Jailer- 2 Release Date: ಅಧಿಕೃತವಾಗಿ ರಜನಿಕಾಂತ್ 'ಜೈಲರ್- 2' ಬಿಡುಗಡೆ ದಿನಾಂಕ ಘೋಷಣೆ
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ನೆಲ್ಸನ್ ನಿರ್ದೇಶನದ 'ಜೈಲರ್- 2' ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ. ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಬದಲು ದಸರಾ ಸಂಭ್ರಮದಲ್ಲಿ ಮುತ್ತುವೇಲ್ ಪಾಂಡಿಯನ್ ಆರ್ಭಟ ನಡೆಯಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಶಿವರಾಜ್‌ಕುಮಾರ್, ಮೋಹನ್ ಲಾಲ್ ಹಾಗೂ ಹೃತಿಕ್ ರೋಷನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.
3 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ಜೈಲರ್' ಸಿನಿಮಾ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ರಜನಿಕಾಂತ್ ಸ್ಟೈಲ್, ಪರ್ಫಾರ್ಮನ್ಸ್ ಜೊತೆ ನರಸಿಂಹ ಆಗಿ ಶಿವಣ್ಣ ಹಾಗೂ ಮ್ಯಾಥ್ಯೂ ಆಗಿ ಮೋಹನ್ ಲಾಲ್ ಸಾಥ್ ಸಿಕ್ಕಿತ್ತು. ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ನಲ್ಲಿ ಸಾಂಗ್ಸ್ ಹಿಟ್ ಆಗಿತ್ತು. ನೆಲ್ಸನ್ ಸ್ಟೈಲ್ ಟೇಕಿಂಗ್, ಕಾಮಿಡಿ ಎಲ್ಲವೂ ಪ್ರೇಕ್ಷಕರ ಮನಗೆದ್ದಿತ್ತು.

'ಜೈಲರ್' ಸೀಕ್ವೆಲ್ ಮಾಡಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಅದಕ್ಕೆ ತಕ್ಕಂತೆ ಕಳೆದ ವರ್ಷ ಸಿನಿಮಾ ಘೋಷಣೆ ಆಗಿತ್ತು. ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭಿಸಲಾಗಿದೆ. ಅಕ್ಟೋಬರ್ 15ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಸಣ್ಣ ಟೀಸರ್ ಮೂಲಕ ರಿಲೀಸ್ ಡೇಟ್ ಘೋಷಣೆ ಮಾಡಿದೆ ಚಿತ್ರತಂಡ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.
ಶಾರುಖ್ ಖಾನ್ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡ್ತಾರೆ ಎನ್ನುವ ಚರ್ಚೆ ನಡೆದಿತ್ತು. ಅಂತಿಮವಾಗಿ ಹೃತಿಕ್ ರೋಷನ್ ನಟಿಸಿ ಹೋಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನರಸಿಂಹ ಆಗಿ ಈ ಬಾರಿ ಶಿವಣ್ಣನಿಗೆ ಕೊಂಚ ಹೆಚ್ಚು ದೃಶ್ಯಗಳು ಸಿಕ್ಕಿವೆ. ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ತಂಡ ಸೀಕ್ವೆಲ್ ಚಿತ್ರಕ್ಕೂ ಜೊತೆಯಾಗಿದೆ. ಕಲಾವಿದರು, ತಂತ್ರಜ್ಞರ ಸಂಭಾವನೆ, ಬಜೆಟ್ ಎಲ್ಲವೂ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಕಲೆಕ್ಷನ್ ನಿರೀಕ್ಷೆ ಮಾಡಲಾಗ್ತಿದೆ.
ದೊಡ್ಡ ಸ್ಮಗ್ಲರ್ ವರ್ಮನ್ ಅಂತ್ಯದೊಂದಿಗೆ 'ಜೈಲರ್' ಸಿನಿಮಾ ಕಥೆ ಮುಕ್ತಾಯವಾಗಿತ್ತು. ವರ್ಮನ್ ಬಳಿಕ ಅವನ ಹಿಂದೆ ಇರುವವರು ಜೈಲರ್ ಮುತ್ತುವೇಲ್ ಪಾಂಡಿಯನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರನ್ನೆಲ್ಲಾ ಹೇಗೆ ಮಟ್ಟ ಹಾಕುತ್ತಾನೆ ಎನ್ನುವುದು ಸೀಕ್ವೆಲ್ ಕಥೆ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತಿದೆ. ಮತ್ತೆ ಜೈಲರ್ ಪತ್ನಿ, ಮೊಮ್ಮೊಕ್ಕಳಿಗೆ ಸಮಸ್ಯೆ ಎದುರಾಗಿದೆ. ಅದನ್ನೆಲ್ಲಾ ಹೇಗೆ ಪರಿಹಾರ ಮಾಡುತ್ತಾನೆ, ಈ ಹಾದಿಯಲ್ಲಿ ಯಾರೆಲ್ಲಾ ಜೊತೆತೆ ನಿಲ್ತಾರೆ ಎನ್ನುವುದನ್ನು ಅಕ್ಟೋಬರ್ 15ರಂದು ತೆರೆಮೇಲೆ ನೋಡಬೇಕು.
ಅನಿರುದ್ಧ್ ಬಿಜಿಎಂ ಟೀಸರ್‌ನಲ್ಲಿ ಹೈಲೆಟ್ ಆಗಿದೆ. ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಹೊಸ ಅವತಾರ ತೋರಿಸದೇ ಕುತೂಹಲ ಮೂಡಿಸಿದ್ದಾರೆ. ನರಸಿಂಹ ಆಗಿ ಶಿವಣ್ಣ ಜೀಪ್‌ನಿಂದ ಇಳಿಯುವ ಸಣ್ಣ ಝಲಕ್ ಕೂಡ ಟೀಸರ್‌ನಲ್ಲಿ ನೋಡಬಹುದು. ಇನ್ನುಳಿದಂತೆ ರಮ್ಯಾಕೃಷ್ಣ ಹಾಗೂ ಯೋಗಿ ಬಾಬು ತಮ್ಮ ತಮ್ಮ ಪಾತ್ರಗಳಲ್ಲಿ ಮುಂದುವರೆಯಲಿದ್ದಾರೆ. ಮಿರ್ನಾ, ರಿತ್ವಿಕ್, ಅನ್ನಾ ರಾಜನ್, ಜತಿನ್ ಸರ್ನಾ, ಸೂರಜ್ ವೆಂಜರಮೂಡು ತಾರಾಗಣದಲ್ಲಿದ್ದಾರೆ.
ವರ್ಮನ್ ಆಗಿ ವಿನಾಯಕನ್ ಮತ್ತೊಮ್ಮೆ ಫ್ಯಾಶ್‌ಬ್ಯಾಕ್ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಿತ್ತು. ಕೇರಳ, ಚೆನ್ನೈ, ಮೈಸೂರು ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ವಿಜಯ್ ಕಾರ್ತಿಕ್ ಕಣ್ಣನ್ ತಮ್ಮ ಕ್ಯಾಮರಾ ಕಣ್ಣಲ್ಲಿ 'ಜೈಲರ್- 2' ಸಿನಿಮಾ ಸೆರೆಹಿಡಿದಿದ್ದಾರೆ. 'ಜೈಲರ್' ಬಳಿಕ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಹಾಗೂ 'ಕೂಲಿ' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ 'ಜೈಲರ್' ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications