ತಿಂಗಳಿಗೂ ಮುನ್ನ 'ಕೂಲಿ' ಸ್ಟೋರಿ ಲೀಕ್; ಉಪೇಂದ್ರ ಪಾತ್ರ ಏನು?
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕ್ರೇಜಿ ಕಾಂಬಿನೇಷನ್ ಸಿನಿಮಾ 'ಕೂಲಿ'. ಸನ್ ಪಿಕ್ಚರ್ಸ್ ನಿರ್ಮಾಣದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಆಗಸ್ಟ್ 14ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಲ್ಟಿಸ್ಟಾರರ್ ಸಿನಿಮಾ ಇದು. ಅನಿರುದ್ದ್ ರವಿಚಂದರ್ ಸಂಗೀತದಲ್ಲಿ ಸಿನಿಮಾ ಸಾಂಗ್ಸ್ ಸದ್ದು ಮಾಡ್ತಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. 'ಕೈದಿ', 'ಮಾಸ್ಟರ್', 'ವಿಕ್ರಂ', 'ಲಿಯೋ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕಟ್ಟಿಕೊಟ್ಟ ಲೋಕೇಶ್ ಕನಕರಾಜ್ ಮೇಲೆ ಬಹಳ ನಿರೀಕ್ಷೆಯಿದೆ. ಇನ್ನು ರಜನಿಕಾಂತ್ ಕೂಡ ಕೈ ಜೋಡಿಸಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ.

ಬಹಳ ತಲೆ ಕೆಡಿಸಿಕೊಳ್ಳದೇ ಕಮರ್ಷಿಯಲ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಲೋಕೇಶ್ ಸಿದ್ಧಹಸ್ತರು. ಈ ಬಾರಿ ತಲೈವಾ ಜೊತೆ ಸೇರಿ ದೊಡ್ಡದಾಗಿಯೇ ಏನೋ ಪ್ಲ್ಯಾನ್ ಮಾಡಿದ್ದಾರೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ. ಈಗಾಗಲೇ ಓಟಿಟಿ ರೈಟ್ಸ್, ಥ್ರಿಯೇಟ್ರಿಕಲ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿ ದಾಖಲೆ ಬರೆದಿದೆ. ಭಾರೀ ಮೊತ್ತಕ್ಕೆ ಕರ್ನಾಟಕ ವಿತರಣೆ ಹಕ್ಕು ಬಿಕರಿಯಾಗಿದ್ದು ದೊಡ್ಡ ಮಟ್ಟದಲ್ಲಿ ಇಲ್ಲಿ ಕೂಡ ಸಿನಿಮಾ ತೆರೆಗೆ ಬರಲಿದೆ.
ಈಗಾಗಲೇ 'ಕೂಲಿ' ಪೋಸ್ಟರ್, ಟೀಸರ್, ಸಾಂಗ್ಸ್ ಹಿಟ್ ಆಗಿದೆ. ಆದರೆ ಸಿನಿಮಾ ಕಥೆ ಏನು? ಎನ್ನುವ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಆದರೆ ಸಿನಿಮಾ ಬಿಡುಗಡೆಗೆ ಒಂದು ತಿಂಗಳು ಬಾಕಿ ಇರುವಂತೆ ಒನ್‌ಲೈನ್ ಸ್ಟೋರಿ ರಿವೀಲ್ ಆಗಿದೆ. ವಿದೇಶಗಳಲ್ಲಿ ಈಗಾಗಲೇ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್‌ನಲ್ಲಿ 'ಕೂಲಿ' ಚಿತ್ರದ ಒಂದೆಳೆ ಕಥೆಯನ್ನು ಅಪ್‌ಡೇಟ್ ಮಾಡಿದ್ದಾರೆ.
ಯುಎಸ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್ 'Fandango' ಪ್ರಕಾರ "ತನ್ನ ಯವ್ವನಯ ಸಮಯದಿಂದಲೂ ವ್ಯಕ್ತಿಯೊಬ್ಬ ನಿರಂತರ ಸೇಡಿನ ಅನ್ವೇಷಣೆಯಲ್ಲಿ ತೊಡಗುತ್ತಾನೆ, ಹಿಂದಿನ ತಪ್ಪುಗಳನ್ನು ಸರಿಪಡಿಸುವ ಮೂಲಕ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಅವನ ಪ್ರಕ್ಷುಬ್ಧ ಸೇಡಿನ ಪ್ರಯಾಣದ ಸಂಕೀರ್ಣತೆಯನ್ನು ವೀಕ್ಷಕರು ಅನುಭವಿಸುತ್ತಾರೆ" ಎಂದು ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್ Letterboxdನಲ್ಲಿ ಚಿತ್ರದ ಕಥೆ ಬಗ್ಗೆ ಹೀಗೆ ಹೇಳಲಾಗಿದೆ. "ವಯಸ್ಸಾದ ಗೋಲ್ಡ್ ಸ್ಮಗ್ಲರ್ ಒಬ್ಬ ತನ್ನ ಹಳೆಯ ಮಾಫಿಯಾ ತಂಡವನ್ನು ಮರಳಿ ಕಟ್ಟಲು ಹಳೆಯ ಚಿನ್ನದ ಕೈಗಡಿಯಾರಗಳಲ್ಲಿ ಅಡಗಿರುವ ಕದ್ದ ತಂತ್ರಜ್ಞಾನವನ್ನು ಬಳಸುತ್ತಾನೆ. ಆದರೆ ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯುವ ಅವನ ಯೋಜನೆ ಮತ್ತೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ಅಪರಾಧ, ದುರಾಸೆಯಿಂದ ಕೂಡಿನ ಆ ಹೊಸ ಪ್ರಪಂಚ ಬೇರೆ ಸ್ವರೂಪವನ್ನೇ ಪಡೆಯುತ್ತದೆ" ಎಂದು ಹಾಕಿದ್ದಾರೆ.
ಸದ್ಯ ಈ ವೆಬ್‌ಸೈಟ್‌ಗಳಲ್ಲಿ ಹಾಕಿರುವ ಒನ್ಲೈನ್ ಸ್ಟೋರಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇನ್ನು ಚಿತ್ರದ ಟೀಸರ್, ಪೋಸ್ಟರ್‌ಗಳಲ್ಲಿ ರಜನಿಕಾಂತ್ ಚಿನ್ನದ ಕೈಗಡಿಯಾರಗಳನ್ನು ಹಿಡಿದುಕೊಂಡಿರುವುದನ್ನು ನೋಡಿದ್ದೇವೆ. ಇನ್ನು ದೇವಾ(ರಜನಿಕಾಂತ್) ಮಾಫಿಯಾ ಗ್ಯಾಂಗ್ ಸದಸ್ಯ ಕಲೀಶಾ ಆಗಿ ಉಪೇಂದ್ರ ನಟಿಸಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ನಾಗಾರ್ಜುನ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ ಎಂದು ನಿರ್ದೇಶಕ ಲೋಕೇಶ್ ಕನಕರಾಜ್ ಹೇಳಿದ್ದಾರೆ.
'ಜೈಲರ್' ಬಳಿಕ ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಹಾಗೂ 'ವೆಟ್ಟೆಯಾನ್' ಸಿನಿಮಾಗಳು ನಿರಾಸೆ ಮೂಡಿಸಿದ್ದವು. ಹಾಗಾಗಿ 'ಕೂಲಿ' ಸಿನಿಮಾ ಬಗ್ಗೆ ಕಾತರ ಹೆಚ್ಚಾಗಿದೆ. ಈ ಸಿನಿಮಾ ಮೂಲಕ ಮತ್ತೆ ಸೂಪರ್ ಸ್ಟಾರ್ ಕಂಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











