ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ರಜನಿಕಾಂತ್ ಗ್ರೀನ್ ಸಿಗ್ನಲ್; ನಿರ್ದೇಶಕರು ಯಾರು?
'ಜೈಲರ್' ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಂದ 'ಲಾಲ್ ಸಲಾಂ' ಸಿನಿಮಾದಲ್ಲಿ ತಲೈವಾ ಪಾತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇದೀಗ ಸೂಪರ್ ಸ್ಟಾರ್ ಹೊಸ ಸಿನಿಮಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.
ಈಗಾಗಲೇ ರಜನಿಕಾಂತ್ ನಟನೆಯ 'ವೆಟ್ಟೈಯನ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ವರ್ಷವೇ ಆ ಸಿನಿಮಾ ಕೂಡ ಶುರುವಾಗಲಿದೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಚಿತ್ರಕ್ಕಾಗಿ ಭಾರೀ ಸಂಭಾವನೆಯನ್ನು ತಲೈವಾ ಪಡೆಯುತ್ತಿದ್ದಾರೆ.

ಸದ್ಯ ರಜನಿಕಾಂತ್ ಮತ್ತೊಂದು ಸಿನಿಮಾ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಬಾಲಿವುಡ್‌ನ ಖ್ಯಾತ ಫಿಲ್ಮ್ ಮೇಕರ್ಸ್ ಸಾಜಿದ್ ನಾಡಿಯಾವಾಲ ಇದೀಗ ಸೂಪರ್ ಸ್ಟಾರ್ ಜೊತೆ ಕೈ ಜೋಡಿಸಿದ್ದಾರೆ. ಹಿಂದಿಯಲ್ಲಿ 'ಕಿಕ್', 'ಹೌಸ್‌ಫುಲ್' ಸರಣಿ, 'ಜುದ್ವಾ', '83' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಸಾಜಿದ್ ನಾಡಿಯಾವಾಲ ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಸಾಜಿದ್ ಇದೀಗ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಪ್ಲ್ಯಾನ್ ಮಾಡುತ್ತಿದ್ದಾರೆ. ಈಗಾಗಲೇ ತಲೈವಾ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗುತ್ತಿದೆ. ನಾಡಿಯವಾಲ ಗ್ರಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಅಧಿಕೃತ ಖಾತೆಯಲ್ಲಿ ರಜನಿಕಾಂತ್ ಭೇಟಿ ಬಗ್ಗೆ ಬರೆಯಲಾಗಿದೆ.
"ಲೆಜೆಂಡರಿ ರಜನಿಕಾಂತ್ ಸರ್ ಜೊತೆ ಕೈ ಜೋಡಿಸುತ್ತಿರುವುದು ನಿಜವಾದ ಗೌರವ. ಈ ಅವಿಸ್ಮರಣೀಯ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ತಯಾರಿ ನಡೆಸುತ್ತಿರುವಾಗ ನಿರೀಕ್ಷೆಯು ಹೆಚ್ಚಾಗುತ್ತದೆ" ಎಂದು ಪೋಸ್ಟ್ ಮಾಡಲಾಗಿದೆ. ಒಟ್ಟಾರೆ ರಜನಿ- ಸಾಜಿದ್ ಜೊತೆಯಾಗುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವುದು ಸುಳ್ಳಲ್ಲ. ಸದ್ಯ ಬಾಲಿವುಡ್ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿವೆ. ಹಾಗಾಗಿ ಸೂಪರ್ ಸ್ಟಾರ್ ಜೊತೆ ಸೇರಿ ಸಾಜಿದ್ ದೊಡ್ಡಮಟ್ಟದ ಸಿನಿಮಾ ಪ್ಲ್ಯಾನ್ ಮಾಡುತ್ತಿರುವುದು ಗೊತ್ತಾಗುತ್ತಿದೆ.

ರಜನಿಕಾಂತ್- ಸಾಜಿದ್ ಕಾಂಬಿನೇಷನ್ ಅಂದಮೇಲೆ ನಿರ್ದೇಶಕರು ಯಾರು? ಎನ್ನುವ ಪ್ರಶ್ನೆ ಮೂಡುವುದು ಸಹಜ. ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುವುದು ಅಷ್ಟು ಸುಲಭ ಅಲ್ಲ. ಭಾರೀ ಬಂಡವಾಳ ಹಾಕಿದ ಮಾತ್ರಕ್ಕೆ ಸಿನಿಮಾ ಗೆಲ್ಲಲ್ಲ. ಸ್ಟಾರ್ ನಟರು ಇದ್ದಾರೆ ಎಂದ ಮಾತ್ರ ಗೆಲುವು ಶತಸಿದ್ಧ ಎಂದುಕೊಳ್ಳುವುದು ತಪ್ಪಾಗುತ್ತದೆ. 'ಲಾಲ್ ಸಲಾಂ' ಮೂಲಕ ಅದು ಮತ್ತೆ ಸಾಬೀತಾಗಿದೆ. ಒಳ್ಳೆ ಕಥೆ, ನಿರ್ದೇಶನ ಇಲ್ಲದ ಹೊರತು ಯಾರು ಯಾರೊಟ್ಟಿಗೆ ಕೈ ಜೋಡಿಸಿ ಸಿನಿಮಾ ಮಾಡಿದರೂ ಸಕ್ಸಸ್ ಕಷ್ಟವಿದೆ. ಹಾಗಾದರೆ ರಜನಿಕಾಂತ್ ಚಿತ್ರವನ್ನು ನಿರ್ದೇಶಿಸಲು ಸಾಜಿದ್ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಮತ್ತೊಂದು ಕಡೆ ರಜನಿಕಾಂತ್ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. "ಅಪ್ಪ- ಅಮ್ಮನ ಈ ಬಂಧಕ್ಕೆ 43 ವರ್ಷ. ಇಬ್ಬರೂ ಯಾವಾಗಲೂ ಒಬ್ಬರಿಗೊಬ್ಬರು ಗಟ್ಟಿಯಾಗಿ ನಿಲ್ಲುತ್ತಾರೆ. ಅಮ್ಮ 43 ವರ್ಷಗಳ ಹಿಂದೆ ಅವರು ಬದಲಾಯಿಸಿದ ಸರ ಮತ್ತು ಉಂಗುರಗಳನ್ನು ಪ್ರತಿ ವರ್ಷ ಅಪ್ಪ ಧರಿಸುವಂತೆ ಮಾಡುತ್ತಾರೆ. ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುತ್ತೇನೆ" ಎಂದು ಪುತ್ರಿ ಸೌಂದರ್ಯ ರಜನಿಕಾಂತ್ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ.


Click it and Unblock the Notifications











