ಹಳೇ ಬಿಕಿನಿ ಫೋಟೊ ಶೇರ್ ಮಾಡಿದ ರಾಧಾ: ಸುದ್ದಿಯಾದ 'ಹಾಲುಜೇನು' ಸಿನಿಮಾ ನಟಿ ಮಾಧವಿ
ಬೆಳ್ಳಿತೆರೆಯಲ್ಲಿ ರಂಜಿಸಿದ ಆ ಕಾಲದ ನಟಿಯರಲ್ಲಿ ಹಲವರು ಈಗ ಚಿತ್ರರಂಗದಿಂದ ದೂರಾಗಿದ್ದಾರೆ. 80, 90ರ ದಶಕದಲ್ಲಿ ತಮ್ಮ ಅಂದ, ನಟನೆಯಿಂದ ಮೋಡಿ ಮಾಡಿದವರು ಈಗ ಸಿನಿಮಾ ಬಿಟ್ಟು ಪರ್ಸನಲ್ ಲೈಫ್ ಕಡೆ ಗಮನ ಹರಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಿಂದ ಅಂತಹ ನಟಿಯರ ಬಗ್ಗೆ ಮಾಹಿತಿ ಸಿಗುತ್ತಿರುತ್ತದೆ. ಖ್ಯಾತ ನಟಿ ರಾಧಾ ಹಳೇ ಫೋಟೊವೊಂದನ್ನು ಶೇರ್ ಮಾಡಿದ್ದಾರೆ.
ಬಹುಭಾಷಾ ನಟಿ ರಾಧಾ ಪೋಸ್ಟ್‌ನಿಂದ ಮತ್ತೊಬ್ಬ ನಟಿ ಮಾಧವಿ ಸುದ್ದಿ ಆಗಿದ್ದಾರೆ. 'ಹಾಲುಜೇನು', 'ಖೈದಿ', 'ಭಾಗ್ಯದ ಲಕ್ಷ್ಮಿ ಬಾರಮ್ಮ', 'ಅನುರಾಗ ಅರಳಿತು', 'ಜೀವನಚೈತ್ರ', 'ಆಕಸ್ಮಿಕ' ರೀತಿಯ ಎವರ್‌ಗ್ರೀನ್ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಮಾಧವಿ ದಶಕಗಳ ಹಿಂದೆಯೇ ಬಿಕಿನಿ ತೊಟ್ಟು ಮೈಚಳಿ ಬಿಟ್ಟು ನಟಿಸಿದ್ದರು. ಕನ್ನಡದಲ್ಲಿ ಡೀ ಗ್ಲಾಮರಸ್ ರೋಲ್‌ಗಳಲ್ಲೇ ಆಕೆ ಹೆಚ್ಚು ನಟಿಸಿದ್ದಾರೆ. ಆದರೆ ಈ ಆಂಧ್ರ ಅಮ್ಮಾಯಿ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ನಟಿ ರಾಧಾ ಹಳೇ ಫೋಟೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ತಮಿಳಿನ 'ಟಿಕ್ ಟಿಕ್ ಟಿಕ್' ಸಿನಿಮಾ ಶೂಟಿಂಗ್ ಸಮಯದಲ್ಲಿ ಕ್ಲಿಕ್ಕಿಸಿರುವ ಫೋಟೊ ಅದು. ಅದರಲ್ಲಿ ಕಮಲ್ ಹಾಸನ್ ಚೇರ್ ಮೇಲೆ ಕೂತಿದ್ದರೆ ಹಿಂದೆ ಸ್ವಪ್ನ, ರಾಧಾ, ಮಾಧವಿ ಸ್ವಿಮ್‌ಸೂಟ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಇವತ್ತು ನಟಿಯರು ಬಿಕಿನಿ ತೊಡುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ 80ರ ದಶಕದಲ್ಲಿ ಸ್ವಿಮ್ ಸೂಟ್ ಅಂದ್ರೆ ಎಲ್ಲರೂ ಹುಬ್ಬೇರಿಸುತ್ತಿದ್ದರು. ಆದರೆ ಕೆಲವರು ಮಾತ್ರ ಇದಕ್ಕೆ ಧೈರ್ಯ ಮಾಡುತ್ತಿದ್ದರು.
ನಟಿ ಮಾಧವಿ ಮೊದಲಿನಿಂದಲೂ ಸಿಕ್ಕಾಪಟ್ಟೆ ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಂದ ದೂರಾಗಿರುವ ಆಕೆ ಮದುವೆ ಆಗಿ ಅಮೆರಿಕಾದಲ್ಲಿ ಸೆಟ್ಲ್ ಆಗಿದ್ದಾರೆ. 1996ರಲ್ಲಿ ರಾಲ್ಫ್ ಶರ್ಮಾ ಎಂಬುವವರ ಕೈ ಹಿಡಿದಿದ್ದರು. ಆಕೆಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಸದ್ಯ ರಾಧಾ ಮಾಡಿದ ಪೋಸ್ಟ್‌ನಿಂದ ಮಾಧವಿ ಬಗ್ಗೆ ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ. ರಾಧ ತಮ್ಮ ಪೋಸ್ಟ್‌ನಲ್ಲಿ ಮಾಧವಿ ಇನ್‌ಸ್ಟಾ ಐಡಿ ಕೂಡ ಲಿಂಕ್ ಮಾಡಿದ್ದಾರೆ. ಹಾಗಾಗಿ ಅಭಿಮಾನಿಗಳು ಮಾಧವಿ ಇನ್‌ಸ್ಟಾ ಅಕೌಂಟ್ ಚೆಕ್ ಮಾಡುತ್ತಿದ್ದಾರೆ.

ಮಾಧವಿ ಹೊಸ ಫೋಟೊಗಳಲ್ಲಿ ಗುರುತು ಸಿಗದಷ್ಟು ಬದಲಾಗಿದ್ದಾರೆ. ಮದುವೆ ನಂತರ ಅಂದರೆ 1996ರಲ್ಲೇ ಮಾಧವಿ ಸಿನಿಮಾಗಳಲ್ಲಿ ನಟಿಸೋದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರು. ಕನ್ನಡದಲ್ಲಿ ಆಕೆ ಕೊನೆಯದಾಗಿ ಡಾ. ರಾಜ್‌ಕುಮಾರ್ ಜೊತೆ 'ಒಡಹುಟ್ಟಿದವರು' ಸಿನಿಮಾದಲ್ಲಿ ನಟಿಸಿದ್ದರು. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಮಾಧವಿ ಭರತನಾಟ್ಯ ಕಲಾವಿದೆ ಆಗಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದ್ದರು. ನಿರ್ದೇಶಕ ದಾಸರಿ ನಾರಾಯಣ ರಾವ್ 'ತೂರುಪು ಪಡಮರ' ಚಿತ್ರದಲ್ಲಿ ಮೊದಲು ಅವಕಾಶ ಕೊಟ್ಟಿದ್ದರು.


Click it and Unblock the Notifications











