ಗೆದ್ದಲು ತಿಂದ ಬಡ ಕುಟುಂಬದ 1 ಲಕ್ಷ ರೂ. ನೋಟುಗಳು; ರಾಘವ ಲಾರೆನ್ಸ್ ಮಾಡಿದ್ದೇನು?
ತಮಿಳು ನಟ, ನಿರ್ದೇಶಕ, ಕೊರಿಯೋಗ್ರಫರ್ ರಾಘವ ಲಾರೆನ್ಸ್ ತಮ್ಮ ಸಹಾಯಗುಣದಿಂದ ಪದೇ ಪದೆ ಸುದ್ದಿ ಆಗುತ್ತಾರೆ. ರಾಘವೇಂದ್ರ ಸ್ವಾಮಿಯ ಭಕ್ತರು ಆಗಿರುವ ಲಾರೆನ್ಸ್ ಈಗಾಗಲೇ ಕೆಲವರು ಸಹಾಯ ಮಾಡಿದ್ದಾರೆ. ಇದೀಗ ಬಡ ಕುಟುಂಬದ ಸಂಕಷ್ಟ ಪರಿಹರಿಸಿ ಮಾದರಿಯಾಗಿದ್ದಾರೆ.
ಡ್ಯಾನ್ಸರ್ ಆಗಿ ಬಳಿಕ ಕೊರಿಯೋಗ್ರಫರ್ ಆಗಿ ಗೆದ್ದವರು ರಾಘವ ಲಾರೆನ್ಸ್. ಕನ್ನಡ ಸಿನಿಮಾಗಳಲ್ಲಿ ಕೂಡ ಅವರು ಕೆಲಸ ಮಾಡಿದ್ದಾರೆ. ಚಿರಂಜೀವಿ, ರಜನಿಕಾಂತ್ ಸೇರಿದಂತೆ ಘಟಾನುಘಟಿ ಕಲಾವಿದರನ್ನು ಕುಣಿಸಿ ಕಮಾಲ್ ಮಾಡಿದ್ದಾರೆ. 'ಕಾಂಚನಾ' ಸರಣಿ ಸಿನಿಮಾಗಳಲ್ಲಿ ಹೀರೊ ಆಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕೆಲ ತೆಲುಗು, ತಮಿಳು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಡ ಕುಟುಂಬದಿಂದ ಬಂದ ರಾಘವ ಎಷ್ಟೇ ಎತ್ತರಕ್ಕೆ ಏರಿದರೂ ಹಳೆಯದನ್ನು ಮರೆತ್ತಿಲ್ಲ. ತಮ್ಮದೇ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದು ಸಾಕಷ್ಟು ಜನರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಸದ್ಯ ತಮಿಳುನಾಡಿದ ಶಿವಗಂಗಾ ಜಿಲ್ಲೆಯ ಸುಕ್ಕನಂಪಟ್ಟಿ ಎಂಬ ಊರಲ್ಲಿ ಬಡ ಕೂಲಿ ಕಾರ್ಮಿಕರು ಕುಟುಂಬ 1 ಲಕ್ಷ ರೂ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿತ್ತು. ಮುತ್ತುಕುರುಪ್ಪಿ ಎಂಬ ಮಹಿಳೆ ಹಾಗೂ ಆಕೆಯ ಪತಿ ಕೂಲಿ ಕಾರ್ಮಿಕರು. ತಮ್ಮ ಮಕ್ಕಳಿಗೆ ಚಿನ್ನದ ಕಿವಿಯೋಲೆಗಳನ್ನು ಖರೀದಿಸಲು 1 ಲಕ್ಷ ರೂ. ಹಣವನ್ನು ಉಳಿತಾಯ ಮಾಡಿ ಒಂದು ಪೆಟ್ಟಿಗೆಯಲ್ಲಿ ಹಾಕಿ ಮನೆಯಲ್ಲಿಯೇ ಸಣ್ಣ ಗುಂಡಿ ಕೊರೆದು ಬಚ್ಚಿಟ್ಟಿದ್ದರು. ಇತ್ತೀಚೆಗೆ ಆ ಹಣ ತೆಗೆದು ಒಡವೆ ಖರೀದಿಸಲು ಮುಂದಾದಾಗ ಶಾಕ್ ಕಾದಿತ್ತು.
ಡಬ್ಬಾದಲ್ಲಿ ಹಾಕಿ ಗುಂಡಿಯಲ್ಲಿ ಮುಚ್ಚಿದ್ದ ಹಣಕ್ಕೆ ಮಳೆ ನೀರು ನುಗ್ಗಿ, ಗೆದ್ದಲು ಹತ್ತಿತ್ತು. 500 ರೂ.ಗಳ ನೋಟುಗಳನ್ನು ಗೆದ್ದಲು ಹುಳ ತಿಂದು ಹಾಳಾಗಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಸುದ್ದಿ ಗೊತ್ತಾಗುತ್ತಿದ್ದಂತೆ ಮುತ್ತುಕುರುಪ್ಪಿ ಕುಟುಂಬವನ್ನು ಸಂಪರ್ಕಿಸಿ ನಟ, ನಿರ್ದೇಶಕ ರಾಘವ ಲಾರೆನ್ಸ್ ತಮ್ಮ ಬಳಿಗೆ ಕರೆಸಿಕೊಂಡಿದ್ದಾರೆ. ತಾವು ಕಟ್ಟಿಸಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದ ಮೂರ್ತಿಯ ಬಳಿ ಚಿಕ್ಕ ಡಬ್ಬಾದಲ್ಲಿ 1 ಲಕ್ಷ ರೂ. ಹಣವನ್ನು ಇಟ್ಟು ತೆಗೆದುಕೊಳ್ಳಲು ಹೇಳಿದ್ದಾರೆ.
ಡಬ್ಬಾ ತೆರೆದು ನೋಡಿದ ಮುತ್ತುಕುರುಪ್ಪಿ ಭಾವುಕರಾಗಿದ್ದಾರೆ. ರಾಘವ ಲಾರೆನ್ಸ್ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಖುದ್ದು ರಾಘವ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಮ್ಮೆ ರಾಘವ ಲಾರೆನ್ಸ್ ಹೃದಯ ವೈಶಾಲ್ಯತೆಯನ್ನು ಕೊಂಡಾಡುತ್ತಿದ್ದಾರೆ.
"ಎಲ್ಲರಿಗೂ ನಮಸ್ಕಾರ.. ಒಂದು ಕೂಲಿ ಕುಟುಂಬವು ತಮ್ಮ ಉಳಿತಾಯದ 1 ಲಕ್ ರೂ. ಹಣವನ್ನು ಗೆದ್ದಲು ಹುಳುಗಳಿಂದ ಕಳೆದುಕೊಂಡಿದೆ ಎಂಬ ಸುದ್ದಿ ನನಗೆ ಗೊತ್ತಾಯಿತು. ಅವರ ನೋವು ಎಂಥಾದ್ದು ಎಂದು ಯೋಚಿಸಿದಾಗ ನನ್ನ ಹೃದಯ ಕರಗಿತು. ಆದ್ದರಿಂದ, ಕಳೆದುಹೋದ ಹಣವನ್ನು ಅವರಿಗಾಗಿ ನೀಡಲು ನನಗೆ ಸಂತೋಷವಾಗಿದೆ. ಈ ಸುದ್ದಿಯನ್ನು ನನಗೆ ತಲುಪಿಸಿದ ಮಾಧ್ಯಮ ಮತ್ತು ಜನರಿಗೆ ಧನ್ಯವಾದಗಳು" ಎಂದು ಲಾರೆನ್ಸ್ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಸದ್ಯ 'ಕಾಂಚನಾ'- 4 ಚಿತ್ರವನ್ನು ರಾಘವ ಲಾರೆನ್ಸ್ ನಿರ್ಮಿಸಿ, ನಿರ್ದೇಶಿಸಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ. 'ಅಧಿಗಾರಂ', 'ಬೆನ್ಜ್', 'ಕಾಲ ಭೈರವ', 'ಬುಲೆಟ್' ಎಂಬ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಕನ್ನಡದಲ್ಲಿ ಶಿವಣ್ಣ ನಟನೆಯ 'ಅಸುರ' ಚಿತ್ರದಲ್ಲಿ 'ಮಹಾ ಗಣಪತಿ' ಎಂಬ ಹಾಡಿಗೆ ರಾಘವ ಲಾರೆನ್ಸ್ ಹೆಜ್ಜೆ ಹಾಕಿದ್ದರು.


Click it and Unblock the Notifications











