ಕಾಲಿವುಡ್ ಸ್ಟಾರ್ ಸಿಂಬುನ ಈ ಕ್ಷಣವೇ 'ಬ್ಯಾನ್' ಮಾಡಿ ಎಂದು ದೂರು ದಾಖಲಿಸಿದ ನಿರ್ಮಾಪಕ..!
ಸಿಂಬು ಮತ್ತು ವಿವಾದಕ್ಕೆ ಇರುವ ಸಂಬಂಧ ತುಂಬಾ ಹಳೆಯದ್ದು. ಸಿನಿಮಾದಾಚೆ ಕಾಲ..ಕಾಲಕ್ಕೆ.. ವಿವಾದಗಳಿಂದ ಮತ್ತು ಪ್ರೇಮ ಪ್ರಕರಣದಿಂದ ಸದ್ದು ಮಾಡಿದವರು ಇವರು. ಇಂಥ ಸಿಂಬು ಇದೀಗ ಮತ್ತೊಂದು ವಿವಾದದಲ್ಲಿದ್ದಾರೆ.
ಹೌದು, ಸಿಲಂಬರಸನ್ ಅಲಿಯಾಸ್ ಸಿಂಬು ವಿರುದ್ಧ ಕಾಲಿವುಡ್‌ನ ನಿರ್ಮಾಪಕರು ಆರೋಪವನ್ನ ಮಾಡಿದ್ದಾರೆ. ಸಿಂಬು ನಡತೆಯಿಂದ ಬೇಸತ್ತು ನಿರ್ಮಾಪಕ ಇಶಾರಿ ಕೆ ಗಣೇಶ್ ನಿರ್ಮಾಪಕರ ಮಂಡಳಿಯ ಮೆಟ್ಟಿಲನ್ನೇರಿದ್ದಾರೆ

ಅಸಲಿಗೆ.. ಸಿಂಬು ಬೋಗನ್.. ದೇವಿ ಮತ್ತು ದೇವಿ 2 ಚಿತ್ರಗಳ ನಿರ್ಮಾಪಕ ಇಶಾರಿ ಕೆ ಗಣೇಶ್ ಅವರ ಜೊತೆ ಸಿನಿಮಾ ಮಾಡಬೇಕಿತ್ತು. ಆ ಚಿತ್ರಕ್ಕೆ ಕರೋನಾ ಕುಮಾರ್ ಎಂಬ ಶೀರ್ಷಿಕೆಯನ್ನ ಇಡಲಾಗಿತ್ತು ಕೂಡ. ಇನ್ನೂ ನಿರ್ದೇಶನದ ಜವಾಬ್ಧಾರಿಯನ್ನ ಗೋಕುಲ್ ಎನ್ ಕೃಷ್ಣ ಅವರಿಗೆ ವಹಿಸಲಾಗಿತ್ತು. ಅತ್ಯುತ್ಸಾಹದಲ್ಲಿ ಸಿಂಬು ನಿರ್ಮಾಪಕರಿಂದ ಮುಂಗಡ ಹಣವನ್ನು ಕೂಡ ಪಡೆದಾಗಿತ್ತು.
ಆದರೆ ಆ ನಂತರ ಏನಾಯ್ತೋ ಗೊತ್ತಿಲ್ಲ. ಏಕಾಏಕಿ ಸಿಂಬು ರಾಗ ಬದಲಿಸಿದರು. ಸಿನಿಮಾದಿಂದ ಹಿಂದೆ ಸರಿದರು. ಆದರೆ ಚಿತ್ರದಿಂದ ಹಿಂದೆ ಸರಿದರೂ ಕೂಡ ನಿರ್ಮಾಪಕರಿಂದ ಪಡೆದ ಹಣ ಮರಳಿ ನೀಡಲು ಸಿಂಬುಗೆ ಅದ್ಯಾಕೋ ಮನಸ್ಸು ಆಗ್ತಿಲ್ಲ.

ಈ ಕಾರಣಕ್ಕೆ... ಸಿಂಬು ಹಿಂದೆ ಅಲೆದು ಬೇಸತ್ತ ನಿರ್ಮಾಪಕ ಇಶಾರಿ ಗಣೇಶ್ ಸದ್ಯಕ್ಕೆ ನ್ಯಾಯ ಕೊಡಿಸಿ ಎಂದು ತಮ್ಮ ನಿರ್ಮಾಪಕ ಮಿತ್ರರಲ್ಲಿ ಮನವಿಯನ್ನ ಮಾಡಿಕೊಂಡಿದ್ದಾರೆ. ಪ್ರೊಡ್ಯೂಸರ್ ಅಸೋಸಿಯೇಷನ್ ನಲ್ಲಿ ದೂರು ದಾಖಲಿಸಿ, ನನ್ನ ದುಡ್ಡು ನನ್ನ ಕೈಗೆ ಮರಳಿ ಸೇರುವವರೆಗೆ ಬೇರೆ ಚಿತ್ರದಲ್ಲಿ ಅಭಿನಯಿಸಲು ಸಿಂಬು ಅನುಮತಿಯನ್ನ ನೀಡಬಾರದೆಂದು ಆಗ್ರಹಿಸಿದ್ದಾರೆ. ಒಂದರ್ಥದಲ್ಲಿ ನನ್ನ ಕಾಸು ಕೊಡುವವರೆಗೆ ಸಿಂಬು ಅವರನ್ನ ಚಿತ್ರರಂಗದಿಂದ ಬ್ಯಾನ್ ಮಾಡಿ ಎಂದಿದ್ದಾರೆ ನಿರ್ಮಾಪಕ ಇಶಾರಿ ಗಣೇಶ್.
ಅಂದ್ಹಾಗೇ ನಿರ್ಮಾಪಕ ಇಶಾರಿ ಗಣೇಶ್, ಸಿಂಬು ಅವರಿಗೆ ಹೊಸ ಪರಿಚಯ ಏನಲ್ಲ. 2022ರಲ್ಲಿ ವೆಂದು ತನಿಂಡಾತು ಕಾದು ಎಂಬ ಚಿತ್ರವನ್ನ ಇಶಾರಿ ಗಣೇಶ್ ಇದೇ ಸಿಂಬು ಜೊತೆ ಮಾಡಿದ್ದರು. ಇಷ್ಟೇ ಅಲ್ಲ ಗೌತಮ್ ವಾಸುದೇವ್ ಮೆನನ್ ನಿರ್ದೇಶನದಲ್ಲಿ ಬಂದಿದ್ದ ಈ ಚಿತ್ರ ಗೆದ್ದ ಖುಷಿಯಲ್ಲಿ ಒಂದು ಕೋಟಿಕ್ಕಿಂತ ಹೆಚ್ಚು ಬೆಲೆ ಬಾಳುವ ಟೊಯೋಟಾ ವೆಲ್ಫೇರ್ ಕಾರನ್ನು ಕೂಡ ಸಿಂಬುಗೆ ಸಿಂಬುಗೆ ಇಶಾರಿ ಗಣೇಶ್ ಉಡುಗೊರೆಯನ್ನಾಗಿ ನೀಡಿದ್ದರು. ಇಂತಹ ನಿರ್ಮಾಪಕರಿಗೆ ಸಿಂಬು ಸದ್ಯಕ್ಕೆ ಕೈ ಕೊಟ್ಟು ಸುದ್ದಿಯಾಗಿದ್ದಾರೆ.

ಸುತ್ತ-ಮುತ್ತ ಎದ್ದ ಈ ವಿವಾದದ ಬಗ್ಗೆ ಸಿಂಬು ಇನ್ನೂ ಮಾತನಾಡಿಲ್ಲ. ಬದಲಿಗೆ ಮಣಿರತ್ನಂ ಅವರ ಕನಸಿನ ಕೂಸಾದ, ಕಮಲ್ ಹಾಸನ್ ಅಭಿನಯಿಸುತ್ತಿರುವ ಥಗ್ ಲೈಫ್ ಚಿತ್ರದ ಚಿತ್ರೀಕರಣದಲ್ಲಿ ಸಿಂಬು ಇದ್ದಾರೆ, ಇನ್ನೂ ಈ ಚಿತ್ರದ ನಂತರ ಪೈಪ್ ಲೈನ್ ನಲ್ಲಿ ಮತ್ತೊಂದು ಚಿತ್ರವೂ ಇದೆ.
ಈ ಎರಡು ಚಿತ್ರಗಳನ್ನ ಮುಗಿಸಿ ಆ ನಂತರ ಇಶಾರಿ ಕೆ ಗಣೇಶ್ ಅವರಿಗೆ ಸಿಂಬು ಹಣ ಮರುಪಾವತಿ ಮಾಡ್ತಾರಾ ಅಥವಾ ಕೊಟ್ಟಿರುವ ಮಾತಿನಂತೆ ಕರೋನಾ ಕುಮಾರ್ ಚಿತ್ರವನ್ನ ಮಾಡ್ತಾರಾ ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ, ನಿರ್ಮಾಪಕ ಇಶಾರಿ ಕೆ ಗಣೇಶ್ ಮಾತ್ರ ಕೂಡಲೇ ನನಗೆ ನ್ಯಾಯ ಸಿಗಬೇಕು, ತೆಗೆದುಕೊಂಡ ಹಣವನ್ನ ಸಿಂಬು ಈ ಕ್ಷಣವೇ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ
ಒಟ್ನಲ್ಲಿ ಸದ್ಯಕ್ಕೆ ಸಿಂಬು ಮತ್ತೊಂದು ವಿವಾದದಲ್ಲಿದ್ದಾರೆ. ಇಶಾರಿ ಗಣೇಶ್ ಮಾಡಿರುವ ಆರೋಪಕ್ಕೆ ಸಿಂಬು ಉತ್ತರ ಕೊಡ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











