ರಜನಿಕಾಂತ್ ಬೈಕ್ ಏರಿದ್ದ ರಾಧಿಕಾ; ಅನುಮಾನದಿಂದ ಬೆನ್ನು ಬಿದ್ದು ಚೇಸ್ ಮಾಡಿದ್ದ ಬಾಮೈದ
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟಿ ರಾಧಿಕಾ ಶರತ್‌ಕುಮಾರ್ ಒಂದ್ಕಾಲದಲ್ಲಿ ಸೂಪರ್ ಹಿಟ್ ಜೋಡಿ. 'ನಲ್ಲವನ್ನುಕ್ಕು ನಲ್ಲವನ್', 'ಪೋಕಿರಿ ರಾಜಾ', 'ರಂಗಾ', 'ಮೂಂಡ್ರು ಮುಗಂ', 'ಊರ್ಕಾವಲನ್' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಇಬ್ಬರೂ ನಟಿಸಿ ಗೆದ್ದಿದ್ದರು.
ರಜನಿಕಾಂತ್ ಏಳುಬೀಳು ಎಲ್ಲವನ್ನು ರಾಧಿಕಾ ಹತ್ತಿರದಿಂದ ಬಲ್ಲವರು. ಇಬ್ಬರೂ ಬಹಳ ಆತ್ಮೀಯ ಸ್ನೇಹಿತರು. ಒಟ್ಟಿಗೆ ಚಿತ್ರರಂಗದಲ್ಲಿ ಬೆಳೆದು ಬಂದವರು. ಇವತ್ತಿಗೂ ರಾಧಿಕಾ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 'ತಾಯ್ಕೆಳವಿ' ಎಂಬ ಚಿತ್ರದ ಲೀಡ್ ರೋಲ್‌ನಲ್ಲಿ ರಾಧಿಕಾ ನಟಿಸಿ ಗಮನ ಸೆಳೆದಿದ್ದಾರೆ. ಗಲ್ಲಾಟ ಪ್ಲಸ್ ಯೂಟ್ಯೂಬ್ ಚಾನಲ್ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಯ ಜೀವನದ ಬಗ್ಗೆ ರಾಧಿಕಾ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

"ರಜನಿಕಾಂತ್ ಕಷ್ಟದ ದಿನಗಳನ್ನು ನೋಡಿದ್ದೀನಿ, ಯಶಸ್ಸು ಕಂಡು ಮೆರೆದಿರುವುದನ್ನು ನೋಡಿದ್ದಿನಿ. ನಾನು ಸಾಕಷ್ಟು ರೇಗಿಸುತ್ತಿದ್ದೆ. ಅವರ ಅಭಿಮಾನಿಗಳು ಬೇಸರಿಸಿಕೊಳ್ಳಬಹುದು. ನಾನು ರಜನಿ ಎಂದು ಕರೆದ್ರೆ, ಯಾಕೆ ಸರ್ ಎಂದು ಕರೆಯುವುದಿಲ್ಲ ಎಂದು ಅಭಿಮಾನಿಗಳು ಕೇಳ್ತಾರೆ. ಕಂಡಿತ ಗೌರವ ಕೊಡಬೇಕು, ಕೊಡ್ತೀನಿ. ಅವರ ಸಕ್ಸಸ್ ಆ ರೀತಿ ಇದೆ. ತನ್ನ ಶ್ರಮದ ಮೇಲೆ ನಂಬಿಕೆಯಿಂದ ರಜನಿಕಾಂತ್ ಬೆಳೆದು ಬಂದವರು" ಎಂದು ರಾಧಿಕಾ ವಿಶ್ಲೇಷಿಸಿದ್ದಾರೆ.
ಪೋಕಿರಿ ರಾಜಾ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾನು, ಶ್ರೀದೇವಿ, ರಜನಿಕಾಂತ್ ಸಾಕಷ್ಟು ಆತ್ಮೀಯವಾಗಿ ಇರುತ್ತಿದ್ದೇವು. "ಲೇಟ್ ನೈಟ್ ಶೂಟಿಂಗ್ ನಡೀತಿತ್ತು. ರಾತ್ರಿ ಹೊತ್ತು ಕಾರ್ ಏರಿ ಎವಿಎಂ ಸ್ಟುಡಿಯೋದಿಂದ ಮನೆಗಳಿಗೆ ರೇಸ್ ಹೋಗ್ತಿದ್ವಿ. ಬಹಳ ಕ್ರೇಜಿ ಆಗಿ ಇರ್ತಿತ್ತು. ಅದನ್ನೆಲ್ಲಾ ನೆನಪಿಸಿಕೊಂಡರೆ ಅಚ್ಚರಿ ಎನಿಸುತ್ತದೆ" ಎಂದು ರಾಧಿಕಾ ಮೆಲುಕು ಹಾಕಿದ್ದಾರೆ.

ಒಮ್ಮೆ ಯಾವುದೋ ಮ್ಯಾಗಜೀನ್ ಚಿತ್ರೀಕರಣದಲ್ಲಿ ಇಬ್ಬರೂ ಭಾಗಿ ಆಗಿದ್ದೆವು. ಚಿತ್ರೀಕರಣ ಮುಗಿದ ಬಳಿಕ ಒಂದು ತಮಾಷೆಯ ಘಟನೆ ನಡೀತು ಎಂದು ರಾಧಿಕಾ ನೆನಪಿಸಿಕೊಂಡಿದ್ದಾರೆ. "ರಜನಿಕಾಂತ್ ನನ್ನ ಬಳಿ ಬಂದು ನೀನು ಸ್ವಲ್ಪ ಕಿರಿಕ್ ಅಲ್ವಾ, ನಾನು ಅಷ್ಟೆ. ಬಾ ಹೋಗೋಣ ಎಂದು ಬೈಕ್ ಏರಿ ಹೊರಟೆವು. ಅವತ್ತು ರಾತ್ರಿ ರಜನಿಕಾಂತ್ ಚೆನ್ನೈ ಸುತ್ಥಾ ಸುತ್ತಾಡಿಸಿದರು. ಸಾಕಷ್ಟು ಜಾಗಗಳಿಗೆ ಕರೆದುಕೊಂಡು ಹೋಗಿ ತೋರಿಸಿದರು. ನಾನು ಇಲ್ಲಿ ಮಲಗುತ್ತಿದ್ದೆ, ಅಲ್ಲಿ ಉಳಿದುಕೊಳ್ತಿದ್ದೆ ಅಂತೆಲ್ಲಾ ಸಾಕಷ್ಟು ವಿಚಾರಗಳನ್ನು ಹೇಳಿದ್ರು. ಕಷ್ಟದ ದಿನಗಳನ್ನು ವಿವರಿಸಿದರು. ಅದನ್ನೆಲ್ಲಾ ಕೇಳಿ ಅಚ್ಚರಿ ಆಗಿತ್ತು" ಎಂದಿದ್ದಾರೆ.
ಆಗ ಚೆನ್ನೈ ಅಷ್ಟು ಅಭಿವೃದ್ಧಿ ಆಗಿರಲಿಲ್ಲ, ಅಷ್ಟು ದೊಡ್ಡ ದೊಡ್ಡ ಕಟ್ಟಡಗಳು ಇರಲಿಲ್ಲ. ಹೀಗೆ ಹೋಗುತ್ತಿದ್ದಾಗ ದಿಢೀರನೆ ಒಂದು ಕಾರ್ ಜೋರಾಗಿ ಬಂದು ಬ್ರೇಕ್ ಹಾಕಿ ಅಡ್ಡ ನಿಂತಿತ್ತು. ನನಗೆ ಶಾಕ್ ಆಗಿತ್ತು ಯಾರಪ್ಪ ಇದು ಅಂತ, ಆದರೆ ರಜನಿಕಾಂತ್ ನಗುತ್ತಿದ್ದರು. ಈತ ನನ್ನ ಪತ್ನಿ ಸಹೋದರ. ನಾನು ಯಾರೋ ಹುಡುಗಿ ಜೊತೆ ಊರೆಲ್ಲಾ ಸುತ್ತಾಡುತ್ತಿದ್ದೀನಿ ಅಂದ್ಕೊಂಡಿದ್ದಾನೆ ಅಂದ್ರು. ಬಳಿಕ ಅವರ ಮನೆಗೆ ಹೋದಾಗ ರಜನಿಕಾಂತ್ ಪತ್ನಿ ಲತಾ ನಗುತ್ತಿದ್ದರು. ನನ್ನ ಸಹೋದರ ಫೋನ್ ಮಾಡಿ ರಜನಿಕಾಂತ್ ಯಾರ ಜೊತೆಗೋ ಸುತ್ತುತ್ತಿದ್ದಾರೆ ಎಂದಿದ್ದ, ಅಂತ ಹೇಳಿ ಮತ್ತಷ್ಟು ಜೋರಾಗಿ ನಕ್ಕರು" ಎಂದು ರಾಧಿಕಾ ವಿವರಿಸಿದ್ದಾರೆ.


Click it and Unblock the Notifications











