ಹಿಟ್ ಸಿನಿಮಾ ಸೀಕ್ವೆಲ್ ಕಥೆ ಹೇಳಿದ ನಿರ್ದೇಶಕ; ಕೂಡಲೇ ಸಿಕ್ತು ಬೆಲೆಬಾಳುವ ಉಡುಗೊರೆ
ಸೂಪರ್ ಹಿಟ್ ಸಿನಿಮಾಗಳ ಸೀಕ್ವೆಲ್ ಮಾಡಬೇಕು ಎನ್ನುವ ಬೇಡಿಕೆ ಸಹಜ ಎನ್ನುವಂತಾಗಿದೆ. ಕೆಲವೊಮ್ಮೆ ಕಥೆ ಮುಗಿದು ಹೋಗಿದ್ದರೂ ಕೂಡ ಎಳೆದಾಡುವ ಪ್ರಯತ್ನ ನಡೆಯುತ್ತದೆ. ಸೀಕ್ವೆಲ್ ಮಾಡಿ ಗೆಲ್ಲವುದು ಅಷ್ಟು ಸುಲಭವಲ್ಲ. ಇದೀಗ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಕಥೆ ಕೇಳಿದ ನಿರ್ದೇಶಕನಿಗೆ ನಿರ್ಮಾಪಕರು ಭರ್ಜರಿ ಉಡುಗೊರೆ ಕೊಟ್ಟ ಪ್ರಸಂಗ ನಡೆದಿದೆ.
ಒಂದು ಕಥೆ ಮಾಡಿ ನಿರ್ಮಾಪಕ, ನಟ, ನಟಿಯರನ್ನು ಒಪ್ಪಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಪಾರ್ಟ್-2ಗೆ ಕಥೆ ಬರೆಯುವುದು ನಿಜಕ್ಕೂ ಸವಾಲಿನ ಕೆಲಸ. ಕಾರಣ ಅದಾಗಲೇ ಪ್ರೇಕ್ಷಕರು ಚಿತ್ರವನ್ನು ಹಿಟ್ ಮಾಡಿರುತ್ತಾರೆ. ಮುಂದುವರೆದ ಕಥೆ ಅಂದರೆ ನಿರೀಕ್ಷೆ ಹೆಚ್ಚಾಗುತ್ತದೆ. ಅದನ್ನು ತಲುಪುವಮಟ್ಟಕ್ಕೆ ಕಥೆ ಸಿದ್ಧವಾಗಬೇಕು. ತಮಿಳಿನ '96' ಸಿನಿಮಾ ಗೆದ್ದಿದ್ದು ಗೊತ್ತೇಯಿದೆ. ಆ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

7 ವರ್ಷಗಳ ಹಿಂದೆ ಪ್ರೇಮ್ ಕುಮಾರ್ ನಿರ್ದೇಶನದ '96' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಓಟಿಟಿಗೂ ಬಂದು ಸದ್ದು ಮಾಡಿತ್ತು. ಬಳಿಕ ಕನ್ನಡ, ತೆಲುಗಿಗೂ ರೀಮೆಕ್ ಆಗಿತ್ತು. ಆದರೆ ಅಷ್ಟಾಗಿ ಸದ್ದು ಮಾಡಲಿಲ್ಲ. ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ತ್ರಿಷಾ ನಟನೆ ಇಷ್ಟಪಟ್ಟವರಿಗೆ ಬೇರೆಯವರ ನಟನೆ ಅಷ್ಟಾಗಿ ರುಚಿಸಲಿಲ್ಲ. ಇದೀಗ '96' ಸಿನಿಮಾ ಕತೆಯನ್ನು ಮುಂದುವರೆಸಲು ನಿರ್ದೇಶಕರು ಮುಂದಾಗಿದ್ದಾರೆ.
ಕೆ. ಗಣೇಶ್ ಎಂಬ ನಿರ್ಮಾಪಕರು '96' ನಿರ್ಮಾಣಕ್ಕೆ ಮನಸ್ಸು ಮಾಡಿದ್ದಾರೆ. ನಿರ್ದೇಶಕ ಪ್ರೇಮ್‌ಕುಮಾರ್ ಕಳೆದ ವರ್ಷ 'ಮೇಯಳಗನ್' ಸಿನಿಮಾ ಮಾಡಿ ಗೆದ್ದಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಗೆಲ್ಲದಿದ್ದರೂ ಓಟಿಟಿಗೆ ಬಂದು ಸೂಪರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ '96' ಸೀಕ್ವೆಲ್‌ಗೆ ಕಥೆ ಬರೆಯುತ್ತಿರುವುದಾಗಿ ಹೇಳಿದ್ದರು. ಇತ್ತೀಚೆಗೆ ನಿರ್ಮಾಪಕ ಕೆ. ಗಣೇಶ್ ಅವರಿಗೆ ಪೂರ್ತಿ ಕಥೆ ಹೇಳಿದ್ದಾರೆ.

ಪ್ರೇಮ್ ಕುಮಾರ್ ಹೇಳಿದ ಕಥೆ ಕೇಳಿ ನಿರ್ಮಾಪಕ ಇಶಾರಿ ಕೆ ಗಣೇಶ್ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಮರುದಿನವೇ ನಿರ್ದೇಶಕರಿಗೆ 5 ಸವರನ್ ಚಿನ್ನ ಹಾಗೂ ದುಬಾರಿ ಕೈಗಡಿಯಾರ ಗಿಫ್ಟ್ ಆಗಿ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಕಥೆ ಕೇಳಿ ನಿರ್ಮಾಪಕರೇ ಅಷ್ಟು ಖುಷಿಯಾಗಿದ್ದಾರೆ ಅಂದರೆ ಸಿನಿಮಾ ಚೆನ್ನಾಗಿ ಮೂಡಿ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
10ನೇ ತರಗತಿ ಓದುವಾಗ ರಾಮ್(ವಿಜಯ್ ಸೇತುಪತಿ) ಹಾಗೂ ಜಾನು(ತ್ರಿಷಾ) ಒಟ್ಟಿಗೆ ಓದುತ್ತಿರುತ್ತಾರೆ. ಜಾನು ಮೇಲೆ ರಾಮ್‌ಗೆ ಅನುರಾಗ ಮೂಡುತ್ತದೆ. ಆದರೆ ಅದನ್ನು ಹೇಳಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಶಾಲೆ ಮುಗಿದ ಬಳಿಕ ಬಹಳ ವರ್ಷಗಳ ಬಳಿಕ ಆ ತರಗತಿಯ ವಿದ್ಯಾರ್ಥಿಗಳಾಗಿದ್ದವರು ಗೆಟ್ ಟು ಗೆದರ್ ಮಾಡುತ್ತಾರೆ. ಅಲ್ಲಿ ಮತ್ತೆ ರಾಮ್- ಜಾನು ಭೇಟಿ ಆಗುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ.
'96' ಚಿತ್ರವನ್ನು ಕನ್ನಡದಲ್ಲಿ ಪ್ರೀತಂ ಗುಬ್ಬಿ ರೀಮೆಕ್ ಮಾಡಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಮೆನನ್ ನಾಯಕ- ನಾಯಕಿಯಾಗಿ ನಟಿಸಿದ್ದರು. '99' ಎಂಬ ಟೈಟಲ್ ಫಿಕ್ಸ್ ಆಗಿತ್ತು. ತೆಲುಗಿನಲ್ಲಿ 'ಜಾನು' ಎಂಬ ಹೆಸರಿನಲ್ಲಿ ಬಂದಿದ್ದ ಚಿತ್ರದಲ್ಲಿ ಸಮಂತಾ ಹಾಗೂ ಶರ್ವಾನಂದ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಕೋಟಿ ರಾಮು ಸಿನಿಮಾ ನಿರ್ಮಾಣ ಮಾಡಿದ್ದರು. ಸೀಕ್ವೆಲ್ ತಮಿಳಿನಲ್ಲಿ ಗೆದ್ದರೆ ಕನ್ನಡದಲ್ಲಿ ರೀಮೆಕ್ ಮಾಡ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











