ದಳಪತಿ ವಿಜಯ್ ತಮ್ಮ ತಾಯಿಗಾಗಿ ನಿರ್ಮಿಸಿದ ದೇವಸ್ಥಾನದ ದರ್ಶನ ಮಾಡಿಸಿದ ಲಾರೆನ್ಸ್
ತಮಿಳು ನಟ ವಿಜಯ್ ಚೆನ್ನೈನಲ್ಲಿ ಸಾಯಿ ಬಾಬ ಮಂದಿರ ನಿರ್ಮಾಣ ಮಾಡಿಸಿರುವುದಾಗಿ ಗುಸುಗುಸು ಕೇಳಿಬಂದಿತ್ತು. ಇದೀಗ ಈ ವಿಚಾರವನ್ನು ನಟ, ನಿರ್ದೇಶಕ ರಾಘವ ಲಾರೆನ್ಸ್ ಖಚಿತಪಡಿಸಿದ್ದಾರೆ. ಖುದ್ದು ತಾವು ವಿಜಯ್ ತಾಯಿ ಶೋಭಾ ಜೊತೆ ಆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆ ವೀಡಿಯೋ ಹಂಚಿಕೊಂಡಿದ್ದಾರೆ.
ನಟ ವಿಜಯ್‌ಗೆ ತಮ್ಮ ಪೋಷಕರ ಜೊತೆ ಕೆಲ ಭಿನ್ನಾಭಿಪ್ರಾಯಗಳಿವೆ. ಆದರೂ ತಾಯಿಗಾಗಿ ಸಾಯಿ ಬಾಬ ದೊಡ್ಡ ಮಂದಿರ ನಿರ್ಮಾಣ ಮಾಡಿದ್ದಾರೆ. ಚೆನ್ನೈನ ಕೊರಟೂರಿನಲ್ಲಿರುವ ತಮ್ಮದೇ ಜಾಗದಲ್ಲಿ ವಿಜಯ್ ಈ ಭವ್ಯ ದೇವಸ್ಥಾನ ಕಟ್ಟಿಸಿದ್ದಾರೆ. ವಿಜಯ್ ತಂದೆ ಎಸ್. ಎ ಚಂದ್ರಶೇಖರ್ ಖ್ಯಾತ ಸಿನಿಮಾ ನಿರ್ದೇಶಕರು. ತಾಯಿ ಶೋಭಾ ಗಾಯಕಿಯಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ವಿಜಯ್ ಸ್ವಂತ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ.

ದಳಪತಿ ವಿಜಯ್ ಕ್ರಿಶ್ಚಿಯನ್ ಆಗಿದ್ದರು ತಾಯಿಗಾಗಿ ಸಾಯಿ ಬಾಬ ದೇವಸ್ಥಾನ ನಿರ್ಮಿಸಿರುವುದು ಕೆಲವರಿಗೆ ಅಚ್ಚರಿ ತಂದಿದೆ. ಇನ್ನು ಇತ್ತೀಚೆಗೆ ನಡೆದ ದೇವಸ್ಥಾನದ ಕುಂಬಾಭಿಷೇಕದಲ್ಲಿ ಖುದ್ದು ವಿಜಯ್ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳ ವೈರಲ್ ಆಗಿತ್ತು. ಇದೀಗ ರಾಘವ ಲಾರೆನ್ಸ್ ಸ್ನೇಹಿತ ಕಟ್ಟಿಸಿರುವ ಬಾಬಾ ಮಂದಿರಕ್ಕೆ ಭೇಟಿ ನೀಡಿ ವೀಡಿಯೋ ಸಮೇತ ಹಂಚಿಕೊಂಡಿದ್ದಾರೆ.
"ಎಲ್ಲರಿಗೂ ನಮಸ್ಕಾರ, ನಾನು ಇಂದು ಸ್ನೇಹಿತ ವಿಜಯ್ ಅವರ ಸಾಯಿಬಾಬಾ ದೇವಸ್ಥಾನಕ್ಕೆ ಅವರ ತಾಯಿಯೊಂದಿಗೆ ಭೇಟಿ ನೀಡಿದ್ದೆ. ನಾನು ನನ್ನ ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು ಕಟ್ಟಿಸಿದಾಗ, ವಿಜಯ್ ತಾಯಿ ಶೋಬಾ ನಮ್ಮ ದೇವಸ್ಥಾನದಲ್ಲಿ ಹಾಡು ಹಾಡಿದ್ದರು. ಜೊತೆಗೆ ಅಂದು ನಮ್ಮೊಟ್ಟಿಗೆ ಪೂಜೆಯಲ್ಲಿ ಭಾಗಿ ಆಗಿದ್ದರು. ಇಂದು, ನಾನು ಅವರೊಟ್ಟಿಗೆ ಅವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸಂತೋಷವಾಯಿತು" ಎಂದಿದ್ದಾರೆ.

ಈ ದೇವಸ್ಥಾನ ನಿರ್ಮಿಸಿದ್ದಕ್ಕೆ ಸ್ನೇಹಿತ ವಿಜಯ್ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ನನಗೆ ದೇವಸ್ಥಾನದಲ್ಲಿ ದೈವಿಕ ಮತ್ತು ಆಹ್ಲಾದಕರ ಅನುಭವವಾಯಿತು. ಪ್ರತಿಯೊಬ್ಬರೂ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಿರಿ ಎಂದು ನಾನು ಕೇಳಿಕೊಳ್ಳುತ್ತೇನೆ" ಎಂದ ರಾಘವ ಲಾರೆನ್ಸ್ ಟ್ವೀಟ್ ಮಾಡಿದ್ದಾರೆ.
6 ವರ್ಷಗಳ ಹಿಂದೆ ರಾಘವ ಲಾರೆನ್ಸ್ ತಮ್ಮ ತಾಯಿಗಾಗಿ ಒಂದು ಭವ್ಯ ದೇವಸ್ಥಾನ ನಿರ್ಮಿಸಿದ್ದರು. ಅಲ್ಲಿ ತಾಯಿಯ ವಿಗ್ರಹವನ್ನಿಟ್ಟು ಪೂಜೆ ಮಾಡುತ್ತಾರೆ. ಚೆನ್ನೈನ ಪೂನಾಮಾಳೀಯಲ್ಲಿ ಈ ದೇವಸ್ಥಾನವಿದೆ. ಅದಕ್ಕೂ ಮುನ್ನ ಅವರು ರಾಘವೇಂದ್ರ ಸ್ವಾಮಿ ಆಲಯ ನಿರ್ಮಾಣ ಮಾಡಿದ್ದರು. ರಜನಿಕಾಂತ್ ಸಲಹೆಯಂತೆ ರಾಯರ ದರ್ಶನ ಪಡೆದು ಕೃಪೆಗೆ ಪಾತ್ರರಾಗಿದ್ದರು. ಬಳಿಕ ರಾಘವೇಂದ್ರ ಸ್ವಾಮಿಯ ದೊಡ್ಡ ಭಕ್ತರಾಗಿಬಿಟ್ಟರು.
ಇನ್ನು ತಮಿಳು ನಟ ವಿಜಯ್‌ಗೆ ಪೋಷಕರ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಕಾಲಿವುಡ್‌ನಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ವಿಜಯ್ ಅಭಿಮಾನಿಗಳ ಬಳಗ ಬಳಸಿಕೊಂಡು ತಂದೆ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ಎಸ್. ಎ ಚಂದ್ರಶೇಖರ್ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಹೆಸರಿನ ರಾಜಕೀಯ ಪಕ್ಷವೊಂದನ್ನು ಘೋಷಿಸಿದ್ದರು. ಆದರೆ ವಿಜಯ್‌ಗೆ ರಾಜಕೀಯ ಪ್ರವೇಶದ ಇಷ್ಟ ಇಲ್ಲ. ತಮ್ಮ ಹೆಸರಿನಲ್ಲಿ ಪಕ್ಷ ಘೋಷಣೆ ಮಾಡುವುದನ್ನು ಒಪ್ಪಲಿಲ್ಲ ಎಂದು ಸುದ್ದಿಯಾಗಿತ್ತು.
ಯಾವುದೇ ಪಕ್ಷದ ಹೆಸರು ನೋಂದಣಿ ಮಾಡದಂತೆ ಆಗ ಚುನಾವಣಾ ಆಯೋಗದ ಬಳಿ ವಿಜಯ್ ಮನವಿ ಮಾಡಿದ್ದರು. ಇದೇ ಕಾರಣಕ್ಕೆ ಪೋಷಕರು ಹಾಗೂ ವಿಜಯ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ಸುದ್ದಿ ಆಗಿತ್ತು. ಆದರೆ ಇತ್ತೀಚೆಗೆ ಸ್ವತಃ ವಿಜಯ್ 'ತಮಿಳಗ ವೆಟ್ರಿ ಕಳಗಂ' ಎನ್ನುವ ಪಕ್ಷ ಘೋಷಿಸಿದ್ದಾರೆ.


Click it and Unblock the Notifications











