ಪ್ರೇಕ್ಷಕರಿಗೆ 200 ರೂ. ಬಹಳ ಮುಖ್ಯ, ಅಮೂಲ್ಯ ಅನ್ನಿಸಿದರೆ ಮೊದಲ ದಿನ ಸಿನಿಮಾ ನೋಡಲು ಹೋಗುವುದು ಬೇಡ. ಒಂದು ವಾರ ಕಾಯಿರಿ. ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ತಿಳಿದ ಮೇಲೆ ಹೋಗಿ ನೋಡಿ. ಮೊದಲ ದಿನವೇ ಸಿನಿಮಾ ನೋಡಿ 200 ರೂ. ನಷ್ಟವಾಯಿತು ಎಂದು ದೂಷಿಸಬೇಡಿ ಎಂದು ಅವರು ಹೇಳಿದ್ದಾರೆ.
ತಮಿಳು ನಟರಾದ ಅಜಿತ್ ಹಾಗೂ ವಿಜಯ್ ಅಭಿಮಾನಿಗಳು 'ಕಂಗುವ' ಚಿತ್ರದ ಬಗ್ಗೆ ನೆಗೆಟಿf ಹರಡಿದರು ಎಂದು ಪರೋಕ್ಷವಾಗಿ ಧನಂಜಯನ್ ಹೇಳಿದ್ದಾರೆ ಎನ್ನುವ ಚರ್ಚೆ ನಡೀತಿದೆ. ವಿಜಯ್ ಈಗಾಗಲೇ 'ತಮಿಳಗ ವೆಟ್ರಿ ಕಳಗಂ' ಪಕ್ಷ ಸ್ಥಾಪಿಸಿದ್ದಾರೆ. ಅಜಿತ್ ಡಿಎಂಕೆ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications