ಇನ್ನೇರಡೇ ವಾರ, ಶುರುವಾಗಲಿದೆ ಜನನಾಯಗನ್ ಅಬ್ಬರ ; ಪಟ್ಟಾಭಿಷೇಕದ ಬೆನ್ನಲ್ಲೇ ಬಿಡುಗಡೆಗೆ ಮುಹೂರ್ತ ಫಿಕ್ಸ್
ರಾಜಕೀಯದಲ್ಲಿ ದಳಪತಿಯ ಯುಗ ಆರಂಭ ಆಗಿದೆ. ತಮಿಳುನಾಡಿನ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಂಚಲನ ಸೃಷ್ಟಿಯಾಗಿದೆ. ಸದ್ಯ ವಿಜಯ್ ಎದುರು ಹತ್ತಾರು ಸವಾಲುಗಳಿವೆ. ಈ ಸವಾಲುಗಳನ್ನು ವಿಜಯ್ ಹೇಗೆ ಎದುರಿಸುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ, ಬೆಳ್ಳಿಪರದೆಯ ಮೇಲೆ ವಿಜಯ್ ಅವರ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳಬೇಕೆಂಬ ಅಭಿಮಾನಿಗಳ ಮತ್ತೊಂದು ಆಸೆ ಕೂಡ ಬಹುಬೇಗನೇ ಈಡೇರಲಿದೆ. ಇಂತಹದ್ದೊಂದು ಭರವಸೆಯನ್ನು ''ಜನನಾಯಗನ್'' ಚಿತ್ರದ ನಿರ್ಮಾಪಕ ಕೆ ವೆಂಕಟ್ ಪ್ರಭು ನೀಡಿದ್ದಾರೆ.
ಹೌದು, ಅಸಲಿಗೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ ವರ್ಷದ ಆರಂಭದಲ್ಲಿ ಅಂದರೆ ಜನವರಿ 9ರಂದು ಬೆಳ್ಳಿತೆರೆಯ ಮೇಲೆ ಜನನಾಯಗನ ಧಗಧಗಿಸಬೇಕಿತ್ತು. ಆದರೆ.. ''ಜನನಾಯಗನ್'' ಡಬ್ಬಾದಿಂದ ಹೊರ ಬರದಂತೆ ವ್ಯವಸ್ಥೆಯೊಂದು ವ್ಯವಸ್ಥಿತವಾಗಿ ನೋಡಿಕೊಂಡಿತು. ಈ ಮೂಲಕ ವಿಜಯ್ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿತು.

ರಾಜಕೀಯ ಸಂಭಾಷಣೆಗಳು ಮತ್ತು ಸನ್ನಿವೇಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸೆನ್ಸಾರ್ ಮಂಡಳಿ, ಚಿತ್ರತಂಡದವರು ಎಷ್ಟೇ ತಿಪ್ಪರಲಾಗ ಹಾಕಿದರೂ ಪಟ್ಟು ಸಡಿಲಿಸಲಿಲ್ಲ. ನ್ಯಾಯಾಲಯದ ಮೊರೆ ಹೋದರು ಕೂಡ ''ಜನನಾಯಗನ್'' ಸಮಸ್ಯೆ ಬಗೆಹರಿಯಲಿಲ್ಲ.
ಕೊನೆಗೆ ಬಿಡುಗಡೆಯ ಭಾಗ್ಯ ಕಾಣದೇ ಒದ್ದಾಡುತ್ತಿದ್ದ ''ಜನನಾಯಗನ್''ನ ಮೊಬೈಲ್ ನಲ್ಲಿಯೇ ಕಣ್ತುಂಬಿಕೊಳ್ಳುವ ಸೌಭಾಗ್ಯವನ್ನು ಅಭಿಮಾನಿಗಳಿಗೆ ಕಲ್ಪಿಸಲಾಯ್ತು. ಚಿತ್ರವನ್ನು ಆನ್ ಲೈನ್‌ನಲ್ಲಿ ಸೋರಿಕೆ ಮಾಡಲಾಯ್ತು.
ಈಗ ವಿಜಯ್ ಗದ್ದುಗೆ ಏರಿಯಾಗಿದೆ. ಕಾಯುವಿಕೆಗೆ ಅಂತ್ಯ ಹಾಡುವ ಸಮಯ ಬಂದಿದೆ. ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಚಿತ್ರದ ನಿರ್ಮಾಪಕ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಮಾಲೀಕ ವೆಂಕಟ್ ಕೆ. ನಾರಾಯಣ ಚಿತ್ರದ ಬಿಡುಗಡೆಯ ಕುರಿತು ಮಾತನಾಡಿದ್ದಾರೆ.
ಹೌದು, ವಿಜಯ್ ಪದಗ್ರಹಣದ ನಂತರ ಮಾಧ್ಯಮದವರ ಜೊತೆ ಮಾತನಾಡಿರುವ ಕೆ.ವೆಂಕಟ್ ನಾರಾಯಣ್, ಸೆನ್ಸಾರ್ ಮಂಡಳಿ ಜೊತೆ ಮಾತುಕತೆ ಮುಂದುವರೆದಿದೆ. ಕೊನೆಯ ಹಂತದ ಪ್ರಕ್ರಿಯೆಯಲ್ಲಿದೆ. ಮುಂದಿನ 14 ದಿನಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದಿದ್ದಾರೆ.

ಈ ಹಿಂದೆ ಎದುರಿಸಿದ ಸವಾಲು ಮತ್ತು ಎದುರಾದ ಅಡೆ ತಡೆಗಳನ್ನು ದುರದೃಷ್ಟಕರ ಎಂದು ಹೇಳಿರುವ ಕೆ.ವೆಂಕಟ್ ನಾರಾಯಣ್ ಸದ್ಯ ನಮ್ಮ ಗಮನವೆಲ್ಲವೂ ಬಿಡುಗಡೆಯತ್ತ ಇದೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ವಿಜಯ್ ಅವರನ್ನು ಕೊಂಡಾಡಿರುವ ''ಜನನಾಯಗನ್'' ನಿರ್ಮಾಪಕರು, ನಾನು ವಿಜಯ್ ಅವರನ್ನು ಹತ್ತಿರದಿಂದ ಬಲ್ಲೆ ಅವರದ್ದು ಶಿಸ್ತುಬದ್ದ ಜೀವನ ಮತ್ತು ಸಮರ್ಪಣಾ ಮನೋಭಾವ ಹೊಂದಿರುವ ವ್ಯಕ್ತಿತ್ವ ಎಂದಿದ್ದಾರೆ.
ತಮಿಳುನಾಡಿನಲ್ಲಿ ವಿಜಯ್ ಅವರ ನಾಯಕತ್ವದಲ್ಲಿ ಹೊಸ ರಾಜಕೀಯ ಶಕೆ ಆರಂಭವಾಗುತ್ತಿರುವ ಸಂದರ್ಭದಲ್ಲಿ ''ಜನನಾಯಗನ್'' ಎಂಬ ಶೀರ್ಷಿಕೆ ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಹೇಳಿರುವ ಕೆ.ವೆಂಕಟ್ ನಾರಾಯಣ್ ಜನರೊಂದಿಗೆ ಸಂಪರ್ಕ ಹೊಂದಿದ ನಾಯಕ ಎಂದು ಬಣ್ಣಿಸಿದ್ದಾರೆ. ಅಭಿವೃದ್ದಿ ಪತದತ್ತ ತಮಿಳುನಾಡು ಇನ್ಮುಂದೆ ಸಾಗಲಿದೆ ಎಂಬ ಭರವಸೆ ನನಗಿದೆ ಎಂದು ಹೇಳಿದ್ಧಾರೆ. ಬೆಳ್ಳಿತೆರೆಯ ನಾಯಕ ಮಾತ್ರ ಅಲ್ಲ ನಿಜವಾದ ಜನನಾಯಕ ಎಂದು ಕೊಂಡಾಡಿದ್ದಾರೆ.
ಅಂದ್ಹಾಗೇ ಹೆಚ್. ವಿನೋದ್ ನಿರ್ದೇಶನದ ''ಜನನಾಯಗನ್'' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೈನ್ ಸೇರಿದಂತೆ ದೊಡ್ಡ ದಂಡು ಚಿತ್ರದಲ್ಲಿದೆ. ಅನಿರುದ್ದ್ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಒಟ್ನಲ್ಲಿ ಸದ್ಯ ''ಜನನಾಯಗನ್'' ಚಿತ್ರವನ್ನು ಇನ್ನೇರಡು ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಎಲ್ಲ ಅಡೆ ತಡೆಗಳನ್ನು ದಾಟಿಕೊಂಡು ಚಿತ್ರಮಂದಿರಕ್ಕೆ ಬರುವ ಈ ''ಜನನಾಯಗನ್'' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವುದು ಖಚಿತ ಎನ್ನುವ ಮಾತು ಈಗಾಗಲೇ ಕೇಳಿ ಬರುತ್ತಿದೆ. ತಮ್ಮ ನೆಚ್ಚಿನ ಸಿಎಂನ ಬೆಳ್ಳಿತೆರೆಯ ಮೇಲೆ ಕಣ್ತುಂಬಿಕೊಳ್ಳಲು ತಮಿಳುನಾಡು ಕಾತುರದಿಂದ ಕಾಯುತ್ತಿದೆ.


Click it and Unblock the Notifications