ಸುಳ್ಳು ಹೇಳಿ ಪುಟ್ಟಣ್ಣ ಬಳಿ ಕೆಲಸಕ್ಕೆ ಸೇರಿದ್ದ ಭಾರತಿರಾಜಾ; ಕೊನೆಗೆ ಗುರುಗಳಿಂದಲೇ ಭೇಷ್ ಎನಿಸಿಕೊಂಡಿದ್ದೇಗೆ?
ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಭಾರತಿರಾಜಾ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು(ಜೂನ್ 10) ಚೆನ್ನೈನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಟನಾಗುವ ಕನಸು ಬಂದು ಚಿತ್ರರಂಗಕ್ಕೆ ಬಂದಿದ್ದ ಭಾರತಿರಾಜಾ ಕೊನೆಗೆ ಚಿತ್ರ ನಿರ್ದೇಶಕರಾಗಿದ್ದರು. ಪುಟ್ಟಣ್ಣ ಗರಡಿಯಲ್ಲಿ ಸಿನಿಮಾ ಮೇಕಿಂಗ್ ಪಟ್ಟುಗಳನ್ನು ಕಲಿತಿದ್ದರು.
ಕಾವ್ಯಾತ್ಮಕವಾಗಿ ಕಥೆ ಹೇಳುವ ಶೈಲಿಯಿಂದ ಭಾರತಿರಾಜಾ ಪ್ರೇಕ್ಷಕರ ಮನ ಗೆದ್ದಿದ್ದರು. ಅದಕ್ಕೆ ಕಾರಣ ಪುಟ್ಟಣ್ಣ ಕಣಗಾಲ್ ಪ್ರಭಾವ ಎಂದರೆ ತಪ್ಪಾಗಲ್ಲ. ಚಿತ್ರಬ್ರಹ್ಮನಿಂದಲೇ ಭಾರತಿರಾಜಾ ಚಿತ್ರ ಬದುಕಿಗೆ ದೊಡ್ಡ ತಿರುವು ಸಿಕ್ಕಿತ್ತು. ಈ ವಿಚಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಸ್ವತಃ ಅವರು ಹೇಳಿಕೊಂಡಿದ್ದರು. ಅಂದು ಎವಿಎಂ ಸ್ಟುಡಿಯೋದಿಂದ ಭಾರತಿರಾಜಾ ಅವರನ್ನು ಕತ್ತಿನಪಟ್ಟಿ ಹಿಡಿದು ಕಾವಲುಗಾರ ಹೊರಕ್ಕೆ ತಳ್ಳಿದ್ದ. ಕೊನೆಗೆ ಅದೇ ಸ್ಟುಡಿಯೋದಲ್ಲಿ ಭಾರತಿರಾಜಾ ಸಿನಿಮಾ ನಿರ್ದೇಶಕನಾಗಿ ಬೆಳೆದರು. ಕೊನೆಗೆ ಬಣ್ಣ ಹಚ್ಚಿ ನಟಿಸಿ ತಮ್ಮ ಕನಸು ಈಡೇರಿಸಿಕೊಂಡರು.

ತೇಣಿ ಜಿಲ್ಲೆಯ ತೇಣಿ ಅಲ್ಲಿನಗರಂದಲ್ಲಿ ಹುಟ್ಟಿ ಬೆಳೆದ ಚಿನ್ನಸಾಮಿ(ಭಾರತಿರಾಜಾ ಮೊದಲಿನ ಹೆಸರು) ನಟನಾಗುವ ಕನಸು ಕಂಡವರು. ತಾಯಿ ಬಳಿ 300 ರೂ. ಪಡೆದು ರಂಗಭೂಮಿ ಸೇರುವ ಆಸೆಯಿಂದ ಭಾರತಿರಾಜಾ ಮದ್ರಾಸ್ ದಾರಿ ಹಿಡಿದು ಬಂದಿದ್ದರು. ಖ್ಯಾತ ಸಂಗೀತ ನಿರ್ದೇಶಕ ಜಿ. ಕೆ ವೆಂಕಟೇಶ್ ಸಹಾಯದಿಂದ ಪುಟ್ಟಣ್ಣ ಬಳಿ ಸಹ ನಿರ್ದೇಶಕರಾಗಿ ಭಾರತಿರಾಜಾ ಅವಕಾಶ ಪಡೆದಿದ್ದರು. ಈ ಬಗ್ಗೆ Touring Talkies ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಹಿಂದೆ ಭಾರತಿರಾಜಾ ಮಾತನಾಡಿದ್ದರು.
ಸಹ ನಿರ್ದೇಶಕನಾಗಿ ಅವಕಾಶಗಳ ಹುಡುಕಾಟದಲ್ಲಿ ಇದ್ದಾಗಲೇ 'ಬೆಳ್ಳಿಮೋಡ' ಸಿನಿಮಾ ನೋಡಿ ಭಾರತಿರಾಜಾ ಬೆರಗಾಗಿದ್ದರು. ಯಾರಪ್ಪಾ ಈ ಸಿನಿಮಾ ನಿರ್ದೇಶಕ ಎಂದು ಕೇಳಿದಾಗ ಪುಟ್ಟಣ್ಣ ಕಣಗಾಲ್ ಎಂದು ಕೇಳಿ ಅವರ ಬಳಿ ಕೆಲಸಕ್ಕೆ ಸೇರುವ ಮನಸ್ಸು ಮಾಡಿದ್ದರು. ಈ ಬಗ್ಗೆ ಜಿಕೆ ವೆಂಕಟೇಶ್ ಬಳಿ ಕೇಳಿದಾಗ ಸರಿ ಪುಟ್ಟಣ್ಣ ಬಳಿ ಕರೆದುಕೊಂಡು ಹೋಗ್ತೀನಿ. ಕೇಳಿದ್ರೆ ಬಿಎ ಗ್ರ್ಯಾಜುಯೇಟ್ ಅಂತ ಹೇಳ್ಬೇಕು ಅಂದ್ರು. ಅಳುಕಿನಿಂದಲೇ ಒಪ್ಪಿಕೊಂಡೆ. "ಪುಟ್ಟಣ್ಣ ಬಳಿ ಕರ್ಕೊಂಡ್ ಹೋಗಿ ನಮ್ಮ ಹುಡುಗ, ಗ್ರ್ಯಾಜುಯೇಟ್, ಒಳ್ಳೆ ರೈಟರ್ ಅಂದ್ರು. ನಿಮ್ಮ ಹೆಸರು ಏನು ಎಂದು ಪುಟ್ಟಣ್ಣ ಕೇಳಿದ್ರು. ಭಾರತಿರಾಜಾ ಎಂದು ಹೇಳ್ದೆ. ಮರು ಮಾತನಾಡದೇ ಒಂದೊಳ್ಳೆ ದಿನ ಬಾ ಅಂದ್ರು" ಎಂದು ಆ ದಿನಗಳನ್ನು ಭಾರತಿರಾಜಾ ನೆನಪಿಸಿಕೊಂಡಿದ್ದರು.

ಒಂದು ಶುಕ್ರವಾರ ಒಂದು ದೊಡ್ಡ ಹೂವಿನ ಹಾರ, ಹಣ್ಣು ಹಿಡಿದು ಪುಟ್ಟಣ್ಣ ಭೇಟಿಗೆ ಹೋದೆ. ಹಾರ ಹಾಕಲು ಹೋದಾಗ ನನಗೆ ಬೇಡ ದೇವರ ಫೋಟೊಗೆ ಹಾಕು ಅಂದ್ರು. ಹಾಕ್ದೆ. ಆಗ ಪುಟ್ಟಣ್ಣ ಒಂದು ತಮಿಳು ಸಿನಿಮಾ ಮಾಡ್ತಿದ್ರು. ಬಳಿಕ ಕಾರ್ ಹತ್ತು ಅಂದ್ರು. ಅವತ್ತು ನನ್ನ ಜೀವನ ಬದಲಾಯಿತು. ಆ ದಿನವನ್ನು ನಾನು ಇವತ್ತಿಗೂ ಮರೆಯುವುದಿಲ್ಲ. ಫಿಯೆಟ್ ಕಾರ್‌ನಲ್ಲಿ ಪುಟ್ಟಣ್ಣ ನನ್ನನ್ನು ಜೆಮಿನಿ ಸ್ಟುಡಿಯೋ ಒಳಗೆ ಕರೆದುಕೊಂಡು ಹೋದ್ರು. ನಾನು ಕನಸಿನಲ್ಲಿ ಕಂಡಿದ್ದು ನಿಜವಾಗಿತ್ತು ಎಂದು ಭಾರತಿರಾಜಾ ನೆನಪಿಸಿಕೊಂಡಿದ್ದರು.
ಅವತ್ತು ಒಳಗೆ ಕರೆದುಕೊಂಡು ತಮ್ಮ ಸಹಾಯಕ ನಿರ್ದೇಶಕರ ಬಳಿ "ಇವ್ನು ನಮ್ಮ ಹುಡುಗ, ಜೊತೆಗಿರ್ತಾನೆ" ಎಂದು ಪುಟ್ಟಣ್ಣ ಹೇಳಿ ಹೋದ್ರು. ಅವರೆಲ್ಲಾ ನನ್ನನ್ನು ನೋಡಿ ಯಾರಪ್ಪಾ ನೀನು, ಪುಟ್ಟಣ್ಣನಿಗೆ ಸಂಬಂಧಿಕನಾ? ಎಂದು ಕೇಳಿದ್ರು. ಹ್ಞೂಂ ಎಂದುಬಿಟ್ಟೆ. ಇಲ್ಲ ಅಂದ್ರೆ ಅವ್ರು ಬೆಲೆ ಕೊಡುತ್ತಿರಲಿಲ್ಲ. ಒಳಗೆ ಹೋದೆ. ಕ್ಲಾಪ್ ಬೋರ್ಡ್, ಸ್ಕ್ರಿಪ್ಟ್ ಫೈಲ್ ಮುಟ್ಟಲು ಬಿಡ್ತಿರಲಿಲ್ಲ. ಒಮ್ಮೆ ಊಟಿಯಲ್ಲಿ ಔಟ್‌ಡೋರ್ ಶೂಟಿಂಗ್. ಸಹಾಯಕ ನಿರ್ದೇಶಕ ಬಂದು 200 ರೂ. ಕೊಟ್ಟರೆ ಕರ್ಕೊಂಡು ಹೋಗ್ತೀನಿ ಎಂದ. ನನ್ನ ಬಳಿಕ 2 ರೂ. ಮಾತ್ರ ಇತ್ತು. ಹಾಗಾಗಿ ನನ್ನ ಬಿಟ್ಟು ಹೋಗಿದ್ರು. ಅಲ್ಲಿಗೆ ಹೋದಮೇಲೆ ಭಾರತಿರಾಜಾ ಎಲ್ಲಿ ಎಂದು ಪುಟ್ಟಣ್ಣ ಕೇಳಿದ್ರಂತೆ. ಗೊತ್ತಿಲ್ಲ ಎಂದಿದ್ದಾರೆ. ಬಳಿಕ ಒಮ್ಮೆ ಅವ್ರು ವಾಪಸ್ ಬಂದಾಗ ಏನಪ್ಪಾ ನೀನು ದೊಡ್ಡ ಮನುಷ್ಯನಾ? ಶೂಟಿಂಗ್‌ಗೆ ಬರಲ್ವಾ ಅಂದ್ರು. ಸರ್ ನನ್ನ ಹತ್ರ 200 ರೂ. ಹಣ ಇರ್ಲಿಲ್ಲ. ಹಣ ಕೊಟ್ರೆ ಮಾತ್ರ ಕರ್ಕೊಂಡ್ ಹೋಗ್ತೀವಿ ಅಂದ್ರು ಎಂದುಬಿಟ್ಟೆ. ಒಳಗೆ ಹೋಗಿ ಸಹಾಯಕ ನಿರ್ದೇಶಕನ ಕೆನ್ನೆಗೆ ಬಾರಿಸಿದ್ರು ಪುಟ್ಟಣ್ಣ. ಅಂದಿನಿಂದ ಅವ್ರು ಹೆದರಿ ಫೈಲ್, ಕ್ಲಾಪ್‌ಬೋರ್ಡ್ ಮುಟ್ಟಲು ಬಿಟ್ರು ಎಂದು ಭಾರತಿರಾಜಾ ವಿವರಿಸಿದ್ದರು.
ಅವತ್ತು ನನ್ನ ಪಾಲಿಗೆ ಪುಟ್ಟಣ್ಣ ದೇವರಂತೆ ಬಂದರು. ಅಲ್ಲಿಂದ ಇಲ್ಲಿಯವರೆಗೆ ನನ್ನ ಜರ್ನಿ ಬಂದಿದೆ. ಬಳಿಕ ಮತ್ತೊಂದು ಚಿತ್ರದಲ್ಲಿ ಅವರೊಟ್ಟಿಗೆ ಕೆಲಸ ಮಾಡಿದೆ. ಅದ್ಭುತ ನಿರ್ದೇಶಕ, ಕಣ್ಣಿಗೆ ಕಟ್ಟಿದಂತೆ ಕಲಾವಿದರಿಗೆ ಹೇಳಿಕೊಡುತ್ತಿದ್ದರು. ನಾಯಕಿ ಹೇಗೆ ನಟಿಸಬೇಕು, ನಡೆಯಬೇಕು ಎನ್ನುವುದನ್ನು ಪುಟ್ಟಣ್ಣ ತಾವು ಮಾಡಿ ತೋರಿಸುತ್ತಿದ್ದರು. ಅದನ್ನು ನೋಡಿ ದಿಗ್ಬ್ರಾಂತಿಯಾಗಿ ನಿಲ್ಲುತ್ತಿದ್ದೆ. ಮುಂದೆ ನಾನು 'ದಾಹಂ' ಎಂಬ ಸಿನಿಮಾ ಮಾಡಿದ್ದೆ. ಪ್ರೀಮಿಯರ್ ಶೋ ನೋಡುತ್ತಿದ್ದಾಗ ಒಂದು ದೃಶ್ಯದಲ್ಲಿ ಇದ್ದಕ್ಕಿದ್ದಂತೆ ಯಾರೋ ಚಪ್ಪಾಳೆ ತಟ್ಟಿದ್ರು. ತಿರುಗಿ ನೋಡಿದ್ರೆ, ಪುಟ್ಟಣ್ಣ. ಏನಪ್ಪಾ ಇವತ್ತು ನನ್ನ ಮನೆಯವರು ಕೂಡ ನಿನ್ನ ಸಿನಿಮಾಗಳ ಅಭಿಮಾನಿಯಾಗಿಬಿಟ್ರು ಎಂದು ಕೊಂಡಾಡಿದ್ದರು. ಅದನ್ನು ಮರೆಯುವುದಿಲ್ಲ ಎಂದು ಭಾರತಿರಾಜ ಹೇಳಿದ್ದರು.


Click it and Unblock the Notifications