ರಜನಿಕಾಂತ್ ಬಯೋಪಿಕ್ ಹೀರೊ ಯಾರು? ಸಿಹಿಸುದ್ದಿ ಕೊಟ್ಟ ಮಗಳು ಸೌಂದರ್ಯ
ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಆದರೆ ಇದೀಗ ಸ್ವತಃ ಮಗಳು ಸೌಂದರ್ಯ ರಜನಿಕಾಂತ್ ಈ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಸಿನಿಮಾ ಶೀಘ್ರದಲ್ಲೇ ಸೆಟ್ಟೇರುವುದು ಖಚಿತ ಎನ್ನುವಂತಾಗಿದೆ. ಚಿತ್ರದಲ್ಲಿ ರಜನಿಕಾಂತ್ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಇಂದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅವರ ಈ ಪಯಣ ಬಹಳ ರೋಚಕ. ಸಾಕಷ್ಟು ಬಾರಿ ತಮ್ಮ ಜೀವನದ ವಿಚಾರಗಳನ್ನು ರಜನಿಕಾಂತ್ ಹೇಳಿದ್ದಾರೆ. ಆಟೋಬಯೋಗ್ರಫಿಯಾಗಿ ಅದನ್ನು ಕಟ್ಟಿಕೊಡಲಾಗ್ತಿದೆ. ಜೊತೆಗೆ ಬಯೋಪಿಕ್ ಸಿನಿಮಾ ಮಾಡುವ ಲೆಕ್ಕಾಚಾರ ನಡೀತಿದೆ. ಧನುಷ್ ಅಥವಾ ಶಿವಕಾರ್ತಿಕೇಯನ್ ತೆರೆಮೇಲೆ ರಜನಿಕಾಂತ್ ಅವತಾರದಲ್ಲಿ ನಟಿಸೋಕೆ ಸೂಕ್ತ ಎನ್ನುವ ಚರ್ಚೆ ನಡೀತಿದೆ.

ರಜನಿಕಾಂತ್ ಬಯೋಪಿಕ್ ಸಿನಿಮಾ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಇನ್ನು ತಲೈವಾ ಪಾತ್ರವನ್ನು ನಿಭಾಯಿಸುವುದು ಸವಾಲಿನ ಕೆಲಸವೇ ಸರಿ. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣದ ಪ್ರಯತ್ನ ನಡೀತಿದೆ. ಸದ್ದಿಲ್ಲದೇ ಸಿನಿಮಾ ಕೆಲಸಗಳು ಆರಂಭವಾಗಿದೆ ಎಂದು ಸ್ವತಃ ರಜನಿಕಾಂತ್ ಪುತ್ರಿ ಸೌಂದರ್ಯ ಹೇಳಿದ್ದಾರೆ. ಆಕೆ ನಿರ್ಮಿಸಿರುವ 'ವಿತ್ ಲವ್' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಈ ವೇಳೆ ರಜನಿಕಾಂತ್ ಬಯೋಪಿಕ್ ವಿಚಾರ ಚರ್ಚೆಗೆ ಬಂದಿದೆ.
ಸೌಂದರ್ಯ ರಜನಿಕಾಂತ್ ಮಾತನಾಡಿ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. "ನಮ್ಮ ತಂದೆ ಜೀವನಾಧರಿತ ಸಿನಿಮಾ ಕೆಲಸಗಳು ಆರಂಭವಾಗಿದೆ. ಸಿನಿಮಾ ತೆರೆಗೆ ಬಂದರೆ ವಿಶ್ವದಾದ್ಯಂತ ಸಂಚಲನ ಸೃಷ್ಟಿಸುತ್ತದೆ" ಎಂದು ಸೌಂದರ್ಯ ಭರವಸೆ ವ್ಯಕ್ತಪಡಿಸಿದ್ದಾರೆ. ಹೊಸ ತಂತ್ರಜ್ಞಾನ ಬಳಸಿ ತಲೈವಾ ಜೀವನದ ಕಥೆಯನ್ನು ಸೊಗಸಾಗಿ ಕಟ್ಟಿಕೊಡುವ ಪ್ರಯತ್ನಗಳು ನಡೀತಿದೆ. ರಜನಿಕಾಂತ್ ಕಥೆಯನ್ನು ತೆರೆಗೆ ತರುವುದು ಅಷ್ಟು ಸುಲಭವಲ್ಲ. ಇನ್ನು ಅವರ ಪಾತ್ರ ಮಾಡುವುದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದು ಎಲ್ಲವೂ ಕಷ್ಟದ ಕೆಲಸ.

ಎಲ್ಲರಿಗೂ ಗೊತ್ತಿರುವ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಬೇಕಿದೆ. ಆರಂಭದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದ ರಜನಿಕಾಂತ್ ಬಳಿಕ ಕೀರ್ತಿ ಶಿಖರ ಏರಿದರು. ಬಳಿಕ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದರು. ಅದು ಬಿಟ್ಟು ಅಂತಹ ಏರಿಳಿತ ಅವರ ಜೀವನದಲ್ಲಿ ಕಂಡುಬರಲ್ಲ. ಹಾಗಾಗಿ ಅದೇ ಕಥೆಯನ್ನು ತೆರೆಮೇಲೆ ತರುವುದು, ಪ್ರೇಕ್ಷಕರನ್ನು ಮೆಚ್ಚಿಸುವುದು ಸವಾಲು. ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ರಜನಿಕಾಂತ್ ಪಾತ್ರ ಮಾಡಲು ಧನುಷ್ ಸೂಕ್ತ ಎನ್ನುವುದು ಕೆಲವರ ವಾದ. ರಜನಿಕಾಂತ್ ಮಗಳು ಐಶ್ವರ್ಯ ಕೈಹಿಡಿದಿದ್ದ ಧನುಷ್ ನಾಲ್ಕೈದು ವರ್ಷಗಳ ಹಿಂದೆ ಡಿವೋರ್ಸ್ ಪಡೆದಿದ್ದರು. ಹಾಗಾಗಿ ಅವರು ರಜನಿಕಾಂತ್ ಬಯೋಪಿಕ್‌ನಲ್ಲಿ ನಟಿಸುತ್ತಾರಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಇನ್ನುಳಿದಂತೆ ತಲೈವಾ ಪಾತ್ರಕ್ಕೆ ಶಿವಕಾರ್ತಿಕೇಯನ್ ಒಳ್ಳೆ ಆಯ್ಕೆ ಎನ್ನುವ ಮಾತುಗಳು ಕೇಳಿಬರ್ತಿದೆ.
ರಜನಿಕಾಂತ್ ಚಿತ್ರರಂಗ ಪ್ರವೇಶಿಸಿ 50 ವರ್ಷ ಕಳೆದಿದೆ. ತಮಿಳು, ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ವಯಸ್ಸು 70 ದಾಟಿದ್ರು, ನಂಬರ್ ವನ್ ಸ್ಟಾರ್ ಆಗಿ ದರ್ಬಾರ್ ನಡೆಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ ತಮ್ಮ ಸರಳ, ಸಜ್ಜನ ವ್ಯಕ್ತಿತ್ವ ಹಾಗೂ ಸಹಾಯ ಗುಣಗಳಿಂದ ರಜನಿಕಾಂತ್ ಜನಮನ ಗೆದ್ದಿದ್ದಾರೆ. ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಖ್ಯಾತ ಕಲಾವಿದರೆಲ್ಲಾ ರಜನಿಕಾಂತ್ ಅಭಿಮಾನಿಗಳು. ಹಾಗಾಗಿ ಸಹಜವಾಗಿಯೇ ರಜನಿಕಾಂತ್ ಬಯೋಪಿಕ್ ಕುತೂಹಲ ಮೂಡಿಸುತ್ತದೆ.


Click it and Unblock the Notifications











