Vettaiyan Prevue: ಎನ್‌ಕೌಂಟರ್ ಸುತ್ತಾ ತಲೈವಾ- ಬಿಗ್‌ಬಿ ಮಧ್ಯೆ ಸಂಘರ್ಷ; 'ವೆಟ್ಟೆಯಾನ್' ಟೀಸರ್ ಓಕೆ ಓಕೆ, ಆದರೆ..
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಆಡಿಯೋ ಲಾಂಚ್ ಮಾಡಿ ಚಿತ್ರತಂಡ ಮತ್ತೊಂದು ಟೀಸರ್ ರಿಲೀಸ್ ಮಾಡಿದೆ. ಈ ಸಣ್ಣ ಝಲಕ್ ನೋಡಿದರೆ ಸಿನಿಮಾ ಕಥೆ ಏನು ಎನ್ನುವುದು ಅರ್ಥವಾಗುವಂತಿದೆ.
ರಜನಿಕಾಂತ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿದ್ದ 'ವೆಟ್ಟೆಯಾನ್' ಟೀಸರ್ ನಿರಾಸೆ ಮೂಡಿಸಿತ್ತು. ಆದರೆ ಹೊಸ ಟೀಸರ್ ಸಣ್ಣದಾಗಿ ಕುತೂಹಲ ಮೂಡಿಸಿದೆ. ಮುಖ್ಯವಾಗಿ ಇದು ಪೊಲೀಸ್ ಆಫೀಸರ್(ರಜನಿಕಾಂತ್) ಹಾಗೂ ವಿಚಾರಣೆ ಆಯೋಗದ ಮುಖ್ಯಸ್ಥನ(ಅಮಿತಾಬ್ ಬಚ್ಚನ್) ಸಿದ್ಧಾಂತಗಳ ನಡುವಿನ ತಿಕ್ಕಾಟದ ಕಥೆ ಎನ್ನುವುದು ಅರ್ಥವಾಗುತ್ತಿದೆ. ಆದರೆ ಕಥೆ ಇಷ್ಟೇನಾ? ಬೇರೆ ಏನಾದರೂ ಇದ್ಯಾ? ಎನ್ನುವುದನ್ನು ಅಕ್ಟೋಬರ್ 10ಕ್ಕೆ ತೆರೆಮೇಲೆ ನೋಡಬೇಕು.

ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ರಜನಿಕಾಂತ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ರಿವೀಲ್ ಆಗಿಲ್ಲ. ಪೊಲೀಸರು ನಡೆಸುವ ಎನ್‌ಕೌಂಟರ್‌ಗಳ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಕೂಡ ಇದೆ. ಪೊಲೀಸರು ತಮ್ಮ ಹೀರೊಯಿಸಂ ತೋರಿಸಲು ಎನ್‌ಕೌಂಟರ್ ಎನ್ನುವುದನ್ನು ಆಯುಧವಾಗಿ ಬಳಸಿಕೊಳ್ಳುತ್ತಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದೇ ವಿಚಾರದ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ.
ದೊಡ್ಡ ದೊಡ್ಡ ಕ್ರಿಮಿನಲ್‌ಗಳನ್ನು ಎನ್‌ಕೌಂಟರ್ ಮಾಡುವ ಎಸ್ಪಿ. ಆತನ ವಿರುದ್ಧ ಕೇಳಿಬರುವ ಆರೋಪ. ಈ ಬಗ್ಗೆ ವಿಚಾರಣೆ ನಡೆಸಲು ಆಯೋಗ ರಚನೆ ಆಗುತ್ತದೆ. ಆ ಆಯೋಗದ ಮುಖ್ಯಸ್ಥ ಸತ್ಯದೇವ್ ಆಗಿ ಅಮಿತಾಬ್ ನಟಿಸಿದ್ದಾರೆ. ಎನ್‌ಕೌಂಟರ್ ಹೆಸರಿನಲ್ಲಿ ಕೊಲೆ ಮಾಡ್ತೀರಾ? ಎನ್ನುವ ಸತ್ಯದೇವ್, ಎನ್‌ಕೌಂಟರ್ ಎನ್ನುವುದು ಅಪರಾಧ ಮಾಡಿದವರಿಗೆ ಕೊಡುವ ಶಿಕ್ಷೆ ಮಾತ್ರವಲ್ಲ, ಮುಂದೆ ಅಂತಹ ಅಪರಾಧ ಯಾರು ಮಾಡದಂತೆ ನೀಡುವ ಎಚ್ಚರಿಕೆ ಎಂದು ಎಸ್ಪಿ(ರಜನಿಕಾಂತ್) ಹೇಳುವುದರೊಂದಿಗೆ ಟೀಸರ್ ಮುಗಿಯುತ್ತದೆ.

ಈ ಹಿಂದೆ 'ಜೈಭೀಮ್' ಚಿತ್ರ ಕಟ್ಟಿಕೊಟ್ಟಿದ್ದ ಜ್ಞಾನವೇಲ್ 'ವೆಟ್ಟೆಯಾನ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಹಿಂದಿನ ಚಿತ್ರದಲ್ಲಿ ಆರೋಪಿಗಳಿಗೆ ಪೊಲೀಸರು ಚಿತ್ರಹಿಂಸೆ ಕೊಡುವುದು, ಎನ್‌ಕೌಂಟರ್ ಮಾಡುವುದು ತಪ್ಪು ಎನ್ನುವುದನ್ನು ಹೇಳಿದ್ದರು. ಆದರೆ ಇಲ್ಲಿ ಎನ್‌ಕೌಂಟರ್ ಸರಿ ಎನ್ನುವ ವಾದವನ್ನು ಮುಂದಿಡಲು ಹೊರಟಿದ್ದಾರೆ. ಕೊನೆಗೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಅನಿರುದ್ಧ್ ರವಿಚಂದರ್ ಬಿಜಿಎಂ ಹಿನ್ನೆಲೆಯಲ್ಲಿ 'ವೆಟ್ಟೆಯಾನ್' ಟೀಸರ್ ಝಲಕ್ ಬಂದಿದೆ. ಹಿಂದಿನ ಟೀಸರ್‌ಗೆ ಹೋಲಿಸಿದರೆ ಹೊಸ ಟೀಸರ್ ಚೆನ್ನಾಗಿದೆ. ಆದರೆ ಅಮಿತಾಬ್ ಪಾತ್ರಕ್ಕೆ ಪ್ರಕಾಶ್ ರಾಜ್ ವಾಯ್ಸ್ ಕೊಟ್ಟಿದ್ದಾರೆ. ಅದು ಚೆನ್ನಾಗಿಲ್ಲ. ತಮಿಳಿನಲ್ಲೂ ಅಮಿತಾಬ್ ಡಬ್ ಮಾಡಿದ್ದರೆ ಅಥವಾ ಅವರಂತೆ ಕಂಠದಾನ ಕಲಾವಿದರು ಡಬ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಇನ್ನುಳಿದಂತೆ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ಅಭಿರಾಮಿ ಹೀಗೆ ಚಿತ್ರದ ಪ್ರಧಾನ ಪಾತ್ರವರ್ಗದ ಲುಕ್ ರಿವೀಲ್ ಆಗಿದೆ. ಆದರೆ ಯಾರ ಪಾತ್ರ ಏನು? ಎನ್ನುವ ಬಗ್ಗೆ ಇನ್ನು ಸುಳಿವು ಸಿಕ್ಕಿಲ್ಲ. ಇದು ಮತ್ತೊಂದು ಟೀಸರ್ ಅಷ್ಟೇ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ವೆಟ್ಟೆಯಾನ್' ಸಿನಿಮಾ ನಿರ್ಮಾಣವಾಗುತ್ತಿದೆ. ಟೈಟಲ್‌ಗೆ ತಕ್ಕಂತೆ ದುಷ್ಟರ ಪಾಲಿಗೆ ಬೇಟೆಗಾರನಾಗಿ(ಎನ್‌ಕೌಂಟರ್ ಸ್ಪೆಷಲಿಸ್ಟ್) ರಜನಿಕಾಂತ್ ನಟಿಸಿದ್ದಾರೆ. ವಯಸ್ಸು 70 ದಾಟಿದರೂ ತಮ್ಮ ಎನರ್ಜಿಟಿಕ್ ಪರ್ಫಾರ್ಮನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಸಿನಿಮಾದಲ್ಲಿ ಸಾಧ್ಯವಾದಷ್ಟು ಅವರನ್ನು ಯಂಗ್ ಆಗಿ ತೋರಿಸುವ ಪ್ರಯತ್ನ ನಡೆದಿದೆ. ಅಂದಾಜು 160 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











