ಹೇಳಿದ್ದೊಂದು ಮಾಡಿದ್ದೊಂದು ; ಸಲ್ಮಾನ್ ಖಾನ್ ಸರಿ ಇಲ್ಲ ಎಂದ ಮುರುಗದಾಸ್‌ಗೆ ಎದುರಾಯ್ತು ಸಂಕಷ್ಟ
'ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಎ.ಆರ್. ಮುರುಗದಾಸ್.
ಹೌದು. ಎಆರ್ ಮುರುಗದಾಸ್.. ಒಂದ್ಕಾಲದ ಸ್ಟಾರ್ ಡೈರೆಕ್ಟರ್. "ದೀನಾ".. "ರಮಣ".. " ಗಜಿನಿ".. "ಸ್ಟಾಲಿನ್".. " ತುಪಾಕಿ".. ಹೀಗೆ ಒಂದಾದ ಮೇಲೊಂದರಂತೆ ತಮ್ಮ ಬತ್ತಳಿಕೆಯಿಂದ ಬ್ಲಾಕ್ ಬಸ್ಟರ್ ಬಾಣ ಬಿಟ್ಟಿದ್ದ ಮುರಗದಾಸ್ ತಮ್ಮ ಈ ಚಿತ್ರಗಳ ಮೂಲಕ ಭಾರತದ ಗಮನ ಸೆಳೆದರು. ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದರು. ಆದರೆ ಆಗಲೇ ಹೇಳಿದಂತೆ ಪ್ರತಿಭೆಯ ಜೊತೆ ಸೇರಿ ಇದೆಲ್ಲವೂ ಅದೃಷ್ಟದಾಟ ತಂದಂತ ಸೊಗಸಾಗಿತ್ತಷ್ಟೇ.

ಈಗ ಬದಲಾದ ಕಾಲದಲ್ಲಿ ಮುರಗದಾಸ್ ಹೆಸರಿಗೆ ಚಾರ್ಮು ಇಲ್ಲ. ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ವರ್ಷ ಸಲ್ಮಾನ್ ಖಾನ್ ಅಂತಹ ಸ್ಟಾರ್ ಇದ್ದರೂ ಕೂಡ "ಸಿಕಂದರ್ " ಎಂಬ ಪರಮತೋಪು ಚಿತ್ರ ನೀಡಿದ ಹೆಗ್ಗಳಿಕೆ ಇವರದ್ದು.
ಆದರೆ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವದ ಮುರಗದಾಸ್ ಚಿತ್ರದ ಸೋಲಿಗೆ ಸಲ್ಮಾನ್ ಖಾನ್ ನೇರ ಹೊಣೆ ಎಂದು ಹೇಳಿ ಕೈ ತೊಳೆದುಕೊಂಡರು. ಸಲ್ಮಾನ್ ಖಾನ್ ಗೆ ಎಚ್ಚರವಾಗುತ್ತಿದ್ದಿದ್ದೇ ರಾತ್ರಿ ನಾನು ಅಸಹಾಯಕನಾಗಿದ್ದೆ ಎಂದೆಲ್ಲಾ ಹೇಳಿದ್ದರು. ಸಲ್ಮಾನ್ ಖಾನ್ ಗೆ ಶಿಸ್ತಿಲ್ಲ, ಬದ್ದತೆಯಿಲ್ಲ ಎಂದೆಲ್ಲಾ ಆರೋಪ ಮಾಡಿದ್ದರು.
ವಿಚಿತ್ರ ಅಂದರೆ ಸಲ್ಮಾನ್ ಖಾನ್ ವಿರುದ್ದ ಆರೋಪ ಮಾಡಿದ್ದ ಮುರಗದಾಸ್ ವಿರುದ್ದವೇ ಈಗ ಆರೋಪ ಕೇಳಿ ಬಂದಿದೆ. ಹೀಗೆ ಆರೋಪ ಮಾಡಿದವರು ಬೇರೆ ಯಾರು ಅಲ್ಲ ಬದಲಿಗೆ ಮುರಗದಾಸ್ ನ ನಂಬಿ ಹಣ ಹೂಡಿದ ನಿರ್ಮಾಪಕರೇ ಎನ್ನುವುದೇ ಈ ಕ್ಷಣದ ವಿಶೇಷ.
ಹೌದು ಕಳೆದ ವರ್ಷ "ಸಿಕಂದರ್" ಅಲ್ಲದೇ ಮುರುಗದಾಸ್ ನಿರ್ದೇಶನದ ಮತ್ತೊಂದು ಚಿತ್ರ ತೆರೆಗೆ ಬಂದಿತ್ತು. ಆ ಚಿತ್ರದ ಹೆಸರು "ಮದರಾಸಿ". ನವಯುಗದ ಸ್ಟಾರ್ ಶಿವಕಾರ್ತಿಕೆಯನ್ ಅಭಿನಯದ ಸಿನಿಮಾ ಇದು.

ಅಪಾರ ನಿರೀಕ್ಷೆ ಮತ್ತು ಭರವಸೆ ಮೂಡಿಸಿದ್ದ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ಮಕಾಡೆ ಮಲಗಿತ್ತು. ಸದ್ಯ ಇದೇ ಚಿತ್ರದ ನಿರ್ಮಾಪಕರು ಮುರುಗದಾಸ್ ವಿರುದ್ದ ತಿರುಗೊ ಬಿದ್ದಿದ್ದಾರೆ. ಮುರುಗದಾಸ್ ಹೇಳಿದ್ದೊಂದು ಮಾಡಿದ್ದೊಂದು ಎಂದು ಹೇಳಿರುವ ನಿರ್ಮಾಪಕರು ನಷ್ಟ ಭರಿಸಿ ಕೊಡಬೇಕೆಂದು ಮನವಿಯನ್ನೂ ಮಾಡಿದ್ದಾರೆ. ದೂರನ್ನೂ ಸಲ್ಲಿಸಿದ್ದಾರೆ.
ಈ ಕುರಿತು ದೂರು ನಿರ್ಮಾಪಕ ಮತ್ತು ನಿರ್ದೇಶಕರ ಸಂಘದಲ್ಲಿ ದೂರು ದಾಖಲಿಸಿರುವ ''ಮದರಾಸಿ'' ನಿರ್ಮಾಪಕ ಎನ್.ವಿ. ಪ್ರಸಾದ್ ಮೊದಲು ಸಿನಿಮಾಕ್ಕೆ 115 ಕೋಟಿ ಬಜೆಟ್ ನಿಗದಿ ಪಡಿಸಿದ್ದಾಗಿ ಹೇಳಿದ್ದಾರೆ. ಆ ನಂತರ ಮುರುಗದಾಸ್ ಅವರ ಬೇಜವಾಬ್ದಾರಿತನ ಮತ್ತು ಸೂಕ್ತ ಪ್ಲಾನಿಂಗ್ ಇಲ್ಲದ ಕಾರಣದಿಂದಾಗಿ ಸಿನಿಮಾದ ಬಜೆಟ್ 170 ಕೋಟಿ ರೂಪಾಯಿಗಳಾಯ್ತು ಎಂದು ಆರೋಪ ಮಾಡಿದ್ದಾರೆ.
ಮುರುಗದಾಸ್ ಸರಿಯಾಗಿ ಪ್ಲಾನಿಂಗ್ ಮಾಡಲಿಲ್ಲ ಎಂದು ಹೇಳಿರುವ ನಿರ್ಮಾಪಕರು ಒಂದೇ ಸಮಯದಲ್ಲಿ ''ಸಿಕಂದರ್'' ಮತ್ತು ''ಮದರಾಸಿ'' ಎರಡು ಚಿತ್ರಗಳಲ್ಲಿ ಅವರು ತೊಡಗಿಕೊಂಡಿದ್ದರಿಂದ ಬಜೆಟ್ ಹೆಚ್ಚಾಯ್ತು. ಆಗಿರುವ ನಷ್ಟದಲ್ಲಿ 10 ಕೋಟಿ ಹಣವನ್ನು ಮುರುಗದಾಸ್ ಮರಳಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಈ ವಿವಾದ ತಾರಕಕ್ಕೇರಿದ ನಂತರ ಮುರುಗದಾಸ್ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದ್ದು, 10 ಕೋಟಿಯ ಬದಲು ''ರಮಣ 2'' ಚಿತ್ರದ ಕಥೆಯನ್ನು ಮುರುಗದಾಸ್ ಬರೆದುಕೊಡಲು ಒಪ್ಪಿದ್ದಾರೆ ಎಂದು ತೆಲುಗು ಮತ್ತು ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











