ದೀಪಾವಳಿ ಸಂಭ್ರಮ ಹೆಚ್ಚಿಸಿದ ರಜನಿಕಾಂತ್ "ಅನ್ನಾತೆ"
ಸೂಪರ್ ಸ್ಟಾರ್ ರಜನಿ ಕಾಂತ್ ಅಭಿನಯದ ಸಿನಿಮಾ ಅನ್ನಾತೆ ಇಂದು ರಿಲೀಸ್ ಆಗಿದೆ. ದೀಪಾವಳಿ ಹಬ್ಬದ ಸಂಭ್ರಮವನ್ನು ರಜನಿ ಹೆಚ್ಚಿಸಿದ್ದಾರೆ. ಅದರಲ್ಲೂ ರಜನಿಕಾಂತ್ ಅಭಿಮಾನಿಗಳಿಗೆ ಇದು ಅಕ್ಷರಶಃ ಹಬ್ಬವೇ ಸರಿ. ಇಂದು ರಜನಿ ಕಾಂತ್ ಅಪ್ಪಟ್ಟ ಅಭಿಮಾನಿಗಳಿಗೆ ಎರಡೆರಡು ಹಬ್ಬ.
ಒಂದು ಕಡೆ ಮನೆಯ ಮುಂದೆ ದೀಪ ಹಚ್ಚಿ ದೀಪಾವಳಿಯನ್ನು ಸಂಭ್ರಮಿಸಿದರೆ, ಮತ್ತೊಂದು ಕಡೆ ಚಿತ್ರಮಂದಿರಗಳಲ್ಲಿ ಪಟಾಕಿ ಸಿಡಿಸಿ ರಜನಿಯನ್ನು ಬಿಗ್ ಸ್ಕ್ರೀನ್ ಮೇಲೆ ಅಭಿಮಾನಿಗಳು ಬರ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಇಂದು ಬೆಳಗಿನ ಜಾವದಿಂದಲೇ ರಜನಿ ಕಾಂತ್ ಅನ್ನಾತೆ ಚಿತ್ರದ ಸಂಭ್ರಮ ಶುರುವಾಗಿದೆ. ಸೂರ್ಯ ಹುಟ್ಟುವುದಕ್ಕು ಮುಂಚೆಯೇ ಅಭಿಮಾನಿಗಳು ಥಿಯೇಟರ್ ಕಡೆಗೆ ಹೋಗಿ ಅನ್ನಾತೆ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.
ರಜನಿಕಾಂತ್ ಅವರಿಗೆ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವೇ ಇದೆ. ಹಾಗಾಗಿ ರಜನಿಕಾಂತ್ ಅಭಿನಯದ ಒಂದು ಸಿನಿಮಾ ರಿಲೀಸ್ ಆಗಿದೆ ಅಂದರೆ ಅದು ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಹೇಳಿಕೇಳಿ ಕೊರೊನಾ, ಲಾಕ್ಡೌನ್ ಮುಗಿದ ಬಳಿಕ ಕೊಂಚ ತಡವಾಗಿ ರಿಲೀಶ್ ಆಗುತ್ತಿರುವ ಸಿನಿಮಾ ಅನ್ನಾತೆ. ಹಾಗಾಗಿ ಅಭಿಮಾನಿಗಳಲ್ಲಿ ಕಾತರತೆ ಕೊಂಚ ಹೆಚ್ಚಾಗಿಯೇ ಇದೆ. ರಜನಿ ಸಿನಿಮಾ ಅಂದರೆ ಅದು ರಿಲೀಸ್ ಮೊದಲ ದಿನ ಆರಂಭ ಆಗುವುದೆ ಬೆಳಗ್ಗಿನ ಜಾವ 3-4 ಗಂಟೆಯಿಂದ.

ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನ ಏರ್ಪಡಿಸಲಾಗಿರುತ್ತದೆ. ಆದರೆ ರಜನಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಎಷ್ಟೇ ಬೇಗ ಪ್ರದರ್ಶನ ಆರಂಭಿಸಿದರು, ಪ್ರತೀ ಶೋ ಕೂಡ ಹೌಸ್ ಫುಲ್ ಆಗಿರುತ್ತದೆ. ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ರಜನಿ ದರ್ಶನವನ್ನು ಪಡೆದುಕೊಳ್ಳೋಕೆ ಅಭಿಮಾನಿ ಸಮೂಹ ಚಿತ್ರ ಮಂದಿರಕ್ಕೆ ಮುತ್ತಿಕೊಂಡು ಬಿಡುತ್ತೆ. ಅನ್ನಾತೆ ಸಿನಿಮಾವನ್ನು ನೋಡಲು ಚೆನ್ನೈನಲ್ಲಿ ಅಭಿಮಾನಿಗಳು ಚಿತ್ರ ಮಂದಿರಕ್ಕೆ ಮುಗಿಬಿದ್ದಿದ್ದಾರೆ. ದೀಪಾವಳಿ ಹಬ್ಬ ಮಾತ್ರವಲ್ಲದೆ ಇಂದು ಅವರಿಗೆ ರಜನಿ ಹಬ್ಬ ಎನ್ನುವ ಖುಷಿಯನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ರಜನಿಕಾಂತ್ ಜೊತೆಗೆ ನಟಿ ಖುಷ್ಬು, ಕೀರ್ತಿ ಸುರೇಶ್, ನಯನತಾರಾ, ಪ್ರಕಾಶ್ ರಾಜ್, ಮೀನಾ, ಜಗಪತಿಬಾಬು, ಸೇರಿದಂತೆ ಹಲವಾರು ಹೆಸರಾಂತ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಹಾಗಾಗಿ ಚಿತ್ರದ ಪ್ರತೀ ಪಾತ್ರದ ಮೇಲು ನಿರೀಕ್ಷೆ ಇತ್ತು. ಅನ್ನಾತೆ ಸಿನಿಮಾದ ಶಕ್ತಿ ಒಂದು ಕಡೆ ರಜನಿ ಕಾಂತ್ ಆದರೆ ಮತ್ತೊಂದು ಕಡೆ ಈ ಕಲಾವಿದರು ಅಂತಲೇ ಹೇಳಬಹುದು. ಪ್ರತಿಯೊಬ್ಬರ ಪಾತ್ರವು ಕೂಡ ಅಷ್ಟೇ ಪ್ರಮುಖ. ಇನ್ನು ಚಿತ್ರಕ್ಕೆ ಶಿವ ನಿರ್ದೇಶನ ಮಾಡಿದ್ದು, ಶಿವ ನಿರ್ದೇಶನದ ಮೇಲೆ ಸಾಕಷ್ಟು ನಿರೀಕ್ಷೆ ಕೂಡ ಇದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಡಿಯಲ್ಲಿ ಕಲಾನಿಧಿ ಮಾರನ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಿ ಇಮಾನ್ ಸಂಗೀತ ಸಂಯೋಜಿಸಿದ್ದಾರೆ.

ಟ್ರೇಲರ್, ಟೀಸರ್, ಹಾಡುಗಳು ಚೆನ್ನಾಗಿರಲಿ. ಇಲ್ಲದೇ ಇರಲಿ ರಜನಿ ಕಾಂತ್ ಅಭಿಮಾನಿಗಳು ಮಾತ್ರ ಚಿತ್ರ ಮಂದಿರದಲ್ಲಿ ಸಿನಿಮಾ ನೋಡುವುದ್ನನು ಮಿಸ್ ಮಾಡಿಕೊಳ್ಳುವುದಿಲ್ಲ. ಹಾಗಾಗಿಯೇ ಒಂದೊಂದು ಚಿತ್ರ ಮಂದಿರದ ಮುಂದೆಯೂ ಸಹಸ್ರಾರು ಅಭಿಮಾನಿಗಳು ಸೇರಿರುತ್ತಾರೆ. ಒಟ್ಟಾರೆ ಅನ್ನಾತೆ ಚಿತ್ರವನ್ನು ನೋಡಲು ಬೆಳ್ಳಂಬೆಳಗ್ಗೆ ಅಭಿಮಾನಿ ದಂಡು ಸಾಲು ಗಟ್ಟಿ ನಿಂತಿದೆ. ದೀಪಾವಳಿ ಹಬ್ಬವನ್ನ ಚಿತ್ರಮಂದಿರ ಮುಂದೆ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ.
ಇನ್ನು ಮಹಿಳೆ ಮತ್ತು ಮಕ್ಕಳು ಕೂಡಾ ಬೆಳಗ್ಗಿನ ಜಾವದ ವಿಶೇಷ ಪ್ರದರ್ಶನಕ್ಕೆ ಮುಗಿ ಬಿದ್ದು ಬಂದಿದ್ದಾರೆ. ಚಿತ್ರ ಮಂದಿರಕ್ಕೆ ಬಂದವರು ರಜನಿ ಸಿನಿಮಾನೇ ತಮಗೆ ದೊಡ್ಡ ಹಬ್ಬ ಎನ್ನುತ್ತಿದ್ದಾರೆ. ಎಲ್ಲೆಡೆ ರಜನಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.


Click it and Unblock the Notifications











